ADVERTISEMENT

ಬುದ್ಧ ಪೂರ್ಣಿಮೆ 2022: ನಮಗೆ ನಾವೇ ಬೆಳಕಾಗೋಣ...

ನಿಂಗಪ್ಪ ಮುದೇನೂರು
Published 14 ಮೇ 2022, 19:30 IST
Last Updated 14 ಮೇ 2022, 19:30 IST
ಬೌದ್ಧ ವಿಹಾರದಲ್ಲಿ ವಿಶೇಷ ಪೂಜೆ
ಬೌದ್ಧ ವಿಹಾರದಲ್ಲಿ ವಿಶೇಷ ಪೂಜೆ   

ಈಗ ಕತ್ತಲೆಗಿಂತ ಹಗಲ ಬೆಳಕಿನಲ್ಲಿಯೇ ಕ್ರೌರ್ಯಗಳು ಹೆಚ್ಚು ನಡೆಯುತ್ತಿವೆ. ಕತ್ತಲನ್ನು ದೂಷಿಸುತ್ತಿದ್ದ ಮನುಷ್ಯ ಈಗ ಕತ್ತಲಿನ ಆಶ್ರಯವನ್ನೇ ಬಯಸುವಂತಾಗಿದೆ. ಬುದ್ಧದೇವನು ಹಾಗೇನೇ ಜಗತ್ತಿನ ಘೋರ ದುಃಖವನ್ನು ಕಂಡು ತನ್ನ ಸೇವಕ ಚೆನ್ನನೊಡನೆ ದುಃಖದ ಮೂಲ ಹುಡುಕಿ ಹೊರಟ. ಅದೂ ಜಗವೆಲ್ಲಾ ಮಲಗಿರುವಾಗ, ಒಂದು ಕತ್ತಲಿನ ಸಮಯದಲ್ಲಿ. ಕೊನೆಗೆ ಅವನಿಗೆ ಹೊಳೆದದ್ದು ಆಸೆಯೇ ದುಃಖಕ್ಕೆ ಮೂಲ ಎಂಬ ಬಾಳಿನ ಸತ್ಯ.

ಬುದ್ಧನು ಮಾನವನ ದುಃಖದ ನಿವಾರಣೆಗೆ ತನ್ನ ವಯೋಮಾನದ ನಾಲ್ಕು ದಶಕಗಳ ಕಾಲ ಶ್ರಮಿಸಿದ. ದೇಹದಂಡನೆ, ಬೋಧಿವೃಕ್ಷದ ಕೆಳಗಿನ ಧ್ಯಾನ ಇವೆಲ್ಲವೂ ಅವನ ಪ್ರಾಯೋಗಿಕ ಚೈತನ್ಯದ ನೆಲೆಗಳಾಗಿದ್ದವು. ತ್ರಿಸರಣ ಬೋಧೆ ಎಂಬುದು ಅವನ ಮುಖ್ಯ ತತ್ತ್ವ. ಮನುಷ್ಯನನ್ನು ಈ ತತ್ವಕ್ಕೆ ಸರಳವಾಗಿ ಬರ ಮಾಡಿಕೊಂಡನು. ತನ್ನ ನಂಬಿಕೆಯ ಪರಮ ಜ್ಞಾನಕ್ಕೆ, ಧರ್ಮಕ್ಕೆ ಮತ್ತು ಸಂಘಕ್ಕೆ ಶರಣಾಗುತ್ತೇನೆ ಎಂಬುದು ಬುದ್ಧನ ಜೀವನದ ಒಪ್ಪಿತ ನಿಲುವು. ಇದೇ ಅವನ ಪರಮ ಸಂತೋಷದ ವ್ಯಾಪ್ತಿ. ‘ಬುದ್ಧ ಧಮ್ಮ ಸಂಘಂ ಶರಣಂ ಗಚ್ಚಾಮಿ’ ಎಂಬುದು ಇದೇ ಆತನ ದಿವ್ಯ ಮಂತ್ರ. ನಮ್ಮ ಭಾರತೀಯ ಸಂವಿಧಾನವನ್ನು ಸತ್ಯ, ನೀತಿ, ಪ್ರಾಮಾಣಿಕತೆಯ ಆಧಾರದ ಮೇಲೆ ಹೇಗೆ ಒಪ್ಪಿತ ಮಾಡಿಕೊಂಡಿರುವೆವೋ ಹಾಗೇ ಬೌದ್ಧ ಧಮ್ಮವನ್ನು ಸ್ವೀಕರಿಸುವ ಪ್ರತಿಯೊಬ್ಬರೂ ಸತ್ಯವನ್ನು ತಿಳಿದು ಆಚರಿಸಬೇಕೆಂಬ ನಿಲುವಿನಲ್ಲಿ ಬುದ್ಧನನ್ನು ಕಂಡೆವು.

