–ಪ್ರೊ.ಎಸ್.ಜಿ.ಸಿದ್ಧರಾಮಯ್ಯ
ಇಂದು (ಏಪ್ರಿಲ್ 23) ಬಸವ ಜಯಂತಿ. ಶೈವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದ ಬಸವಣ್ಣನವರು ತಮ್ಮ ಹುಟ್ಟನ್ನೇ ಕರ್ಮಸಿದ್ಧಾಂತದ ಪಾಪ ಮೂಲದಿಂದ ಬಿಡಿಸಿ ಕಾಯಕತತ್ವದ ಅಸ್ಪೃಶ್ಯರ ಮೂಲದಲ್ಲಿ ಅಪವರ್ಣೀಕರಣಿಸಿಕೊಂಡು ಹೊಸ ಮನುಷ್ಯರಾದ ಬಗೆ ಆಸಕ್ತಿಕರ.
ಭಾರತೀಯ ಸಮಾಜವೆಂದರೆ ಅದು ಅಸಮಾನತೆಗಳ ಹಳವಂಡ. ವರ್ಣ-ವರ್ಗ, ಸ್ಪೃಶ್ಯ-ಅಸ್ಪೃಶ್ಯ, ಶ್ರೇಷ್ಠ-ಕನಿಷ್ಠ ಇತ್ಯಾದಿ ಅಸಮಾನತೆಗಳಲ್ಲಿ ಮನುಷ್ಯ ಸಮಾಜವನ್ನು ಒಡೆದು, ಊರು, ಕೇರಿ, ಹಟ್ಟಿ ಹಾಡಿಗಳಲ್ಲಿ ಅವರನ್ನು ಪ್ರತ್ಯೇಕವಾಗಿ ಬದುಕುವಂತೆ ಮಾಡಿದ್ದ ಚಾತುರ್ವರ್ಣ ವ್ಯವಸ್ಥೆ ಇದು. ಇಂಥ ಅಸಮಾನ ಅಮಾನವೀಯ ವ್ಯವಸ್ಥೆಯ ವಿರುದ್ಧ ಹೋರಾಡಿದಂತೆ ಆಜೀವಕರು, ಚಾರ್ವಾಕರು, ನಾಥರು, ಸಿದ್ಧರು ಬೇರೆ ಬೇರೆಯ ಜೀವನ ಮಾರ್ಗಗಳನ್ನೇ ರೂಪಿಸಿದರು. ಮಹಾವೀರ, ಬುದ್ಧ, ಗುರುನಾನಕರು ಪ್ರತ್ಯೇಕ ಧರ್ಮಗಳನ್ನೇ ಸ್ಥಾಪಿಸಿದರು. ಇಷ್ಟಾಗಿಯೂ ಇವೆಲ್ಲವೂ ಪ್ರತ್ಯೇಕ ಪದ್ಧತಿ-ಪಂಥ, ಧರ್ಮಗಳಾದುವೇ ಹೊರತು ಮೂಲ ಅಸಮಾನತೆಯ ಹಳವಂಡ ಮಾತ್ರ ಹಾಗೇ ಉಳಿದು ಬೆಳೆದದ್ದು ವರ್ತಮಾನದ ಉರಿಯುವ ವ್ಯಂಗ್ಯ. ಈ ಬಗೆಯ ಸಮಾಜ ಸುಧಾರಕರ ಸಾಲಿನಲ್ಲಿ ಬಸವಣ್ಣನವರು ಅನನ್ಯತೆಯ ವ್ಯಕ್ತಿತ್ವ ಸಂಪನ್ನರಾಗಿ ಕರ್ನಾಟಕದ ನೆಲದಲ್ಲಿ ಸಂಘಟನೆಯನ್ನು ಕಟ್ಟಿ ಹೋರಾಟ ಮಾಡಿರುವುದು ಚಾರಿತ್ರಿಕ ಸತ್ಯ.
