ADVERTISEMENT

ಬುದ್ಧ ಪೂರ್ಣಿಮೆ 2022: ಬುದ್ಧಮಾರ್ಗದ ಸಾಲು ದೀಪಗಳು

ದು.ಸರಸ್ಪತಿ./ ಚಿತ್ರ: ಸವಿತಾ ಬಿ.ಆರ್‌.
Published 14 ಮೇ 2022, 19:30 IST
Last Updated 14 ಮೇ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

1956ರ ಧರ್ಮಾಂತರದಿಂದಾಗಿ ಹಲವು ದಲಿತ ಮಹಿಳೆಯರು ಬೌದ್ಧಮತ ಸೇರಿ, ಭಿಕ್ಷುಣಿಯರಾದರು. ಧರ್ಮದ ತತ್ವಗಳನ್ನು ಜನರಿಗೆ ಸರಳವಾಗಿ ವಿವರಿಸುವ ಮತ್ತು ಬುದ್ಧ ವಿಹಾರ ಕಟ್ಟಲು ಚಂದಾ ಸಂಗ್ರಹಿಸುವಂಥ ಕೆಲಸ ಮಾಡಿದ ಅಂತಹ ಕೆಲವು ಮಹಿಳೆಯರ ಬದುಕಿನ ಹೆಜ್ಜೆಗಳನ್ನು ಬುದ್ಧಪೂರ್ಣಿಮೆಯ ನೆಪದಲ್ಲಿ ನೆನಪಿಸಿಕೊಳ್ಳುವ ಒಂದು ಪ್ರಯತ್ನ...

ಮುಟ್ಟಿದರೆ ಮುರಿದು ಬೀಳುವಷ್ಟು ಸಂಬಂಧಗಳು ನಾಜೂಕಾಗಿವೆ. ಕಿಡಿ ತಗುಲಿದರೆ ಉರಿದೇಳಲು ಸಿದ್ಧರಾಗಿದ್ದೇವೆ. ನಂಜು, ದ್ವೇಷಗಳನ್ನು ಹುಲುಸಾಗಿ ಬೆಳೆಯಲು ಬೇಕಾದ ರಾಸಾಯನಿಕ ಗೊಬ್ಬರವೂ ಆಗಿದ್ದೇವೆ. ಏನೇ ಆಗಲಿ ಭೂಮಿ, ಒಂದೇ ಗತಿಯಲ್ಲಿ ಚಲಿಸುವಳಾದ್ದರಿಂದ ಮತ್ತೆ ಬಂದಿದೆ ಬುದ್ಧ ಪೂರ್ಣಿಮೆ. ಸುಡುವ ಸೂರ್ಯನ ಬೆಳಕನ್ನೇ ತಂಪನೆ ಹುಣ್ಣಿಮೆಯಾಗಿಸುವ ಚಂದ್ರ. ನೀರು ಆವಿಯಾಗಿ, ಆವಿ ಮೋಡವಾಗಿ, ಮತ್ತೆ ಮಳೆಯ ನೀರಾಗಿಸುವ ಪ್ರಕೃತಿಯ ಕೊನೆ ಮೊದಲಿಲ್ಲದ ನಿರಂತರ ಚಲನೆಯಲ್ಲಿ ಎಲ್ಲವೂ ರೂಪಾಂತರಗೊಳ್ಳುತ್ತಲೇ ಇರುವಾಗ ಶಾಶ್ವತವೆಂಬುದು ಅಜ್ಞಾನವೆಂದು ತೋರಿದ, ಅರಿವು-ಕರುಣೆಯೇ ಮೈದಾಳಿದ ಬುದ್ಧ ಹುಟ್ಟಿದ್ದು, ಜ್ಞಾನೋದಯ ಪಡೆದುಕೊಂಡದ್ದು, ನಿರ್ವಾಣ ಹೊಂದಿದ್ದು ಎಲ್ಲವೂ ಬೆಳದಿಂಗಳಿನಲ್ಲಿಯೇ.

ಅರಿವೇ ಗುರುವಾದ ಬುದ್ಧ ಮಾರ್ಗದಲ್ಲಿ ನಡೆದ ಮಲಬಾಚುವ ಸುನೀತ, ಕ್ಷೌರಿಕ ಉಪಾಲಿ, ಕೊಲೆಗಡುಕ ಅಂಗುಲಿಮಾಲ, ಎಲ್ಲರನ್ನೂ ಕಳೆದುಕೊಂಡು ಹುಚ್ಚಿಡಿದು ನಗ್ನಳಾಗಿ ತಿರುಗುತ್ತಿದ್ದ ಪಟಾಚಾರಿ, ಏಕೈಕ ಕಂದನನು ಕಳೆದುಕೊಂಡು ಆಘಾತಗೊಂಡ ಕಿಸಾ ಗೌತಮಿ, ವೇಶ್ಯೆ ಉಪ್ಪಲವನ, ಎಮ್ಮೆ ಮೇಯಿಸುವ ಸ್ವಸ್ತಿ ಎಲ್ಲರೂ ಗುರುಗಳಾದರು.

