ADVERTISEMENT

PV Web Exclusive| Celebration-ಎಳ್ಳುಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡುತ್ತ...

ಎಸ್.ರಶ್ಮಿ
Published 15 ಜನವರಿ 2021, 4:59 IST
Last Updated 15 ಜನವರಿ 2021, 4:59 IST
ಎಳ್ಳು ಬೆಲ್ಲ ಖರೀದಿಯ ಪ್ರಾತಿನಿಧಿಕ ಚಿತ್ರ
ಎಳ್ಳು ಬೆಲ್ಲ ಖರೀದಿಯ ಪ್ರಾತಿನಿಧಿಕ ಚಿತ್ರ    

ಎಳ್ಳುಬೆಲ್ಲ ತಿಂದು, ಒಳ್ಳೊಳ್ಳೆ ಮಾತಾಡಿ ಅಂತ ಹೇಳಿದ್ರ, ನಾವು ಕಣ್‌ ಕಣ್‌ ಬಿಟ್ಕೊಂಡು ನೋಡ್ತಿದ್ವಿ. ಹೂಂರಿ ಅಂತ ಹೇಳಾಕ ಆಗದೇ ಇರೂಹಂಗ ಬಾಯಾಗ ಎಳ್ಳುಬೆಲ್ಲ ತುಂಬಕೊಂಡಿರ್ತಿದ್ವಿ.

ಹಿರಿಯರಿಗೆ ಎಳ್ಳುಬೆಲ್ಲ ಕೊಟ್ಟು, ಕಾಲಿಗೆ ಬೀಳೂದು. ಆ ಅಂತ ಬಾಯಿ ತೆರಿಯೂದು. ಆಮೇಲೆ ಅವರು ಒಳ್ಳೊಳ್ಳೆ ಮಾತಾಡೂನು ಅಂದಾಗ ಗೋಣು ಅಳಗ್ಯಾಡಸ್ಕೊಂತ ಹೋಗೂದು. ಸಂಕ್ರಾಂತಿ ಸಂಭ್ರಮ ಅಂದ್ರ ಕಣ್ಮುಂದೆ ಇದೇ ದೃಶ್ಯಕಾವ್ಯ.

ನಮ್ಮ ಸ್ನೇಹಿತರಿಗೆ ಕೊಡಬೇಕಾದ್ರ, ಎಳ್ಳು ಸಕ್ರಿ ಕೊಡೂದು. ಮತ್ತೊಮ್ಮೆ ಕೊಡೂಮುಂದ ಉಪ್ಪು ಹಾಕಿ ಕೊಡೂದು. ಅವರು ಉಗಳೂಹಂಗಿಲ್ಲ, ತಿನ್ನೂಹಂಗಿಲ್ಲ. ಅವರ ಮುಖಾ ನೋಡಿ, ಮುಸಿಮುಸಿ ನಕ್ಕೊಂತ... ದೋಸ್ತಿಯೊಳಗ ದುಷ್ಮನಿ ಯಾಕ ಅನ್ನೂಹಂಗ.. ಬೇಕಾದ್ರ ಉಗುಳಲೆ.. ನಾ ಯಾರಿಗೂ ಹೇಳಾಂಗಿಲ್ಲ ಅಂತಿದ್ವಿ. ಹಿಂಗ ಯಾರಿಗೂ ಹೇಳದ ಅದೆಷ್ಟು ಗುಟ್ಟುಗಳು, ನಮ್ಮ ಹೃದಯದೊಳಗ ತಾವು ಪಡೀತಾವ ಗೊತ್ತಿಲ್ಲ. ಆದ್ರ ಕೆಟ್ಟದ್ದಂತೂ ಹೇಳಾಂಗಿಲ್ಲ, ಹೇಳಬಾರದು ಅನ್ನೂದು ಮಿದುಳಿಗೆ ಇಳೀತಿತ್ತು.

