‘ದಾಸರೆಂದರೆ ಶ್ರೀ ಪುರಂದರದಾಸರಯ್ಯಾ’ ಎಂದು ಹೇಳಿದವರು ದಾಸರ ದೀಕ್ಷಾಗುರುಗಳಾದ ಶ್ರೀ ವ್ಯಾಸರಾಜರು. ಇದನ್ನು ಅವರು ಕೇವಲ ಬಾಯಿಮಾತಿನಲ್ಲಿ ಮಾತ್ರ ಹೇಳದೆ ಕೀರ್ತನೆಯನ್ನು ಕಟ್ಟಿ ಹಾಡಿದರು. ಗುರುಗಳೇ ತಮ್ಮ ಶಿಷ್ಯನ ಗುಣಸ್ವಭಾವಗಳನ್ನು ಮೆಚ್ಚಿಕೊಂಡು ಶ್ಲಾಘನೆ ಮಾಡುವುದು ಅಪರೂಪವಾದದ್ದು. ಈ ಕೀರ್ತನೆಯಲ್ಲಿ ವ್ಯಾಸರಾಜರು ‘ಹರಿದಾಸರು ಹೇಗಿರಬೇಕು ಮತ್ತು ಹೇಗಿರಬಾರದು’ ಎಂಬುದನ್ನು ಹೆಜ್ಜೆ ಹೆಜ್ಜೆಗೂ ಧ್ವನಿಪೂರ್ಣ ಉಪಮೆಗಳೊಂದಿಗೆ ಉಲ್ಲೇಖಿಸುತ್ತ, ಪೂತಾತ್ಮ ಪುರಂದರರ ದಿವ್ಯದರ್ಶನವನ್ನು ಮಾಡಿಸುತ್ತಾರೆ.
ಪುರಂದರದಾಸರು ಕಣ್ಮರೆಯಾಗಿ ಈಗಾಗಲೇ ಐದು ಶತಮಾನಗಳೇ ಕಳೆದುಹೋಗಿವೆ. ಆದರೆ ಕನ್ನಡ ಹರಿದಾಸ ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಗಳಿಗೆ ದಾಸರು ಕೊಟ್ಟಕೊಡುಗೆ ಇನ್ನೂ ಹಚ್ಚಹಸಿರಾಗಿದೆ. ಕನ್ನಡ ಹರಿದಾಸ ಸಾಹಿತ್ಯ ಮತ್ತು ಕರ್ನಾಟಕ ಸಂಗೀತಗಳಿಗೆ ಈ ಹೊತ್ತಿಗೂ ಅವರು ಪಿತಾಮಹರು. ‘ಪುರಂದರ ವಿಠಲ’ ಎಂಬ ಅಂಕಿತದಲ್ಲಿ ದಾಸರು ರಚಿಸಿರುವ ಕೃತಿ, ಕೀರ್ತನೆಗಳು ಈಗಲೂ ಮನೆಮಾತಾಗಿವೆ. ತಿಳಿಗನ್ನಡದ ಸೌಂದರ್ಯವನ್ನೂ, ಸೊಗಸನ್ನೂ, ಅದರ ಸ್ವಾರಸ್ಯಕರ ನುಡಿಸಾಧ್ಯತೆಯನ್ನೂ ಹೆಚ್ಚಿಸಿವೆ. ಅವರ ಪವಿತ್ರಸ್ಮರಣೆ ‘ಕನ್ನಡತನ’ಕ್ಕೆ ಒಂದು ಸಮಗ್ರತೆಯನ್ನೂ ಸಾಫಲ್ಯವನ್ನೂ ತಂದುಕೊಟ್ಟಿದೆ.
