ಒಬ್ಬ ರೈತನು ತನ್ನ ಹೊಲದಲ್ಲಿ ಬೀಜ ಬಿತ್ತುವುದಕ್ಕೆಂದು ಹೊರಟ. ಅವನು ಬೀಜ ಬಿತ್ತುವಾಗ ಕೆಲವು ಬೀಜಗಳು ದಾರಿಯ ಮಗ್ಗುಲಲ್ಲಿ ಬಿದ್ದವು; ಹಕ್ಕಿಗಳು ಬಂದು ಅವುಗಳನ್ನು ತಿಂದುಬಿಟ್ಟವು. ಇನ್ನು ಕೆಲವು ಬೀಜಗಳು ಸ್ವಲ್ಪ ಮಣ್ಣು ಇದ್ದ ಬಂಡೆಯ ಮೇಲೆ ಬಿದ್ದವು; ಬೀಜಗಳೇನೊ ಮೊಳೆತವು; ಆದರೆ, ಬೇರುಬಿಡಲು ಮಣ್ಣು ಸಾಕಷ್ಟು ಇಲ್ಲದ ಕಾರಣ ಅವು ಅಲ್ಲೇ ಒಣಗಿದವು. ಮತ್ತೆ ಕೆಲವು ಬೀಜಗಳು ಮುಳ್ಳುಗಿಡಗಳ ನಡುವೆ ಬಿದ್ದವು. ಚೆನ್ನಾಗಿ ಬೆಳೆಯದಂತೆ ಮುಳ್ಳುಗಿಡಗಳು ಅವನ್ನು ಅಲ್ಲೇ ಅಡಗಿಸಿಬಿಟ್ಟವು. ಮತ್ತೂ ಕೆಲವು ಬೀಜಗಳು ಉತ್ತು ಹದವಾದ ಹೊಲದಲ್ಲಿ ಬಿದ್ದವು. ಅವು ಒಂದಕ್ಕೆ ಮೂವತ್ತರಷ್ಟು, ಒಂದಕ್ಕೆ ಅರವತ್ತರಷ್ಟು, ಒಂದಕ್ಕೆ ನೂರರಷ್ಟು ಫಲಕೊಟ್ಟವು. ಕ್ರಮವರಿತು ಶ್ರಮ ಹಾಕಬೇಕೆಂದು ಇಲ್ಲಿಯ ಸಾರಾಂಶ.
***
ಒಬ್ಬ ಮನುಷ್ಯನು ತನ್ನ ಹೊಲದಲ್ಲಿ ಗೋಧಿಯನ್ನು ಬಿತ್ತಿದ. ಅವನ ವೈರಿಯು ಜನರೆಲ್ಲ ನಿದ್ದೆ ಮಾಡುವ ಹೊತ್ತಿನಲ್ಲಿ ಆ ಹೊಲಕ್ಕೆ ಹೋಗಿ ಹಣಜಿಯನ್ನು (ಕೂಳೆಧಾನ್ಯ) ಬಿತ್ತಿದ. ಗೋಧಿಯು ಮೊಳಕೆ ಒಡೆದು ಬೆಳೆದಂತೆಲ್ಲಾ ಹಣಜಿಯೂ ಬೆಳೆಯತೊಡಗಿತು. ಆಗ, ಯಜಮಾನನು ತನ್ನ ಆಳುಗಳನ್ನು ಕರೆದು ‘ನಾನು ಹೊಲದಲ್ಲಿ ಬಿತ್ತಿದ್ದು ಗೋಧಿ ಮಾತ್ರ, ಹಣಜಿ ಹೇಗೆ ಬೆಳೆಯಿತು’ ಎಂದು ಕೇಳಿದ. ಅದಕ್ಕೆ ಆಳುಗಳು ‘ಯಾರೋ ಒಬ್ಬ ನಿಮ್ಮ ವೈರಿ ಬಿತ್ತನೆ ಮಾಡಿರಬೇಕು’ ಎಂದು ಹೇಳಿ, ‘ಹಣಜಿಯನ್ನು
ಆರಿಸಿ ತೆಗೆದುಬಿಡೋಣವೊ’ ಎಂದು ಕೇಳಿದರು. ಅದಕ್ಕೆ ಯಜಮಾನನು, ‘ಬೇಡ, ಬೇಡ, ಹಾಗೆ ಮಾಡುವುದು ಬೇಡ. ಈಗ ಹಣಜಿಯನ್ನು ಆರಿಸಿ ತೆಗೆಯುವಾಗ ಅದರ ಸಂಗಡ ಗೋಧಿಯ ಪೈರೂ ಕಿತ್ತು ಬಂದುಬಿಡುತ್ತದೆ. ಸುಗ್ಗಿಯ ಕಾಲದವರೆಗೂ ಅವೆರಡು ಬೆಳೆಯಲಿ. ಆನಂತರ, ಗೋಧಿ ಮತ್ತು ಹಣಜಿ ಪೈರುಗಳನ್ನು ಬೇರೆಬೇರೆಯಾಗಿ ಕೊಯ್ದು, ಗೋಧಿಯನ್ನು ಒಕ್ಕಿ ಕಣದಲ್ಲಿ ತುಂಬಿ, ಹಣಜಿಯನ್ನು ಹೊರೆ ಕಟ್ಟಿ, ಬೆಂಕಿಗೆ ಹಾಕಿ’ ಎಂದು ತಿಳಿಸಿದ. ಸಮಯ ನೋಡಿ ವೈರಿಯನ್ನು ಮುಗಿಸಬೇಕು ಎಂಬುದು ಈ ಪ್ರಸಂಗದ ಸಾರಾಂಶ.