ಜ್ಞಾನದ ತುದಿಯಲ್ಲಿ ನಿಂತ ಬುದ್ಧ ಪರಮಸತ್ಯವನ್ನು ಬೋಧಿಸಿದ ಮಹಾ ಗುರುವಾಗಿದ್ದಾನೆ. ಆತನ ಮಧ್ಯಮ ಮಾರ್ಗ, ಮನುಷ್ಯನಲ್ಲಿ ಪರಸ್ಪರ ಮೈತ್ರಿ, ಅಂತಃಕರುಣೆ, ಸಮತೆ, ಪ್ರೀತಿ, ದಯೆ, ಅನುಕಂಪ ಮತ್ತು ವಿವೇಕ ಇವೆಲ್ಲವನ್ನು ಪಡೆಯುವ ಬುದ್ಧತ್ವದ ಬಾಳ ತಿರುಳು ನಿಜವಾದ ಜೀವನ ಮಾರ್ಗವಾಗಿದೆ. ಮನಸ್ಸಿನ ಶುದ್ಧತೆ ಮತ್ತು ಅಂತರ್ ದೃಷ್ಟಿಯಿಂದ ಮನುಷ್ಯ ಒಂದು ಕೊನೆಯ ನಿಬ್ಬಾಣದವರೆಗೂ ತಮ್ಮತನವನ್ನು ಕಾಪಾಡಿಕೊಳ್ಳಲು ಸಾಧ್ಯವಿದೆ ಎಂಬುದು ಈತನ ತಿಳಿವು. ನಮ್ಮ ವರ್ತಮಾನದ ಸಮಾಜ ಬುದ್ಧನಿಂದ, ಜಗದ ಸಂತ-ದಾರ್ಶನಿಕರಿಂದ ಕಲಿಯುವುದು ತುಂಬಾ ಇದೆ.

