ನಮ್ಮ ಪ್ರಪಂಚವು ಯುದ್ಧ, ಭಯೋತ್ಪಾದನೆ, ಹಿಂಸೆ, ನಿರಾಶ್ರಿತರ ಸಮಸ್ಯೆ, ನಿರುದ್ಯೋಗ ಮುಂತಾದ ಸಮಸ್ಯೆಗಳಿಂದ ಬಳಲುತ್ತಿದೆ. ಶಾಂತಿ ಸಮಾಧಾನಕ್ಕಾಗಿ ಮಾನವ ಜೀವ ತುಡಿಯುತ್ತಿರುವ ಈ ದಿನಗಳಲ್ಲಿ ಯೇಸು ಕ್ರಿಸ್ತರ ಜನನದ ಕ್ರಿಸ್ಮಸ್ ಹಬ್ಬ ಮಾನವನ ಬಳಲಿದ ತನುಮನಕ್ಕೆ ಅಮೃತ ಸಿಂಚನ ನೀಡಬಲ್ಲ ಮಾಂತ್ರಿಕ ಶಕ್ತಿಯನ್ನೊಳಗೊಂಡಿದೆ.
ಯೆಹೂದ್ಯ ಜನರು ಪರಕೀಯರಾದ ರೋಮನ್ನರ ದಾಸ್ಯದಿಂದ ತಮ್ಮನ್ನು ಬಿಡುಗಡೆಗೊಳಿಸಲಿರುವ ವಿಮೋಚಕನ ಆಗಮನವನ್ನು ಎದುರು ನೋಡುತ್ತಿದ್ದರು.
ಬರಲಿರುವ ವಿಮೋಚಕನು ಮತ್ತೊಮ್ಮೆ ದೇವರ ರಾಜ್ಯದ ಶಾಂತಿಯನ್ನು ಈ ಲೋಕದಲ್ಲಿ ಸ್ಥಾಪಿಸುವನು ಎಂಬುದಾಗಿ ಅವರು ನಂಬಿದ್ದರು. ‘ಆತನ ದಿನಗಳಲ್ಲಿ ನೀತಿವಂತನು ವೃದ್ಧಿಯಾಗುವನು. ಸಮೃದ್ಧಿಯಾದ ಶಾಂತಿ-ಸಮಾಧಾನವು ಚಂದ್ರನಿರುವವರೆಗೂ ಇರುವುದು’ ಎಂದು ಪ್ರವಾದಿಗಳು ಆತನ ಹುಟ್ಟಿನ ಸುಮಾರು ಏಳುನೂರು ವರ್ಷಗಳಿಗೆ ಮುಂಚಿತವಾಗಿಯೇ ನುಡಿದಿದ್ದರು.
ಈ ಲೋಕದ ದೊಡ್ಡ ವ್ಯಕ್ತಿಗಳಿಗೆ ಆತನ ಆಗಮನದ ಅರಿವೇ ಆಗಲಿಲ್ಲ. ಕಾರಣ, ಆತನ ಹುಟ್ಟು ಅರಮನೆಯಲ್ಲಲ್ಲ, ದನದ ಹಟ್ಟಿಯಲ್ಲಿ ಆಯಿತು; ಮಹಲುಗಳ ಮೆತ್ತನೆಯ ತೊಟ್ಟಿಲಲ್ಲಲ್ಲ, ಹುಲ್ಲಿನ ಗೋದಲಿಯಲ್ಲಿ ಆಯಿತು; ಸುಗಂಧ ದ್ರವ್ಯಗಳು ಅವರನ್ನು ಆವರಿಸಿದ್ದಿರಲಿಲ್ಲ, ಪ್ರಾಣಿಗಳ ತ್ಯಾಜ್ಯದ ದುರ್ವಾಸನೆಯಿತ್ತು; ಆರೈಕೆಗೆ ದಾಸಿ-ದಾದಿಯರಿರಲಿಲ್ಲ, ಮೂಕ ಪ್ರಾಣಿಗಳಿದ್ದವು; ಬೆಲೆಬಾಳುವ ಕಾಣಿಕೆಗಳನ್ನೀಯುವ ರಾಜ ಸಾಮಂತರಿರಲಿಲ್ಲ, ದೀನಮೂರ್ತಿಗಳಾದ ಕುರಿಗಾಹಿಗಳಿದ್ದರು. ‘ದೊಡ್ಡಸ್ತಿಕೆ’ಯ ಅಮಲಿನಲ್ಲಿದ್ದ ಜಗಕ್ಕೆ ಆತನ ‘ಅಸಹಾಯಕತೆ’, ‘ದೀನತೆ’ಯ ಪರಿ ಅರ್ಥವಾಗಲೇ ಇಲ್ಲ.