ADVERTISEMENT

ಬೆಳಕಿನ ದಾರಿ ಹುಡುಕಿದ ಪಯಣ

‘ಹದ್ದುಗಳು ಮೇಲೇರುತ್ತವೆ ಗಾಳಿಯೊಂದಿಗಲ್ಲ, ಗಾಳಿಗೆ ವಿರುದ್ಧವಾಗಿ’, ‘ಗಿಡುಗಗಳು ಗಾಳಿಗತಿಯ ವಿರುದ್ಧವಾಗಿ ಆಕಾಶವನ್ನು ವೀಕ್ಷಿಸುತ್ತವೆ’ ಎಂಬ ಮಾತುಗಳಿಂದ, ಮನುಷ್ಯರೆಂದೇ ಪರಿಗಣಿಸದ ಸಮಾಜದಲ್ಲಿ, ಮನುಷ್ಯರೆಂಬುದನ್ನೇ ಮರೆತುಹೋಗಿದ್ದ ಅಸ್ಪೃಶ್ಯರೊಳಗಿನ ಸ್ವಾಭಿಮಾನವನ್ನು, ಆತ್ಮಸಮ್ಮಾನವನ್ನು ಬಡಿದೆಬ್ಬಿಸಿದ, ಸರ್ವರಿಗೂ ಸಮಪಾಲು, ಸಮಬಾಳು ಸಿಗಲೆಂದು ಸಂವಿಧಾನ ಬರೆದ, ಬಂಧುತ್ವವೇ ದೊಡ್ಡದೆಂದ ನಿನಗೆ ನೀನೇ ಬೆಳಕೆಂದ ಬುದ್ಧಗುರುವ ಅಪ್ಪಿದ ಬಾಬಾಸಾಹೇಬರದು ತಾನೇ ಉರಿದುಹೋಗುತ್ತಿದ್ದರೂ ಬೆಳಕಿನ ದಾರಿ ಕಾಣಲೇಬೇಕೆಂಬ ಪಯಣ. ಅವರ ಪಯಣದಲ್ಲಿ ಪಾಲ್ಗೊಂಡ, ಪಯಣ ಮುಂದುವರೆಸಿದ ದಲಿತ ಮಹಿಳೆಯರನ್ನು ಬುದ್ಧ ಪೂರ್ಣಿಮೆಯಂದು ನೆನಪುಮಾಡಿಕೊಳ್ಳುವ ಪ್ರಯತ್ನವಿದು.

ಬಾಬಾಸಾಹೇಬರು ಯೆವಲಾದಲ್ಲಿ 1935ರ ಅಕ್ಟೋಬರ್ 13ರಂದು ಹತ್ತು ಸಾವಿರದಷ್ಟು ಸೇರಿದ್ದ ಜನರೆದುರಿನಲ್ಲಿ ‘ಹಿಂದೂವಾಗಿ ಹುಟ್ಟಿರುವೆ, ಹಿಂದೂವಾಗಿ ಸಾಯುವುದಿಲ್ಲ’ ಎಂದು ತಮ್ಮ ಮತಾಂತರದ ಇಚ್ಛೆಯನ್ನು ಘೋಷಿಸಿದ ನಂತರ ದೇಶದುದ್ದಗಲಕ್ಕೂ ದಲಿತರ ಸಭೆಗಳು ನಡೆದವು. ದಾದರಿನ ಪುರಂದರೆ ಸ್ಟೇಡಿಯಂನಲ್ಲಿ 1936ರ ಮೇ 30 ಮತ್ತು 31ರಂದು ಬಾಬಾಸಾಹೇಬರ ಕರೆ ಕುರಿತು ನಡೆದ ಬಾಂಬೆ ಪ್ರೆಸಿಡೆನ್ಸಿಯ ಮಹಾರ್ ಪರಿಷತ್ ಸಭೆಯ ಸಂದರ್ಭದಲ್ಲಿ ಮಹಿಳೆಯರು ತಮ್ಮದೇ ಪ್ರತ್ಯೇಕ ಸಭೆ ನಡೆಸಿ ಮತಾಂತರಕ್ಕೆ ತಮ್ಮ ಸಮ್ಮತಿ ಘೋಷಿಸಿದರು. ಜನಾಬಾಯಿ ಮೋರೆಯವರು ಬಾಂಬೆಯ ಮಹಿಳಾ ಸಮುದಾಯದ ಪರವಾಗಿ ‘ಮತಾಂತರಕ್ಕೆ ನಾವು ಸಿದ್ಧರಿದ್ದೇವೆ’ ಎಂದು ಬೆಂಬಲ ಸೂಚಿಸಿದರು.

‘ಅಸ್ಪೃಶ್ಯರ ಗೋಳನ್ನು ಕೇಳುವಂತೆ ಮಾಡಿ ನಮಗೆ ರಾಜಕೀಯ ಹಕ್ಕುಗಳನ್ನು ಕೊಡಿಸಿದ ಮಹಾತ್ಮರ ಕರೆಗೆ ಓಗೊಡದೆ ಇರಲು ಸಾಧ್ಯವೇ’ ಎಂದು ರಾಜಾಬಾಯಿ ಗಾಯಕ್ವಾಡ್ ಹೇಳಿದರು. ಏಳು ಕೋಟಿ ಅಸ್ಪೃಶ್ಯರ ಪ್ರಗತಿಗಾಗಿ ಹೋರಾಡುತ್ತಿರುವ ಅವರನ್ನು ಬೆಂಬಲಿಸುವುದು ನಮ್ಮ ಕರ್ತವ್ಯ ಎಂದು ಸೋನುಬಾಯಿ ದಾವರೆಯವರು ಹೇಳಿದರು. ಅಂಬೇಡ್ಕರ್ ಅವರು ತಮ್ಮ ವಿವೇಕದ ಮಾತುಗಳಿಂದ ಧಾರ್ಮಿಕ ಮತಾಂತರಕ್ಕೆ ಕರೆಕೊಟ್ಟ ದಿನವೇ ನಮ್ಮ ಸೋದರ, ಸೋದರಿಯರನ್ನು ಕಟ್ಟಿಹಾಕಿದ್ದ ಸಂಕೋಲೆಗಳು ಕಳಚಿಕೊಂಡು ಹಗುರಾದಂತೆ ಎನಿಸಿತು, ದೇವರೇ ಬಾಬಾಸಾಹೇಬರ ದನಿಯಾಗಿ ಮಾತನಾಡುತ್ತಿದ್ದಾರೆನಿಸಿತು ಎಂದು ಭಾಗೀರಥಿಬಾಯಿ ತಾಂಬೆ ಹೇಳಿದರು. ನಾವು ಸೋದರಿಯರು ಬಾಬಾಸಾಹೇಬರ ನಂಬಿಕೆಗಳ ಪ್ರಕಾರ ಕೆಲಸ ಮಾಡಲು ನಮ್ಮನ್ನು ಅರ್ಪಿಸಿಕೊಳ್ಳೋಣ ಎಂದು ಅನಸೂಯ ವಾವಲ್ ಹೇಳಿದರು.

ಜನರು ತಮ್ಮ ಮೇಲಿಟ್ಟಿದ್ದ ವಿಶ್ವಾಸ ಮತ್ತು ಅವರ ಭವಿಷ್ಯದ ಅರಿವಿದ್ದ ಬಾಬಾಸಾಹೇಬರು 21 ವರ್ಷಗಳ ಕಾಲ ಹುಡುಕಾಟ, ಅಧ್ಯಯನ ನಡೆಸಿ ಬೌದ್ಧ ಧರ್ಮವನ್ನು ಸೇರಲು ತೀರ್ಮಾನಿಸಿದ್ದು ಭಾರತದೆಲ್ಲೆಡೆಯ ದಲಿತರನ್ನು ಅರಿವಿನ ಮಾರ್ಗದತ್ತ ನಡೆಯಲು ಪ್ರೇರೇಪಿಸಿತು.

1956ರ ಅಕ್ಟೋಬರ್ 14ರಂದು, ಬುದ್ಧನ ಮಹಾಪರಿನಿರ್ವಾಣದ 2500ನೇ ಜಯಂತಿಯಂದು, ನಾಗಪುರದ ಶ್ರದ್ಧಾನಂದ ಪೇಟೆಯಲ್ಲಿದ್ದ 14 ಎಕರೆ ಮೈದಾನದಲ್ಲಿ ಧರ್ಮಾಂತರ ಕಾರ್ಯಕ್ರಮ ನಡೆಯಿತು. ದೇಶದ ಹಳ್ಳಿ, ಪಟ್ಟಣಗಳಿಂದ ಅಸ್ಪೃಶ್ಯ ಬಂಧುಗಳು ಸಿಕ್ಕ ರೈಲು, ಕಾರು, ಗೂಡ್ಸ್ ರೈಲು, ಲಾರಿ, ಟ್ಯಾಕ್ಸಿ, ಆಟೊ ರಿಕ್ಷಾ ಹೀಗೆ ಸಿಕ್ಕ ಸಿಕ್ಕ ವಾಹನಗಳ ಹಿಡಿದೋ, ನಡೆದುಕೊಂಡೋ ರೊಟ್ಟಿ ಗಂಟಿನೊಂದಿಗೆ ಮಕ್ಕಳನ್ನು ಹೊತ್ತು ಹೊಳೆ, ತೊರೆ, ನದಿಗಳಂತೆ ಹರಿದು ಬಂದರು. ಸಣ್ಣಪುಟ್ಟ ಒಡವೆಗಳ ಅಡವಿಟ್ಟೋ ಮಾರಿಯೋ ಬಿಳಿ ಬಟ್ಟೆಯನ್ನು ತೊಟ್ಟು ಬಂದರು. ನೀರು, ಆಹಾರ, ವೈದ್ಯಕೀಯ ಸೇವೆಗೆಂದು ಸ್ವಯಂ ಸೇವಕರು ಸಾವಿರಾರು ಸಂಖ್ಯೆಯಲ್ಲಿ ಸೇವೆ ಮಾಡಿದರು.

ಅಂದು ಬಾಬಾಸಾಹೇಬರ ತಂದೆಯವರ ಮರಣದ ದಿನವೂ ಆಗಿದ್ದರಿಂದ ಒಂದು ನಿಮಿಷದ ಮೌನ ಆಚರಿಸಿದ ನಂತರ ಬೌದ್ಧಗುರುಗಳಾದ ಚಂದ್ರಮಣಿಯವರು ಬಾಬಾಸಾಹೇಬರು ಮತ್ತು ಸವಿತಾ ಅಂಬೇಡ್ಕರ್ ಅವರಿಗೆ ದೀಕ್ಷೆ ನೀಡಿದರು. ನಂತರ ಬಾಬಾಸಾಹೇಬರು ನೆರೆದಿದ್ದ ಎಲ್ಲರಿಗೂ ತ್ರಿಶರಣ (ಬುದ್ಧನಿಗೆ ಶರಣು, ಧಮ್ಮಕ್ಕೆ ಶರಣು, ಸಂಘಕ್ಕೆ ಶರಣು), ಮತ್ತು ಪಂಚಶೀಲಗಳನ್ನು (ಹಿಂಸೆ ಮಾಡುವುದಿಲ್ಲ, ಕದಿಯುವುದಿಲ್ಲ, ವ್ಯಭಿಚಾರ ಮಾಡುವುದಿಲ್ಲ, ಸುಳ್ಳು ಹೇಳುವುದಿಲ್ಲ, ಮದ್ಯ ಸೇವಿಸುವುದಿಲ್ಲ) ಬೋಧಿಸಿದರು. ಜೊತೆಗೆ ಹಿಂದೂ ಧರ್ಮದ ದೇವರುಗಳು, ಜಾತೀಯತೆ, ಆಚರಣೆಗಳು ಬುದ್ಧ ವಿಷ್ಣುವಿನ ಅವತಾರವೆಂಬ ನಂಬಿಕೆ ಬಿಡಬೇಕು ಇತ್ಯಾದಿ 17 ಪ್ರಮಾಣಗಳನ್ನು ಸಹ ಮಾಡಿಸಿದರು.