ADVERTISEMENT

‘ಬಾಳುವಷ್ಟು ಕಾಲವೂ ಕಲಿಯುತ್ತಲೇ ಇರಬೇಕು’ ಎಂಬುವ ಮಾತು ಬರೀ ಪುಸ್ತಕದ ಕಲಿಕೆಯಿಂದ, ಶಾಲೆ, ಕಾಲೇಜು ವಿಶ್ವವಿದ್ಯಾಲಯದ ಕಲಿಕೆಯಿಂದಷ್ಟೇ ನಮ್ಮ ವಿದ್ಯೆಯ ವಿವೇಕ ಬೆಳೆಯುವುದಿಲ್ಲ. ಸಮಾಜದ ಕಟ್ಟಕಡೆಯ ದುಃಖಿತ ಮನುಷ್ಯನ ಅಂತಃಕರಣವನ್ನು ಮುಟ್ಟಬಲ್ಲ ಧರ್ಮ, ನೀತಿ, ಬೋಧನೆ, ಶಾಸ್ತ್ರ, ವೈಚಾರಿಕತೆ ಯಾವುದಿದೆಯೋ ಅಲ್ಲಿಯವರೆಗೂ ಶ್ರಮಿಸುವ ಹೊಸ ದಾರಿಯ ಕುರಿತು ಬುದ್ಧನಂತವರು ಯೋಚಿಸಿದ್ದರು. ‘ನಿನಗೆ ನೀನೇ ದಾರಿದೀಪ’ವೆಂದು ಯಾವುದೇ ಒಬ್ಬ ಮನುಷ್ಯನಿಗೆ, ಒಂದು ತತ್ವ, ಧರ್ಮ, ಜಾತಿ, ಲಿಂಗ, ವರ್ಗಕ್ಕೆ ಹೇಳಿದ್ದಲ್ಲ. ಈ ಭೂಮಿಯ ಮೇಲೆ ಬದುಕಿರುವ ಪ್ರತಿಯೊಂದು ಜೀವಿಗೂ ನೀಡಿದ ಅರಿವಿನ ದೀಪವದು. ನಮ್ಮ ಬೆಳಕನ್ನು ನಾವೇ ಹೊತ್ತಿಸಿಕೊಳ್ಳುವುದೆಂದರೆ ಪರಸ್ಪರ ಕೂಡಿ ಬಾಳುವ, ಪರಧರ್ಮ, ಪರವಿಚಾರವ ಪ್ರೀತಿಸಿ ಸಹಿಷ್ಣುತೆ ಹೊಂದುವ ಸಹೋದರತ್ವದ ಬದುಕ ನೆಲದ ಸೊಗಸಿನ ಬಗೆಗೆ ಮಾತನಾಡಿದ್ದು ಬುದ್ದದೇವ. ಪ್ರಜಾಪ್ರಭುತ್ವದ ಸೊಗಸು ಮತ್ತು ಅದರ ಗೆಲುವಿಗೆ ನಿಜವಾಗಿ ಶ್ರಮಿಸಿದ ದುಡಿಮೆಗಾರ ಈತ.

ಬುದ್ಧ ನೀಡಿದ ಆ ಮೂರು ಬುಟ್ಟಿಗಳಲ್ಲಿದ್ದುದು ಮನುಷ್ಯನ ವಿನಯ, ನಡವಳಿಕೆ, ಆಚರಣೆ ಮತ್ತು ಬೋಧನೆ. ನಾವಿಂದು ರಾಷ್ಟ್ರೀಯ ಹೊಸ ಶಿಕ್ಷಣ ನೀತಿಯಲ್ಲಿ ಬೋಧಿಸಬೇಕೆಂದಿರುವ ‘ಮೃದು ಕೌಶಲ್ಯ ಮತ್ತು ವ್ಯಕ್ತಿತ್ವದ ವಿಕಸನ’ಕ್ಕೆ ಬುದ್ಧ ತೋರಿದ ದಾರಿ ಮಹತ್ವದ್ದು. ವಿನಯ ಪಿಟಕ, ಸುತ್ತ ಪಿಟಕ, ಅಭಿದಮ್ಮ ಪಿಟಕಗಳ ಕಾರ್ಯಗಳು ಇವೇ ಆಗಿವೆ. ಬುದ್ಧನ ಮಾರ್ಗಸೂಚಿಯನ್ನು ಹಿಡಿದು ಹೊರಟ ಬಿಕ್ಕು ಸಂಘಗಳು ಈಗಲೂ ಜಗತ್ತಿನಾದ್ಯಂತ ಚಲನಶೀಲವಾಗಿವೆ. ಇಷ್ಟಿದ್ದರೂ ನಮ್ಮ ಸಮಾಜದಲ್ಲಿ ಅಶಾಂತಿ, ಅಸಹಿಷ್ಣುತೆಗಳು ಕ್ಯಾನ್ಸರಿನಂತೆ ಹಬ್ಬಿನಿಂತಿವೆ.

