ADVERTISEMENT

ದೀಪಾವಳಿ: ನಿತ್ಯನೂತನ ಹಬ್ಬ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2024, 7:36 IST
Last Updated 31 ಅಕ್ಟೋಬರ್ 2024, 7:36 IST
ದೀಪಗಳ ಮನಮೋಹಕ ಬೆಳಕಿನಲ್ಲಿ ಪ್ರಕಾಶಿಸುತ್ತಿರುವ ವಾರಾಣಸಿಯ ಗಂಗಾ ಘಾಟ್‌ 
ದೀಪಗಳ ಮನಮೋಹಕ ಬೆಳಕಿನಲ್ಲಿ ಪ್ರಕಾಶಿಸುತ್ತಿರುವ ವಾರಾಣಸಿಯ ಗಂಗಾ ಘಾಟ್‌    

ವರ್ಣರಂಜಿತ ಹಬ್ಬ ದೀಪಾವಳಿ ಬಂದಿದೆ. ದೇಶ ಒಂದೇ ಆದರೂ ನೂರು ವಿಭಿನ್ನ ಸಂಸ್ಕೃತಿಗಳು ನೆಲೆಗೊಂಡಿರುವ ಭಾರತದ ಯಾವುದೇ ಮೂಲೆಗೆ ಹೋದರೂ ದೀಪಾವಳಿ ವೈಭವ ಕಾಣಸಿಗುತ್ತದೆ. ಆದರೆ ಅದನ್ನು ಕರೆಯುವ, ಆಚರಿಸುವ ವಿಧಾನಗಳು ಮಾತ್ರ ತುಸು ಭಿನ್ನ. ಸಂಭ್ರಮ ಮಾತ್ರ ನಿತ್ಯನೂತನ. 

ದೀಪಾವಳಿ ಎಂದರೆ ಬೆಳಕಿನ ಹಬ್ಬ ಎಂದು ಕರೆಯುವುದು ವಾಡಿಕೆ. ಆದರೆ ದೇಶದ ಬಹುತೇಕ ಜನಸಮುದಾಯಗಳಲ್ಲಿ ದೀಪಾವಳಿಯ ಆಚರಣೆ ಒಂದೇ ತೆರನಾಗಿಲ್ಲ. ಆಯಾ ಸಮುದಾಯಗಳು ತಮ್ಮ ಆಚರಣೆಗೆ ತಕ್ಕುದಾದ ಪೂಜಾ ವಿಧಾನಗಳನ್ನು ರೂಢಿಸಿಕೊಂಡಿವೆ. ನರಕಾಸುರನನ್ನು ಕೃಷ್ಣ ಕೊಂದ ಹಾಗೂ ರಾಮ 14 ವರ್ಷ ವನವಾಸ ಮುಗಿಸಿ ವಾಪಸಾದ ಕತೆಯ ಸುತ್ತವೇ ಬಹುತೇಕ ಆಚರಣೆಗಳು ನೆಲೆಗೊಂಡಿವೆ. ಕಾಶ್ಮೀರದಿಂದ ಕನ್ಯಾಕುಮಾರಿ ಹಾಗೂ ಹಿಮಾಚಲ ಪ್ರದೇಶದಿಂದ ಗುಜರಾತ್‌ವರೆಗೆ ನಾಲ್ಕೈದು ದಿನಗಳ ಕಾಲ ಮಿಂಚು ಹರಿಸುವ ಈ ಹಬ್ಬಕ್ಕೆ ತಿಮಿರ ಕಳೆಯುವ ಹಂಬಲ. ಸತ್ಯ, ಶಕ್ತಿ, ನ್ಯಾಯ ಎಂದೆಂದಿಗೂ ಶಾಶ್ವತ ಎಂದು ಸಾರುವ ತವಕ. 

ಕರ್ನಾಟಕದಲ್ಲಿ ಮೂರು ದಿನಗಳ ಕಾಲ ದೀಪಾವಳಿ ಸಂಭ್ರಮ ಮಾನೆಮಾಡಿರುತ್ತದೆ. ಅಮಾವಾಸ್ಯೆ, ನರಕ ಚತುರ್ದಶಿ ಮತ್ತು ಬಲಿ ಪಾಡ್ಯಮಿಗಳಂದು ದೀಪಾವಳಿ ಆಚರಣೆ ಇದೆ. ಲಕ್ಷ್ಮೀ ಪೂಜೆಗೆ ಹೆಚ್ಚು ಮಹತ್ವ. ಅಮಾವಾಸ್ಯೆಯ ದಿನ ವ್ಯಾಪಾರದ ಮಳಿಗೆಗಳಲ್ಲಿ ಲಕ್ಷ್ಮಿ ವಿಗ್ರಹವನ್ನು ಕೂರಿಸುವ ಸಂಪ್ರದಾಯವಿದೆ. ಸಿಹಿ ಅಡುಗೆ ಮಾಡುವ, ಹಿರಿಯರನ್ನು ಸ್ಮರಿಸುವ, ದೀಪ ಬೆಳಗುವ, ಪಟಾಕಿ ಸಿಡಿಸುವ ಆಚರಣೆಗಳನ್ನು ಸಾಮಾನ್ಯವಾಗಿ ಕಾಣಬಹುದು. 

