ದ್ರಾವಿಡ ಭಾಷೆಗಳ ‘ಕಾವ್ಯ ಕನ್ನಿಕೆ’ಯರೆಲ್ಲ ದೀಪಾವಳಿ ನೆಪದಲ್ಲಿ ಜ್ಯೋತ್ಯಮ್ಮರಾಗಿ ಕನ್ಯಾಕುಮಾರಿಯ ಕಡಲ ತೀರದಲ್ಲಿ ಕಾವ್ಯದ ಸಾಲುದೀಪಗಳನ್ನು ಬೆಳಗಿದರು. ಎಲ್ಲರೂ ತಮ್ಮ ತಮ್ಮಲ್ಲೇ ವಣಕ್ಕಂ, ನಮಸ್ಕಾರಮು, ನಮಸ್ಕಾರ, ನಮಸ್ಕಾರೋ, ನಮಸ್ಕಾರಂಗಳನ್ನು ಮಾಡಿಕೊಂಡಲ್ಲಿಗೆ ಕಾವ್ಯ ಜ್ಯೋತ್ಯಮ್ಮಗಳ ಕಣ್ಣ ಕೃಷ್ಣಮಣಿಗಳಲ್ಲೇ ಭರತನಾಟ್ಯ, ಕೂಚುಪ್ಪುಡಿ, ಸುಗ್ಗಿಕುಣಿತ, ಪಿಲಿಕುಣಿತ, ತಿರುವಾದಿರಗಳ ನರ್ತನಗಳಾದವು...
***
ಕನ್ಯಾಕುಮಾರಿಯ ಕಲ್ಲು ನೀರೂ ಕರಗುವ ಕಾರಿರುಳ ಕತ್ತಲ ಹೊತ್ತಲ್ಲಿ ಕಡಲ ನೀರಿಗೆ ಕಾಲು ಇಳಿಸಿಕೊಂಡು ಕರಿಬಂಡೆಯ ಮೇಲೆ ಕಾವ್ಯಜ್ಯೋತಿಗಳೆಲ್ಲ ಕೂತು ‘ಗೇಯದ ಗೊಟ್ಟಿಯಲಂಪಿನ ಇಂಪಿಗೆ’ ಆಗರಮಾಗುತ್ತಿದ್ದವೋ; ಕಾವ್ಯ ಸಾಗರವಾಗುತ್ತಿದ್ದವೋ.
ಬಂಡೆ ಬಂಡೆಗಳಲ್ಲಿ ನಿಂತ, ಖಂಡಾಂತರ ಜಿಗಿದ ವಿವೇಕಾನಂದರೂ ತಿರುವಳ್ಳುವರೂ ಮುಗಿಲ ಚುಕ್ಕಿ ಚೆಲ್ಲುವ ಬೆಳಕಿನಲ್ಲಿ, ನೆಲದ ವಿದ್ಯುತ್ ದೀಪಗಳ ಸೆಳಕಿನಲ್ಲಿ ಮೌನ ಹೊದ್ದು ನಿಂತಿದ್ದರೋ; ಉತ್ತರ-ದಕ್ಷಿಣಗಳ ಮುತ್ತಿನ ಎರಕ ಹೊಯ್ದು ಶಂಖತೀರ್ಥವಾಗಿಸಿದರೋ.
ಕರ್ನಾಟಕದ ಕಲ್ಯಾಣದ ಕಡೆಯಿಂದ ಇಳಕಲ್ ಸೀರೆ ಉಟ್ಕಂಡು ಬಂದಿದ್ದ ಜ್ಯೋತ್ಯಮ್ಮನೂ ಕೇರಳದ ತಿರುವಿದಾಂಕೂರಿನಿಂದ ಪೊಡ ಚೇಲೆ ಪೊದೆದು ಬಂದಿದ್ದ ಜ್ಯೋತ್ಯಮ್ಮನೂ ತಮ್ಮ ತಮ್ಮ ಸೀರೆಯ ಅಂದ ಚೆಂದವ ನೋಡಿ ನಕ್ಕು ಹಗುರಾದರೋ.