ಆದರೆ, ಶಾಂತಿಯನ್ನು ಸ್ಥಾಪಿಸಿ ಪಸರಿಸಲು ಆತನು ಆರಿಸಿದ ರೀತಿ ಇದೇ ಆಗಿತ್ತು. ರಾಜ ಮಹಾರಾಜರು, ಚಕ್ರವರ್ತಿಗಳು ತಮ್ಮ ಸೈನ್ಯಗಳಿಂದ ಸ್ಥಾಪಿಸಲಾಗದ ಶಾಂತಿಯ ಸ್ಥಾಪನೆ ಅವನ ಗುರಿಯಾಗಿತ್ತು.
‘ಖಡ್ಗವನ್ನು ಹಿಡಿದವನು ಖಡ್ಗದಿಂದಲೇ ಹತನಾಗುವನು’ ಎಂಬ ಯೇಸು ಕ್ರಿಸ್ತರ ಮಾತುಗಳು ಈ ದಿನದ ಪ್ರಪಂಚಕ್ಕೆ ಬಹು ಪ್ರಸ್ತುತ. ಮಾರಕ ಯುದ್ಧೋಪಕರಣಗಳನ್ನು ತಯಾರಿಸುವ ಬಲಿಷ್ಠ ದೇಶಗಳು ಪ್ರಪಂಚದಲ್ಲಿ ಯುದ್ಧಗಳು ನಡೆಯುತ್ತಿರಲೇ ಬೇಕು ಎಂದು ಬಯಸುತ್ತವೆ. ಈ ಯುದ್ಧೋಪಕರಣಗಳನ್ನು ದುಬಾರಿ ಬೆಲೆ ಕೊಟ್ಟು ಖರೀದಿಸಿ, ಅವುಗಳನ್ನು ಬಳಸುವವರು ಬಡದೇಶದವರು. ಅವುಗಳಿಂದಲೇ ಹತವಾಗುವವರು ಬಡ ದೇಶಗಳ ಅಮಾಯಕ ಜನರು. ಮಾರಕ ಆಯುಧಗಳಿಂದ ಶಾಂತಿ ಸ್ಥಾಪನೆಗೆ ಹೊರಟವರೆಲ್ಲರೂ ಆ ಆಯುಧಗಳಿಗೇ ಬಲಿಯಾಗಿದ್ದಾರೆ.
ಶಾಂತಿ ಸ್ಥಾಪನೆಯ ಆಯುಧಗಳನ್ನು ಬದಲಾಯಿಸುವ ತುರ್ತು ಅಗತ್ಯವಿದೆ. `ಶಾಲೋಮ್’ ಎಂದರೆ ಹಿಬ್ರೂ ಭಾಷೆಯಲ್ಲಿ ಶಾಂತಿ ಎಂದರ್ಥ – ಅಂದರೆ ನೀತಿ, ಸಮಾನತೆ ಹಾಗೂ ರಕ್ಷಣೆ. ಅದೊಂದು ಸಮಗ್ರ ಚಿಂತನೆ.