ಬುದ್ಧನ ದಮ್ಮದಲ್ಲಿ, ಕ್ರಿಸ್ತನ ಒಡಂಬಡಿಕೆಯಲ್ಲಿ, ಪೈಗಂಬರರ ಕುರಾನಿನಲ್ಲಿ, ಹಿಂದೂ ಶಾಸ್ತ್ರ ಗ್ರಂಥಗಳಲ್ಲೂ ಮನುಷ್ಯನ ಜೀವನ ಸೌಂದರ್ಯ ಮತ್ತು ಬಾಳಿನ ರಸತತ್ವದ ನೀತಿ ಕುರಿತು ವಿವರಿಸಲಾಗಿದ್ದರೂ ಅವನ್ನು ನಾವು ನಮ್ಮ ಒಟ್ಟಂದದ ‘ಸಾಂಸ್ಕೃತಿಕ ತಿಳಿವಿನ ಜಲ’ವೆಂದು ಭಾವಿಸಲೇ ಇಲ್ಲ. ‘ಜಲವೇ ಸಕಲ ಕುಲಕ್ಕೆ ತಾಯಲ್ಲವೇ’ ಎಂದ ಕನಕನ ಮಾತನ್ನೂ ನಾವು ನಂಬಲಿಲ್ಲ. ಹೊಸ ತಲೆಮಾರಿಗೆ ಕೊಂಡೊಯ್ಯಬೇಕಾದ, ಈ ಬುದ್ಧನಂಥವರು ತೋರಿದ ಪರಮ ಬದುಕಿನ ಸತ್ಯದ ಸಂದೇಶ, ಪ್ರೀತಿಯ ಒರತೆಗಳನ್ನು ನಾವು ನಮ್ಮ ಮಕ್ಕಳ ಮನಕ್ಕೆ ಹಂಚಿ ತಣಿಸಲಾಗಿಲ್ಲ. ಹಾಗಾಗಿ ಅವು ಜಾತಿ, ಬಣ್ಣ, ಧರ್ಮ, ಆಹಾರ, ಆಚರಣೆಯ ಸುತ್ತ ನಾವೇ ಹಾಕಿರುವ ಕೆಂಡದಲ್ಲಿ ಹಾದು ಬಂದು ಮತ್ತೆ ಮತ್ತೆ ಇಂತಹ ವಿಷಯಗಳಲ್ಲಿಯೇ ಅಂದಗೆಡುತ್ತಿವೆ. ಹೋಗಲಿ, ನಮ್ಮ ಸಾವಿರಾರು ವರ್ಷಗಳ 'ಬಹುತ್ವ'ದ ಪರಂಪರೆಯ ಹಿಂದಣ ಹೆಜ್ಜೆಗಳನ್ನಾದರೂ ಗುರುತಿಸಿ ಮನೆಯಲ್ಲಿನ ನಮ್ಮ ಮಕ್ಕಳಿಗೆ ಜೀವನದ ಪಾಠವನ್ನು ಹೇಳಿ ಕೊಟ್ಟಿರುವೆವೋ? ಅದೂ ಅಷ್ಟಾಗಿ ಕಾಣಿಸದಾಗಿದೆ. ಹಾಗಾಗಿಯೇ ಇಂದು ಎಲ್ಲ ಸಮಾಜದ ಮಕ್ಕಳೂ ಪ್ರತಿ ದುರಂತವನ್ನೂ ಅನುಭವಿಸುವಂತಾಗಿದೆ.

