ವರ್ಷಋತುವೆನ್ನುವುದು ಬಲುಭಾರವಾದ ಋತು. ನೀರಿನ ಭಾರಕ್ಕೆ ತೊನೆಯುವ ಮೋಡಗಳಿಂದಲೂ, ನೀರಿನ ಕಣಗ ಳಿಂದಾಗಿ ಭಾರವಾಗಿ ಬೀಸುವ ಗಾಳಿ, ನೆಲದ ಮೇಲಿನ ಎಲ್ಲವೂ ನೀರಿನ ಭಾರ ವನ್ನು ಹೊತ್ತು ನಿಲ್ಲುವ ಹೊತ್ತು ವರ್ಷಋತು. ಅದಾದಬಳಿಕ ಬರುವ ಶರದೃತು ಇದೆಯಲ್ಲ, ಅದು ಮಾತ್ರ ಅತ್ತ ಪೂರ್ತಿ ಒಣವೂ ಅಲ್ಲದ ಇತ್ತ ಮಳೆಗಾಲದ ಪಿತಗುಡುವ ಹಸಿಯೂ ಅಲ್ಲದ, ಹಗುರ ಮತ್ತು ಹೊಸತನದ ಅನುಭೂತಿಯ ಅನನ್ಯವಾದ ಕಾಲಖಂಡ. ಆಗ ತಾನೇ ದೀರ್ಘವಾದೊಂದು ಸ್ನಾನವನ್ನು ಮುಗಿಸಿ ಬಂದ ಪ್ರಫುಲ್ಲತೆಯೇ ಪ್ರಕೃತಿಯಲ್ಲಿ ಎಲ್ಲೆಡೆಯೂ ತುಂಬಿರುವ ಕಾಲವದು. ಅದಕ್ಕಾಗಿಯೇ ಏನೋ, ಶರದೃತುವಿನ ದೀಪಾವಳಿ ಹಬ್ಬದಲ್ಲಿ ಹಬೆಯಾಡುವ ಬಿಸಿನೀರಿನ ಅಭ್ಯಂಗವೊಂದು ಬಲುದೊಡ್ಡ ಭಾಗ. ಅಷ್ಟಕ್ಕೂ ನಮ್ಮ ನಾಡಿನ ಹಬ್ಬಗಳಿಗೂ ನಾವು ಕಾಣುವ ಋತುಮಾನಗಳಿಗೂ ಗಾಢವಾದ ನಂಟಿದೆಯೆಂಬುದು ದಿಟವಷ್ಟೆ.
ಹಬ್ಬಗಳ ಸಾಲಿನಲ್ಲಿ ದೀಪಾವಳಿಗಿರುವ ಮಹತ್ತು ನಾನಾ ಮುಖವಾದ್ದು. ಕರ್ನಾಟಕದ ಹಲವು ಭಾಗಗಳಲ್ಲಂತೂ ದೀಪಾವಳಿಯೆಂದರೆ ‘ದೊಡ್ಡಹಬ್ಬ’ ಎಂದು ಕರೆಸಿಕೊಳ್ಳುತ್ತದೆ. ಹಳ್ಳಿಯ ಬದುಕಿನಲ್ಲಿ ಇವತ್ತಿಗೂ ಸಹ ‘ದೊಡ್ಡಹಬ್ಬ’ ಅನ್ನುವುದು ಕಾಲದ ಗಡಿಗುರುತಿನಂತೆ ಬಳಕೆಯಾಗುತ್ತದೆ. ‘ದೊಡ್ಡ ಹಬ್ಬಕ್ಕಿಂತ ಮುಂಚೆ, ದೊಡ್ದ ಹಬ್ಬದ ಮಾರನೆಯ ದಿನ’ ಇತ್ಯಾದಿ ಕಾಲನಿಶ್ಚಯದ ಲೆಕ್ಕವನ್ನಿಲ್ಲಿ ನೆನೆಯಬಹುದು.