ಬಸವಣ್ಣನವರು ಕಟ್ಟಿ ಬೆಳೆಸಿದ ಸಂಘಟನೆಯೇ ಶರಣ ಚಳವಳಿ. ಸಮಾಜದಲ್ಲಿ ನೀಚಾತಿ ನೀಚರೆಂದು ಕರೆಸಿಕೊಂಡಿದ್ದ ಹಟ್ಟಿ ಮೂಲದ ಅಸ್ಪೃಶ್ಯರನ್ನು ಮೊದಲುಗೊಂಡು ಭೂಸುರರೆಂದು ಕರೆದುಕೊಂಡಿದ್ದ ಅಗ್ರಹಾರ ಮೂಲದ ವೈದಿಕರನ್ನೂ ಒಳಗು ಮಾಡಿಕೊಂಡಂತೆ ಎಲ್ಲ ರೀತಿಯ ಕಾಯಕ ಜೀವಿಗಳನ್ನೂ ತಬ್ಬಿಕೊಂಡು ಬೆಳೆದ ಸಂಘಟನೆ ಅದಾಗಿತ್ತು. ಈ ಎಲ್ಲ ಬಹುತ್ವ ಮೂಲಗಳನ್ನೂ ಒಳಗೊಳ್ಳುವ ಸಂದರ್ಭದಲ್ಲಿ ಎಲ್ಲರ ಹುಟ್ಟಿನ ಮೂಲದ ಅಸಮಾನತೆಯ ಅರಿಮೆಗಳನ್ನು ನೀಗಿಕೊಳ್ಳಲು ಬಸವಣ್ಣನವರು ತಮ್ಮನ್ನು ತಾವು ಮೊದಲು ಅಪವರ್ಣೀಕರಣಕ್ಕೆ ಒಳಗು ಮಾಡಿಕೊಂಡರು.
ಬಸವಣ್ಣನವರು ಅಗ್ರಹಾರ ಮೂಲದ ಶೈವ ಬ್ರಾಹ್ಮಣ ಪಂಗಡಕ್ಕೆ ಸೇರಿದ್ದವರು. ಈ ದೇಶದ ಸಾಮಾಜಿಕ ಸಾಂಸ್ಕೃತಿಕ ಧಾರ್ಮಿಕ ಚರಿತ್ರೆಯನ್ನು ಬಲ್ಲವರು. ಮಾನವೀಯ ವಿವೇಕದ ಅರಿವಿನಲ್ಲಿ ಈ ತಮ್ಮ ಹುಟ್ಟಿನ ಮೂಲದ ಶ್ರೇಷ್ಠತೆಯ ವ್ಯಸನವನ್ನು ಕಂಡು ಕ್ರುದ್ಧರಾದವರು. ಉನ್ನತ ಕುಲದಲ್ಲಿ ಹುಟ್ಟಿದೆನೆಂಬ ಕಷ್ಟತನದ ಹೊರೆಯಿಂದ ತಾವು ಮೊದಲು ಬಿಡುಗಡೆಯಾಗದೆ ಬದಲಾವಣೆ ಸಾಧ್ಯವಿಲ್ಲವೆಂದು ಭಾವಿಸಿದವರು. ಅದಕ್ಕಾಗಿ ತಮ್ಮ ಹುಟ್ಟನ್ನೇ ಕರ್ಮಸಿದ್ಧಾಂತದ ಪಾಪ ಮೂಲದಿಂದ ಬಿಡಿಸಿ ಕಾಯಕತತ್ವದ ಅಸ್ಪಶ್ಯರ ಮೂಲದಲ್ಲಿ ಅಪವರ್ಣೀಕರಣಿಸಿಕೊಂಡು ಹೊಸ ಮನುಷ್ಯರಾದರು. ಚೆನ್ನಯ್ಯನ ಮನೆಯ ದಾಸನ ಮಗ ಕಕ್ಕಯ್ಯನ ಮನೆಯ ದಾಸಿಯ ಮಗಳು ಬೆರಣಿಯ ನಾಯುವ ಕಾಯಕಕ್ಕೆ ಹೊಲಕ್ಕೆ ಹೋಗಿದ್ದಾಗ ಪ್ರೀತಿಸಿ ಸಂಗವ ಮಾಡಿದರು. ಅವರ ಸಂಗಕ್ಕೆ ಹುಟ್ಟಿದ ಶಿಶು ನಾನು ಎಂದು ಹೊಸ ಹುಟ್ಟಿನಲ್ಲಿ ಪವಿತ್ರೀಕರಿಸಿಕೊಂಡ ಮನುಷ್ಯರಾದರು. ಹರನು ಮೂಲಿಗನಾಗಿ ಪುರಾತನರೊಳಗಾಗಿ ಬಳಿ ಬಳಿಯಲು ಬಂದ ಮಾದಾರನ ಮಗ ನಾನಯ್ಯ. ಅಪ್ಪನು ನಮ್ಮ ಮಾದಾರ ಚನ್ನಯ್ಯ, ಬೊಪ್ಪನು ಡೋಹಾರ ಕಕ್ಕಯ್ಯ, ಚಿಕ್ಕಯ್ಯ ನೆಮ್ಮಯ್ಯ, ಅಣ್ಣ ನಮ್ಮ ಕಿನ್ನರ ಬೊಮ್ಮಯ್ಯ- ಎಂದು ನೀಚಾತಿ ನೀಚರೆಂದು ಗಣ ಸಿದ್ದ ಕುಲ ಮೂಲಗಳಲ್ಲಿ ತನ್ನ ಬಳಗ ಬಂಧುತ್ವವನ್ನು ಮೆರೆದರು.
