ಹಬ್ಬಗಳೆಂದರೆ ವಿಚಾರ ಮತ್ತು ಆಚಾರ ಜಗತ್ತುಗಳು ಒಂದಾಗುವ ವಿಶಿಷ್ಟ ಕಾಲ. ಆಚಾರವಿಲ್ಲದ ಬರಿಯ ವಿಚಾರಗಳು ಅಥವಾ ವಿಚಾರವಿಲ್ಲದ ಮುಗ್ಧ ಆಚಾರಗಳು ಜಾಳು ಜಾಳು ಎನಿಸುತ್ತವೆ. ಅರ್ಥಪೂರ್ಣವಾದ ಜೀವಿತಕ್ಕೆ ಆಚಾರ–ವಿಚಾರಗಳೆರಡೂ ಸಹಮತದಲ್ಲಿರುವುದು ಬಲು ಮುಖ್ಯ. ಸಮುದಾಯ ಅಥವಾ ನಾಗರಿಕತೆಯೊಂದರ ಆಚಾರ ಹಾಗೂ ವಿಚಾರಗಳು ಒಂದಾಗುವ ಪರ್ವಕಾಲವೇ ಹಬ್ಬ. ಭಾರತದ ಚಿಂತನೆಯಲ್ಲಿ ದೈವಿಕತೆ ಎನ್ನುವುದು ಸೃಷ್ಟಿಯಿಂದ ಹೊರಗಿರುವ ಒಂದು ಸಂಗತಿಯಾಗಿರದೆ ಇಡೀ ಸೃಷ್ಟಿಯೇ ದೈವಿಕವಾಗಿರುವುದರಿಂದ ನಮ್ಮ ಹಬ್ಬಗಳು ಸೃಷ್ಟಿಯ, ಮಾನವತೆಯ ಮತ್ತು ಇಹಲೋಕದ ಸಂಭ್ರಮವೇ ಆಗಿರುವುದು ಸಹಜ. ಹಾಗೆಂದೇ ಭಾರತೀಯ ಹಬ್ಬಗಳಿಗೂ ಪ್ರಕೃತಿಗೂ ಮತ್ತು ಲೋಕದ ಬದುಕಿಗೂ ಘನಿಷ್ಠವಾದ ಸಂಬಂಧವಿದೆ. ಭಾರತೀಯ ಹಬ್ಬಗಳ ಪೈಕಿ ದಕ್ಷಿಣದಲ್ಲಿ ‘ದೊಡ್ಡಹಬ್ಬ’ ಎಂದೇ ಗುರುತಿಸಿಕೊಳ್ಳುವ ದೀಪಾವಳಿ ಮತ್ತೆ ಬಂದಿದೆ. ವಸ್ತುತಃ ದೀಪಾವಳಿ ಎಂಬುದು ಒಂದು ಹಬ್ಬವಾಗಿರದೆ ಹಲವು ಹಬ್ಬಗಳ ಒಂದು ಸಮೂಹ ಎನ್ನಬಹುದು. ದೀಪಾವಳಿ ಹಬ್ಬದ ಕಥೆಯಲ್ಲಿ ಭೂದೇವಿ, ನರಕಾಸುರ, ರಾವಣ, ಬಲಿ, ಶ್ರೀರಾಮಚಂದ್ರ, ಶ್ರೀಕೃಷ್ಣ, ಲಕ್ಷ್ಮೀದೇವಿ, ಕುಬೇರ – ಹೀಗೆ ಹಲವರ ಪಾತ್ರವಿದೆ. ಹಬ್ಬದ ಕಥೆಗಳು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನವೂ ಆಗಿವೆ. ಹಾಗಿದ್ದೂ ದೀಪಾವಳಿಯೊಂದಿಗೆ ಲಕ್ಷ್ಮೀಪೂಜೆಯ ಸಂಬಂಧ ಮಾತ್ರ ಭಾರತದ ತುಂಬ ಏಕರೂಪವಾಗಿ ಕಂಡುಬರುವಂಥದು.
ಸನಾತನ ಭಾರತವು ಗುರುತಿಸಿಕೊಂಡಿರುವಂತೆ ಮಾನವ ಬದುಕಿನ ನಾಲ್ಕು ಪುರುಷಾರ್ಥಗಳಲ್ಲಿ ಅರ್ಥವೂ ಒಂದು. ಇದು ಲೌಕಿಕ ಬದುಕಿನ ನಾನಾ ವಿಧದ ಉತ್ಕರ್ಷಗಳನ್ನು ಸ್ವಪ್ರಯತ್ನದಿಂದ ಸಾಧಿಸುವುದಕ್ಕೆ ಸಂಬಂಧಿಸಿದ, ಕನಸು–ಕಾಂಕ್ಷೆಗಳನ್ನು ಧರ್ಮಮಾರ್ಗದಲ್ಲಿ ಪೂರ್ಣಗೊಳಿಸಿಕೊಳ್ಳುವ ಕುರಿತಾದ ಪುರುಷಾರ್ಥವಾಗಿದೆ. ಅರ್ಥಪುರುಷಾರ್ಥದಲ್ಲಿ ಬಲುದೊಡ್ಡಪಾಲು ದ್ರವ್ಯದ್ದು. ದ್ರವ್ಯವೆಂದರೆ ವಿತ್ತ, ಸಂಪತ್ತು ಮತ್ತು ಅವನ್ನು ಸಾಧಿಸುವ ಸಲಕರಣೆಗಳು. ಈ ಎಲ್ಲವಕ್ಕೂ ಸಂಬಂಧಿಸಿದ ದೇವತೆ ಲಕ್ಷ್ಮೀದೇವಿ.