ಧರ್ಮ, ಜಾತಿ, ಮತ, ಕೋಮು ಯಾವುದೇ ಇರಲಿ ಪುರುಷ ಸಂಸ್ಕೃತಿಯ ಕಟ್ಟು, ಕಟ್ಟಳೆಗೆ ತಕ್ಕಂತೆ, ಉಡುವ, ಉಣ್ಣುವ, ಯೋಚಿಸುವುದನ್ನು ಉಸಿರಾಟದಂತೆ ಮಹಿಳೆಯರಿಗೆ ಅಭ್ಯಾಸ ಮಾಡಿಸಲಾಗುತ್ತಿತ್ತು. ಇದು ದಲಿತ ಮಹಿಳೆಯರಿಗೂ ಅನ್ವಯಿಸುತ್ತಿತ್ತು. ಬಾಬಾಸಾಹೇಬರು ಧರ್ಮಾಂತರಕ್ಕೆ ಕರೆ ಕೊಟ್ಟಾಗ ದಲಿತ ಮಹಿಳೆಯರು ಪೂಜಿಸುತ್ತಿದ್ದ ದೇವರುಗಳನ್ನು ಬುಟ್ಟಿಯಲ್ಲಿ ತುಂಬಿ ನೀರಿಗೆ ಹಾಕಲು ಸಿದ್ಧರಾದದ್ದು ಬಾಬಾಸಾಹೇಬರಲ್ಲಿ ಮಹಿಳೆಯರು ಇಟ್ಟಿದ್ದ ವಿಶ್ವಾಸದ ಸಂಕೇತ. 1956ರ ಧರ್ಮಾಂತರದಿಂದಾಗಿ ಹಲವಾರು ದಲಿತ ಮಹಿಳೆಯರು ಬೌದ್ಧಮತದ ಅನುಯಾಯಿಗಳಾದರಷ್ಟೇ ಅಲ್ಲದೆ ಭಿಕ್ಷುಣಿಯರಾಗಿ ಸಮಾಜಸೇವೆಗೆ ತಮ್ಮ ಬದುಕನ್ನು ಮುಡಿಪಾಗಿಟ್ಟರು. ನಡತೆಯನ್ನು ಶುದ್ಧವಾಗಿಟ್ಟುಕೊಂಡು, ಸಾಂಸಾರಿಕ ಬಂಧನಗಳಿಂದ ಮುಕ್ತರಾಗಿ, ಬೌದ್ಧ ಮತಸ್ಥರಿಗೆ ತಕ್ಕ ಮಾದರಿಗಳಾಗಿರುವುದರ ಬಗ್ಗೆ ಎಚ್ಚರವಹಿಸಿ ಹೊಸ ಧರ್ಮವನ್ನು ಅಧ್ಯಯನ ಮಾಡುವ, ಅದರ ತತ್ವಗಳನ್ನು ಜನರಿಗೆ ಸರಳವಾಗಿ ವಿವರಿಸುವ, ಬೌದ್ಧಮತದ ಆಚರಣೆಗಳನ್ನು ನಡೆಸಿಕೊಡುವ ಮತ್ತು ಬುದ್ಧ ವಿಹಾರವನ್ನು ಕಟ್ಟಲು ಚಂದಾ ಸಂಗ್ರಹಿಸುವಂಥ ಕೆಲಸಗಳನ್ನು ಮಾಡಿದ ಕೆಲವು ಮಹಿಳೆಯರು ಇಲ್ಲಿ ಉಲ್ಲೇಖಾರ್ಹರು.

ಬಾಲ್ಯದಿಂದಲೇ ಏಕತಾರಿ ಹಿಡಿದು, ಭಜನೆ ಮಾಡುವ ತಂದೆಯೊಂದಿಗೆ ದನಿ ಸೇರಿಸುತ್ತಿದ್ದವರು ಸೀತಾಬಾಯಿ ಥಾಕೂರ್. ಮಿಲಿಟರಿಯಲ್ಲಿದ್ದ ಸುಂದರರಾಮ್ ಥಾಕೂರ್‌ನೊಂದಿಗೆ ಅವರ ಮದುವೆಯಾಯಿತು. ಮಕ್ಕಳಾಗದಿದ್ದರಿಂದ ಗಂಡ ಮತ್ತೊಂದು ಮದುವೆ ಮಾಡಿಕೊಂಡ ಮೇಲೆ ಅವರಿಂದ ದೂರವಾಗಿ ತಂದೆಯ ಬಳುವಳಿಯಾಗಿ ಬಂದ ಹಾಡುಗಾರಿಕೆಯಲ್ಲಿ ಮನಸ್ಸು ತೊಡಗಿಸಿಕೊಂಡರು. ಬಾಬಾಸಾಹೇಬರ ಚಳವಳಿ ಸೇರಿ ಹಾಡುವುದನ್ನು ಮುಂದುವರೆಸಿದರಲ್ಲದೆ ‘ನಿಂತ ಭೀಮ ಬೋಧಿವೃಕ್ಷದಡಿ/ ಬುದ್ಧ ಭಗವಾನರ ಬಾಬಾ ಕಂಡ/ ಧಮ್ಮ ಚಕ್ರವ ಕೈಗೆತ್ತಿಕೊಂಡ/ನಮ್ಮ ನೆಲದಲ್ಲಿ ಕ್ರಾಂತಿ ಮಾಡಿದ/ ಬಾಬಾ ಕಂಡ ಬುದ್ಧ ಭಗವಾನರ ಅವನಿಗವ ಧಮ್ಮವ ನೀಡಿದ...’ ಎಂಬಂತಹ ಹಾಡುಗಳನ್ನು ಬರೆಯತೊಡಗಿದರು. ಹಾಡಿನ ಮೂಲಕ ಜನರಿಗೆ ಅರಿವು ಮೂಡಿಸುವುದೇ ಅವರ ಕೆಲಸವಾಯಿತು.