ಕಂಚಿ ಸೇಲೈ ಅಣಿದ ತಮಿಳು ಜ್ಯೋತ್ಯಮ್ಮನೂ, ಪೋಚಂಪಳ್ಳಿ ‘ಚೀರ ಧರಿಂಚು’ಕೊಂಡು ಬಂದಿದ್ದ ತೆಲುಗು ಜ್ಯೋತ್ಯಮ್ಮನೂ, ಕಾಸರಗೋಡು ಸೀರೆ ‘ತುತ್ತೊಂದು’ ಬಂದಿದ್ದ ತುಳು ಜ್ಯೋತ್ಯಮ್ಮನೂ ಎಲ್ಲರೂ ಸೇರ್ಕೊಂಡು ಉಪ್ಪು ಗಾಳಿಯಲಿ ತೆಪ್ಪವಾದರೋ; ಕಾವ್ಯ ಕನ್ನಿಕೆಯರಿಗೆ ಕಪ್ಪವಾದರೋ. ಇವರೆಲ್ಲರ ಸೀರೆಯ ಸೆರಗುಗಳು ಬೆರಗಿನಲೆ ಪಟಪಟಿಸಿ ತೆಂಕು ದೋಣಿಯ ಬಿಂಕದ ಹಾಯಿಗಳಾದವೋ; ಮತ್ಸ್ಯಗಂಧಿಯ ಕಾಮೋತ್ಸವಕೆ ಮಾಯಾ ಪಟಲ ಕಾಂಡಪಟಗಳಾದವೋ. ದೂರದಲೆ ಸಾಗರದ ಸಾಂದ್ರ ಸಂಗೀತದಲೆ ವ್ಯಾಸ ಮುನೀಂದ್ರ ರುಂದ್ರ ವಚನಾಬ್ಧಿ ಮೊರೆವುದೋ.
ಜ್ಯೋತ್ಯಮ್ಮಗಳೆಲ್ಲ ತಮ್ಮ ತಮ್ಮ ಪರಿಚಯ ಮಾಡ್ಕೊಂಡು ಪರಂಪರೆಯ ನೆನಪಿನ ಪಂಪನ್ನೊತ್ತಿ ಮೈಮನಗಳಿಗೆ ತಂಪೆರಚಿಕೊಂಡರೋ. ಹಿಂದೊಮ್ಮೆ ಕಲ್ಯಾಣದಲ್ಲೇ ಕೂಡಲ ಸಂಗಮವಾಗಿ, ಮುಂದ ದೇವನೂರರ ಕುಸುಮಬಾಲೆಯಲ್ಲಿ ಜಮಾಯಿಸಿ ಈಗ ಕನ್ಯಾಕುಮಾರಿಯಲ್ಲಿ ‘ಸಾಗರ ಸಂಗಮ’ ಆದವೋ. ಇದೆಂಥಾ ‘ಕಾರ್ಯ-ಕಾರಣಗಳ ಅಪೂರ್ವ ನಟನೆಯೋ’; ‘ಇಷ್ಟದೇವತಾ ವಿಗ್ರಹಕ್ಕೊಗಿಸುವ ಅಸಲು ಕಸುಬೊ’.
ಎಲ್ಲರೂ ತಮ್ಮತಮ್ಮಲ್ಲೇ ವಣಕ್ಕಂ, ನಮಸ್ಕಾರಮು, ನಮಸ್ಕಾರ, ನಮಸ್ಕಾರೋ, ನಮಸ್ಕಾರಂಗಳನ್ನು ಮಾಡಿಕೊಂಡಲ್ಲಿಗೆ ಕಾವ್ಯಜ್ಯೋತಿಗಳ ಕಣ್ಣ ಕೃಷ್ಣಮಣಿಗಳಲ್ಲೇ ಭರತನಾಟ್ಯ, ಕೂಚುಪ್ಪುಡಿ, ಸುಗ್ಗಿಕುಣಿತ, ಪಿಲಿಕುಣಿತ, ತಿರುವಾದಿರಗಳ ನರ್ತನಗಳಾದವೋ. ಬುರ‍್ರಕಥಾ, ಯಕ್ಷಗಾನ-ಬಯಲಾಟ, ಭೂತಕೋಲ, ಕಥಕ್ಕಳಿಗಳ ಸಮ್ಮೇಳಗಳಾದವೊ. ಪದಗಳ ಬಿತ್ತಿ, ಪದಗಳ ಬೆಳೆದರೋ, ಪದಗಳ ಬೆಳೆದು ಪದಗಳ ಕೊಯ್ದರೋ. ನಾಲಿಗೆಗೆ ನಿಲಿಸಿದ ಅಕ್ಷರ, ಎದೆಗೆ ಬಿದ್ದ ಅಕ್ಷರ ಎಲ್ಲ ಸೇರಿ ಜನಪದ-ಮಹಾಪದಗಳಾದವೋ.