ಹೀಗೆ ಸರ್ವರನ್ನೂ ಒಳಗೊಳ್ಳುವ ಅವರ ಅಪವರ್ಣೀಕರಣ ಪ್ರಜ್ಞೆ ಅಷ್ಟಕ್ಕೇ ನಿಲ್ಲಲಿಲ್ಲ. ಅವರ ಮನೆಯನ್ನು ಈ ಎಲ್ಲ ಶರಣರನ್ನು ಒಳಗೊಳ್ಳುವ ಮಹಾಮನೆಯಾಗಿಸಿದರು. ಎಲ್ಲರನ್ನೂ ಅನುಭವ ಮಂಟಪವೆನ್ನುವ ವೇದಿಕೆಗೆ ತಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಚರ್ಚಾವೇದಿಕೆಯಾಗಿ ಅದನ್ನು ಬೆಳೆಸಿದರು. ಈ ನಡೆಯೇ ಅವರನ್ನು ಇಡೀ ಶರಣ ಚಳವಳಿಯ ಮಹಾ ನೇತಾರನನ್ನಾಗಿ ಒಪ್ಪಿಕೊಳ್ಳಲು ಕಾರಣವಾಯಿತು. ಇಡೀ ಶರಣ ಚಳವಳಿಯ ಮಹಾ ಆಶಯವನ್ನು ಪ್ರತಿನಿಧೀಕರಿಸಿದಂತೆ ಅಲ್ಲಮ ಪ್ರಭುದೇವರು-ಕಲ್ಯಾಣವೆಂಬ ಪ್ರಣತಿಯಲ್ಲಿ ಭಕ್ತಿರಸವೆಂಬ ತೈಲವನೆರೆದು ಆಚಾರವೆಂಬ ಬತ್ತಿಯಲ್ಲಿ ಬಸವಣ್ಣನೆಂಬ ಜ್ಯೋತಿ ಮುಟ್ಟಿಸಲು ತೊಳಗಿ ಬೆಳಗುತ್ತಿದ್ದುದಯ್ಯ ಶಿವನ ಪ್ರಕಾಶ - ಎಂದು ಮನದುಂಬಿ ಹಾಡಿದ್ದಾರೆ. ಇದು ಬಸವಣ್ಣನೆಂಬ ವ್ಯಕ್ತಿತ್ವದ ಮತ್ತು ಶರಣ ಚಳವಳಿಯ ಮಹಾನಡೆಯ ಸಂಗಮತ್ವವನ್ನು ಕುರಿತು ಆಡಿದ ನುಡಿದೀವಿಗೆಯಾಗಿದೆ.
ಬಸವಣ್ಣನವರು ತಮ್ಮನ್ನು ಅಪವರ್ಣೀಕರಣಗೊಳಿಸಿಕೊಂಡದ್ದು ರಾಜಕೀಯ ಬೂಟಾಟಿಕೆಯಲ್ಲ. ಅವರ ವಚನರಾಶಿಯನ್ನು ಓದಿದ ಯಾರಿಗೂ ಅವರೊಬ್ಬ ಮಹಾಮಾನವತಾವಾದಿ ಮನುಷ್ಯನೆಂಬುದು ಅರಿವಿಗೆ ಬರುತ್ತದೆ. ಅವರ ವಚನಗಳ ಮೂಲದ್ರವ್ಯವೆಂದರೆ ಅದು ಆತ್ಮನಿರೀಕ್ಷೆ; ಆತ್ಮವಿಮರ್ಶೆ.
ಬಸವಣ್ಣನವರು ಕಟ್ಟಿ ಬೆಳೆಸಿದ ಚಳವಳಿ ಕನ್ನಡ ನೆಲದಲ್ಲಿ ಹುಟ್ಟಿ ಬೆಳೆದ ಶರಣ ಚಳವಳಿ. ಅದು ವಚನ ಚಳವಳಿ. ಈ ಚಳವಳಿಯ ಉಪಉತ್ಪನ್ನವಾಗಿ ಹುಟ್ಟಿದ್ದೇ ವಚನ ಸಾಹಿತ್ಯ. ಇಡೀ ವಚನ ಸಾಹಿತ್ಯದ ಮೂಲ ಆಶಯಕ್ಕೆ ಕನ್ನಡಿ ಹಿಡಿದಂತೆ ಬಸವಣ್ಣನವರ ಒಂದು ವಚನ ಹೀಗಿದೆ.