ಸಂಕ್ರಾಂತಿ ಹಿಂದಿನ ದಿನ, ಹೆಣ್ಮಕ್ಕಳ ಭೋಗಿ ಅಂತ ಆಚರಿಸ್ತಾರ. ಹಿಂದಿನ ದಿನ ರಾತ್ರಿ ಅಥವಾ ಸುಡುಸುಡು ನೀರಿನ ಬಟ್ಟಲದಾಗ ಬೆಳಗಾ ಮುಂಜೇನೆ, ಅಕ್ಕಿ ಮತ್ತು ಎಳ್ಳು ಹಾಕ್ತಾರ. ಆ ನೀರು ಆರೂದ್ರೊಳಗ ಇವು ಹೊಟ್ಟಿಯುಬ್ಬಿಸಿಕೊಂಡಿರ್ತಾವ. ನೀರೆಲ್ಲ ಬಸದು, ಒಂದಷ್ಟು ಅರಿಷಣ ಹಾಕಿ, ಅರಿಯೂಕಲ್ಲಿಗೆ ಹಾಕಿ ಅರದ್ರ ಒಂದು ಚಂದನೆಯ ಸ್ಕ್ರಬ್‌ ಸಿದ್ಧ ಆಗ್ತದ. ಅವೊತ್ತು ಸಾಬೂನು ಹಚ್ಕೊಳ್ಳೂಹಂಗಿಲ್ಲ. ಈ ಅಕ್ಕಿ, ಎಳ್ಳಿನ ಮಿಶ್ರಣದ್ದೇ ಲೇಪನ. ಸ್ನಾನ. ಇದಿಷ್ಟು, ನೆನೆದು, ಅರಿಯೂತನಾನೂ ಮನಿಯಂಗಳದಾಗ ರಂಗೋಲಿ ಅರಳ್ತಿರ್ತದ. ಹೆಬ್ಬೆರಳ ತುದಿಮ್ಯಾಲೆ ಭಾರ ಹಾಕಿ ಕುಂತು, ಎಷ್ಟಕ್ಕಿ ಅದಾವ, ಎಷ್ಟು ಸಾಲದಾವ ಅಂತ ಎಣಸ್ಕೊಂತ, ವರ್ಣ ಸಂಯೋಜನೆಯನ್ನು ಮನಸಿನಾಗೇ ರೆಡಿ ಮಾಡಿಟ್ಕೊಂಡಿರ್ತಾರ. ಹಿಂಗ ಕಾಣಬೇಕಂದ್ರ ಹಂಗ ಕಾಣಾಕ ಬೇಕು ಅನ್ನುವ ನಿರ್ಧಾರ ಅಂಗಳವನ್ನು ಅಂದಗೊಳಸ್ತಿರ್ತದ.

ADVERTISEMENT

ಸ್ನಾನ ಮಾಡಿ, ದೇವರ ಪೂಜೆ ಮಾಡಿದ ಮೇಲೆ ಬಲಿತ ವೀಳ್ಯೆದೆಲೆ ಹುಡುಕಿ, ಅದರ ಬೆನ್ನಿಗೆ ಅಥವಾ ಒಳ ಮೈಗೆ ಚೂರೆಚೂರು ತುಪ್ಪ ಸವರಿ, ದೀಪಕ್ಕ ಅಡ್ಡ ಹಿಡೀತಾರ. ಅಲ್ಲೊಂದು ಕಪ್ಪುಕಾಡಗಿ ಆದಂಗ ಆಗ್ತದ. ಹೊಗಿ ತಾಕಿ. ಆ ಕಾಡಗಿಯನ್ನು ಕಣ್ಣಿಗೆ ಹಚ್ಕೊಬೇಕಂತ. ಸಣ್ಣಗೆ ಉರೀತದ.. ಆದ್ರ ಕಣ್ಣು ಫಳಫಳ ಅಂತ ಹೊಳೀತಾವ.