***
ಏಸು ಹೇಳಿದ ಇನ್ನೊಂದು ಪ್ರಸಂಗ: ದ್ರಾಕ್ಷಿತೋಟದ ಒಬ್ಬ ಯಜಮಾನನು ತೋಟದಲ್ಲಿ ಕೆಲಸ ಮಾಡಲು ಕೂಲಿ ಆಳುಗಳನ್ನು ಕರೆತರಲು ಬೆಳಿಗ್ಗೆ ಪಟ್ಟಣಕ್ಕೆ ಹೊರಟ. ಅವನು ಕೆಲವು ಕೂಲಿ ಆಳುಗಳನ್ನು ಕಂಡು, ದಿನಕ್ಕೆ ಒಂದು ಪಾವಲಿಯಂತೆ (ಒಂದು ಪಾವಲಿ=ನಾಲ್ಕು ಆಣೆ ಅಥವಾ ಇಪ್ಪತ್ತೈದು ಪೈಸೆ) ಕೂಲಿ ಗೊತ್ತುಮಾಡಿ, ಅವರನ್ನು ತನ್ನ ದ್ರಾಕ್ಷಿತೋಟಕ್ಕೆ ಕಳುಹಿಸಿದ. ಅವರು ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡತೊಡಗಿದರು.
ತರುವಾಯ, ಹೆಚ್ಚು ಕಡಿಮೆ ಬೆಳಿಗ್ಗೆ ಒಂಬತ್ತು ಗಂಟೆಯ ಹೊತ್ತಿಗೆ ಹೋಗಿ, ಪೇಟೆಯಲ್ಲಿ ಸುಮ್ಮನೆ ನಿಂತಿದ್ದ ಇನ್ನು ಕೆಲವು ಕೂಲಿಕಾರರನ್ನು ಕಂಡು ‘ನೀವು ಸಹ ನನ್ನ ದ್ರಾಕ್ಷಿತೋಟಕ್ಕೆ ಹೋಗಿ, ನಿಮಗೆ ಸರಿಯಾದ ಕೂಲಿಯನ್ನು ಕೊಡುತ್ತೇನೆ’ ಅನ್ನಲು ಅವರು ತೋಟಕ್ಕೆ ಹೋದರು. ಅವರೂ ದ್ರಾಕ್ಷಿತೋಟದಲ್ಲಿ ಕೆಲಸ ಮಾಡತೊಡಗಿದರು. ಆನಂತರ, ಯಜಮಾನನು ತಿರುಗಿ, ಹೆಚ್ಚುಕಡಿಮೆ ಮಧ್ಯಾಹ್ನ ಹನ್ನೆರಡು ಗಂಟೆ ಹೊತ್ತಿಗೆ, ಅದೇ ರೀತಿ ಪೇಟೆಯಲ್ಲಿ ನಿಂತಿದ್ದ ಇನ್ನು ಕೆಲವು ಕೂಲಿಕಾರರನ್ನು ಕಂಡು, ಅವರಿಗೆ ಸರಿಯಾಗಿ ಕೂಲಿಕೊಡುವುದಾಗಿ ಹೇಳಿ, ತನ್ನ ದ್ರಾಕ್ಷಿತೋಟದಲ್ಲಿ ಕೆಲಸ ಮಾಡಲು ಕಳುಹಿಸಿದ.