ಜ್ಯೋತ್ಯಮ್ಮಗಳೋ ತಮ್ಮ ತಮ್ಮ ನಾಡಿನ ಕವಿಗಳ ಬೆಳಕಿನ ಕವಿತೆಗಳನ್ನೆಲ್ಲ ಕಡಲ ಕತ್ತಲಲ್ಲಿ ಕೂತು ಆಲಾಪಿಸುವುದಕ್ಕೆ ಶರೀರ-ಶಾರೀರಗಳ ಸರಿದೂಗಿಸಲಾಗಿ ಮಂದಮಾರುತವೊಂದು ತೆರೆಗಳ ಹೆಡೆ ಸವರಿ ಹಾರಿ ಹೋಯಿತೋ. ನೀರೊಳಗಣ ಮತ್ಸ್ಯಕನ್ಯೆಯರೆಲ್ಲ ರಂಗವನ್ನೂ ಅಂತರಂಗವನ್ನೂ ಹೊಕ್ಕು ಜಲತರಂಗಗಳಾದರೋ.
ಕನ್ನಡದ ಜ್ಯೋತ್ಯಮ್ಮ ಕವಿರಾಜ ಮಾರ್ಗ ಅಂಬೋದು ಹ್ಯಾಗೆ ಕನ್ನಡಿಯೂ ಕೈದೀವಿಗೆಯೂ ಎಂದು, ವಚನಕಾಲದ ಜಗಜ್ಯೋತಿಯನ್ನು ನೆನೆದು, ‘ಆಡಿದವರ ನಿಜವ ಬಲ್ಲೆ ನೀಡಿದವರ ಮನವಾ ಬಲ್ಲೆ’ ಎಂದು ಬೆಳಕಿನ ಬಟ್ಟೆಯ ತೆರೆದು, ಮಾತು ಜ್ಯೋತಿರ್ಲಿಂಗವಾಗುವ ಪರಿಯ ಹೇಳುತ್ತಾ ಶ್ರೀಯವರ ‘ಪ್ರಾರ್ಥನೆ’ಯ ‘ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ’ ಪಾಡಿದಳೋ.
ಆಗ ಮಲಯಾಳ ಜ್ಯೋತ್ಯಮ್ಮ ‘ಅದ್ ನ್ಯೂಮನ್ನಿಂದೆ ‘ಲೀಡ್ ಕೈಂಡ್ಲೀ ಲೈಟ್’ ಪೋಲೆಯಾಣಲ್ಲೋ’ ಎಂದಾಗ ಕನ್ನಡ ಜ್ಯೋತ್ಯಮ್ಮ, ‘ಅದರ ಹಾಗೆ ಅಲ್ಲಮ್ಮಣ್ಣೀ, ಅದರದ್ದೇ ಕನ್ನಡ ರೂಪ’ ಎಂದಾಗ, ಆ ಕಡಲು, ಆ ಹಡಗೂ, ಆ ಭೀಕರ ಬಿರುಗಾಳಿ, ಆ ಹೊಯ್ದಾಟ-ತೊಯ್ದಾಟಗಳೆಲ್ಲ ಅನುಭವವಾಗಿ ಜ್ಯೋತ್ಯಮ್ಮಗಳೆಲ್ಲ ತಮ್ಮತಮ್ಮ ದೀಪಗಳ ಭದ್ರವಾಗಿಸಿದರೋ.