ಕಾಡಗಿ ಹಚ್ಕೊಂಡು ಅಂಗಳಕ್ಕ ಬಂದ್ರ ಆಗಲೇ ಮನ್ಯಾಗ ಒಂದು ಫರಾತನಾಗ, ಕಬ್ಬು, ಪೇರಲಹಣ್ಣು, ಬಾರಿಹಣ್ಣು, ಕ್ಯಾರಿಹಣ್ಣು, ಗಜ್ಜರಿ, ಸೌತಿಕಾಯಿ, ಹಸಿಸೇಂಗಾ ಎಲ್ಲಾನೂ ಹಿಡಿಹಿಡಿ ಹಾಕಿಟ್ಟಿರ್ತಾರ. ಅವನ್ನು ತಿನ್ಕೊಂತ ಕೂದಲ ಒಣಗಿಸಿಕೊಳ್ಳೂದು. ಈ ಭೋಗಿ ಅಂತ ಹೆಸರಿಟ್ಟು, ಯೋಗಿಹಂಗ ಯಾಕ ತಿಂತಾರ ಗೊತ್ತಿಲ್ಲ. ಆದ್ರ ಯೋಗ, ಭೋಗ ಎರಡೂ ಒಗ್ಗೂಡಿಸುವ ಆಚರಣೆಯಂತೂ ಆಗಿರ್ತದ.

ಕಬ್ಬು ತಿನ್ನಾಕ ಅಮ್ಮ ಬಂದು ಕುಂತ್ರ ಅಕೀನೆ ಸುಲದ ಕೊಡ್ತಾಳ. ಅಪ್ಪ ಬಂದ್ರ ಕಬ್ಬು ಸೀಳಿ, ಚಂದನೆಯ ಘನಾಕೃತಿಯೊಳಗ ಕತ್ತರಿಸಿಕೊಡ್ತಾರ. ಅವನ್ನು ತಿಂದು, ತಿಂದು, ತಿನ್ನೂಮುಂದ ಮೊಣಕೈತನಾ ರಸ ಹರಿಸಿಕೊಂಡು, ಅದನ್ನೂ ಬಿಡದ್ಹಂಗ ನಾಲಗಿಯ ತುದಿಯಿಂದ ನೆಕ್ಕಿ, ಬಾಯಿಯೆಲ್ಲ ಜಿಬಿಜಿಬಿ ಮಾಡ್ಕೊಳ್ಳೂ ಸುಖ.. ಆಹಹಾ.. ಅಷ್ಟೇ ಅಲ್ಲ, ಆ ಕಬ್ಬು ಅದೆಷ್ಟು ಅಗೀತೀವಿ ಅಂದ್ರ, ಅಗದು ಅಗದು, ಉಗಳಿದಾಗ ಕಬ್ಬು ಪ್ಯಾಪಿರಸ್‌ ರೂಪದೊಳಗ ಹೊರಗಬಂದಿರ್ತದ.

ಮಧ್ಯಾಹ್ನಕ್ಕ ಒಂದು ಸರಳ ಊಟ ಮಾಡಿದ್ರ, ಮರುದಿನದ ತಯಾರಿ ಶುರುವಾಗ್ತದ. ಕಾಳು ನೆನಿಹಾಕಿಡಬೇಕು. ಎಣ್ಣಿಗಾಯಿಗೆ ಸೇಂಗಾ ಹುರದು, ಪುಡಿ ಮಾಡ್ಕೊಬೇಕು. ಜೋಳದ ಬೋನ ಮಾಡೂದಾದ್ರ ನೆನಿಸಿಟ್ಟ ಜೋಳವನ್ನು ಕುಟ್ಟಿ, ಜೋಳದ ಸಿಪ್ಪಿ ಹೋಗುಹಂಗ ಮಾಡ್ಬೇಕು. ಮೊಸರು ಹೆಪ್ಪು ಹಾಕಬೇಕು. ಎಲ್ಲ ಚಟ್ನಿಪುಡಿ ಪ್ಯಾಕ್‌ ಮಾಡಿಡಬೇಕು. ಮೂರು ದಿನ ಮೊದಲೇ ಮಾಡಿದ ಖಟಿರೊಟ್ಟಿ ಗಂಟು ಕಟ್ಟಿಡಬೇಕು. ಉಪ್ಪು, ಉಪ್ಪಿನಕಾಯಿ, ಹುಣಸಿತೊಕ್ಕು, ಕೆಂಪು ಚಟ್ನಿ, ಹಸಿಟೊಮೊಟೊ ಚಟ್ನಿ ಹಿಂಗ ಇವನ್ನೆಲ್ಲ ಬುತ್ತಿಗೆ ಅನುವು ಮಾಡಬೇಕು.

