ಅಪ್ಪುವಿನ ಸಂಯೋಗದಿಂದ ಮೃತ್ತಿಕೆ ಮಡಕೆಯಾಗಿ
ಮತ್ತೆ ಅಪ್ಪುವಿನೊಡಗೂಡಿ ತುಂಬಲಿಕ್ಕಾಗಿ
ಮತ್ತಾ ಅಪ್ಪುವಿನ ದ್ರವಕ್ಕೆ ಮೃತ್ತಿಕೆ ಕರಗಿದುದಿಲ್ಲ
ಅದೇತಕ್ಕೆ? ಅನಲ ಮುಟ್ಟಿದ ದೆಸೆಯಿಂದ
ಅದು ಕಾರಣ, ಇಂತೀ ವಸ್ತುವಿನ ದೆಸೆಯಿಂದ
ಸತ್ಕ್ರಿಯಾಮಾರ್ಗಂಗಳು ಭವದ ತೊಟ್ಟು ಬಿಟ್ಟವು.
ಇಂತೀ ದೃಷ್ಟವರಿದು ಸರ್ವಕ್ರೀಗಳೆಲ್ಲವೂ ವಸ್ತುವ ಮುಟ್ಟಲಿಕ್ಕಾಗಿ
ಪೂರ್ವಗುಣ ತನ್ನಷ್ಟವಾಯಿತ್ತು
ಭೋಗಬಂಕೇಶ್ವರಲಿಂಗವರಿದ ಕಾರಣ
ಇದು ಶರಣ ಅಂಗಸೋಂಕಿನ ಲಿಂಗತಂದೆಯ ವಚನ.
ಮಣ್ಣಿನಿಂದ ಮಡಕೆಯನ್ನು ತಯಾರಿಸುವಾಗ ಮುಖ್ಯವಾಗಿ ಬೇಕಾಗಿರುವುದು ನೀರು. ಅಂದರೆ ಗಟ್ಟಿಯಾಗಿರುವ ಮಣ್ಣು ನೀರಿನ ಸಂಸರ್ಗದಿಂದ ಮೆತ್ತಗಾಗಿ ಮಡಿಕೆಯ ಆಕಾರವನ್ನು ಪಡೆದುಕೊಳ್ಳುತ್ತದೆ. ಹಾಗಾದರೆ ಮಡಕೆಯನ್ನು ಮಾಡುವ ಉದ್ಧೇಶವೇನು – ಎಂದು ಕೇಳಿದರೆ ನೀರನ್ನು ತುಂಬುವುದಕ್ಕಾಗಿ. ಅರೆ ಇದೇನಾಶ್ಚರ್ಯ, ನೀರನ್ನು ತುಂಬಿದರೆ ಮಣ್ಣಿನ ಮಡಕೆ ಕರಗುವುದಿಲ್ಲವೆ? ಎಂದು ಕೇಳಿದರೆ ಉತ್ತರ ಇಲ್ಲ, ಕರಗುವುದಿಲ್ಲ. ಇದು ಹೇಗೆ ಸಾಧ್ಯವಾಯಿತು ಎಂದು ಆಲೋಚಿಸಿದಾಗ ಉತ್ತರವೇನೆಂದರೆ ಅನಲ, ಎಂದರೆ ಬೆಂಕಿ ಮುಟ್ಟಿದ ದೆಸೆಯಿಂದ.
ಮಣ್ಣಿನಿಂದ ತಯಾರಿಸಿದ ಮಡಕೆಯನ್ನು ಬೆಂಕಿಯಲ್ಲಿ ಸುಡುವ ಪ್ರಕ್ರಿಯೆಗೆ ಒಳಪಡಿಸಿದಾಗ ಅದು ತನ್ನೊಳಗಿನ ಒದ್ದೆತನವನ್ನು ಸಂಪೂರ್ಣವಾಗಿ ಕಳದುಕೊಂಡು ಗಟ್ಟಿಯಾಗುತ್ತದೆ. ಇದೇ ರೀತಿಯಾಗಿ ಮನುಷ್ಯನೂ ಕೂಡ ಹುಟ್ಟಿ ಬರುವಾಗ ದೇಹದ ನೆಲೆಯಲ್ಲಿ ಮತ್ತು ಸಂಬಂಧಗಳ ಮೋಹದ ನೆಲೆಯಲ್ಲಿ ಹಸಿಹಸಿಯಾಗಿರುತ್ತಾನೆ. ಆದರೆ ತನ್ನ ಮನಸ್ಸಿನಲ್ಲಿರುವ ಅಲ್ಲಸಲ್ಲದ ಕಾಮನೆಗಳನ್ನು ವೈಚಾರಿಕತೆಯ ಬೆಂಕಿಯಲ್ಲಿ ಸುಟ್ಟುರಿಸಿ ವ್ಯಕ್ತಿತ್ವವನ್ನು ಗಟ್ಟಿಯಾಗಿಸಿಕೊಳ್ಳಬೇಕು. ಮನಸ್ಸೆಂಬ ಮಡಕೆಯು ಹೀಗೆ ಸಂಸ್ಕಾರಗೊಂಡರೆ ಸುವಿಚಾರದ ನೀರು ತುಂಬಿದಾಗ ಕರಗುವುದಿಲ್ಲ. ಪರಮಾತ್ಮನ ಅಸ್ತಿತ್ವವನ್ನು ಅರಿಯುವ ನಿಟ್ಟಿನಲ್ಲಿ ಮನುಷ್ಯ ತನ್ನ ಪೂರ್ವಗುಣವನ್ನು ಕಳೆದುಕೊಳ್ಳಬೇಕಾಗುತ್ತದೆ.