‘ಬೇಂದ್ರೆ ಬೆಳಗು’ ‘ಚಾಲಾ ಬಾಗುಂದಿ’ ಎಂದು ತೆಲುಗು ಜ್ಯೋತ್ಯಮ್ಮ ಹೇಳಿದಾಗ ‘ಬೆಳಗು’ ಕವಿತೆಯನ್ನು ಮನದುಂಬಿ ಹಾಡಿ-
‘ಅರಿಯದು ಆಳವು ತಿಳಿಯದು ಮನವು
ಕಾಣದೋ ಬಣ್ಣಾ
ಕಣ್ಣಿಗೆ ಕಾಣದೋ ಬಣ್ಣಾ
ಶಾಂತಿರಸವೇ ಪ್ರೀತಿಯಿಂದ
ಮೈದೋರಿತಣ್ಣಾ
ಇದು ಬರಿ ಬೆಳಗಲ್ಲೋ ಅಣ್ಣಾ’ ಎಂದಳೋ. ಈ ಇರುಳು ಗವ್ವೆನ್ನುವ ಕತ್ತಲೂ ಕ್ಷಣಕಾಲ ಹರಿದು ಬೆಳಗು ಮೈದೋರಿತಲ್ಲೋ; ಇದು ಅಕ್ಕನ ಬೆಳಕೊ, ಅಣ್ಣನ ಬೆಳಕೋ, ಅಲ್ಲಮನ ಬೆಳಕೊ, ವೈದಿಕದ ಬೆಳಕೋ, ಅವೈದಿಕದ ಬೆಳಕೋ, ದ್ವೈತದ ಬೆಳಕೋ, ಅದ್ವೈತದ ಬೆಳಕೋ......
ಅದೇ ಹೊತ್ತಿಗೆ ತಮಿಳು ಜ್ಯೋತ್ಯಮ್ಮ ‘ಉಂಗಳ್ಕ್ ರಾಜರತ್ನಂ ಕವಿದೈ ತೆರಿಯುಂ. ತೆರಿಯಾದಾ’ ಎಂದಾಗ ಕನ್ನಡ ಜ್ಯೋತ್ಯಮ್ಮ ಹಿಗ್ಗಿನಲ್ಲಿ ರತ್ನಂ ಅವರ ‘ಗ್ನಾನದ್ ದೀಪ’ ಹೇಳ್ತಾ-
‘‘ದೀಪದ್ ತಾಕೆ ಬಂತಂದ್ರದೋ
ಕಾಲಿನ್ ಕೆಳಗೆ ನೆರಳು!
‘ಅಗ್ನಾನೆಲ್ಲ ಗ್ನಾನಕ್ ಸರಣು’
ಅನ್ನೋದು ಅದಕೆ ತಿರುಳು!’’- ಎಂದಳೋ. ‘ರುಂಬ ಅಳಗಾಯಿರ್ಕ್’ ಎಂದು ತಮಿಳು ಜ್ಯೋತ್ಯಮ್ಮ ತಲೆದೂಗಿದಳೋ, ತಲೆದೂಗಿ ಮತ್ತದೇ ದಾಟಿಯಲ್ಲಿ ಪೊಯ್ಗೈ ಆಳ್ವಾರರ ಕಾವ್ಯ ಆಲಾಪಿಸಿದಳೋ-
‘ವೈಯ್ಯುಂ ತಕಳಿಯಾ ವಾರ್ಕಡಲೇ ನೆಯ್ಯಾಗ ವೆಯ್ಯ ಕದಿರೋನ್ ವಿಳಕ್ಕಾಗ
ಸೆಯ್ಯ ಸುಡರ್ ಆಳಿಯಾನ್ ಅಡಿಕ್ಕೇ ಸುಟ್ಟಿನೇನ್ ಸೊಲ್ಮಾಲೈ ಇಡರಾಳಿ ನೀಂಕ್ಕುಗವೇ ಎನ್ರು’
(ಭೂಮಿ ಹಣತೆಯಾಗಿರಲು, ತೊಯ್ವ ಕಡಲೇ ತುಪ್ಪವಾಗಿರಲು, ಪ್ರಬಲ ಕಿರಣಗಳ ಸೂರ್ಯನೇ ಉರಿಯಾಗಿರಲು, ನಾನು ದೇವರಪಾದಕ್ಕೆ ಪದಗಳ ಮಾಲೆ ಹೆಣಿದೆ. ಕೆಂಪಗೆ ಉರಿಯ ಚಕ್ರವನು ಧರಿಸಿದವ, ಅವನ ಮೂಲಕ ನಾನು ದುಃಖ ಸಾಗರಗಳ ಈಸಬಲ್ಲೆ). ಹೇಳಿಕೇಳಿ ಕಾರ್ತಿಕ ದೀಪದ ವಿಚಾರ ಸಂಗಂ ತಮಿಳ್ ಸಾಹಿತ್ಯದ ಅಹನಾನ್ನೂರು ಪ್ರಸ್ತಾಪಗೊಂಡಿತೋ. ಕಾಂಚೀಪುರಂನ ಅರುಳ್ಪೆರುಮಾಳ್ ದೇವಸ್ಥಾನದ 16ನೇ ಶತಮಾನದ ಶಾಸನ ಕೂಡ ತಿರುಕಾರ್ತಿಗೈ ತಿರುನಾಳ್ ಹಬ್ಬದ ಕುರಿತೇ ಮಾತಾಡುವುದೋ.