ಮುಂದೆ ಬಾಂಬೆಯ ವರ್ಲಿಯ ಬುದ್ಧವಿಹಾರದಲ್ಲಿ ಹಲವಾರು ವರ್ಷಗಳ ಕಾಲ ಮುಖ್ಯ ಸಂಗೀತ ಸಂಯೋಜಕಿ, ಹಾಡುಗಾರ್ತಿ ಮತ್ತು ಕಾರ್ಯಕರ್ತೆಯೂ ಆಗಿ ಕೆಲಸ ಮಾಡಿದರು. ದ್ರಾಕ್ಷಾಬಾಯಿ ಬನ್ಸೊಡೆ, ತನುಬಾಯಿ ಪಾಠಾರೆ, ಸಾಕ್ರುಬಾಯಿ ಚಂದನಶಿವೆ, ಶಾರದಾಬಾಯಿ ಆವಾಢೆ ಮತ್ತು ಇತರರನ್ನು ಸೇರಿಸಿಕೊಂಡು ಭಜನೆಯ ಗುಂಪನ್ನು ಕಟ್ಟಿ ಬಾಂಬೆಯ ಚೆಂಬೂರ್, ಥಾಣೆ, ಜೋಗೇಶ್ವರಿ, ಅಂಧೇರಿ, ಮಾತುಂಗ ಲೇಬರ್ ಕ್ಯಾಂಪ್, ಕಲಿನಾ, ಕಾಮಾಟಿಪುರದಂಥ ಸ್ಥಳಗಳಿಗೆ ಹೋಗಿ ಹಾಡುವ ಮೂಲಕ ಅರಿವು ಮೂಡಿಸುತ್ತಿದ್ದರು.

ದೇವಕಿ ಚಂದ್ರಬಾನ್ ಖಂದರೆಯವರು ಅಕೋಲಾದವರು. ಕುಷ್ಟರೋಗದಿಂದ ಪತಿ ತೀರಿಕೊಂಡ ಕೆಲ ಸಮಯದಲ್ಲೇ ಇದ್ದೊಬ್ಬ ಮಗನೂ ಕಾಯಿಲೆಯಿಂದ ತೀರಿಕೊಂಡಾಗ ಅವರಿಗೆ ಲೋಕವೇ ಕುಸಿದಂತಾಗಿ ಜೀವನಕ್ಕೆ ಅರ್ಥವೇ ಇಲ್ಲವೆನಿಸಿದರೂ ದುಃಖ ನುಂಗಿಕೊಂಡು, ಇತರರಿಗಾಗಿ ಬದುಕಬೇಕೆಂದು ನಿರ್ಧರಿಸಿ ಬೌದ್ಧ ತತ್ವಗಳಿಗೆ ಮೊರೆ ಹೋಗಿ ಬದುಕಿನ ಅರ್ಥ ಮತ್ತು ಮೌಲ್ಯ ಕಂಡುಕೊಂಡರು. ಮುಂದೆ ಭಿಕ್ಷುಣಿಯಾಗಿ ಅಕೋಲಾದ ಬುದ್ಧವಿಹಾರದಲ್ಲಿ ವಾಸಿಸುತ್ತ ಧಾರ್ಮಿಕ ಪಠ್ಯಗಳನ್ನು ಓದುವುದು, ಧ್ಯಾನ ಮಾಡುವುದು, ಉಪದೇಶ ಹಾಗೂ ಸಮಾಜಸೇವೆ ಮಾಡುತ್ತ ಬದುಕಿದರು. ಒಮ್ಮೆ ಸಿಲೋನಿನ ಭಿಕ್ಷುಣಿಯರು ಅಕೋಲಾಗೆ ಬಂದಾಗ ದೇವಕಿ ಅವರಿಗೆ ನಂದಶೀಲ ಎಂಬ ಹೆಸರು ನೀಡಿದರು.

ಚಂದ್ರಭಾಗ ಚೌತ್ಮಲ್ ಹತ್ತನೇ ವಯಸ್ಸಿಗೇ ಮದುವೆಯಾಗಿದ್ದರು. ಮುಂದೆ ಗಂಡನ ಹಿಂಸೆ ತಾಳಲಾರದೆ ಆತನನ್ನು ಬಿಟ್ಟು ಬಟ್ಟೆ ಹೊಲಿದು ಬದುಕು ಕಟ್ಟಿಕೊಂಡರು. ಬಾಬಾಸಾಹೇಬರ ಹೆಸರು ಕೇಳಿ ಅವರ ಚಳವಳಿಯಲ್ಲಿ ಸೇರಬೇಕೆಂದು ಅಕೋಲಾದಲ್ಲಿ ನಡೆಯುತ್ತಿದ್ದ ಸಭೆಗಳಿಗೆ ಹೋಗತೊಡಗಿದರು. ಬಾಬಾರವರ ‘ಜನತಾ’ ಮತ್ತು ‘ಪ್ರಬುದ್ಧ್ ಭಾರತ್’ ಪತ್ರಿಕೆಗಳನ್ನು ಓದತೊಡಗಿದರು. ‘ಭೀಮ ಗೀತೆ’ಗಳನ್ನು ಹಾಡಲು, ಬರೆಯಲು ಪ್ರಯತ್ನಿಸಿದರು.