ಮರುದಿನ ಸಂಕ್ರಾಂತಿ, ಗಂಡುಮಕ್ಕಳ ಭೋಗಿ. ಕೆರಿ, ನದಿ, ಹೊಳಿ ದಂಡಿಗೆ ಬುತ್ತಿ ಕಟ್ಕೊಂಡು ಹೋದ್ರ, ಅವರಲ್ಲಿ ಸ್ನಾನ ಮಾಡ್ತಾರ. ಅಲ್ಲಿಂದ ಹೊಲಕ್ಕ ಹೋಗೂದೆ ಸಡಗರ. ಹೊಲದಾಗ ಎಳ್ಳು, ಸೇಂಗಾ ಹೋಳಗಿಗೆ ಹೆರತಿದ್ದ ತುಪ್ಪ (ಗಟ್ಟಿ ರವೆಯಂತೆ ಕಾಳುಕಾಳು ಇರುವ ತುಪ್ಪಕ್ಕ ಹೆರತಿದ್ದ ತುಪ್ಪ ಅಂತಾರ) ಹಾಕ್ಕೊಂಡು, ಸವರಿಕೊಂಡು ತಿನ್ನಾಕತ್ರ... ಭೂಮಿ, ಆಕಾಶ ಎಲ್ಲಿ ಒಗ್ಗೂಡ್ತದ ಅಂತ ನೋಡ್ಕೊಂತ ಹಲ್ಲಿಗೆ ಕೆಲಸ ಕೊಟ್ಟಿರ್ತೀವಿ.

ಆಮೇಲೆ ಎಲ್ಲಾರೂ ಒಗ್ಗೂಡಿ ಊಟ ಮಾಡಿದ್ರ, ಆಗಲೇ ಮಣಿಯೊಂದು ಬೆನ್ನು ನೆಲಕ್ಕಾನಿಸಿಕೊಂಡು ಅಂಗಾತ ಮಲಗ್ತದ. ಅದರ ಮ್ಯಾಲೆ ಚಕ್ಕಾರ ಆಡಾಕ ಮನಿ ಚಿತ್ರ ಬಿಡಸ್ತಾರ. ಪಗಡಿ ಎಲಿ ಇದ್ರ ಅದನ್ನೂ ತಂದಿರ್ತಾರ. ಮನ್ಯಾಗ ಭಾಳ ಮಂದಿ ಇದ್ರ ಇಬ್ಬರು ಮೂರು ಮಂದಿ ಜೋಡಿ ಆಗಿ ಆಡಬಹುದು. ಆದ್ರ ಒಂದಾಟ ಮಾತ್ರ ಆಡಬೇಕು. ಮತ್ತ ಹಿಂಗ ಆಡೂಮುಂದ ಬಾಯಾಗ ಎಲಿಯಾಡಸ್ಕೊಂತ ಇರಬೇಕು.

