ADVERTISEMENT

ಸುಖ ದುಃಖದ ಲೆಕ್ಕಾಚಾರ!

ಸೂರ್ಯನಾರಾಯಣ ಭಟ್ಟ
Published 19 ಮಾರ್ಚ್ 2020, 10:17 IST
Last Updated 19 ಮಾರ್ಚ್ 2020, 10:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇನ್ನೇನು ನಾಲ್ಕಾರು ದಿನಗಳಲ್ಲಿ ಶಾರ್ವರಿ ಸಂವತ್ಸರ ಆರಂಭವಾಗಲಿದೆ. ವಿಕಾರಿ ಸಂವತ್ಸರ ಪರದೆಯ ಹಿಂದೆ ಸರಿಯಲಿದೆ. ಬರುವ ಬುಧವಾರ (ಮಾರ್ಚ್ 25) ಯುಗಾದಿಯಂದು ಸೂರ್ಯೋದಯದಿಂದ ಆರಂಭವಾಗುವ ಹೊಸ ವರ್ಷವನ್ನು ಎಲ್ಲರೂ ಸಂಭ್ರಮದಿಂದ ಸ್ವಾಗತಿಸುತ್ತಿದ್ದೇವೆ.

ಅಂದು ನಸುಕಿನಲ್ಲಿಯೇ ತಮ್ಮ ಮನೆಯ ದೇವರನ್ನೋ ಮನದ ದೇವರನ್ನೋ ಸ್ಮರಿಸುತ್ತಾ ಹಾಸಿಗೆಯಿಂದ ಎದ್ದು ಎಣ್ಣೆ ಹಚ್ಚಿ ಸ್ನಾನ ಮಾಡಿ ಹೊಸ ಬಟ್ಟೆಯನ್ನುಟ್ಟು ಹೊಸ ವರ್ಷದ ಪಂಚಾಂಗವನ್ನು ದೇವರ ಸಮ್ಮುಖದಲ್ಲಿಟ್ಟು ಅದನ್ನು ಪೂಜಿಸಿ ಬೇವು ಬೆಲ್ಲ ಸೇವಿಸಬೇಕು.

ಬೇವು ದುಃಖವನ್ನು ಸೂಚಿಸಿದರೆ, ಬೆಲ್ಲ ಸುಖವನ್ನು ಸೂಚಿಸುತ್ತದೆ. ಬಾಳು ಸಿಹಿ–ಕಹಿಗಳ ಮಿಶ್ರಣ. ಅದನ್ನು ಹಾಗೆಯೇ ಸ್ವೀಕರಿಸುವುದು ಎಲ್ಲರಿಗೂ ಅನಿವಾರ್ಯ. ಅದನ್ನು ಸಾಂಕೇತಿಕವಾಗಿ ಪ್ರಸಾದವೆಂದು ಸ್ವೀಕರಿಸುವಾಗ ಸಂಸ್ಕೃತ ಶ್ಲೋಕವೊಂದನ್ನು ಹೇಳುವುದುಂಟು:

ADVERTISEMENT

ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ

ಸರ್ವಾರಿಷ್ಟವಿನಾಶಾಯ ನಿಂಬಕಂ ದಳ ಭಕ್ಷಣಮ್

ಬೇವಿನ ಚಿಗುರನ್ನು ಸವಿಯುವುದು ಸಣ್ಣ ಸಂಗತಿಯಲ್ಲ. ಅದರಿಂದ ಆಯುಷ್ಯ ವರ್ಧಿಸುತ್ತದೆ. ಅಷ್ಟೇ ಅಲ್ಲ. ಶರೀರ ವಜ್ರದಂತೆ ಬಲಗೊಳ್ಳುತ್ತದೆ. ಸಮಸ್ತ ಸಂಪತ್ತನ್ನೂ ಉಂಟುಮಾಡುತ್ತದೆ. ಎಲ್ಲ ಅನಿಷ್ಟಗಳನ್ನೂ ನಿವಾರಿಸುತ್ತದೆ. ಇದನ್ನು ನಂಬಿದವರು ಶ್ರದ್ಧೆಯಿಂದ ಆಚರಿಸುತ್ತಾರೆ. ಪಂಚಾಂಗಶ್ರವಣ ಪಂಚಾಂಗಪೂಜೆಯಾದ ಮೇಲೆ ಬ್ರಹ್ಮಕಲ್ಪವನ್ನು ಹೇಳುವುದುಂಟು. ಅದು ಜಗತ್ತಿನ ಸೃಷ್ಟಿ ಸ್ಥಿತಿ ಗತಿಗಳನ್ನು ತಿಳಿಸುತ್ತದೆ. ಅದನ್ನು ಶ್ರವಣ ಮಾಡಿದಾಗ ವಿಶ್ವಸೃಷ್ಟಿಯ ಇತಿಹಾಸದ ಸ್ಮರಣೆಯಾಗಿ ಜೀವನದ ಸತ್ತ್ವ ಅರಿವಿಗೆ ಬರುತ್ತದೆ. ಆಮೇಲೆ ಸಂವತ್ಸರ ಫಲ, ನವ ನಾಯಕ ಫಲ, ಉಪನಾಯಕ ಫಲ, ಕಂದಾಯ ವಿಚಾರ, ಆಯ–ವ್ಯಯ, ಆರ್ದ್ರಾನಕ್ಷತ್ರ ಪ್ರವೇಶಫಲ, ಸಂಕ್ರಾಂತಿಫಲ ಮುಂತಾದವುಗಳನ್ನು ಕ್ರಮವಾಗಿ ಚಿಂತಿಸಲಾಗುತ್ತದೆ.