ದೀಪಾವಳಿಯ ಸಂಭ್ರಮಗಳ ಸಾಲಿನಲ್ಲಿ ಲಕ್ಷ್ಮೀಪೂಜೆಗೆ ವಿಶಿಷ್ಟ ಸ್ಥಾನ. ಭೌತಿಕ ಜಗತ್ತಿನಲ್ಲಿ ಧರ್ಮಾಚರಣೆಗೆ ಅನುವಾಗುವಂಥ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಬೇಕಾದ ಸಾಧನ ಸಲಕರಣೆಗಳೆಲ್ಲಕ್ಕೂ, ಮತ್ತು ಲೌಕಿಕ ಬದುಕಿನ ಎಲ್ಲ ಸೌಖ್ಯಕ್ಕೂ ಲಕ್ಷ್ಮೀದೇವಿಯೇ ಅಧಿದೇವತೆಯಾದ್ದರಿಂದ ದೀಪಾವಳಿಯ ಹೊತ್ತಿನಲ್ಲಿ ಸಂಪತ್ತಿಗೂ ಮತ್ತು ಸಂಪತ್ತಿನ ಮೂಲಕ್ಕೂ ಪೂಜೆ ಸಲ್ಲುತ್ತದೆ. ಚಂಚಲೆಯಾದ ಲಕ್ಷ್ಮಿಯನ್ನು ಪೂಜಿಸುವುದು ಮಾತ್ರವಲ್ಲದೆ, ಸಂಪತ್ತು ಇನ್ನಷ್ಟು ವೃದ್ಧಿಯಾಗಲಿ ಎಂಬ ಆಶಯದೊಂದಿಗೆ ಇದೇ ಹೊತ್ತಿನಲ್ಲಿ ಹಣದ ಹೂಡಿಕೆ ಮಾಡುವುದು ಸಹ ಸಂಪ್ರದಾಯದಲ್ಲಿ ಇದೆ. ಈ ಹಿನ್ನೆಲೆಯಲ್ಲಿ ಭಾರತೀಯ ಶೇರು ಮಾರುಕಟ್ಟೆಯಲ್ಲಿ ‘ಮುಹೂರ್ತ ಟ್ರೇಡಿಂಗ್’ ಎಂಬ ಆಧುನಿಕ ಲಕ್ಷ್ಮೀ ಆರಾಧನೆಯೊಂದು ಬೆಳೆದು ಬಂದಿದ್ದನ್ನು ಲಕ್ಷಿಸಬಹುದು!
ಲಕ್ಷ್ಮೀದೇವತೆಯನ್ನು ಹಣ ಮತ್ತು ಸಂಪತ್ತಿನ ರೂಪದಲ್ಲಿ ಮಾತ್ರವಲ್ಲದೆ, ತೇಜಸ್ಸು, ಕಾಂತಿ, ಸೌಖ್ಯ ಮತ್ತು ಸಮೃದ್ಧಿಯ ರೂಪದಲ್ಲಿ ಕಂಡುದು ನಮ್ಮ ಪರಂಪರೆ. ಶುಚಿತ್ವ ಮತ್ತು ಒಪ್ಪ ಓರಣವಾಗಿರುವ ಮನೆಯೇ ಲಕ್ಷ್ಮಿದೇವಿಯ ಆವಾಸ. ಆಕೆಯ ಕಟಾಕ್ಷದ ಬಯಕೆಯಿರುವವರು ಶುಚಿಯಾಗಿರಬೇಕು ಎನ್ನುತ್ತವೆ ಶಾಸ್ತ್ರಗಳು. ಹಾಗಾಗಿಯೇ ದೀಪಾವಳಿಯ ಹೊತ್ತಿನಲ್ಲಿ ಮನೆಯನ್ನು, ಕೆಲಸದ ಸ್ಥಳಗಳನ್ನು ಶುಚಿಗೊಳಿಸುವ ಸಂಪ್ರದಾಯವೂ ಬೆಳೆದಿದೆ. ಆಶ್ವಯುಜ ಅಮಾವಾಸ್ಯೆಯ ರಾತ್ರಿಯಂದು ಭೂಲೋಕಕ್ಕೆ ಬಿಜಯಂಗೈಯುವ ಲಕ್ಷ್ಮೀದೇವಿಯನ್ನು ಬರಮಾಡಿಕೊಳ್ಳಲೆಂದೇ ದೀಪಾಲಂಕಾರ, ಆಕಾಶಬುಟ್ಟಿ ಇತ್ಯಾದಿ ಸಡಗರಗಳು ಮನೆಯನ್ನು ತುಂಬುತ್ತವೆ.
ದೀಪದ ಮೂಲಕ ದೇವತೆಯನ್ನು ಕರೆದು ಉಪಾಸನೆ ಮಾಡುವ ದೀಪಾವಳಿಯ ಈ ಆಚರಣೆಯು ನಮ್ಮ ನಾಗರಿಕತೆಯ ಜೀವಂತಿಕೆಗೆ ಸಾಕ್ಷಿ. ಲಕ್ಷ್ಮೀದೇವಿಯ ಕೃಪೆಯಿಂದ ಆಂತರಿಕ ಕಾಂತಿಯು ಕಂಗಳಲ್ಲೂ, ಸಮೃದ್ಧಿಯು ಬಾಳಲ್ಲೂ, ಸಂಪತ್ತು ಭೌತಿಕ ಬದುಕಿನಲ್ಲಿಯೂ ಹಬ್ಬಿಕೊಳ್ಳಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.