ಹಂಡಾಕಳಾ ಬಂಡಾಕಳಾ
ಕನಕಪ್ಪನ ಕರಿ ಆಕಳಾ
ಗುಡ್ಡಾವೇರಿ ಬರುವಾಗ ಕಳ್ಳಾರು ಕಂಡಾರೂ
ಕಳ್ಳರ ಕೈಯಾಗ ಬೆಳ್ಳಿಯ ಕುಡಗೋಲು
ಬೆಳ್ಳಿಯ ಕುಡಗೋಲು ಮಾರ ಮಾರ ಹುಲ್ಲು
ಮಾರ ಮಾರ ಹುಲ್ಲಿಗೆ ಬೋರ ಬೋರ ಹಾಲು
ಬೋರ ಬೋರ ಹಾಲಿಗೆ ಕಣ್ಣಿ ಕಣ್ಣಿ ಮೊಸರು
ಕಣ್ಣಿ ಕಣ್ಣಿ ಮೊಸರಿಗಿ, ಕಳ ಕಳ ತುಪ್ಪ
ಕಳ ಕಳ ತುಪ್ಪಕ್ಕ ಬಳಾ ಬಳಾ ರೊಕ್ಕ
ಆಣೀ ಪೀಣಿ ಜಾಣೆಗೊನಿಮ್ಮ ಎತ್ತಿನ ಪೀಡಾ ಹೊಳೆಯಾಚಕೊ…
ಅರಸನ ಕೈಯಾಗ, ಬೆಳ್ಳಿಯ ಕುಡಗೋಲ
ಬೆಳ್ಳಿಯ ಕುಡಗೋಲಿಗಿ ಮಾರ ಮಾರ ಹುಲ್ಲ
ಮಾರ ಮಾರ ಹುಲ್ಲಿಗಿ ಗೆಜ್ಜಿ ಕಟ್ಟಿದೆಮ್ಮಿ
ಗೆಜ್ಜಿ ಕಟ್ಟಿದೆಮ್ಮಿಗಿ ಸರ್ ಬುರ್ ಹಾಲು
ಸರ್ ಬುರ್ ಹಾಲಿಗೆ ಕೆನಿ ಕೆನಿ ಮೊಸರು
ಕೆನಿ ಕೆನಿ ಮೊಸರಿಗಿ ಗಮ್ ಗಮ್ ತುಪ್ಪ
ಗಮ್ ಗಮ್ ತುಪ್ಪಕ್ಕ ಬಳಕೊ ರೊಕ್ಕ….
ಈ ಹಾಡುಗಳು ರಾಗಬದ್ಧವಾಗಿ ಕೇಳತೊಡಗಿದರೆ ಊರೂರಿಗೆ ದೀವಳಿಗೆ ಬಂತೆಂದೇ ಅರ್ಥ. ಕೃಷಿಕರ ಮನೆಯ ದನ, ಕರು, ಬೆಳೆ, ಬೇಸಾಯಕ್ಕೆ ಒಳಿತಾಗಲೆಂದು ಹಾರೈಸಿ ಗ್ರಾಮೀಣ ಯುವಕರು ಮುಂದಿನ ಮನೆಗೆ ತೆರಳುತ್ತಾರೆ.
ದೀಪಾವಳಿ ಇಡೀ ದೇಶವೇ ಆಚರಿಸುವಂಥಹ ಹಬ್ಬ. ನಾಲ್ಕೈದು ದಿನ ವಿವಿಧ ಉಪ ಆಚರಣೆಗಳನ್ನು ಮಾಡುವ ಹಬ್ಬದ ವೇಳೆಯಲ್ಲಿ ‘ಆಣೀ ಪೀಣಿ’ಯೂ ಒಂದು ವಿಶಿಷ್ಟ ಸಂಪ್ರದಾಯವಾಗಿ ಬೆಳೆದು ಬಂದಿದೆ.
ಅನ್ನದಾತನ ಒಡನಾಡಿಗಳಾದ ದನಕರುಗಳಿಗೆ ರೋಗಗಳು ಬಾಧಿಸದಿರಲಿ, ಪಶು ಸಂತಾನ ಬೆಳೆಯಲಿ ಎಂಬುವುದೇ ಈ ಆಚರಣೆಯ ಮುಖ್ಯ ಉದ್ದೇಶ.
