ಮನೆಯಲ್ಲಿ ಸದಾ ಸಂಪತ್ತು, ಸಮೃದ್ಧಿ ತುಂಬಿರಲಿ ಎಂಬ ಪ್ರಾರ್ಥನೆಯೊಂದಿಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇವರನ್ನು ಆರಾಧಿಸಲಾಗುತ್ತದೆ. ದೀಪಾವಳಿಗೆ ದೇವರ ಅಲಂಕಾರ ಹೇಗೆಲ್ಲ ಮಾಡಬಹುದು ಎಂಬುದಕ್ಕೆ ಇಲ್ಲಿದೆ ಮಾಹಿತಿ.
ಥೀಮ್ ಅಲಂಕಾರ: ದೇವರನ್ನು ಅಲಂಕರಿಸುವಾಗ ನೀವು ಯಾವುದಾದರೊಂದು ಥೀಮ್ ಅನುಸರಿಸಬಹುದು. ಅದು ಬಣ್ಣಗಳ ಕಾಂಬಿನೇಷನ್, ಹೂವುಗಳ ಅಲಂಕಾರ, ದೀಪಗಳ ಅಲಂಕಾರ, ಪೇಪರ್ ಕ್ರಾಫ್ಟ್‌ಗಳ ಮೂಲಕವೂ ಶೃಂಗರಿಸಬಹುದು.
ವಿಗ್ರಹಕ್ಕೆ ಸೀರೆ ಧಾರಣೆ: ಲಕ್ಷ್ಮೀದೇವಿಯ ಮೂರ್ತಿ ಅಥವಾ ಮುಖದ ಅಚ್ಚನ್ನು ಇಟ್ಟು ಪೂಜೆ ಮಾಡಬಹುದು. ಅದಕ್ಕೆ ಸೀರೆ ಉಡಿಸಿ ಅಂದವಾಗಿ ಅಲಂಕರಿಸಿ. ಸೀರೆ ಉಡಿಸುವ ವಿಧಾನವೂ ಸುಲಭ. ಮೊದಲು ಸೀರೆಯ ಸೆರಗನ್ನು ಮಾಡಿಕೊಂಡು ಅದನ್ನು ಎರಡು ಭಾಗವಾಗಿ ಮಡಚಿ ನೆರಿಗೆ ಮಾಡಿ. ನಂತರ ಅದನ್ನು ದೊಡ್ಡ ಬಿಂದಿಗೆಗೆ ಸುತ್ತಿ. ಬಿಂದಿಗೆಯ ಮುಂಭಾಗದಲ್ಲಿ ನೆರಿಗೆಗಳು ಬರುವಂತೆ ನೋಡಿಕೊಳ್ಳಿ. ಭುಜದಂತೆ ಕಾಣಲು ಸೀರೆಯ ಬ್ಲೌಸ್ ಪೀಸ್‌ನ್ನು ಸುರುಳಿ ಮಾಡಿ ಅದರೊಳಗೆ ಮೆತ್ತನೆಯ ಪೇಪರ್ ತುಂಬಿ ಬಿಂದಿಗೆಯ ಮೇಲಿಡಿ.
ಬಿಂದಿಗೆಯೊಳಗೆ ಅಕ್ಕಿಯನ್ನು ತುಂಬಿ ತೆಂಗಿನಕಾಯಿಯನ್ನು ಇರಿಸಿ, ಅದರ ಮೇಲೆ ದೇವಿಯನ್ನಿಟ್ಟು, ಒಡವೆ, ಹೂವುಗಳಿಂದ ಅಲಂಕರಿಸ ಬಹುದು.