ಶಾರ್ವರಿ ಸಂವತ್ಸರವು ಸಸ್ಯವೃದ್ಧಿಯನ್ನು ಮಾಡುತ್ತದೆ. ಬಲರಾಮನು ಪಶುನಾಯಕನಾಗಿರುವುದರಿಂದ ಆ ಕ್ಷೇತ್ರದಲ್ಲಿ ಒಳ್ಳೆಯದನ್ನು ನಿರೀಕ್ಷಿಸಬಹುದು. ಬುಧನು ಈ ವರ್ಷ ರಾಜನಾಗಿದ್ದು, ಚಂದ್ರನು ಮಂತ್ರಿಯಾಗಿರುತ್ತಾನೆ. ಸೇನೆ ಮೋಡ ಧಾರಣೆ – ಇವೆಲ್ಲವೂ ಚಂದ್ರನ ಅಧೀನದಲ್ಲಿಯೇ ಈ ವರ್ಷ ಇರಲಿದೆ. ಸಸ್ಯಾಧಿಪತಿ ಗುರು, ಧಾನ್ಯಾಧಿಪತಿ ಕುಜ, ರಸಾಧಿಪತಿ ಶನಿ, ನೀರಸಾಧಿಪತಿ ಗುರು – ಹೀಗೆ ನವ ನಾಯಕರು ವರ್ಷವಿಡೀ ಫಲಗಳನ್ನು ನೀಡುತ್ತಾರೆ. ಸೂರ್ಯಾದಿ ಸಪ್ತಗ್ರಹಗಳೇ ಉಪನಾಯಕರಾಗಿ ವ್ಯಾಪಾರ ಮುಂತಾದ ಸಮಸ್ತ ಕ್ಷೇತ್ರಗಳಲ್ಲಿ ತಮ್ಮ ಪ್ರಭಾವವನ್ನು ಬೀರುತ್ತಾರೆ. ಬುಧ ಚಂದ್ರ ಗುರು ಶುಕ್ರರು ಶುಭ ಫಲಗಳನ್ನು ನೀಡಿದರೆ, ರವಿ ಕುಜ ಶನಿ ಗ್ರಹಗಳು ಅಶುಭಫಲಗಳನ್ನು ನೀಡುತ್ತಾರೆ. ಈ ಕಾರಣದಿಂದ ಎಲ್ಲವೂ ಶುಭವೇ ಅಥವಾ ಅಶುಭವೇ ಎನ್ನಲಾಗದು. ಬೇವು–ಬೆಲ್ಲಗಳಂತೆ ಶುಭ ಅಶುಭಫಲಗಳನ್ನು ಎಲ್ಲರೂ ಸ್ವೀಕರಿಸಲೇಬೇಕು. ಕಂದಾಯವಿಚಾರ ಕಂದಾಯ ಪ್ರಥಮ ದ್ವಿತೀಯ ತೃತೀಯ ಎಂದು ಮೂರು ಬಗೆ. ಚೈತ್ರಾದಿ ನಾಲ್ಕು ತಿಂಗಳು ಪ್ರಥಮ. ಶ್ರಾವಣದಿಂದ ನಾಲ್ಕು ತಿಂಗಳು ದ್ವಿತೀಯ ಕಂದಾಯ. ಮಾರ್ಗಶೀರ್ಷದಿಂದ ನಾಲ್ಕು ತಿಂಗಳು ತೃತೀಯ ಕಂದಾಯ. ಈ ಕಂದಾಯಗಳನ್ನು ಸಮಷ್ಟಿಯಾಗಿಯೂ ಪ್ರತ್ಯೇಕವಾಗಿಯೂ ಪರಿಗಣಿಸಲಾಗುತ್ತದೆ. ಕಂದಾಯದ ಸಂಖ್ಯೆಯು ಅಧಿಕವಾದಷ್ಟು ಶುಭವು ಅಧಿಕವಾಗುತ್ತದೆ. ಆ ಸಂಖ್ಯೆಯು ವಿಷಮವಾಗಿದ್ದರೆ ಒಳ್ಳೆಯದು. ಸಮವಾಗಿದ್ದರೆ ಸಮಾನ, ಸೊನ್ನೆಯಿದ್ದರೆ ಕೆಟ್ಟದ್ದು.

