ADVERTISEMENT

ಇಂದು ಬುದ್ಧ ಪೂರ್ಣಿಮಾ: ಬುದ್ಧಾನ್ವೇಷಣೆಗೆ ಸಾಧನೆಯ ದಾರಿ

ಆನಂದ ಭಂತೆ
Published 15 ಮೇ 2022, 19:44 IST
Last Updated 15 ಮೇ 2022, 19:44 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಒಮ್ಮೆ ಭಗವಾನ್‌ ಬುದ್ಧರು ಅನಾಥಪಿಂಡಕನ ಚೇತವನದಲ್ಲಿ ತಂಗಿದ್ದರು. ಬುದ್ಧ ತೇವಿಜ್ಜ ಸಂಪನ್ನರು; ಎಂದರೆ ಮೂರು ಪರಮಜ್ಞಾನ ಗಳ ಒಡೆಯರು, ಆ ಮೂರು ಯಾವುವೆಂದರೆ: 1. ಪೂರ್ವಜನ್ಮಗಳ ಸ್ಮರಣೆಯ ಜ್ಞಾನ (ಪುಬ್ಬೇನಿವಾಸಾನುಸ್ಸತಿ); 2. ದಿವ್ಯಚಕ್ಷುವಿನಿಂದ ಬೇರೆ‌ಜೀವಿಗಳ ಮನಸ್ಸನ್ನು, ಅವುಗಳ ಇಡೀ ಜೀವನವನ್ನು ಅರಿತಿರುವ ಜ್ಞಾನ (ಚೇತೋಪರಿಯ ಜ್ಞಾನ); 3. ಚತುರಾರ್ಯಸತ್ಯಗಳ ಭೂಮಿಕೆಯಾದ ಆಸವಕ್ಖಯ ಜ್ಞಾನ.

ಆಸವಗಳು ಎಂದರೆ ಮನುಷ್ಯನನ್ನು ಕಾಡಿಸುವ ಕಾಮ; ಅವನ ಮಿಥ್ಯಾದೃಷ್ಟಿಗಳು; ಬೇಕುಬೇಕೆಂಬ – ಇರಬೇಕೆಂಬ ‘ಭವ’; ಮತ್ತು ಈ ಸಂಸಾಚಕ್ರದಿಂದ ಹೊರಬರಲಾರದ ‘ಅಜ್ಞಾನ’ ಮೈತುಂಬಿಕೊಂಡಿರುವುದು – ಈ ನಾಲ್ಕನ್ನು ಆಸವಗಳು ಎನ್ನುತ್ತಾರೆ. ಆಸವಕ್ಖಯ (ಕ್ಷಯ) ಎಂದರೆ ಇವೆಲ್ಲವನ್ನೂ ನಾಶ ಮಾಡುವ ಜ್ಞಾನ. ಭಗವಾನ್‌ ಬುದ್ಧರು ಇಂತಹ ಸಮ್ಮಾಸಂ ಬುದ್ಧರು.

ಒಂದು ದಿನ ಭಗವಾನರು, ಚೇತವನದಲ್ಲಿದ್ದ ಭಿಕ್ಖುಗಳಿಗೆ, ’ಅಯ್ಯಾ, ಭಿಕ್ಖುಗಳೇ, ನೀವು ತಥಾಗತನಾದ ನನ್ನನ್ನು – ನಾನು ಸಮ್ಮಾಸಂ ಬುದ್ಧನೋ ಅಲ್ಲವೋ – ಎಂಬುದನ್ನು ಪರೀಕ್ಷಿಸಬೇಕು’ ಎಂದರು, ಈ ರೀತಿ ಗುರುವನ್ನು ಪ್ರಶ್ನಿಸಿ ಎಂದು ಒಬ್ಬ ಗುರುವು ಹೇಳುವುದು ಧಾರ್ಮಿಕ ವಲಯದಲ್ಲಿ ಒಂದು ವಿಸ್ಮಯಕಾರಿ ಸಂಗತಿ. ಪ್ರತಿಯೊಂದನ್ನೂ ಪ್ರಶ್ನಿಸಿಯೇ ನೋಡಿ ಎನ್ನುವ ಮುಕ್ತ ಚಿಂತೆಯ ಧಾರೆ ಅವರದ್ದು.

ADVERTISEMENT

ಒಮ್ಮೆ ಅವರು ಕೇಸಪುತ್ತ ಎನ್ನುವ ಗ್ರಾಮಕ್ಕೆ ಹೋದಾಗ ಅಲ್ಲಿನ ಕಾಲಾಮಾರು (ಒಂದು ಬಗೆಯ ಸಮುದಾಯದವರು) ಬುದ್ಧನನ್ನು ಕುರಿತು ‘ನೋಡಿ, ಇಲ್ಲಿಗೆ ಆಜೀವಕರು, ಬ್ರಾಹ್ಮಣರು ಮುಂತಾದವರು ಬಂದು ತಮ್ಮ ತಮ್ಮ ಮತದ ಬಗ್ಗೆ ಪ್ರತಿಪಾದನೆ ಮಾಡುತ್ತಾರೆ, ಮತ್ತು ಈಗ ನೀವು ನಿಮ್ಮ ಧಮ್ಮದ ಬಗ್ಗೆ ಹೇಳುತ್ತಿದ್ಧಿರಿ. ಹಾಗಾದರೆ ನಾವು ಯಾರ ಮಾತನ್ನು ನಂಬಬೇಕು‘ ಎಂದು ಪ್ರಶ್ನಿಸುತ್ತಾರೆ.
ಆಗ ಬುದ್ಧ ಹೇಳುವ ಮಾತುಗಳು ರೋಚಕವಾಗಿವೆ:

