‘ಗಂಡನ ಪೂಜೆ’ – ಹೀಗೆಂದೇ ಪ್ರಸಿದ್ಧವಾಗಿರುವಂಥ ವ್ರತ ‘ಭೀಮನ ಅಮಾವಾಸ್ಯೆ.’
ಗಂಡನ ಪೂಜೆ – ಎಂದ ಕೂಡಲೇ ನಮಗೆ ಸಮಸ್ಯೆ ಎದುರಾಗುತ್ತದೆ. ಸ್ತ್ರೀಶೋಷಣೆ, ಪುರುಷಾಧಿಪತ್ಯ – ಹೀಗೆಲ್ಲ ನಮ್ಮ ತಕರಾರುಗಳು ಆರಂಭವಾಗುತ್ತವೆ. ಆದರೆ ಇದು ಪುರುಷಪಾರಮ್ಯವನ್ನು ಎತ್ತಿಹಿಡಿಯುವ ಹಬ್ಬ – ಎಂಬ ಪೂರ್ವಗ್ರಹದಿಂದಷ್ಟೆ ಇಂಥ ತಕರಾರುಗಳು ಹುಟ್ಟಿಕೊಳ್ಳಲು ಸಾಧ್ಯ. ಈ ವ್ರತದ ಹಿನ್ನೆಲೆಯಲ್ಲಿರುವುದು ಕುಟುಂಬದ ಸಾಮರಸ್ಯ, ಕೌಟುಂಬಿಕ ಮೌಲ್ಯ ಎಂಬುದನ್ನು ಅರಿತರೆ ಆಗ ಈ ವ್ರತಕ್ಕೊಂದು ಬೇರೆಯದೇ ಆಯಾಮ ಒದಗೀತು. ದಾಂಪತ್ಯದ ಸಾರ್ಥಕತೆ ಕೇವಲ ಹೆಣ್ಣನ್ನು ಮಾತ್ರವೇ ಅವಲಂಬಿಸಿಲ್ಲ. ಹೀಗಾಗಿ ಒಳ್ಳೆಯ ಗಂಡನಿಗಾಗಿ ಹೆಣ್ಣು ಪ್ರಾರ್ಥಿಸುವಂತೆಯೇ, ಗಂಡು ಕೂಡ ಒಳ್ಳೆಯ ಹೆಂಡತಿಗಾಗಿ ಪ್ರಾರ್ಥಿಸಬೇಕು ಎಂಬ ಧ್ವನಿಯೂ ಈ ವ್ರತದ ಆಚರಣೆಯಲ್ಲಿ ಇಲ್ಲದೇ ಇಲ್ಲ. ಪಾರ್ವತಿಯ ತಪಸ್ಸಿನ ಫಲ ಶಿವನಾದರೆ, ಶಿವನ ತಪಸ್ಸಿನ ಫಲ ಪಾರ್ವತಿ ಎಂಬುದನ್ನೂ ನಾವು ಮರೆಯುವಂತಿಲ್ಲ.