ಫೋಟೊಗೆ ಪೂಜೆ ಮಾಡುವುದಾದರೆ: ನೀವೇನಾದರೂ ದೇವರ ಬೇರೆ ಬೇರೆ ಫೋಟೊವನ್ನಿಟ್ಟು ಪೂಜೆ ಮಾಡುವುದಾದರೆ ಹತ್ತಿಯ ಮಾಲೆಗಳನ್ನು ಅಂದರೆ ಗೆಜ್ಜೆವಸ್ತ್ರಗಳನ್ನು ಮಾಡಿ ಹಾಕಬಹುದು.
ಹತ್ತಿಯನ್ನು ಸುರುಳಿ ಮಾಡಿ ಹೂವಿನಾಕಾರದಲ್ಲಿ ಮಡಚಿ ಅದಕ್ಕೆ ಅರಿಶಿನ -ಕುಂಕುಮವನ್ನು ಹಚ್ಚಿದರೆ ಗೆಜ್ಜೆವಸ್ತ್ರ ಸಿದ್ಧ.
ತರಕಾರಿ ದೀಪಗಳ ಮೆರುಗು
ತರಕಾರಿಗಳನ್ನು ಕತ್ತರಿಸಿ ಅದರೊಳಗೆ ದೀಪಗಳನ್ನು ಇಟ್ಟರೆ ವಿಭಿನ್ನವಾಗಿ ಕಾಣುತ್ತದೆ. ಕಿತ್ತಳೆ ಹಣ್ಣು, ಕ್ಯಾರೆಟ್, ದೊಡ್ಡಮೆಣಸಿನ ಕಾಯಿ, ಟೊಮೆಟೊ ಹೀಗೆ ತರಹೇವಾರಿ ತರಕಾರಿಗಳನ್ನು ವಿವಿಧ ವಿನ್ಯಾಸದಲ್ಲಿ ಕತ್ತರಿಸಿ ಅದರೊಳಗೆ ಪುಟ್ಟ ದೀಪವಿಟ್ಟರೆ ಅದರ ಬೆಳಕಿಗೆ ತರಕಾರಿ ಬಣ್ಣವೂ ಮಿನುಗುತ್ತದೆ.
ರಂಗೋಲಿ ಚಿತ್ತಾರ: ಹಬ್ಬಗಳಿರಲಿ, ಸಾಮಾನ್ಯ ದಿನವೇ ಆಗಿರಲಿ, ಅಂಗಳದಲ್ಲಿ, ದೇವರ ಮುಂದೆ ರಂಗೋಲಿಯಿದ್ದರೆ, ಮನೆಯ ಕಳೆ ಹೆಚ್ಚುತ್ತದೆ. ಭಕ್ತಿ ಭಾವ ಮೂಡಿಸುತ್ತದೆ. ರಂಗೋಲಿಯಲ್ಲೂ ವೈವಿಧ್ಯ ಮೆರೆಯಬಹುದು.
ಹೂವುಗಳ ರಂಗೋಲಿ
ಕೇರಳದಲ್ಲಿ ಓಣಂ ಸಮಯದಲ್ಲಿ ಹಾಕುವ ಹೂವುಗಳ ರಂಗೋಲಿಯನ್ನು ದೀಪಾವಳಿ ಸಂದರ್ಭದಲ್ಲೂ ಹಾಕಬಹುದು. ಇದು ಪೂಜೆ ಆವರಣಕ್ಕೆ ಹೆಚ್ಚು ಮೆರುಗು ನೀಡುತ್ತದೆ.
ಸೇವಂತಿಗೆ, ಗುಲಾಬಿ, ಚೆಂಡು ಹೂ, ಪಾರಿಜಾತ ಹೀಗೆ ವಿವಿಧ ಬಣ್ಣಗಳ ಹೂವಿನ ಎಸಳುಗಳನ್ನು ರಂಗೋಲಿ ರೂಪದಲ್ಲಿ ನೆಲದ ಮೇಲೆ ಜೋಡಿಸಬಹುದು. ಅದರ ಮೇಲೆ ಒಂದೊಂದು ದೀಪವಿಟ್ಟರೆ ಅಂದ ಇಮ್ಮಡಿಯಾಗುತ್ತದೆ.