ಬುದ್ಧ ನಮಗಷ್ಟೇ ಬೆಳಕಲ್ಲ, ಆತ ಏಷ್ಯಾದ ಬೆಳಕು. ಬುದ್ಧನ ಜನ್ಮ ದಿನವನ್ನು ಹಲವೆಡೆ ಹೂವಿನ ದಿನವನ್ನಾಗಿ, ದೀಪದ ದಿನವನ್ನಾಗಿ, ಸರೋವರದ ಹೊಸಬೆಳಕ ಚಿತ್ತಾರವಾಗಿ, ಬುದ್ಧನ ಜಾಗೃತಿ ದಿನವನ್ನಾಗಿ, ವೈಶಾಖ ಹುಣ್ಣಿಮೆ ದಿನದ ಜ್ಞಾನೋದಯದ ಸಂಗತಿಯಾಗಿ ಆಚರಿಸುವ ಬದುಕಿನ ವಿಶಿಷ್ಟ ಹಬ್ಬವೊಂದು ಆತನಿರುವ ಜಗತ್ತಿನೆಲ್ಲೆಡೆ ನಡೆಯುತ್ತಿದೆ. ಹಾಗೆ ನೋಡಿದರೆ, ಇದು ಆತನ ಹುಟ್ಟುಹಬ್ಬವೂ ಹೌದು ಮತ್ತು ಮಹಾ ಮರಣದ ದಿನವೂ ಹೌದು! ಜಗತ್ತಿನ ಬಹುತೇಕ ದೇಶಗಳು ಬುದ್ಧನ ಈ ಪೌರ್ಣಿಮೆಯನ್ನು ತಮ್ಮ ಕಾಲ ಪ್ರದೇಶಕ್ಕನುಗುಣವಾಗಿ ಆಚರಿಸುತ್ತಿವೆ. ನಮ್ಮ ಕಾಲಮಾನಗಳು, ಚರಿತ್ರೆಯ ಹಿಂದಿನ ಊನಗಳು ಬುದ್ಧನ ವಿಗ್ರಹ, ಸ್ತೂಪಗಳ ಮೇಲೆ ಆಕ್ರಮಣ ಮಾಡಿ ಭೌತಿಕವಾಗಿ ನಾಶ ಮಾಡಿದರೂ ಆತನ ಜ್ಞಾನದ, ಚಿಂತನೆಯ ಬಿತ್ತನೆ ಪ್ರತಿಯೊಬ್ಬರ ಹೃದಯದ ಹೊಲವನ್ನು ಹಸಿರಾಗಿಸಲು ಪ್ರಯತ್ನಿಸುತ್ತಲೇ ಬಂದಿದೆ. ಈಗ ನಮ್ಮ ನಮ್ಮ ಹೃದಯಗಳನ್ನು ಬಸವಣ್ಣ ನುಡಿದಂತೆ ಅಂತರಂಗಶುದ್ಧಿ ಬಹಿರಂಗಶುದ್ಧಿಗಳಿಂದ ಹಸನು ಮಾಡಿಕೊಳ್ಳಲು ಪ್ರಯತ್ನಿಸುವುದರ ಜೊತೆ ನಾವು, ನಮ್ಮ ಸಮಾಜಗಳನ್ನು ತಿದ್ದಲು ಪ್ರಯತ್ನಿಸಿದರೆ ಖಂಡಿತ ಫಲ ಸಿಗಬಲ್ಲದು.

ಬದುಕಿನ ನಿತ್ಯ ವ್ಯವಹಾರಗಳಲ್ಲಿ, ನಮ್ಮ ನಮ್ಮ ದಂದುಗಗಳಲ್ಲಿ ಕಳೆದು ಹೋಗಿರುವ ನಮ್ಮೊಳಗಿನ ವಿವೇಕದ ಮನುಷ್ಯನನ್ನು ಸಾಂಸ್ಕೃತಿಕವಾಗಿ ಮತ್ತೆ ಎತ್ತರಿಸುವ ಕೆಲಸವನ್ನು ನಾವೇ ಮಾಡಬೇಕಿದೆ. ನಮಗೆ ಈ ಎಲ್ಲಾ ಬಾಳಿನ ಸತ್ಯದ ಪಾಠಗಳು ಅಪಥ್ಯವೆನ್ನಿಸಬಾರದು. ಬುದ್ಧ ಪೂರ್ಣಿಮೆಯ ಈ ದಿನದಲ್ಲಾದರೂ ನಾವು ಮತ್ತೆ ಶಪಥ ಮಾಡೋಣ. ಹೊಸ ಸಮಾಜದ ಕಾಣ್ಕೆಗೆ ನಮಗೆ ನಾವೇ ದೀಪವಾಗೋಣ. ಪ್ರಜ್ಞೆಯ ಕೂರಿಗೆ ಹಿಡಿದು ಹೊಸ ಭರವಸೆಯ ಬೀಜವ ಬಿತ್ತೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.