ತೆಲುಗು ಜ್ಯೋತ್ಯಮ್ಮ, ನಂಡೂರಿ ವೆಂಕಟ ಸುಬ್ಬರಾವು ಅವರ ‘ದೀಪಂ’ ಕವಿತೆ ಎತ್ತಿಕೊಂಡು ‘ಆರಿ ಪೋಯವೇ ದೀಪಮೂ’ ಎಂದು ಹೇಳುತ್ತಾ ‘ಯೆಲುಗುಲೋ ನೀಮೀದ ನಿಲುಪಲೇನೇ ಮನಸು’ (ಆರಿಸಿಬಿಡೇ ದೀಪವನೂ. ಬೆಳಕಿನಲಿ ನಿನ್ನ ಮೇಲೆ ನಿಲ್ಲಿಸಲಾರೆನೇ ಮನಸ) ಎಂದಳೋ. ಬಳಿಕ ಅದೇ ತೆಲುಗು ಜ್ಯೋತ್ಯಮ್ಮ ದೇವರಾಜು ಮಹಾರಾಜು ಅವರ ‘ಲೈಟ್‌ಹೌಸ್’ ಕವಿತೆ ವಾಚಿಸಿದಾಗ ‘ಗುರುವಿನ ಬಗೆಗೆ ಎಂಥ ಚೆಂದದ ಕವಿತೆ’ ಎಂದು ಉಳಿದವರೆಲ್ಲ ಕಡಲ ನೀರಿಗೆ ಕಾಲುಬಡಿದರೋ.
ಇದೀಗ ತುಳು ಜ್ಯೋತ್ಯಮ್ಮನ ಸರದಿ. ತುಳುವರಿಗೆ ದೀಪಾವಳಿ ಎಂದರೆ ಬಲೀಂದ್ರ ಹಬ್ಬ. ‘ಯೇನ್ ಇತ್ತೆ ಬಲೀಂದ್ರ ಲೆಪ್ಪುನಿ ಪನ್ಪೆ’ (ನಾನೀಗ ಬಲೀಂದ್ರ ಕರೆಯುವುದನ್ನು ಹೇಳುತ್ತೇನೆ) ಎಂದು-
ಕಡಲ್‌ಗ್ ಪಾಂಪಾನಗ (ಸಮುದ್ರಕ್ಕೆ ಸೇತುವೆಯಾದಾಗ)
ಬಾನೊಗು ಲೆಂಚಿ ಆನಗ (ಆಕಾಶಕ್ಕೆ ಏಣಿಯಾದಾಗ)
ಗುರ್ಗುಂಜಿದ ಕಪ್ಪು ಮಾಜಿನಗ (ಗುರುಗುಂಜಿಯ ಕಪ್ಪು ಮಾಸಿದಾಗ)
ಮಜಲಕ್ಕಿ ಮೈ ಪಾಡ್‌ನಗ (ಮಜಲಕ್ಕಿ ಕಾಡಿಗೆ ಹಾಕುವಾಗ)
ಕೊಟ್ರುಂಜ ಕೊಡಿ ಏರ್ನಗ (ಕೊಟ್ರುಂಜ ಕೊಡಿ ಏರುವಾಗ)
ಉಪ್ಪು ಗೋಪುರಾನಗ (ಉಪ್ಪಿನ ಗೋಪುರವಾದಾಗ)
ಬೊರ್ಗಲ್ಲ್ ಪೂವಾನಗ (ಬೋರ್ಗಲ್ಲು ಹೂವಾದಾಗ)
ಆಟಿಡ್ ಬತ್ತಿ ಅಮಾಸೆ (ಆಟಿಯಲ್ಲಿ ಬರುವ ಅಮಾವಾಸ್ಯೆ)
ಸೋಣೊಡ್ ಬತ್ತಿ ಸಂಕ್ರಾಂದಿ (ಸೋಣದಲ್ಲಿ ಬರುವ ಸಂಕ್ರಾಂತಿ)
ಬೊಂತೆಲ್ಡ್ ಬತ್ತಿ ಕೊಡಿ ಪರ್ಬ (ಬೊಂತೆಲ್‌ನಲ್ಲಿ ಬರುವ ಕೊಡಿ ಹಬ್ಬ)
ಈ ಮೂಜಿ ದಿನತ್ತ ಬಲಿ ಕೊನೊದ್ ಈ ಬಲ್ತ್‌ಡ್ಲ್ ಬಲೀಂದ್ರ.... ಕೂ.... (ಈ ಮೂರರ ಬಲಿ ಕೊಂಡು ಓಡಿ ಹೋಗು ಬಲೀಂದ್ರ... ಕೂ....)