ಹಾಗಾದರೆ ಇಲ್ಲಿ ಇನ್ನೊಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ: ಹೆಣ್ಣು ಒಳ್ಳೆಯ ಗಂಡ ಬೇಕು – ಎಂದು ಪ್ರಾರ್ಥಿಸುವ ಬದಲಿಗೆ, ಗಂಡೇ ತನಗೆ ಒಳ್ಳೆಯ ಹೆಣ್ಣು ಬೇಕು ಎಂದು ಪ್ರಾರ್ಥಿಸಿ, ಪೂಜಿಸಬಾರದೇಕೆ? ದಿಟವೇ, ಈ ವ್ರತಾಚರಣೆಯ ಕಲ್ಪನೆ ತೋರಿಕೊಂಡ ಕಾಲಘಟ್ಟದಲ್ಲಿ ಪುರುಷನು ಕುಟುಂಬದ ಕೇಂದ್ರ ಎಂಬ ಭಿತ್ತಿ ಮೂಲವಾಗಿರಬಹುದು; ಈ ಹಿನ್ನೆಲೆಯಲ್ಲಿ ವ್ರತದ ಕಲಾಪಗಳು ಸಿದ್ಧವಾಗಿರಬಹುದು. ಆದರೆ ಇಂದು ಗಂಡು–ಹೆಣ್ಣು – ಇಬ್ಬರೂ ಸಮ ಎಂಬ ಸಿದ್ಧಾಂತ ಗಟ್ಟಿಯಾಗುತ್ತಿದೆ. ಹೀಗಾಗಿ ಗಂಡು ಒಳ್ಳೆಯ ಹೆಂಡತಿ ತನಗೆ ಸಿಗಲಿ ಎಂದು ಪ್ರಾರ್ಥಿಸಿದರೆ ಅದೇನೂ ಭಾರತೀಯ ಸಂಸ್ಕೃತಿಗೆ ಒಪ್ಪಿಗೆಯಾಗದ ವಿವರವೇನಾಗಲಾರದೆನ್ನಿ! ಗಂಡು–ಹೆಣ್ಣು ಇಬ್ಬರೂ ಪರಸ್ಪರ ಸ್ನೇಹದಿಂದಲೂ ಸೌಹಾರ್ದದಿಂದಲೂ ವಿಶ್ವಾಸದಿಂದಲೂ ದಾಂಪತ್ಯಜೀವನವನ್ನು ನಡೆಸಬೇಕು ಎಂಬುದೇ ಭೀಮನ ಅಮಾವಾಸ್ಯೆಯ ಕೇಂದ್ರ ಆಶಯ; ಅದೇ ಸಂಸ್ಕೃತಿಯ ಮೂಲತತ್ತ್ವ. ದಂಪತಿಸ್ವರೂಪದ ಮೂರ್ತಿಗಳನ್ನೇ ಈ ದಿನದ ಪೂಜೆ ಮಾಡುವುದು ಎಂಬುದು ಗಮನಾರ್ಹ. ತ್ಯಾಗರಾಜಸ್ವಾಮಿಗಳ ಕೃತಿಯಲ್ಲಿಯ ಸೊಲ್ಲೊಂದು ಸ್ವಾರಸ್ಯಕರವಾಗಿದೆ. ಅವರು ಶ್ರೀರಾಮನನ್ನು ಒಮ್ಮೆ ಪ್ರಶ್ನಿಸುತ್ತಾರೆ: ‘ಎಲೈ ರಾಮ! ನಿನಗೆ ಇಷ್ಟೆಲ್ಲ ಕೀರ್ತಿ ಹೇಗೆ ಬಂತು ಗೊತ್ತೇನು? ನಮ್ಮ ತಾಯಿಯಾದ ಜಾನಕಿಯ ಕೈ ಹಿಡಿದೆ; ನಿನ್ನ ಅದೃಷ್ಟ ಕುಲಾಯಿಸಿ ಲೋಕೋತ್ತರ ಕೀರ್ತಿ ನಿನಗೆ ಲಭಿಸಿತು. ಹೀಗಾಗಿ ನಿನ್ನ ಕೀರ್ತಿಯ ಶ್ರೇಯಸ್ಸು ಸೀತೆಗೇ ಹೋಗತಕ್ಕದ್ದು.’ ಹೀಗಿದೆ ತ್ಯಾಗರಾಜರ ಧ್ವನಿ. ದಾಂಪತ್ಯದ ಆದರ್ಶದ ಬಗ್ಗೆ ನಮ್ಮ ಸಂಸ್ಕೃತಿಯ ಧ್ವನಿಯೂ ಇದರೊಂದಿಗೇ ಒಂದಾಗಿದೆ. ಸೀತಾರಾಮ ಎನ್ನುತ್ತೇವೆ, ಉಮಾಶಂಕರ ಎನ್ನುತ್ತೇವೆ, ಶ್ರೀವಿಷ್ಣು ಎನ್ನುತ್ತೇವೆ, ಲಕ್ಷ್ಮೀರಮಣ ಎನ್ನುತ್ತೇವೆ. ‘ಶಕ್ತಿ’ಯಿಲ್ಲದೆ ಶಿವನು ಕೂಡ ಶವ – ಎಂಬ ನಿಲುವಂತೂ ಪ್ರಸಿದ್ಧವೇ ಆಗಿದೆಯಷ್ಟೆ.