ADVERTISEMENT

ತಮಿಳುನಾಡಿನಲ್ಲಿ ಒಂದಿಷ್ಟು ಹೊಸ ಆಚರಣೆಗಳನ್ನು ಕಾಣಬಹುದು. ಅಲ್ಲಿನ ಜನರು ನಸುಕಿನಲ್ಲಿ ಎದ್ದು ಎಣ್ಣೆಸ್ನಾನ ಮಾಡುವ ಪದ್ಧತಿ ಪಾಲಿಸಿಕೊಂಡು ಬಂದಿದ್ದಾರೆ. ಹಬ್ಬದೂಟಕ್ಕೂ ಮುನ್ನ, ದೀಪಾವಳಿಗೆಂದೇ ವಿಶೇಷವಾಗಿ ತಯಾರಿಸಲಾದ ಲೇಹ್ಯವನ್ನು ಸೇವಿಸುತ್ತಾರೆ. ಆಂಧ್ರಪ್ರದೇಶದಲ್ಲಿ ‘ಸತ್ಯಭಾಮ’ ಹೆಸರಿನ ಮಣ್ಣಿನ ದೇವತಾಮೂರ್ತಿಯನ್ನು ಪೂಜಿಸುವ ವಾಡಿಕೆಯಿದೆ. ನರಕಾಸುರನನ್ನು ಕೃಷ್ಣ ಹಾಗೂ ಸತ್ಯಭಾಮರು ಸೋಲಿಸಿದ್ದನ್ನು ಸ್ಮರಿಸಲಾಗುತ್ತದೆ.

ಪಶ್ಚಿಮ ಬಂಗಾಳದಲ್ಲಿ ಕಾಳಿಪೂಜೆ ಅಥವಾ ಶ್ಯಾಮಪೂಜೆ ಜೊತೆಗೆ ಬೆಳಕಿನ ಹಬ್ಬ ಅಡಿಯಿಡುತ್ತದೆ. ದೇವಸ್ಥಾನ ಹಾಗೂ ಮನೆಗಳಲ್ಲಿ ಕಾಳಿಗೆ ಅಲಂಕಾರ ಮಾಡಿ, ಸಿಹಿ ಪದಾರ್ಥ, ಅಕ್ಕಿ, ಮೀನು ನೈವೇದ್ಯ ಮಾಡಲಾಗುತ್ತದೆ. ದಕ್ಷಿಣೇಶ್ವರ, ಕಾಳಿಘಾಟ್ ಮೊದಲಾದ ದೇವಸ್ಥಾನಗಳು ಕಾಳಿಪೂಜೆಗೆ ಪ್ರಸಿದ್ಧವಾಗಿವೆ. ಕಾಳಿಪೂಜೆಯ ಮುನ್ನಾದಿನ ರಾತ್ರಿ ವೇಳೆ ಮನೆಗಳಲ್ಲಿ 14 ದೀಪಗಳನ್ನು ಹಚ್ಚುವ ಬಂಗಾಳಿಗರು ದುಷ್ಟಶಕ್ತಿಗಳಿಂದ ಮುಕ್ತಿ ಕೊಡುವಂತೆ ಪ್ರಾರ್ಥಿಸುತ್ತಾರೆ. ಇದನ್ನೇ ‘ಭೂತ ಚತುರ್ದಶಿ’ ಎಂದು ಕರೆಯುತ್ತಾರೆ. ಕೋಲ್ಕತ್ತ ಬಳಿಯ ಬಾರಸತ್‌ನಂತಹ ಸ್ಥಳಗಳಲ್ಲಿ, ಕಾಳಿ ಪೂಜೆಯು ದುರ್ಗಾ ಪೂಜೆಯಂತೆ ಅದ್ದೂರಿಯಾಗಿ ನಡೆಯುತ್ತದೆ. ಕಾಳಿ ಪೆಂಡಾಲ್‌ಗಳ ