ಬೀದರ್: ನಗರದಲ್ಲಿ ನರಸಿಂಹ ಝರಣಾ, ಗುರುನಾನಕ ಝೀರಾ, ಶುಕ್ಲತೀರ್ಥ ಹೀಗೆ ಅನೇಕ ಐತಿಹಾಸಿಕ ಕ್ಷೇತ್ರಗಳಿವೆ. ಆದರೆ, ಪಾಪನಾಶ ದೇಗುಲದ ಇತಿಹಾಸ ಮಾತ್ರ ಉಳಿದೆಲ್ಲ ತೀರ್ಥ ಕ್ಷೇತಗಳಿಗಿಂತಲೂ ಭಿನ್ನವಾಗಿದೆ.
ಶಿವರಾತ್ರಿಯ ಸಂದರ್ಭದಲ್ಲಿ ನಗರದ ಯಾವ ದೇವಾಲಯಗಳಲ್ಲೂ ಇರದಷ್ಟು ಜನಜಂಗುಳಿ ಪಾಪನಾಶ ದೇವಾಲಯದಲ್ಲಿ ಇರುತ್ತದೆ. ಭಕ್ತರು ಬೆಳಗಿನ ಜಾವದಿಂದ ಮಧ್ಯರಾತ್ರಿಯ ವರೆಗೂ ಸರತಿ ಸಾಲಿನಲ್ಲಿ ನಿಂತು ಭಕ್ತಿಪ್ರಿಯನ ದರ್ಶನ ಪಡೆದು ಕೃತಾರ್ಥರಾಗುತ್ತಾರೆ.
ಇಲ್ಲಿ ಎಲ್ಲ ಜಾತಿ, ವರ್ಗದವರೂ ದೇವರ ಪೂಜೆ ನೆರವೇರಿಸುತ್ತಾರೆ. ಶಿವರಾತ್ರಿಯಲ್ಲಿ ಶಿವಲಿಂಗಕ್ಕೆ ಜಲಾಭಿಷೇಕ, ಪೂಜೆ, ಅರ್ಚನೆ ಮಾಡುವುದು ಸಾಮಾನ್ಯವಾದರೂ ಪಾಪನಾಶಕ್ಕೆ ಬಂದು ದರ್ಶನ ಪಡೆದರೆ ಎಲ್ಲ ಸಂಕಷ್ಟಗಳಿಗೆ ಪರಿಹಾರ ದೊರಕುತ್ತದೆ ಎನ್ನುವುದು ಭಕ್ತರ ನಂಬಿಕೆಯಾಗಿದೆ.
ಸುತ್ತುವರಿದ ಗುಡ್ಡಗಳ ಇಳಿಜಾರು ಪ್ರದೇಶದಲ್ಲಿರುವ ಪಾಪನಾಶ ಮಂದಿರದಲ್ಲಿ ಉದ್ಭವಲಿಂಗ ಇದೆ. ಉಳಿದ ದಿನಗಳಲ್ಲಿ ಇಲ್ಲಿ ಭಕ್ತರ ಸಂಖ್ಯೆ ಕಡಿಮೆ ಇದ್ದರೂ ಶಿವರಾತ್ರಿ ಸಂದರ್ಭದಲ್ಲಿ ನಿಲ್ಲಲು ಜಾಗ ಸಹ ಇರುವುದಿಲ್ಲ. ಬಹಳಷ್ಟು ಜನ ಒಂದು ದಿನ ಮುಂಚಿತವಾಗಿಯೇ ಬಂದು ಇಲ್ಲಿ ನೆಲೆಸುತ್ತಾರೆ. ಬೆಳಗಿನ ಜಾವ ಸ್ನಾನ ಮಾಡಿ ದೇವರಿಗೆ ಪೂಜೆ ಸಲ್ಲಿಸುತ್ತಾರೆ.
ಪಾಪನಾಶ ದೇಗುಲದ ಇತಿಹಾಸ ಪುರಾಣದೊಂದಿಗೆ ಬೆಸೆದುಕೊಂಡಿದೆ. ಸೀತೆಯ ಅಪಹರಣದ ನಂತರ ಲಂಕೆಗೆ ತೆರಳಿದ್ದ ಶ್ರೀರಾಮನು ರಾವಣನ ಸಂಹಾರ ಮಾಡುತ್ತಾನೆ. ರಾವಣ ಸಹ ಶಿವನ ಪರಮಭಕ್ತನಾಗಿದ್ದ ಕಾರಣ ಶ್ರೀರಾಮನಿಗೆ ಪಾಪಪ್ರಜ್ಞೆ ಕಾಡುತ್ತದೆ. ಹೀಗಾಗಿ ದೋಷ ಪರಿಹರಿಸಿಕೊಳ್ಳಲು ದೇಶದೆಲ್ಲೆಡೆ ಶಿವ ದೇವಾಲಯಗಳನ್ನು ನಿರ್ಮಿಸಿ ಪೂಜಿಸಲು ಪ್ರಾರಂಭಿಸುತ್ತಾನೆ.
ಎಲ್ಲಿಯೂ ಪರಿಹಾರದ ಭಾವ ಮೂಡದಿದ್ದಾಗ ಇಲ್ಲಿಯ ಉದ್ಭವ ಲಿಂಗಕ್ಕೆ ಪೂಜೆ ಸಲ್ಲಿಸಿ ಕೃತಾರ್ಥನಾಗುತ್ತಾನೆ.ಉದ್ಭವ ಲಿಂಗಕ್ಕೆ ತನ್ಮಯದಿಂದ ಭಕ್ತಿ ಸಮರ್ಪಿಸಿದ ನಂತರ ಬ್ರಹ್ಮ, ವಿಷ್ಣು ಹಾಗೂ ಮಹೇಶ್ವರರು ಶ್ರೀರಾಮನಿಗೆ ಹರಸಿ ಪಾಪ ವಿಮೋಚನೆ ಮಾಡುತ್ತಾರೆ ಎನ್ನುವ ನಂಬಿಕೆ ಭಕ್ತರಲ್ಲಿ ಇದೆ.