ಮನುಷ್ಯ ತನ್ನ ಹುಟ್ಟು ಮತ್ತು ಬಾಲ್ಯದ ಕಾಲದಲ್ಲಿ ಹೊಂದಿದ್ದ ಅಬೋಧ-ಮುಗ್ಧ ಸ್ಥಿತಿಯನ್ನು ದಾಟಿ ಪ್ರಬುದ್ಧನಾದ ನಂತರದಲ್ಲಿ ಪೂರ್ವಗುಣವನ್ನು ಮೀರಿ ಬೌದ್ಧಿಕ ಎತ್ತರದೆಡೆಗೆ ನಡೆಯಬೇಕು. ಈ ಅವರೋಹಣದ ನಂತರ ಮತ್ತೆ ಚಾಂಚಲ್ಯ ಸ್ಥಿತಿಗೆ ಮರಳಬಾರದು. ಒಂದು ಸಲ ತಿಳಿವಳಿಕೆಯನ್ನು ಪಡೆದುಕೊಂಡ ಮನುಷ್ಯ ಮತ್ತೆ ಅರಿವುಗೇಡಿಯಂತೆ ವರ್ತಿಸಬಾರದು.
ಪ್ರಸ್ತುತ ಸಮಾಜದಲ್ಲಿ ವಿದ್ಯಾವಂತರಾದವರೂ ಕೂಡ ವಿವೇಚನೆಯಿಲ್ಲದೇ ವ್ಯವಹರಿಸುವ ಅನೇಕ ನಿದರ್ಶನಗಳಿವೆ. ವಯಸ್ಸು, ಜೀವನಾನುಭವಗಳಲ್ಲಿ ಹಿರಿಯರಾದವರೂ ಕೂಡ ಬಾಲೀಶ ವರ್ತನೆಗೆ ಎಳಸುತ್ತಾರೆ. ಇಂತಹ ವೈರುದ್ಧ್ಯಗಳನ್ನು ಕಂಡು ನೊ೦ದುಕೊಂಡ ಅಂಗಸೋಂಕಿನ ಲಿಂಗತಂದೆ ಈ ವಚನವನ್ನು ಬರೆದಿದ್ದಾನೆ.
ಸತ್ಕ್ರಿಯಾಮಾರ್ಗಂಗಳು ಭವದ ತೊಟ್ಟು ಬಿಡುವ ಸ್ಥಿತಿಗೆ ನಮ್ಮನ್ನು ಅಣಿಗೊಳಿಸಿಕೊಳ್ಳಬೇಕು. ಕತ್ತಲೆಯಿಂದ ಬೆಳಕಿನ ಕಡೆಗೆ, ಮೃತ್ಯುವಿನಿಂದ ಅಮೃತತ್ವದ ಕಡೆಗೆ ಸಾಗುವ ಜೀವನದಲ್ಲಿ ಹಿಮ್ಮುಖ ಚಲನೆಯಿರುವುದು ಆಭಾಸ. ಹಾಗೆಯೇ ಪೂರ್ವಗುಣವನ್ನು ಕಳೆದುಕೊಳ್ಳುತ್ತ ಪಾರಮಾರ್ಥಿಕ ಅರಿವಿನ ಬೆಳಕಿನ ಕಡೆಗೆ ಹೆಜ್ಜೆಯಿಕ್ಕುವ ಮನುಷ್ಯ ಪಕ್ವಗೊಳ್ಳುತ್ತ ಸಾಗಬೇಕು. ಗಿಡದಲ್ಲಿ ಹದವಾಗಿ ಬಲಿತು ಹಣ್ಣಾಗುವ ಫಲವು ತಾನಾಗಿ ತೊಟ್ಟು ಕಳಚಿ ಕೆಳಗೆ ಬೀಳುವಷ್ಟೇ ಸಹಜವಾಗಿ, ಸುಂದರವಾಗಿ ನಾವು ಭವದ ತೊಟ್ಟು ಕಳಚಿಕೊಂಡು ಅನುಭಾವದ ಸ್ಥಿತಿಗೆ ಏರಬೇಕಾದ ಮಹತ್ವವನ್ನು ಈ ವಚನ ಬಹಳ ಮಾರ್ಮಿಕವಾದ ಮಡಕೆಯ ವರ್ಣನೆಯಿಂದ ತಿಳಿಸಿಕೊಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.