‘ಮತ್ತೆ ಮತ್ತೆ ಈ ಮಾತುಗಳನ್ನು ಕೇಳಿದ್ದೇವೆ ಎಂಬ ಕಾರಣಕ್ಕಾಗಿ ನಂಬಬೇಡಿ; ಪರಂಪರಾನುಗತವಾಗಿ ಬಂದಿದೆ ಎಂಬ ಕಾರಣಕ್ಕಾಗಿ ನಂಬಬೇಡಿ; ತರ್ಕಬದ್ಧವಾಗಿದೆ ಎಂಬ ಕಾರಣಕ್ಕಾಗಿ ನಂಬಬೇಡಿ; ಧರ್ಮಗ್ರಂಥಗಳಲ್ಲಿದೆ ಎಂಬ ಕಾರಣಕ್ಕಾಗಿ ನಂಬಬೇಡಿ; ನನ್ನ ಮತ್ತು ಇತರರ ಚಿಂತನೆಗಳು ಒಂದೇ ಇದೆ ಎಂಬ ಕಾರಣಕ್ಕಾಗಿ ನಂಬಬೇಡಿ; ಭವ್ಯವಾಗಿದೆ ಎಂಬ ಕಾರಣಕ್ಕಾಗಿ ನಂಬಬೇಡಿ; ಇವರು ನಮ್ಮ ಗುರುವು ಎಂಬ ಕಾರಣಕ್ಕಾಗಿ ನಂಬಬೇಡಿ’ – ಎಂದು ಹೇಳುತ್ತ, ಯಾವಾಗ ನಂಬಬೇಕು ಮತ್ತು ಅನುಸರಿಸಬೇಕು ಎನ್ನುವುದನ್ನು ಹೀಗೆ ಹೇಳುತ್ತಾರೆ:

‘ಯಾವಾಗ ಈ ಸಂಗತಿಗಳನ್ನು/ಗುಣಗಳನ್ನು ನೀವು ಪ್ರಜ್ಞಾಪೂರ್ವಕವಾಗಿ ವಿಶ್ಲೇಷಿಸಿ, ಅವು ನಿಮ್ಮ ಮತ್ತು ಎಲ್ಲರ ಒಳಿತಿಗಾಗಿ ಇವೆ ಎಂದು ಕಂಡುಬರುತ್ತದೋ ಆಗ ಅವನ್ನು ಒಪ್ಪಿ, ಅನುಸರಿಸಬೇಕು.’

ಇಲ್ಲಿ ನಾವು ಗಮನಿಸಬೇಕಾದ್ದು, ಸಮ್ಮಾಬುದ್ಧನನ್ನು ಪರೀಕ್ಷಿಸುವವರು ಶೀಲಪಾಲನೆಯಲ್ಲಿ ಇರುವವ ರಾಗಿರಬೇಕು, ನಿರಂತರ ಎಚ್ಚರದ ಪ್ರಜ್ಞೆಯಲ್ಲಿರುವವರಾಗಿರಬೇಕು, ಧ್ಯಾನ ಸಾಧನೆಯ ಆವರಣದಲ್ಲಿರುವವರಾಗಿರಬೇಕು; ಧ್ಯಾನದಿಂದ ಪ್ರಾಪ್ತ ಅಭಿಜ್ಞಾನಗಳಿಂದ ಕೂಡಿದವರಾಗಿರ ಬೇಕು, ಸಾಧನೆಯ ಬುನಾದಿಯ ಮೇಲೆ ಚಾರಿತ್ರ್ಯವನ್ನು ನಿಲ್ಲಿಸಿಕೊಂಡಿರುವವರಾಗಿರಬೇಕು, ಧಮ್ಮ ನದಿಯಲ್ಲಿ ಮುಳುಗಿರುವವರಾಗಿರಬೇಕು.

ಹೀಗೆ ಬುದ್ಧ ಮತ್ತು ಬುದ್ಧತ್ವದ ಅನ್ವೇಷಣೆ – ಎರಡೂ ಜೊತೆ ಜೊತೆಯಲ್ಲಿಯೇ ಇರುವ ವಿವರಗಳು.

(ಲೇಖಕರು ಬೆಂಗಳೂರು ಮಹಾಬೋಧಿ ಸೊಸೈಟಿಯ ಮುಖ್ಯಸ್ಥರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.