ಎಲ್ಲ ಹಬ್ಬಕ್ಕಿರುವಂತೆ ದೊಡ್ಡಹಬ್ಬದಲ್ಲೂ ಕಥೆಯ ಸಂತೆಯಿದೆ. ಬಲಿ ಚಕ್ರವರ್ತಿಯು ವಾಮನನಿಂದ ಪಾತಾಳಕ್ಕೆ ತಳ್ಳಲ್ಪಟ್ಟಿದ್ದನ್ನು ಮತ್ತೆ ನೆನೆದು ವರ್ಷದಲ್ಲೊಮ್ಮೆ ಅವನ ರಾಜ್ಯಕ್ಕೆ ಅವನನ್ನು ಬರಮಾಡಿಕೊಳ್ಳುವ ಹಬ್ಬವಿದು. ಬಲಿ ರಾಕ್ಷಸನಾಗಿದ್ದರೂ ರಾಕ್ಷಸಸ್ವಭಾವನೇನೂ ಅವನಲ್ಲಿ ಇರಲಿಲ್ಲ; ಅವನೊಬ್ಬ ಪ್ರಜಾರಂಜಕನಾಗಿದ್ದ. ಸಾಂಪ್ರದಾಯಿಕರ ಮನೆಗಳಲ್ಲಿ ಸಾಂಕೇತಿಕವಾಗಿ ಬಲೀಂದ್ರನನ್ನು ಬರಮಾಡಿ ಕೂರಿಸುವ ಪದ್ಧತಿ ಇವತ್ತಿಗೂ ಚಾಲ್ತಿಯಲ್ಲಿದೆ. ಕೇರಳರಾಜ್ಯದಲ್ಲಿ ಬಲಿಚಕ್ರವರ್ತಿ ಭೇಟಿ ಕೊಡುವುದು ಓಣಂ ಹಬ್ಬದ ಸಮಯದಲ್ಲಿ ಎನ್ನುವ ಸಂಪ್ರದಾಯವಿದೆ.
ದೀಪಾವಳಿಯೊಂದಿಗೆ ಮಿಳಿತಗೊಂಡಿರುವ ಇನ್ನೊಂದು ಕಥೆ ನರಕಾಸುರನದು. ಈತ ವಿಷ್ಣುವಿನಿಂದ ಭೂಮಿದೇವಿಯಲ್ಲಿ ಹುಟ್ಟಿದವ. ವಿಷ್ಣುವಿನಿಂದ ವರಪಡೆದು ಉನ್ಮತ್ತನಾಗಿದ್ದ ಲೋಕಕಂಟಕ ನರಕಾಸುರನನ್ನು ಶ್ರೀಕೃಷ್ಣನು ಸಂಹಾರ ಮಾಡಿದ ಕಥೆಯೊಂದು ಭಾಗವತ ಪುರಾಣದಲ್ಲಿ ಬರುತ್ತದೆ. ಭೂದೇವಿಯ ಮಗನಾಗಿ ಹುಟ್ಟಿದ ಈತ ಅದಿತಿ ದೇವಿಯ ಒಡವೆಗಳನ್ನೆಲ್ಲ ಕದಿಯುತ್ತಾನೆ. ನರಕಾಸುರನ ವಧೆಯ ಬಳಿಕ ಭೂದೇವಿ ಅವೆಲ್ಲ ವನ್ನೂ ಅದಿತಿಗೆ ಮರಳಿ ಕೊಡಿಸುತ್ತಾಳೆ. ಈ ನೆನಪಲ್ಲಿಯೇ ದೀಪಾವಳಿಯ ಸಮಯದಲ್ಲಿ ಹಳ್ಳಿಗಳಲ್ಲಿ ‘ಬೂದಗಳು’ ಎನ್ನುವ ಕದಿಯುವ (ಸಾಂಕೇತಿಕವಾಗಿ) ಸಂಪ್ರದಾಯದ ಆಚರಣೆಯೂ ಇದೆ. ದೊಡ್ಡಹಬ್ಬದಲ್ಲಿ ಚತುರ್ದಶಿಯ ದಿನವೆಂದರೆ ಅದು ನರಕಾಸುರನನ್ನು ವಧಿಸಿದ ನೆನಪಿಗಾಗಿಯೇ ಇರುವ ದಿನ. ನರಕಾಸುರನ ವಧೆಯ ನೆನಪನ್ನು ಮತ್ತೆ ದೃಢ ಮಾಡಿಕೊಳ್ಳಲೆಂಬಂತೆ ದೀಪಾವಳಿಯ ಸಮಯದಲ್ಲಿ ಶಿಂಡ್ಲೆಕಾಯಿಯನ್ನು (ಸವತೆಯ ಕುಟುಂಬಕ್ಕೆ ಸೇರಿದ, ಉರುಟಾದ ಕಹಿಯಾದ ಕಾಯಿ. ಯಥೇಚ್ಛವಾಗಿ ಯಾವ ಪೋಷಣೆಯೂ ಇಲ್ಲದೆ ಬೆಳೆಯುತ್ತದೆ) ಕಾಲಿನಿಂದ ಮೆಟ್ಟಿ ಒಡೆಯುವ ಪದ್ಧತಿ ಇದೆ. ಅದರ ಓಡಿನಲ್ಲಿ ದೀಪ ಬೆಳಗಿಸುವ ಕ್ರಮವೂ ಇದೆ. ಹೀಗೆ ದೀಪಾವಳಿಯೆಂದರೆ ಕಥೆ ಮತ್ತು ಕಾಲಗಳ ಮಹತ್ತನ್ನು ಒಳಗೊಂಡ ಒಂದು ಹಬ್ಬ.
ಬಲಿ ಅಸುರ ಕುಲದಲ್ಲಿ ಹುಟ್ಟಿ ಜಗತ್ತಿಗೆ ಕಲ್ಯಾಣಕರನಾಗಿ ಬದುಕಿದವ. ನರಕಾಸುರನಾದರೋ (ಭೌಮಾಸುರ) ಜನ್ಮನಾ ಅಸುರ ಸಂಬಂಧವಿಲ್ಲದೆಯೂ ಪ್ರವೃತ್ತಿಯಿಂದಾಗಿ ಅಸುರನಾಗಿ ಬದುಕಿದವ. ಲೋಕದಲ್ಲಿ ಜನರು ದೀಪಾವಳಿ ಹಬ್ಬದಲ್ಲಿ ಇಬ್ಬರನ್ನೂ ಯಥಾಯೋಗ್ಯವಾಗಿ ನೆನೆಸಿಕೊಳ್ಳುತ್ತಾರೆ; ಒಬ್ಬನನ್ನು ಆದರಪೂರ್ವಕವಾಗಿ ತಮ್ಮ ರಾಜನಂತೆ ನೆನೆದುಕೊಂಡರೆ ಇನ್ನೊಬ್ಬನನ್ನು ಶ್ರೀಕೃಷ್ಣನಿಂದ ಹತನಾದವನೆಂದು ನೆನೆಯುತ್ತಾರೆ. ಪ್ರಾಯಃ ಬಲೀಂದ್ರನನ್ನು ಮತ್ತು ನರಕಾಸುರನನ್ನು ಸವತೆಯ ಜಾತಿಯ ಕಾಯಿಯಲ್ಲಿಯೇ ಆವಾಹಿಸುವುದರಲ್ಲಿಯೂ (ಬಲಿಯನ್ನು ಸಾಮಾನ್ಯವಾಗಿ ಊರಸವತೆ ಕಾಯಿಯಲ್ಲಿ ಆವಾಹಿಸಿ ಪೂಜಿಸಲಾಗುತ್ತದೆ. ನರಕಾಸುರನನ್ನು ಕಹಿರುಚಿಯ ಸವತೆ ಜಾತಿಯ ಶಿಂಡ್ಲೆಕಾಯಿಯಲ್ಲಿ ಕಾಣಲಾಗುತ್ತದೆ) ‘ಅಸುರ’ ಎನ್ನುವ ಒಂದೇ ಗುರುತಿದ್ದರೂ ಪರಸ್ಪರ ತದ್ವಿರುದ್ಧವಾದ ಸ್ವಭಾವವು ಸಾಧ್ಯವೆಂಬುದಕ್ಕೆ ರೂಪಕವಾಗಿ ನಿಲ್ಲುತ್ತದೆ. ಸವತೆಜಾತಿಯದೇ ಆದರೂ ಮುಳ್ಳುಸವತೆ ರುಚಿಯಾದ ಫಲ, ಮತ್ತು ಶಿಂಡ್ಲೆಕಾಯಿ ತಿನ್ನಲಾಗದಷ್ಟು ಕಹಿ. ಲೋಕವು ಗುಣಕ್ಕೆ ಮಾತ್ಸರ್ಯವನ್ನು ತೋರದೆ ಇರುವುದನ್ನಿಲ್ಲಿ ಕಾಣಬಹುದು.