ಪ್ರೀತಿ ಎಂಬ ಪದದ ವ್ಯಾಖ್ಯಾನ ನೀಡುವುದು ಸುಲಭವಲ್ಲ. ಪರರಿಗಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡುವುದು ಎಂದು ಸರಳವಾಗಿ ಹೇಳಬಹುದು. ಈ ಅಸೀಮ ಪ್ರೀತಿಯ ಸಂಭ್ರಮವೇ ಕ್ರಿಸ್‌ಮಸ್. ಪ್ರತಿಯೊಬ್ಬರೂ ಪರರ ಒಳಿತಿಗಾಗಿ ತಮ್ಮನ್ನೇ ಕೊಡುಗೆಯಾಗಿ ಸಮರ್ಪಿಸಲು ಕ್ರಿಸ್‌ಮಸ್ ಹಬ್ಬ ಕರೆಕೊಡುತ್ತದೆ.
ಅಸುರಕ್ಷತೆ, ಅಶಾಂತಿ ಹಾಗೂ ಹಿಂಸೆಯಿಂದ ನೊಂದಿರುವ ಈ ಲೋಕದ ಎಲ್ಲ ಮಾನವರಿಗೂ ಈ ವರ್ಷದ ಕ್ರಿಸ್‌ಮಸ್ ಆಚರಣೆಯು ಸಾಂತ್ವನವನ್ನು ನೀಡಲಿ. ಈ ಲೋಕವು ಎಲ್ಲರಿಗೂ ಸಂಪೂರ್ಣ ಸುರಕ್ಷತೆಯನ್ನು ನೀಡುವ ಸುಂದರ ಗೋದಲಿಯಾಗಲಿ ಎಂದು ಹಂಬಲಿಸೋಣವೇ? ಶಾಂತಿಯ ಅರಸ ಯೇಸುಕ್ರಿಸ್ತ ನೊಂದ ಹೃದಯಗಳಿಗೆ ಸಾಂತ್ವನವನ್ನು ನೀಡಿ, ನಮ್ಮ ಮನಗಳನ್ನು ಶಾಂತಿಯಿಂದ ತುಂಬಲಿ.
ಯೇಸು ಕ್ರಿಸ್ತ ಜಯಂತಿ ಹಾಗೂ 2025 ಮಹೋತ್ಸವಕ್ಕೆ ಕ್ಷಣಗಣನೆ ಈಗಾಗಲೇ ಆರಂಭಗೊಂಡಿದೆ. ಯೇಸು ಕಂದ ಈ ಧರೆಯಲ್ಲಿ ಹುಟ್ಟಿ 2025 ವರ್ಷಗಳು ಪೂರ್ಣಗೊಳ್ಳುವ ಉತ್ಸವವದು. ಆ ಉತ್ಸವಕ್ಕೆ ಸಿದ್ಧತೆಯಾಗಿ 2024 ಪ್ರಾರ್ಥನಾ ವರ್ಷವಾಗಿ ಆಚರಿಸಬೇಕೆಂದು ಪೋಪ್ ಫ್ರಾನ್ಸಿಸ್‌ರವರ ಆಶಯ. ಇದಕ್ಕೆ ಈ ವರ್ಷ ನವಂಬರ್ 26 ರಂದು ಚಾಲನೆಯನ್ನು ನೀಡಲಾಯಿತು. ‘ಭರವಸೆಯ ಯಾತ್ರಿಕರು’ ಎಂಬ ಧ್ಯೇಯದೊಂದಿಗೆ ಮುನ್ನಡೆದು ಮಹೋತ್ಸವ ವರ್ಷದಲ್ಲಿ ಯೇಸುಸ್ವಾಮಿಯನ್ನು ಸಂಧಿಸುವ ಉತ್ಸುಕತೆಯಿಂದ ಆಧ್ಯಾತ್ಮಿಕ ಯಾತ್ರೆಯನ್ನು ಆರಂಭಿಸುವ ಶುಭ ಗಳಿಗೆಯಿದು. ಈ ಯಾತ್ರೆಯು ವಿಶ್ವಶಾಂತಿಗೆ ನಾಂದಿಯಾಗಲಿ ಎಂದು ಹಾರೈಸೋಣ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.