ಮತ್ತೆ, ಯಜಮಾನನು, ಹೆಚ್ಚುಕಡಿಮೆ ಮೂರು ಗಂಟೆಯ ಹೊತ್ತಿಗೆ ಪೇಟೆಗೆ ಹೋಗಿ, ಮತ್ತೂ ಕೆಲವು ಕೂಲಿಕಾರರನ್ನು ಕಂಡು, ಅವರಿಗೆ ಸರಿಯಾಗಿ ಕೂಲಿಕೊಡುವುದಾಗಿ ಹೇಳಿ, ತನ್ನ ದ್ರಾಕ್ಷಿ ತೋಟದಲ್ಲಿ ಕೆಲಸ ಮಾಡಲು ಕಳುಹಿಸಿದ. ತಿರುಗಿ, ಯಜಮಾನನು, ಹೆಚ್ಚುಕಡಿಮೆ ಸಂಜೆ ಐದುಗಂಟೆಯ ಹೊತ್ತಿಗೆ ಪೇಟೆಗೆ ಹೋಗಿ, ಬೇರೆ ಕೆಲವರು ಸುಮ್ಮನೆ ನಿಂತಿರುವುದನ್ನು ಕಂಡ.
ಯಜಮಾನನು ಅವರಿಗೆ ‘ದಿನವೆಲ್ಲಾ ಸುಮ್ಮನೆ ಯಾಕೆ ನಿಂತಿದ್ದೀರಿ’ ಎಂದು ಕೇಳಲು ಅವರು ‘ಯಾರೂ ನಮ್ಮನ್ನು ಕೂಲಿಗೆ ಕರೆಯಲಿಲ್ಲ’ ಅಂದರು. ಆಗ, ಯಜಮಾನನು ‘ನೀವು ಸಹ ನನ್ನ ದ್ರಾಕ್ಷಿತೋಟಕ್ಕೆ ಹೋಗಿ’ ಅಂದ. ಅವರೆಲ್ಲ ಯಜಮಾನನ ದ್ರಾಕ್ಷಿತೋಟದಲ್ಲಿ ಕೆಲಸ ಮಾಡತೊಡಗಿದರು.
ಆನಂತರ, ಸಂಜೆ ಆದಮೇಲೆ, ಯಜಮಾನನು ತನ್ನ ಪಾರುಪತ್ಯೆದಾರನನ್ನು ಕರೆದು ‘ಕಡೆಗೆ ಬಂದವರನ್ನು ಮೊದಲು ಮಾಡಿಕೊಂಡು, ಮೊದಲು ಬಂದವರತನಕ ಅವರಿಗೆ ಸಮಾನವಾಗಿ ಕೂಲಿ ಕೊಡು’ ಎಂದ. ಆಗ, ಸಂಜೆ ಐದು ಗಂಟೆಗೆ ಬಂದವರಿಗೂ ಒಂದು ಪಾವಲಿ ಕೂಲಿ ಸಿಕ್ಕಿತು. ಅದಕ್ಕೆ, ಬೆಳಿಗ್ಗೆಯೇ ಬಂದ ಕೂಲಿಕಾರರು ಗೊಣಗುತ್ತ ‘ಕಡೆಗೆ ಬಂದ ಇವರು ಒಂದು ತಾಸು ಹೊತ್ತು ಮಾತ್ರ ಕೆಲಸ ಮಾಡಿದ್ದಾರೆ. ನಾವು ದಿನವೆಲ್ಲ ಬಿಸಿಲಿನಲ್ಲಿ ಕಷ್ಟಪಟ್ಟು ಕೆಲಸ ಮಾಡಿದ್ದೇವೆ. ಇವರನ್ನು ನಮಗೆ ಸಮ ಮಾಡಿದ್ದೀಯೆ’ ಅಂದರು. ಅದಕ್ಕೆ ಯಜಮಾನನು ‘ನೀನು ನನ್ನಲ್ಲಿ ಕೆಲಸ ಮಾಡಲು ಒಂದು ಪಾವಲಿಗೆ ಒಪ್ಪಂದ ಆಗಿತ್ತು. ಅದರಂತೆ, ನಿನಗೆ ಒಂದು ಪಾವಲಿ ಕೂಲಿ ನೀಡಿದ್ದೇನೆ. ನಿನಗೆ ಕೊಟ್ಟಂತೆ ಕಡೆಯವನಿಗೂ ಕೊಡುವುದಕ್ಕೆ ನನಗೆ ಮನಸ್ಸುಂಟು. ಅದನ್ನು ನೀನು ತಪ್ಪಿಸುವುದು ಎಷ್ಟು ಸರಿ? ನಾನು ಒಳ್ಳೆಯವನಾಗಿರುವುದು ನಿನ್ನ ಕಣ್ಣನ್ನು ಒತ್ತುತ್ತದೊ’ ಅಂತ ಕೇಳಿದ. ಅವರೆಲ್ಲ, ಆಗ ಸುಮ್ಮನಾದರು. ಈ ರೀತಿ ಕಡೆಯವನು ಮೊದಲಿಗನಾಗುವನು. ಮೊದಲಿಗನು ಕಡೆಯವನಾಗುವನು ಎಂದು ಏಸು ತಿಳಿಸಿದ.