ಸರಳಗೆ ತಿನ್ನೋರಿಗೆ ಎಳೀಎಲೀಗೆ ಸುಣ್ಣ ಸವರಿ, ಸೋಂಪು, ಒಣಕೊಬ್ಬರಿ, ಸಕ್ಕರಿ, ಸುಣ್ಣ, ಅಡಕಿ ಹಾಕಿ ಕೊಡ್ತಾರ. ಸ್ವಲ್ಪ ಫರಮಾಯಿಷಿ ಎಲಿ ತಿನ್ನೋರಾದ್ರ ಅದರ ಜೊತಿಗೆ ಉತ್ತತ್ತಿ ಚೂರು, ಚಮನ್‌, ಗುಲ್ಕಂದ್‌, ಲವಂಗ, ಯಾಲಕ್ಕಿ, ಮತ್ತ ಒಂದು ನೂರಾಎಂಟು ಮಸಾಲಿ ಹಾಕ್ಕೊಂಡು, ಎಲಿಯನ್ನು ಕಡಬು ಮಾಡ್ಕೊಂಡಂಗ ಮಾಡ್ಕೊಂಡು ಮೆಲೀತಾರ. ಆಟ ಮುಗೀತದೊ, ಎಲಿ ಮುಗೀತದೊ.. ಒಟ್ನಾಗ ಇವೆರಡೂ ಒಮ್ಮೆ ಮುಗದ್ರೂ ಅಚ್ಚರಿ ಇಲ್ಲ. ಅಷ್ಟರೊಳಗ ಗಾಡಿ ಹೂಡಿದ ಎತ್ತಿಗೆ ಹೊಸ ಜೋಷ್‌ ಬಂದಿರ್ತದ. ಅವುಕ ಕಿಚ್ಚು ಹಾಯಿಸಾಕ, ಮನ್ಯಾಗಿನ ಗಂಡುಮಕ್ಕಳಿಗೂ ಅಷ್ಟೇ ಜೋಷ್‌. ಇಬ್ಬರು ನಾ ಮುಂದ, ತಾ ಮುಂದ ಅನ್ನೂಹಂಗ ಓಡ್ತಾರ. ಎತ್ತು ಬೆದರದಂತೆ ಕಿಚ್ಚು ಹಾಯಿಸುವ ಕಲೆ ಎಲ್ಲರಿಗೂ ಸಿದ್ಧಿಸಿರೂದಿಲ್ಲ. ಹಗ್ಗ ಸಡಿಲ ಬಿಟ್ಕೊಂತ, ಬಿಗಿ ಮಾಡ್ಕೊಂತ, ಆ ಕಿಚ್ಚು ಹಾಯಬೇಕು. ಗೋದೂಳಿ ಸಮಯದಿಂದ ಇಳಿಸಂಜೆಯ ಈ ಸಂಭ್ರಮ ಮುಗಿಸಿ ಮನಿಗೆ ಹೋದ ಮ್ಯಾಲೆ ಸಂಜೀಕ ಎಳ್ಳುಬೆಲ್ಲ ಬೀರುವ ಕೆಲಸ ಶುರು.

ಬಿಳಿಎಳ್ಳನ್ನು ತೊಳದು, ನೆರಳಾಗ ಒಣಗಿಸಿ, ರೊಟ್ಟಿ ಮಾಡಿ, ಒಲಿ ಆರಿಸಿದ ಮ್ಯಾಲೆ ಹಂಚಿನ ಮ್ಯಾಗ ಹಾಕಿ, ಮೈ ಕೆಂಪು ಆಗೂಹಂಗ ಹುರದಿರ್ತಾರ. ಬೆಲ್ಲ, ಕೊಬ್ಬರಿ ಹೆರಿಯೂ ಮಣಿಯೊಳಗ ಸಣ್ಣ ಮಾಡ್ಕೊಬೇಕು. ಸೇಂಗಾನ್ನ ಹಂಚಿಗೆ ಹಾಕಿ, ಬೆನ್ನು ಸುಡದೇ ಇರೂ ಹಂಗ ಕೆಂಪಗ ಹುರದು, ಸಿಪ್ಪಿ ತಗಿಬೇಕು. ಆಮೇಲೆ ಅವನ್ನೂ ಎಳ್ಳುಬೆಲ್ಲದ ಮಿಶ್ರಣಕ್ಕ ಕಲಿಸಬೇಕು. ಒಣಕೊಬ್ಬರಿಯನ್ನು ಚೂರು ಮಾಡಿ, ಅದನ್ನೂ, ಕುಸುರೆಳ್ಳಿನ ಜೊತಿಗೆ ಕಲಿಸಿದ್ರ ರುಚಿರುಚಿಯಾದ ಎಳ್ಳುಬೆಲ್ಲ ರೆಡಿ ಆಗ್ತದ. ಇನ್ನೇನು, ಒಂದು ಉಂಡಿಡಬ್ಬಿಯೊಳಗ ಇದನ್ನು ತುಂಬಿಟ್ಟರ, ಮಕ್ಕಳಿಗೆ ಸಣ್ಣು ಡಬ್ಬಿ ಹುಡುಕೂದೆ ಕೆಲಸ. ತಮ್ಮ ತಮ್ಮ ಡಬ್ಬಿಗೆ ತುಂಬಸ್ಕೊಳ್ಳೂದು, ಪರಸ್ಪರ ಹಂಚ್ಕೊಂಡು ತಿನ್ನೂದು, ಡಬ್ಬಿ ಖಾಲಿಯಾಗೂತ್ಲೆ ಮತ್ತ ಹೋಗಿ ತುಂಬ್ಕೊಳ್ಳೂದು.