ಪ್ರಾಚೀನ ಸಂಸ್ಕೃತಿಗಳ ಭಾಷೆ ಸಂಕೇತಗಳ ಭಾಷೆ; ಪ್ರತಿಮೆಗಳ ಭಾಷೆ. ಅದನ್ನು ಸರಿಯಾಗಿ ಅರ್ಥೈಸಿಕೊಂಡು ಆ ಬಳಿಕವಷ್ಟೆ, ಅದರ ವಿಶ್ಲೇಷಣೆಗೆ ತೊಡಗಬೇಕು. ಹೀಗಲ್ಲದೆ ವಾಚ್ಯಾರ್ಥದಲ್ಲಿ ಅವುಗಳ ವಿಧಿ–ವಿಧಾನಗಳನ್ನು ಗ್ರಹಿಸಿ, ಐತಿಹಾಸಿಕತೆಯ ಸಂಕೋಚದಲ್ಲಿ ಅವನ್ನು ಎಳೆಯುವುದು ಅಪಾರ್ಥಕ್ಕೆ ಎಡೆಮಾಡಿಕೊಡುತ್ತದೆ; ಆಗ ಕಲಾಪಗಳ ಆಶಯದ ಅರಿವು ದೂರವೇ ಉಳಿಯುತ್ತದೆ.
ನಮ್ಮ ಸಂಸ್ಕೃತಿಯ ವಿಶಿಷ್ಟತೆ ಎಂದರೆ ಕುಟುಂಬದ ವ್ಯವಸ್ಥೆಯ ಬಗ್ಗೆ ನಮಗಿರುವ ಆದರ್ಶ. ನಮ್ಮ ಜೀವನದ ಸಾರ್ಥಕತೆಗೆ ನೆರವಾಗುವ ಸಾಮಾಜಿಕ ಮಹಾಸಂಸ್ಥೆಯೇ ನಮ್ಮ ಕುಟುಂಬ ಎಂಬ ನಿಲುವು ನಮ್ಮದು. ಕುಟುಂಬದ ಕೇಂದ್ರವೇ ದಾಂಪತ್ಯ. ಈ ದಾಂಪತ್ಯ ಎಂಬ ಕೇಂದ್ರತತ್ತ್ವದ ಸುತ್ತಲೂ ಬೆಳೆದಿರುವಂಥ ವಿಶಾಲ ಮೌಲ್ಯಗಳೇ ಗೃಹಸ್ಥಧರ್ಮ ಎನಿಸಿಕೊಂಡಿದೆ. ಎಲ್ಲ ಆಶ್ರಮಗಳಿಗಿಂತಲೂ ಗೃಹಸ್ಥಾಶ್ರಮವೇ ಶ್ರೇಷ್ಠ; ನಮ್ಮ ಜೀವನಕ್ಕೆ ಧನ್ಯತೆಯನ್ನು ಒದಗಿಸುವಂಥದ್ದೇ ಗೃಹಸ್ಥಾಶ್ರಮ ಎಂಬ ಉದ್ಗಾರಗಳು ನಮ್ಮ ಸಂಸ್ಕೃತಿಗೆ ಸಹಜ ಸ್ವಭಾವವೇ ಆಗಿದೆ. ಹೀಗೆ ದಾಂಪತ್ಯದ ಹಿರಿಮೆಯನ್ನೂ ಗೃಹಸ್ಥಾಶ್ರಮದ ಗರಿಮೆಯನ್ನೂ ಎತ್ತಿಹಿಡಿಯುವ ವ್ರತಗಳಲ್ಲಿ ಒಂದು ಭೀಮೇಶ್ವರವ್ರತ; ಅದೇ ಭೀಮನ ಅಮಾವಾಸ್ಯೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.