ಪುರಂದರದಾಸರ ಬದುಕು ಮತ್ತು ಬೋಧೆ ಈ ಹೊತ್ತಿಗೂ ಪ್ರಸ್ತುತ. ಜನಮನದ ಕತ್ತಲನ್ನು ಕಳೆಯುವ ಅವುಗಳಲ್ಲಿರುವ ಪ್ರಸನ್ನತೆ, ಪ್ರಾಸಾದಿಕತೆ, ಪ್ರಪುಲ್ಲತೆ, ಸ್ವೋಪಜ್ಞತೆ, ಮನೋಜ್ಞತೆ, ಕಮನೀಯತೆ, ಪರಿಣಾಮಕಾರಿಯಾದ ದೇಸೀ ಅಭಿವ್ಯಕ್ತಿ ಮುಂತಾದವು ಅನುಪಮವಾದವು. ಸಂಸ್ಕೃತಭೂಯಿಷ್ಟವಾದ ವೇದಶಾಸ್ತ್ರ, ಪುರಾಣೋಪನಿಷತ್ತುಗಳನ್ನು ಪ್ರತಿಪಾದಿಸುವ ಸಾಂಪ್ರದಾಯಿಕ ಮತನಿಷ್ಠೆಯ ಮೂಸೆಯಲ್ಲಿ ಪುರಂದರರ ಸಾಹಿತ್ಯ ಅರಳಿದ್ದರೂ ಅಲ್ಲಿರುವ ಜನಪರಧೋರಣೆ ಮತ್ತು ಜಾನಪದೀಯ ಅಂಶಗಳು ಸರ್ವಜನಾಂಗದ ಸಾಹಿತ್ಯನಿಧಿಯಾಗಲು ಕಾರಣವಾಗಿವೆ. ದಾಸರ ಪ್ರತಿಯೊಂದು ಕೃತಿಯಲ್ಲಿಯೂ ಸಹಜತೆಯಿದೆ. ಬರೆಯಲೇಬೇಕೆಂಬ ಹಠದಿಂದ ತಿದ್ದಿ, ತೀಡಿ ಬರೆದ ಒಂದು ಸಾಲೂ ಅವರ ಕೃತಿಶ್ರೇಣಿಯಲ್ಲಿ ಕಂಡುಬರುವುದಿಲ್ಲ. ಬದುಕಿನ ವಿಕಸನಕ್ಕೆ ಅಗತ್ಯವಾಗದ ಒಂದು ಸಣ್ಣ ಪ್ರಸಂಗವನ್ನೂ ದಾಸರು ಉಲ್ಲೇಖಿಸುವುದಿಲ್ಲ. ಮರ್ತ್ಯಲೋಕದ ಯಥಾರ್ಥತೆಯ ನೆಲೆಗಟ್ಟಿನ ಮೇಲೆ ನಿಂತಿದ್ದರೂ ಬಾನೆತ್ತರಕ್ಕೆ ಪುಟಿಯುವ ಭಾವೋತ್ಕಟತೆಯ ವಿಶಿಷ್ಟ ಘಟ್ಟದಲ್ಲಿ ಮೂಡಿರುವ ಅವರ ಪ್ರತಿಯೊಂದು ಕೃತಿಯೂ ಅನುಭಾವದ ರಸಗಟ್ಟಿ.
ಪುರಂದರದಾಸರ ಎಂಬತ್ತೈದು ವರ್ಷಗಳ ತುಂಬುಜೀವನದಲ್ಲಿ ಮೂಗುತಿಯ ವೃತ್ತಾಂತವೂ ಸೇರಿದಂತೆ ಹಲವಾರು ಪವಾಡಸದೃಶ ಘಟನೆಗಳು ನಡೆದವೆಂಬ ಹೇಳಿಕೆಯಿದೆ. ಇಂತಹ ಪವಾಡದ ಕಥೆಗಳು ಏನೇ ಇರಲಿ; ಕಲ್ಪಿಸಿಕೊಳ್ಳಲಿಕ್ಕೂ ಆಗದಷ್ಟು ಅಗಾಧ ಪ್ರಮಾಣದ ಸಾಹಿತ್ಯವನ್ನು ಸೃಷ್ಟಿಸಿ, ಅಸಂಖ್ಯಾತ ಭಾವುಕರ ಬದುಕುಗಳನ್ನು ಹಸನುಗೊಳಿಸಿ, ಹರಿದಾಸ ಪಂಥದ ಆಧ್ವರ್ಯುವಾಗಿ, ಅದಕ್ಕೆ ಒಂದು ಓಘವನ್ನೂ ವೇಗವನ್ನೂ ನೀಡಿ ಮುನ್ನಡೆಸಿದ ದಾಸರ ಬದುಕೇ ಒಂದು ಪವಾಡ. ಅವರು ಪ್ರಾರಂಭಿಸಿದ ಹರಿದಾಸ ಪರಂಪರೆ ಈ ಹೊತ್ತಿಗೂ ಅವಿಚ್ಛಿನ್ನವಾಗಿ ನಡೆದು ಬರುತ್ತಿರುವುದು ಮತ್ತೊಂದು ಪವಾಡ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.