***
ದೇಶಾಂತರಕ್ಕೆ ಹೊರಟ ಒಬ್ಬ ಮನುಷ್ಯ ತನ್ನ ಆಳುಗಳನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಈ ರೀತಿ ಒಪ್ಪಿಸಿದ. ಅವನು ಒಬ್ಬನಿಗೆ ಐದು ತಲಾಂಶು (ಒಂದು ತಲಾಂಶ=3,000 ರೂಪಾಯಿ), ಒಬ್ಬನಿಗೆ ಎರಡು ತಲಾಂಶು, ಒಬ್ಬನಿಗೆ ಒಂದು ತಲಾಂಶು - ಹೀಗೆ ಹಂಚಿ ಅವನ್ನು ಸರಿಯಾದ ರೀತಿಯಲ್ಲಿ ಬಳಸಬೇಕೆಂದು ತಿಳಿಸಿ, ಬೇರೊಂದು ದೇಶಕ್ಕೆ ಹೋದ.
ಬಳಿಕ, ಐದು ತಲಾಂಶು ಹೊಂದಿದವನು ಹೋಗಿ ಅದನ್ನು ವ್ಯಾಪಾರಕ್ಕೆ ಹಾಕಿ, ಇನ್ನೂ ಐದು ತಲಾಂಶು ಗಳಿಸಿಕೊಂಡ. ಹಾಗೆಯೇ, ಎರಡು ತಲಾಂಶು ಹೊಂದಿದವನು ಇನ್ನೂ ಎರಡು ಸಂಪಾದಿಸಿದ. ಆದರೆ, ಒಂದು ತಲಾಂಶು ಹೊಂದಿದವನು ಭೂಮಿಯನ್ನು ಅಗೆದು ತನ್ನ ಧಣಿಯ ಹಣವನ್ನು ಅಲ್ಲಿ ಬಚ್ಚಿಟ್ಟ.
ಬಹುಕಾಲದ ಮೇಲೆ, ಆ ಆಳುಗಳ ಧಣಿಯು ಪರದೇಶದಿಂದ ಬಂದು, ತನ್ನ ಆಳುಗಳಿಂದ ಲೆಕ್ಕ ತೆಗೆದುಕೊಂಡ. ಆಗ, ಐದು ತಲಾಂಶು ಪಡೆದಿದ್ದವನು ಮುಂದೆ ಬಂದು ಇನ್ನೂ ಐದು ತಲಾಂಶು ತಂದು ‘ಸ್ವಾಮಿ, ನೀನು ಐದು ತಲಾಂಶುಗಳನ್ನು ನನಗೆ ಕೊಟ್ಟಿದ್ದೀಯಲ್ಲಾ, ಇಗೋ, ಇನ್ನೂ ಐದು ತಲಾಂಶು ಸಂಪಾದಿಸಿದ್ದೇನೆ’ ಅಂದ. ಅವನ ಧಣಿಯು ‘ಭಲಾ, ನಂಬಿಗಸ್ತನಾದ ಒಳ್ಳೆ ಆಳು ನೀನು. ಸ್ವಲ್ಪ ಕೆಲಸದಲ್ಲೇ ನಂಬಿಗಸ್ತನಾದೆ. ಆದುದರಿಂದ, ನಿನ್ನನ್ನು ದೊಡ್ಡ ಕೆಲಸದಲ್ಲಿ ಇಡುತ್ತೇನೆ. ನೀನು ನಿನ್ನ ಧಣಿಯ ಸೌಭಾಗ್ಯದಲ್ಲಿ ಸೇರು’ ಅಂದ.