ಕಿತ್ತೂರು ಕರ್ನಾಟಕ ಭಾಗದ ವಿಜಯಪುರ, ಬಾಗಲಕೋಟೆ, ಗದಗ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಈ ಆಚರಣೆ ಹೆಚ್ಚಾಗಿದೆ. ಆಣೀ-ಪೀಣಿ ಆಚರಣೆ ಮಲೆನಾಡಿನ ಅಂಟಿಕೆ-ಪಂಟಿಕೆ ಸಂಪ್ರದಾಯಕ್ಕಿಂತ ಭಿನ್ನವಾಗಿದೆ.
ಆಣೀ-ಪೀಣಿಯನ್ನು ಕೆಲವು ಕಡೆ ‘ಅವಂಟಿಗೋ ಪವಂಟಿಗೋ’, ‘ಆಡಿ ಪಿಡೀ’, ‘ಅಂಟಿ ಸುಂಟಿ’ ಎಂದು ಬೇರೆ ಬೇರೆ ಹೆಸರುಗಳಿಂದ ಕರೆಯಲಾಗುತ್ತದೆ.
ದನಕಾಯುವ ಅಥವಾ ಕುರಿ ಕಾಯುವ ಹುಡುಗರು ದೀಪಾವಳಿಯ ಪಾಡ್ಯದಂದು ಬೆಳಗಿನ ಜಾವ ಅಕ್ಕ–ತಂಗಿಯರಿಂದ ಆರತಿ ಬೆಳಗಿಸಿಕೊಂಡು ಹಳ್ಳ/ ಅಡವಿಗೆ ಹೋಗಿ ಆಣೀಪೀಣಿ ದೀಪ ಸಿದ್ಧಗೊಳಿಸುವಲ್ಲಿ ನಿರತರಾಗುತ್ತಾರೆ.
ಹಳ್ಳದ ದಂಡೆಯಲ್ಲಿ ಬೆಳೆದ ಹುಲ್ಲಿನಿಂದ ಐದು, ಏಳು ಅಥವಾ ಹನ್ನೊಂದು ನಾಗರಹಾವಿನ ಹೆಡೆಗಳ ಮಾದರಿಯಲ್ಲಿ ಗೂಡು/ ಬುಟ್ಟಿ ರೂಪಿಸುತ್ತಾರೆ. ಅದರಲ್ಲಿ ಹಣತೆ ಇಟ್ಟು, ಹೆಡೆಗಳ ಕೆಳಗುಳಿದ ಹುಲ್ಲನ್ನು ಒಟ್ಟಿಗೆ ಕಟ್ಟಿ, ಕೈಯಲ್ಲಿ ಹಿಡಿಯಲು ಅನುಕೂಲವಾಗುವಂತೆ ಸಿಂಬಿ ಕಟ್ಟುತ್ತಾರೆ. ಇದೇ ಆಣೀಪೀಣಿ ದೀಪ.
ಸಂಜೆ ಮನೆಗೆ ಬರುವಾಗ ಕೈಯಲ್ಲಿ ದೀಪ ಹಿಡಿದುಕೊಂಡು ಬರುವ ಯುವಕರ ಗುಂಪು, ಗ್ರಾಮದಲ್ಲಿ ದನಕರುಗಳಿರುವವರ ಮನೆಗೆ ತೆರಳಿ ಜಾನುವಾರುಗಳಿಗೆ ಆರತಿ ಬೆಳಗುತ್ತದೆ.
ಮೂರು ದಿನ ನಡೆಯುವ ಈ ಜಾನಪದ ಉತ್ಸವದ ಕೊನೆಯ ದಿನ ದೀಪ ಬೆಳಗಿದ ಎಲ್ಲ ಮನೆಗೂ ಹೋಗಿ ಕೊಬ್ಬರಿ, ವಸ್ತ್ರ ಸೇರಿದಂತೆ ಇತ್ಯಾದಿ ವಸ್ತುಗಳನ್ನು ಕಾಣಿಕೆಯಾಗಿ ಪಡೆದು ದೀಪವನ್ನು ಹೊಳೆಯಲ್ಲಿ ಹರಿಬಿಡುತ್ತಾರೆ. ಈ ಆಚರಣೆ ಸಾಮರಸ್ಯ ಸಾರುವುದರ ಜೊತೆಗೆ ಮೇಲು ಕೀಳೆಂಬ ಬೇಧವನ್ನು ತೊಡೆದು ಹಾಕುವುದರ ಸಂಕೇತವೂ ಆಗಿದೆ ಎನ್ನುತ್ತಾರೆ ಜನಪದ ತಜ್ಞರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.