ಬಣ್ಣಗಳ ರಂಗೋಲಿ
ಮೊದಲು ಚಾಕ್‌ಪೀಸ್‌ನಿಂದ ನಿಮಗೆ ಬೇಕಾದ ಡಿಸೈನ್ ಬರೆದುಕೊಳ್ಳಿ. ಬಳಿಕ ಅದರ ಮೇಲೆ ಬಣ್ಣಗಳನ್ನು ತುಂಬುತ್ತಾ ಬನ್ನಿ, ನೆನಪಿಡಿ. ರಂಗೋಲಿ ಬಿಡಿಸುವುದು ಒಂದು ಕಲೆಯಾದರೆ, ಅದಕ್ಕೆ ಬಣ್ಣ ತುಂಬುವುದು ಕೂಡ ಕಲಾತ್ಮಕತೆಗೆ ಹಿಡಿದ ಕನ್ನಡಿ.
ಎಳೆಗಳ ರಂಗೋಲಿ
ಚುಕ್ಕಿಗಳನ್ನಿಟ್ಟು ಒಂದೊಂದಾಗಿ ಜೋಡಿಸುತ್ತಾ ಬೇಕಾದ ರೀತಿಯಲ್ಲಿ ವಿನ್ಯಾಸ ಮಾಡಬಹುದು. ಚುಕ್ಕಿ ರಂಗೋಲಿಗಳು ಬಿಡಿಸಲೂ ಸುಲಭ.
ದೇವ ದೇವತೆಗಳು ಸಿಂಗಾರಪ್ರಿಯರು ಎಂಬುದು ನಮ್ಮ ನಂಬಿಕೆ. ಹೀಗಾಗಿ ದೇವರ ಸಿಂಗಾರಕ್ಕೆ ಬಗೆಬಗೆಯ ಹೂವುಗಳನ್ನು ಬಳಸಿದರೂ ಭಕ್ತಿ ಭಾವ ಹೆಚ್ಚುತ್ತದೆ.
ದೇವರ ಮೂರ್ತಿಯನ್ನು ಅಲಂಕಾರ ಮಾಡುವುದು ಸೃಜನಾತ್ಮಕ ಕಲೆ. ಅಭಿರುಚಿಗೆ ತಕ್ಕ ಹಾಗೆ ವಿವಿಧ ರೀತಿಯಲ್ಲಿ ವಿನ್ಯಾಸ ಮಾಡಬಹುದು. ಈಗಂತೂ ಮಾರುಕಟ್ಟೆಯಲ್ಲಿ ಸಿದ್ಧ ದೀಪಗಳು, ಸೀರೆ, ಆಲಂಕಾರಿಕ ವಸ್ತುಗಳು ದೊರೆಯುತ್ತವೆ. ಅವುಗಳ ಮೂಲಕ ಸುಲಭವಾಗಿ ಅಲಂಕರಿಸಬಹುದು.–ಉಮಾ ಸರ್ವೇಶ್, ಗೃಹಿಣಿ
ರಂಗೋಲಿಗಳು ಮನೆಯಲ್ಲಿ ಧನಾತ್ಮಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಹೆಚ್ಚಿಸುತ್ತವೆ. ರಂಗೋಲಿ ಬಿಡಿಸುವುದು ಮನಸ್ಸಿಗೂ ಮುದ ನೀಡುತ್ತದೆ. ಅಲ್ಲದೆ ಕಡಿಮೆ ಖರ್ಚಿನಲ್ಲಿ ಮನೆ ಮತ್ತು ಪೂಜೆಯ ಮೆರುಗನ್ನು ಹೆಚ್ಚಿಸುತ್ತವೆ.–ಶ್ರೀಶಾ ಕಲ್ಕೂರು, ರಂಗೋಲಿ ಕಲಾವಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.