ಮತಾಂತರದ ಸಂದರ್ಭದಲ್ಲೇ ನಾಗಪುರಕ್ಕೆ ಹೋಗಿ ಬೌದ್ಧಧರ್ಮಕ್ಕೆ ಸೇರಿಕೊಂಡಾಗಿನಿಂದಲೂ ಇಂಡಿಯನ್ ಬುದ್ಧಿಸ್ಟ್ ಕೌನ್ಸಿಲ್‍ನಲ್ಲಿ ಮತ್ತು ಸಮತಾ ಸೈನಿಕ ದಳದಲ್ಲಿ ಕೆಲಸ ಮಾಡತೊಡಗಿದರು. ಗೌತಮ ಬುದ್ಧರ ಕುರಿತು ನಾಟಕ ಬರೆದು ಸಮತಾ ಸೈನಿಕ ದಳದ ಸಮ್ಮೇಳನದಲ್ಲಿ ಮಕ್ಕಳಿಂದ ಪ್ರದರ್ಶನ ಮಾಡಿಸಿದ್ದಕ್ಕಾಗಿ ಮತ್ತು ಉತ್ತಮ ಕೆಲಸಕ್ಕಾಗಿ ಎನ್.ಶಿವರಾಜ್ ಅವರಿಂದ ಬಹುಮಾನ ಪಡೆದರು. ಅಮರಾವತಿ, ಜಾಲನಾ ಮುರ್ತಿಜಾಪುರ್, ಪರತ್‍ವಾಡಾ, ವಾಶಿಂ, ಅಕೋಲಾ ಹಾಗೂ ಆಹ್ವಾನ ಬಂದ ಕಡೆಗೆಲ್ಲಾ ಶ್ರದ್ಧೆ, ಬದ್ಧತೆಗಳಿಂದ ಬೌದ್ಧಮತ ಪ್ರಚಾರದ ಕೆಲಸ ಮುಂದುವರೆಸಿದರು. 1975ರಲ್ಲಿ ಬೋಧಗಯಾದ ಶ್ರಾಮ್ನೇರಿಯಲ್ಲಿ ಭಿಕ್ಷುಣಿ ಶುಜಾನ ಅವರ ಮಾರ್ಗದರ್ಶನದಲ್ಲಿ ದೀಕ್ಷೆ ಪಡೆದುಕೊಂಡು ಭಿಕ್ಷುಣಿ ಚಂದ್ರಶೀಲಳಾದರು.

ಲಕ್ಷ್ಮಿಬಾಯಿ ನಾಯಕ್ ಅಕೋಲಾದ ಭೀಮ್‍ನಗರದವರು. ಏಳನೇ ತರಗತಿ ಪಾಸಾಗಿ, ಶಿಕ್ಷಕಿಯಾಗಿ ತರಬೇತಿ ಪಡೆದುಕೊಂಡಿದ್ದ ಲಕ್ಷ್ಮಿಯವರು ಸಂಪತ್‍ರಾವ್ ನಾಯಕ್‍ರನ್ನು ಮದುವೆಯಾದ ಮೇಲೆ ಅತ್ಯಂತ ಹಿಂದುಳಿದಿದ್ದ ಅಮರಾವತಿಯ ಬೇಲ್‍ಪುರದಲ್ಲಿ ತಮ್ಮದೇ ಶಾಲೆಯನ್ನು ತೆರೆದರು.