ಎಂದು ಬಲೀಂದ್ರ ಮರದ ಸುತ್ತ ಮನೆಯವರೆಲ್ಲ ಪ್ರದಕ್ಷಿಣೆ ಬರುತ್ತಾ ಅವಲಕ್ಕಿ, ಪಾದೆ ಹೂಗಳನ್ನು ಹಾಕುವ ದೃಶ್ಯ ನೆನಪಿಸಿಕೊಂಡಳೊ. ಮತ್ತೆ ಏನೋ ನೆನಪಾಗಿ ಯಶೋಧರ ಎನ್. ಆಚಾರ್ಯರ ‘ತುಳುಪರ್ಬ’ ಕವಿತೆ ಪಂಡಳೋ (ಹೇಳಿದಳೋ)-
‘ದೀಪಾವಳಿ ಬನ್ನಗ
ಬಲೀಂದ್ರರ್ ಬರ್ಪೆರ್
ಇಂದ್ರ ಚಂದ್ರ ಪೂರ ಕಣ್ಣರತ್‌ದ್ ತೂಪೆರ್
ಇಲ್ಲದ ತುಪ್ಪೆ.... ಬೆನ್ಪಿನ ಅಪ್ಪೆ....
ಪಚ್ಚೆ ಪಜೀರ್ ಕಂಡಡ್
ಪೆತ್ತ ಎರ್ಮೆಲು ಬರ್ಪಿನ ಗೋದೂಳಿದ ಪೊರ್ತುನು.’
ಅಷ್ಟೊತ್ತಿಗೆ ಮಲಯಾಳ ಜ್ಯೋತ್ಯಮ್ಮ-
‘ಮಾವೇಲಿ ನಾಡುಂ ವಾಣಿಡುಂ ಕಾಲಂ
ಮಾನುಷರೆಲ್ಲಾರು ಒನ್ನು ಪೋಲೆ
ಆಮೋದತ್ತೋಡೆ ವಸಿಕ್ಕುಂ ಕಾಲಂ
ಆಪತ್ತೇಙಾರ್ಕುಂ ಮುಟ್ಟಿಲ್ಲ ತಾನುಂ’
ಎಂದು ಕಳವಿಲ್ಲದ, ಮೋಸವಿಲ್ಲದ, ಕಳ್ಳತನಗಳಿಲ್ಲದ ಆದಿ ವ್ಯಾಧಿಗಳಿಲ್ಲದ ಬಲಿಯ ಆಳ್ವಿಕೆಯ ಕಾಲವನ್ನು ಹೊಗಳಿದಳೋ.
-ಹೀಗೆ ಜ್ಯೋತ್ಯಮ್ಮಗಳೆಲ್ಲ ತಮ್ಮ ತಮ್ಮ ಊರಿನ ಪದ ಪಾದಗಳನೆಲ್ಲ ಎದೆಗೊತ್ತಿಕೊಂಡು ಪಾಡುತ್ತಿರಲಾಗಿ ಕನ್ಯಾಕುಮಾರಿಯ ಕಡಲು ಕೆಂಪಾದವೋ. ಜ್ಯೋತ್ಯಮ್ಮಗಳೆಲ್ಲ ಕೆದರಿದ ಕೂದಲ ಕೊಡವಿ ಹೆಣಿಗೆ ಹಾಕಿಕೊಂಡೂ, ಸೀರೆಯ ನೆರಿಗೆ ನೇರ್ಪಡಿಸಿಕೊಂಡೂ, ಉಪ್ಪು ನೀರಲ್ಲೇ ಬಾಯಮುಕ್ಕಳಿಸಿಕೊಂಡೂ, ಭಾರವಾದ ಮನದ ಮದಗಜಗಮನೆಯರಾಗಿ ಮುಂದಲ ಊರಿಗೆ ಹೊರಟಾರಲ್ಲೋ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.