ಆನಂತರ, ಎರಡು ತಲಾಂಶು ಹೊಂದಿದವನು ಮುಂದೆ ಬಂದು ‘ಸ್ವಾಮಿ, ಎರಡು ತಲಾಂಶವನ್ನು ನೀನು ನನಗೆ ಒಪ್ಪಿಸಿದ್ದೀಯಲ್ಲಾ? ಅದರಿಂದ ಇನ್ನೂ ಎರಡು ತಲಾಂಶು ಸಂಪಾದಿಸಿದ್ದೇನೆ. ತೆಗೆದುಕೊ’ ಅಂದ. ಅದಕ್ಕೆ ಧಣಿಯು ಅವನಿಗೆ ‘ಭಲಾ, ನಂಬಿಗಸ್ತನಾದ ಒಳ್ಳೆ ಆಳು ನೀನು. ಸ್ವಲ್ಪ ಕೆಲಸದಲ್ಲೇ ನಂಬಿಗಸ್ತನಾದೆ. ದೊಡ್ಡ ಕೆಲಸದಲ್ಲಿ ನಿನ್ನನ್ನು ಮುಂದೆ ಇಡುತ್ತೇನೆ. ನಿನ್ನ ಧಣಿಯ ಸೌಭಾಗ್ಯದಲ್ಲಿ ಸೇರು’ ಎಂದು ಹೇಳಿದ.
ತರುವಾಯ, ಒಂದು ತಲಾಂಶು ಹೊಂದಿದವನು ಮುಂದೆ ಬಂದು ‘ನೀನು, ಕಠಿಣ ಮನುಷ್ಯನು. ನೀನು ಬಿತ್ತದಿರುವಲ್ಲಿ ಕೊಯ್ಯುವವನು, ನೀನು ತೂರದಿರುವಲ್ಲಿ ರಾಶಿ ಮಾಡಿಕೊಳ್ಳುವವನು ಎಂದು ತಿಳಿದು, ಹೆದರಿಕೊಂಡು ಹೋಗಿ, ನಿನ್ನ ತಲಾಂಶುವನ್ನು ಭೂಮಿಯಲ್ಲಿ ಬಚ್ಚಿಟ್ಟೆ. ಇಗೋ ನಿನ್ನದು ನಿನಗೆ ಸಂದಿದೆ’ ಎಂದು ಒಂದು ತಲಾಂಶುವನ್ನು ಹಿಂದಕ್ಕೆ ನೀಡಿದನು. ಅದಕ್ಕೆ ಧಣಿಯು ಸಿಟ್ಟುಗೊಂಡು ‘ನೀನು ನಿಜಕ್ಕೂ ಮೈಗಳ್ಳನಾಗಿರುವೆ. ನೀನು, ನಿನ್ನ ಹಣವನ್ನು ಸಾಹುಕಾರನಲ್ಲಿ ಬಡ್ಡಿಗೆ ಹಾಕಬೇಕಿತ್ತು. ನಾನು ಬಂದು ನನ್ನದನ್ನು ಬಡ್ಡಿ ಸಮೇತ ಪಡೆದುಕೊಳ್ಳುತ್ತಿದ್ದೆ’ ಎಂದು ಆ ತಲಾಂಶುವನ್ನು ಪಡೆದು ಹತ್ತು ತಲಾಂಶು ಇದ್ದವನಿಗೆ ತನ್ನ ಸೇವಕರ ಮೂಲಕ ಕೊಡಿಸಿದ. ಬಳಿಕ, ‘ಈ ಆಳನ್ನು ಕತ್ತಲೆಗೆ ಹಾಕಿ ಬಿಡಿರಿ’ ಎಂದು ಹೇಳಿದನು. ಮೈಗಳ್ಳರಿಗಿಂತ ಚಟುವಟಿಕೆಯುಳ್ಳವರು ಮೇಲು ಎಂಬುದು ಈ ಪ್ರಸಂಗದ ತಾತ್ಪರ್ಯ.
(ಆಧಾರ: ‘ಹೊಸ ಒಡಂಬಡಿಕೆ’)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.