ಸಂಜೀಕ ದೇವರ ಮುಂದ ದೀಪ ಹಚ್ಚಿಟ್ಟು, ದೇವರ ಜಗುಲಿ ಮ್ಯಾಲೆ ಎಳ್ಳು ಬೆಲ್ಲ ಇಟ್ಟು ಆಮೇಲೆ ಮನಿ ಹಿರಿಯಾರಿಗೆ ಕೊಡೂದು, ಕಾಲು ಬೀಳೂದು, ಎದ್ದು ಅವರ ಮುಂದ ಬಾಯಿತೆರದು ನಿಲ್ಲೂದು. ಅಜ್ಜ, ಅಮ್ಮ, ಅಪ್ಪ ಅಮ್ಮ ಹಿಂಗ ಎಳ್ಳು ಹಾಕಿದ ಮ್ಯಾಲೆ ಕೈಯ್ಯಾಗ ಒಂದಿಷ್ಟು ರೊಕ್ಕ ಇಡ್ತಾರ. ಹೆಚ್ಚಾಗಿ ಅವು ನಾಣ್ಯನೇ ಇರ್ತಾವ. ಹಂಗ ನಾಣ್ಯ ಕೂಡಿಹಾಕಬೇಕಂದ್ರ ಕಾಲಿಗೆ ಬೀಳಾಕ ಬೇಕು.

ವಿನಮ್ರ ಆಕ್ಕೊಂತ, ದೊಡ್ಡೋರಿಗೆ ಎದುರು ಮಾತಾಡದೆ, ಎಳ್ಳುಬೆಲ್ಲದ್ಹಂಗ ಇರುವ ತಾಲೀಮು ಹಿಂಗ ಸಿಗ್ತಿತ್ತು. ಹಸಿಕಾಳು, ಹಸಿ ತರಕಾರಿ, ಹಣ್ಣು, ಕಾಯಿ ತಿನ್ಕೊಂತ, ಎಣ್ಣೆಕಾಳುಗಳಿರುವುದನ್ನೆಲ್ಲ ಬೆಲ್ಲದೊಂದಿಗೆ ತಿನ್ಕೊಂತ ಹಬ್ಬ ಮುಗೀತದ. ಆದ್ರ ರಾತ್ರಿ ಮತ್ತದೇ ಕನಸು. ನಮ್ಮ ಕುಸುರೆಳ್ಳಿನ ಡಬ್ಬಿ ತುಂಬ್ಕೊಂಡು ಹೋಗಬೇಕು. ಸಾಲ್ಯಾಗ ಟೀಚರಿಗೆ ಕೊಡಬೇಕು. ಒಂದು ಪುಡಕಿಯೊಳಗ ಎಳ್ಳು ಸಕ್ರಿ, ಇನ್ನೊಂದರೊಳಗ ಎಳ್ಳು ಉಪ್ಪು ಇಟ್ಕೊಂಡು ಮಷ್ಕಿರಿ ಮಾಡಬೇಕು. ಹೌದು.. ಆದ್ರ ಇವೆಲ್ಲ ಮರುದಿನದ ಸಂಭ್ರಮದೊಳಗ ಮುಗದೇ ಬಿಡ್ತದ. ಮತ್ತ ಹಿಂಗ ರಾಜೋಪಚಾರ ಸಿಕ್ಕಂಗ ಹಣ್ಣು, ಕಾಯಿ ತಿನ್ಕೊಂತ ಕೂಡುವ ಭೋಗಿ ಯೋಗ ಸಿಗಬೇಕಂದ್ರ ಸಂಕ್ರಾಂತಿ ಬರಾಕ ಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.