ಬಾಬಾಸಾಹೇಬರು ಬೌದ್ಧ ಧರ್ಮಕ್ಕೆ ಮತಾಂತರಗೊಂಡಾಗ, ಲಕ್ಷ್ಮಿಬಾಯಿಯವರೂ ಮತಾಂತರವಾದರು. ಬೌದ್ಧ ಸಾಹಿತ್ಯ ಓದುವುದು ಮತ್ತು ಬೌದ್ಧ ತತ್ವಗಳನ್ನು ಅರಿಯಲು ಮಾಡುತ್ತಿದ್ದ ಪ್ರಯತ್ನಗಳು ಅವರಿಗೆ ಎಂತಹ ಸ್ಫೂರ್ತಿ ನೀಡಿದವೆಂದರೆ ಭಿಕ್ಷುಣಿಯರಂತೆ ತಲೆ ಬೋಳಿಸಿಕೊಂಡು ಬಿಳಿ ಬಟ್ಟೆ ತೊಟ್ಟು ಬೌದ್ಧ ಉಪಾಸಕರಂತೆ ಹಳ್ಳಿಗಳನ್ನು ಸುತ್ತತೊಡಗಿದರು. ಭೋದ್ ಗಯಾದ ಬೌದ್ಧವಿಹಾರದಲ್ಲಿ ಒಂದು ವರ್ಷ ನೆಲೆಸಿ ಬೌದ್ಧತತ್ವಗಳ ಅಧ್ಯಯನ ಮತ್ತು ಧ್ಯಾನ ಮಾಡುವುದನ್ನು ಕಲಿತರು. ಕುಶಿನಗರ, ಭೋದ್ ಗಯಾ ಹಾಗೂ ಇನ್ನಿತರ ಬೌದ್ಧ ಪವಿತ್ರ ಕ್ಷೇತ್ರಗಳಿಗೆ ಯಾತ್ರೆ ಕೈಗೊಂಡು ಸಾರನಾಥದಲ್ಲಿ ಭಂತೆಯವರಿಂದ ಭಿಕ್ಷುಣಿಯಾಗಿ ದೀಕ್ಷೆ ಪಡೆದರು.

ವರ್ಷದಲ್ಲಿ ಮೂರು ತಿಂಗಳ ಕಾಲ ಬದ್ನೆರಾದ ಸಮೀಪವಿರುವ ಜನವಸತಿಯಿಂದ ಮೂರು ಕಿಲೋಮೀಟರ್ ದೂರವಿದ್ದ ಕೊಂಡೇಶ್ವರ ಎಂಬ ಹಳ್ಳಿಯಲ್ಲಿ ಲಕ್ಷ್ಮಿಬಾಯಿಯವರು ಒಂಟಿಯಾಗಿ ಧ್ಯಾನಮಾಡುತ್ತಿದ್ದರು. ಶಾಲಾಶಿಕ್ಷಕಿಯಾಗಿ ಪಡೆಯುತ್ತಿದ್ದ ಸಂಪಾದನೆಯನ್ನೆಲ್ಲ ಬಡವರಿಗಾಗಿ ಮತ್ತು ಬೌದ್ಧ ಮತ ಪ್ರಚಾರಕ್ಕಾಗಿ ವಿನಿಯೋಗಿಸಿದರು. ನಡೆದುಕೊಂಡೇ ಹಳ್ಳಿಗಳಿಗೆ ಹೋಗಿ ಬೌದ್ಧತತ್ವಗಳನ್ನು ಸಾರುತ್ತಲೇ ಅವರು ತಮ್ಮ ಜೀವನವನ್ನು ಕಳೆದರು. ಇಂತಹ ಓಡಾಟದಲ್ಲಿರುವಾಗ ಮುಂಡ್‍ಗಾವ್ ಎಂಬಲ್ಲಿ ಬಿಸಿಲಿನ ಝಳದಿಂದ ಅವರ ಆರೋಗ್ಯ ಕೆಟ್ಟಿತು. ಮಗ ಮನೋಹರ್ ಬಂದು ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗದೆ ತೀರಿಕೊಂಡರು.

ದ್ವೇಷ, ಹಿಂಸೆಯ ರಾಜಕಾರಣದ ‘ಅಂಧ’ಕಾರ ಆವರಿಸಿಕೊಳ್ಳುತ್ತಿರುವಾಗ ತಾರತಮ್ಯ, ದೌರ್ಜನ್ಯ, ಅವಮಾನದಲ್ಲಿ ಬೇಯುತ್ತಿದ್ದರೂ ಬಾಬಾಸಾಹೇಬರು ತೋರಿದ ಬುದ್ಧಬೆಳಕಿನ ಮಾರ್ಗದಲ್ಲಿ ಸಾಗಿದ ಮಹಿಳೆಯರು ದೊಂದಿಗಳಂತೆ ಕಾಣುತ್ತಿದ್ದಾರೆ.

ಆಧಾರ: ಊರ್ಮಿಳಾ ಪವಾರ್ ಮತ್ತು ಮೀನಾಕ್ಷಿ ಮೂನ್‍ರವರ ‘ವಿ ಆಲ್ಸೋ ಮೇಡ್ ಹಿಸ್ಟರಿ-ವಿಮೆನ್ ಇನ್ ಅಂಬೇಡ್ಕರೈಟ್ ಮೂಮೆಂಟ್’ ಪುಸ್ತಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.