ದೀಪಾವಳಿಯು ಮನುಷ್ಯರ ಸಮೃದ್ಧಿಯ ಹಬ್ಬ ಮಾತ್ರವೇ ಅಲ್ಲ, ಅದು ಗೋವುಗಳ ಸಮೃದ್ಧಿಯನ್ನು ಆಶಿಸುವ ಹಬ್ಬವೂ ಹೌದು. ಗೋಪೂಜೆ ಮತ್ತು ಗೋಸಂತರ್ಪಣೆ ದೀಪಾವಳಿ ಹಬ್ಬದ ಅವಿಭಾಜ್ಯ ಅಂಗ. ಗೋವುಗಳಿಗೆ ತೊಂದರೆ ಕೊಡಲು ಶಕ್ತನಾದ ಹುಲಿಯಪ್ಪನ (ಹುಲಿ) ಪೂಜೆಯೂ ದೀಪಾವಳಿಯಲ್ಲಿ ಆಚರಣೆಯಲ್ಲಿದೆ.
ಇನ್ನು ದೀಪಗಳನ್ನು ಬೆಳಗುವುದು ಮತ್ತು ಅಸುರನಾಶಕವಾದ ಸಿಡಿಮದ್ದುಗಳನ್ನು ಸಿಡಿಸುವುದು ಪರಂಪರೆಯಲ್ಲಿ ಅನುಸ್ಯೂತವಾಗಿ ನಡೆದುಬಂದಿದೆ. ಹದಿನೈದನೆಯ ಶತಮಾನದಲ್ಲಿ ವಿಜಯನಗರಕ್ಕೆ ಭೇಟಿಯಿತ್ತಿದ್ದ ಅಬ್ದುಲ್ ರಜಾಕ್ ವಿಜಯನಗರದಲ್ಲಿ ತನ್ನನ್ನು ವಿಸ್ಮಿತಗೊಳಿಸಿದ ಸಿಡಿಮದ್ದುಗಳ ಪ್ರದರ್ಶನದ ವಿಚಾರವಾಗಿ ಬರೆಯುತ್ತಾನೆ. ಹಾಗಿದ್ದಾಗ ದೀಪಾವಳಿಯಲ್ಲಿ ಪಟಾಕಿಗಳ ಬಳಕೆಗೆ ಶತಮಾನಗಳ ಇತಿಹಾಸವಿದೆಯೆಂಬುದಂತೂ ಖಚಿತವಾಗುತ್ತದೆ. ನಮ್ಮೊಳಗಿನ ಆಸುರತೆಯನ್ನು ತೊಡೆದು ಆನಂದದ ತಿಳಿದೀಪವನ್ನು ಬೆಳಗುವ ಸಾಂಕೇತಿಕತೆಯ ಈ ಹಬ್ಬ ಎಲ್ಲರಿಗೂ ಮುದವನ್ನೂ ಸಮೃದ್ಧಿಯನ್ನೂ ತರಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.