ಶಿವರಾತ್ರಿಯ ದಿನ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸಿರುವ ಪುಷ್ಕರಣಿಯಲ್ಲಿ ಸ್ನಾನ ಮಾಡಿ ನೀರು ಹೊತ್ತು ತಂದು ಜಲಾಭಿಷೇಕ ಮಾಡುತ್ತಾರೆ. ನಂತರ ಪುಷ್ಪ ಹಾಗೂ ಬಿಲ್ವಪತ್ರೆಯೊಂದಿಗೆ ಅರ್ಚನೆ ಮಾಡುತ್ತಾರೆ. ತೆಂಗಿನಕಾಯಿ ಒಡೆದು, ಬಾಳೆಹಣ್ಣು ಸಮರ್ಪಣೆ ಮಾಡುತ್ತಾರೆ.
ಮಳೆಗಾಲದಲ್ಲಿ ಗುಡ್ಡದ ಮೇಲಿಂದ ಹರಿದು ಬರುವ ನೀರು ದೇವಸ್ಥಾನದ ಮುಂದೆ ಇದ್ದ ಕಾಲುವೆಯ ಮೂಲಕ ಕೆರೆಯನ್ನು ಸೇರಿಕೊಳ್ಳುತ್ತಿತ್ತು. ಕಾಲಾಂತರದಲ್ಲಿ ಮಂದಿರದ ಮುಂಭಾಗದಲ್ಲಿ ನೆಲವನ್ನು ಸಮತಟ್ಟುಗೊಳಿಸಿದ ಕಾರಣ ನೀರು ಬರುವುದು ಕಡಿಮೆಯಾಗಿದೆ.
ಶಿವರಾತ್ರಿ ಎರಡು, ಮೂರು ದಿನ ಇರುವಾಗ ಪುಷ್ಕರಣಿಯನ್ನು ಸ್ವಚ್ಛಗೊಳಿಸಿ ಅದರಲ್ಲಿ ಹೊಸದಾಗಿ ನೀರು ಸಂಗ್ರಹಿಸಲಾಗುತ್ತದೆ. ಕೆಲವರು ಇಲ್ಲಿಯೇ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಾರೆ. ಬಾಲಕರು ಮಧ್ಯಾಹ್ನದ ವರೆಗೂ ಪುಷ್ಕರಣಿಯಲ್ಲಿ ಜಲಕ್ರೀಡೆಯಲ್ಲಿ ತೊಡಗಿ ಮೋಜು ಮಾಡುತ್ತಾರೆ.
ಬಹಳಷ್ಟು ಜನ ಪುಷ್ಕರಣಿಯಲ್ಲಿನ ಜಲ ಸಿಂಪರಣೆ ಮಾಡಿಕೊಂಡು ದೇವಸ್ಥಾನದ ಮೆಟ್ಟಿಲು ಏರಿ ಶಿವಲಿಂಗದ ದರ್ಶನ ಪಡೆಯುತ್ತಾರೆ. ದೇಗುಲದ ಪಕ್ಕದಲ್ಲಿ ಸಭಾ ಮಂಟಪ ಹಾಗೂ ಪ್ರಸಾದ ಭವನ ಇದೆ. ಶಿವರಾತ್ರಿಯ ದಿನ ದಿನವಿಡೀ ಉಚಿತ ಪ್ರಸಾದ ವಿತರಣೆ ಮಾಡಲಾಗುತ್ತದೆ. ಜಾಗರಣೆಯಲ್ಲಿ ತೊಡಗುವ ಭಕ್ತರು ಇಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಾರೆ.
ಶಿವರಾತ್ರಿ ಪ್ರಯುಕ್ತ ಪಾಪನಾಶ ಮಂದಿರಕ್ಕೆ ಸುಣ್ಣಬಣ್ಣ ಬಳಿಯಲಾಗಿದೆ. ಭಕ್ತರ ದಟ್ಟಣೆ ನಿಭಾಯಿಸಲು ದೇವಸ್ಥಾನ ಟ್ರಸ್ಟ್‌ನವರು ಮಂದಿರದ ಮುಂದೆ ಬ್ಯಾರಿಕೇಡ್ ನಿರ್ಮಿಸಿದ್ದಾರೆ. ಆವರಣದಲ್ಲಿ ಬೃಹತ್ ಪೆಂಡಾಲ್ ಹಾಕಿದ್ದಾರೆ. ಮಂದಿರದ ಒಂದು ಬದಿಗೆ ಆಟಿಕೆ ಸಾಮಗ್ರಿಗಳ ಅಂಗಡಿಗಳನ್ನು ತೆರೆಯಲಾಗಿದೆ. ಇನ್ನೊಂದು ಬದಿಗೆ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಪಾಪನಾಶ ಗೇಟಿನಿಂದ ಮಂದಿರದ ವರೆಗೆ ರಸ್ತೆಯ ಎರಡೂ ಬದಿಗೆ ಹೂವು, ಕಾಯಿ ಹಾಗೂ ಆಟಿಕೆ ಸಾಮಗ್ರಿಗಳ ಅಂಗಡಿಗಳು ತೆರೆದುಕೊಂಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.