ತಾಳಮಾನ ಸರಿಸವನರಿಯೆ, ಓಜೆ ಬಜಾವಣೆ ಲೆಕ್ಕವ ನರಿಯೆ
ಅಮೃತಗಣ ದೇವಗಣವನರಿಯೆ, ಕೂಡಲ ಸಂಗಮದೇವಾ
ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ.
ಇಲ್ಲಿ ಕೂಡಲಸಂಗಮವೆಂದರೆ ಅದು ಯಾವುದೋ ಸ್ಥಾವರ ಲಿಂಗವಲ್ಲ; ಜಂಗಮಸ್ವರೂಪಿ ಸಮಾಜ. ಸಮಾಜಕ್ಕೆ ಕೇಡು ಬಗೆಯದ ನಡೆಯ ನುಡಿಸಾಹಿತ್ಯವಿದು. ಇಲ್ಲಿ ಯಾವುದೇ ಛಂದೋಬದ್ಧ ಶಾಸ್ತ್ರಜಡ ಕಲಾ ಮೀಮಾಂಸೆಯ ಅಗತ್ಯವಿಲ್ಲ. ಸಾಮಾಜಿಕ ಹೊಣೆಗಾರಿಕೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿದ ವಚನಸಾಹಿತ್ಯ ನಮ್ಮ ಸಂವಿಧಾನದ ಆಶಯಕ್ಕೆ ಪೂರಕವಾಗಿರುವುದು ಅದರ ಹಿರಿಮೆಯನ್ನು ಸಾರುತ್ತದೆ.
ವಚನ ಚಳವಳಿ ಹುಟ್ಟಿದ್ದು ವರ್ಣವ್ಯವಸ್ಥೆಯ ವಿರುದ್ಧವಾಗಿ. ಅದು ಕಟ್ಟ ಬಯಸಿದ್ದು ಕಲ್ಯಾಣ ರಾಜ್ಯವನ್ನು. ಅದಕ್ಕಾಗಿ ಅವರು ಅನುಸರಿಸಿದ ಮಾರ್ಗ ಎಲ್ಲರನ್ನೂ ಒಳಗೊಳ್ಳುವ ಸಮಾನತೆಯ ಮಾರ್ಗ. ಅಸಮಾನತೆಗೆ ಕಾರಣವಾಗಿದ್ದ ಚಾತುರ್ವರ್ಣ ವ್ಯವಸ್ಥೆಯ ಪಠ್ಯಗಳನ್ನು ಇಡೀ ಶರಣ ಚಳವಳಿ ತಿರಸ್ಕರಿಸುತ್ತದೆ. ಅವುಗಳ ಜಾಗದಲ್ಲಿ ಶರಣರ ಅರ್ಥಾತ್ ಪುರಾತನದ ವಚನಗಳನ್ನು ಪ್ರತಿಪಾದಿಸುತ್ತದೆ. ಈ ವಿಚಾರದಲ್ಲಿ ಬಸವಣ್ಣನವರೇ ಮುಂಚೂಣಿಯಲ್ಲಿ ನಿಂತ ನಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪುರಾಣ ಆಗಮ ವೇದಶಾಸ್ತ್ರ ಸ್ಮೃತಿ ತರ್ಕಗಳು ಕರ್ಮಸಿದ್ಧಾಂತವನ್ನು ಪ್ರತಿಪಾದಿಸುವ ಪಠ್ಯಗಳು. ಈ ಪಠ್ಯಗಳನ್ನು ಸಾರಾಸಗಟು ತಿರಸ್ಕರಿಸಿದಂತೆ ನಲವತ್ತೊಂದು ಜನ ವಚನಕಾರರ ಮುನ್ನೂರ ಮೂವತ್ತಾರು ವಚನಗಳಿವೆ. ಅವುಗಳಲ್ಲಿ ಬಸವಣ್ಣನವರೇ 64 ವಚನಗಳಿವೆ.
ಶಾಸ್ತ್ರ ಘನವೆಂಬೆನೆ | ಕರ್ಮವ ಭಜಿಸುತ್ತಿದೆ
ವೇದ ಘನವೆಂಬೆನೆ | ಪ್ರಾಣ ವಧೆಯ ಹೇಳುತ್ತಿದೆ
ಸ್ಮೃತಿ ಘನವೆಂಬೆನೆ | ಮುಂದಿಟ್ಟು ಅರಸುತ್ತಿದೆ.