ಮಳೆ ಬೆಳೆ ಮುಂತಾದವುಗಳನ್ನು ಗರಿಷ್ಠ 20 ಅಂಕಗಳಿಗೆ ನಿಶ್ಚಯಿಸುತ್ತಾರೆ ಇಪ್ಪತ್ತಕ್ಕೆ 20 ಬರುವುದು ಅಪರೂಪ. ಒಂದು ಬಂದರೆ ಕನಿಷ್ಠ. ಈ ಅಂಕಗಳಿಂದ ಒಂದು ವರ್ಷದಲ್ಲಿ ಮಳೆ ಮುಂತಾದ ಅರವತ್ತೆರಡು ಕ್ಷೇತ್ರಗಳಲ್ಲಿ ಫಲಿತಾಂಶವನ್ನು ಗಮನಿಸಬಹುದು. ಇದರಂತೆ ಆದಾಯ ಮುಂತಾದ ಎಂಟು ಸಂಗತಿಗಳನ್ನು ಎಲ್ಲಾ ರಾಶಿಗಳಲ್ಲಿ ಜನಿಸಿದವರಿಗೂ ಪ್ರತ್ಯೇಕವಾಗಿ ಹೇಳಲಾಗುತ್ತದೆ. ಆವರ್ತವೆಂಬ ಮೋಡ ಸುರಿಸುವ ಮಳೆಯ ಪರಿಮಾಣವನ್ನು ನಿಶ್ಚಯಿಸಲಾಗುತ್ತದೆ. ಅದರಂತೆ ಆರ್ದ್ರಾ ನಕ್ಷತ್ರದಲ್ಲಿ ರವಿಯು ಪ್ರವೇಶಿಸುವ ಸಮಯದಿಂದ ಮಳೆಯ ಪರಿಣಾಮವನ್ನು ಹೇಳಲಾಗುತ್ತದೆ. ಮಕರ ಸಂಕ್ರಾಂತಿಯ ಫಲವೂ ಇದನ್ನು ಪರಿಷ್ಕರಿಸುತ್ತದೆ. ಗ್ರಹಣಾಚರಣೆಯ ಚಿಂತನೆಯಾದ ಮೇಲೆ ಯುಗಾದಿಯ ಪಂಚಾಂಗವನ್ನು ಹೇಳಿ ಎಲ್ಲರಿಗೂ ಶುಭವನ್ನು ಹಾರೈಸಲಾಗುತ್ತದೆ.

ಪಂಚಾಂಗ: ಐದು ಅಂಗಗಳು

ಪಂಚಾಂಗ ಎಂದರೆ ತಿಥಿ ವಾರ ನಕ್ಷತ್ರ ಯೋಗ ಮತ್ತು ಕರಣ. ಇವುಗಳನ್ನು ಸಾಂಗವಾಗಿ ತಿಳಿದುಕೊಂಡರೆ ಒಳ್ಳೆಯದಾಗುತ್ತದೆ. ತಿಥಿಯಿಂದ ಐಶ್ವರ್ಯವೂ, ವಾರದಿಂದ ಆಯುಷ್ಯವೂ, ನಕ್ಷತ್ರದಿಂದ ಪಾಪನಿವಾರಣೆಯೂ, ಯೋಗದಿಂದ ರೋಗನಿವಾರಣೆಯೂ, ಕರಣದಿಂದ ಕಾರ್ಯ ಸಿದ್ಧಿಯೂ ಆಗುತ್ತದೆ. ಇವುಗಳ ಜೊತೆಗೆ ವಿಷ ಅಮೃತ ರಾಹುಕಾಲ ಮುಂತಾದವುಗಳನ್ನು ತಿಳಿದುಕೊಂಡು ಅದಕ್ಕೆ ಅನುಗುಣವಾಗಿ ವ್ಯವಹರಿಸಿದರೆ ಎಲ್ಲವೂ ಅನುಕೂಲವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.