ಎಂದು ಅವುಗಳನ್ನು ತಿರಸ್ಕರಿಸಿದ್ದಾರೆ. ವೇದ ವೇದಾಂತಗಳಿಗೆ ಅಸಾಧ್ಯವಾದ ಅನುಪಮ ಲಿಂಗವ ತಂದುಕೊಟ್ಟನಯ್ಯಾ ಸದ್ಗುರು ಎನ್ನ ಕರಸ್ಥಲಕ್ಕೆ’- ಎಂದು ಸ್ಥಾವರ ದೇವಾಲಯಗಳನ್ನು ತಿರಸ್ಕರಿಸುತ್ತಾ, ಜಂಗಮ ಸ್ವರೂಪಿ ಇಷ್ಟಲಿಂಗವನ್ನು ಪುರಸ್ಕರಿಸಿ ಮಾತನಾಡಿದ್ದಾರೆ.
ಕಲ್ಯಾಣ ರಾಜ್ಯದ ಕನಸಿಗಾಗಿ ಬಸವಣ್ಣನವರು ಅನುಸರಿಸಿದ ದಾರಿಯೆಂದರೆ ಅದು ಕಾಯಕ, ದಾಸೋಹದ ದಾರಿ. ಕಾಯಕವೆಂದರೆ ಸತ್ಯಶುದ್ಧ ಕಾಯಕ. ದಾಸೋಹವೆಂದರೆ ಕುಂತು ಉಣ್ಣುವುದಲ್ಲ. ಗಳಿಕೆಯ ಸಂಪತ್ತಿನ ವಿತರಣಾ ನೀತಿ. ಇದು ಅರ್ಥಶಾಸ್ತ್ರದ ಮಾರ್ಗನೀತಿ. ಬಸವಣ್ಣನವರು ಬಿಜ್ಜಳನ ಆಸ್ಥಾನದಲ್ಲಿ ವಿತ್ತಮಂತ್ರಿಯಾಗಿದ್ದವರು. ರಾಜ ಬಿಜ್ಜಳನ ನಂಬಿಕೆಗೆ ಪಾತ್ರರಾಗಿ ಕಪ್ಪಡಿ ಸಂಗಮದಿಂದ ಬಿಜ್ಜಳನ ಆಸ್ಥಾನಕ್ಕೆ ಕರಣೀಕರಾಗಿ ಬಂದವರು. ತಮ್ಮ ವ್ಯಕ್ತಿತ್ವದ ಸಂಪನ್ನತೆಯ ಫಲವಾಗಿ ಕರಣೀಕ ವೃತ್ತಿಯಿಂದ ಅರ್ಥ ಸಚಿವ ಸ್ಥಾನಕ್ಕೆ ಏರಿದವರು.
ಬಸವಣ್ಣನವರ ವ್ಯಕ್ತಿತ್ವದ ಅನನ್ಯತೆಯನ್ನು ಕಳಚೂರಿ ಬಿಜ್ಜಳ ಅರ್ಥಾತ್ ಕಷ್ಟಚೂರಿ ಬಿಜ್ಜಳ ಅರಿತವನಾಗಿದ್ದನೆಂಬುದೇ ಈ ಏರುಗತಿಗೆ ಕಾರಣ. ಅಲ್ಲದೆ ಅವಮಾನಿತ ಜಾತಿ ಮೂಲದಿಂದ ಬಂದವನಾಗಿದ್ದ ಬಿಜ್ಜಳನ ಪರೋಕ್ಷ ಬೆಂಬಲ ಬಸವಣ್ಣನವರ ವಚನ ಚಳವಳಿಗೆ ಇತ್ತು ಎಂಬುದು ಇತಿಹಾಸವನ್ನು ಅರಿಯಬಲ್ಲ ಯಾವ ಸಾಮಾನ್ಯ ಮನಸ್ಸಿಗೂ ವೇದ್ಯವಾಗುವ ಸತ್ಯ. ಇಂಥ ಅಪರೂಪದ ನಡೆಯ ಬಸವಣ್ಣನವರ ವ್ಯಕ್ತಿತ್ವದ ಅನನ್ಯತೆಯ ಫಲವೇ ವಚನ ಚಳವಳಿ, ಶರಣ ಚಳವಳಿ. ಇದು ಕನ್ನಡ ನೆಲದಲ್ಲಿ ಹುಟ್ಟಿ ಬೆಳೆದ ಕನ್ನಡದ ವಚನಧರ್ಮ. ಲಿಂಗಾಯತ ಧರ್ಮ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.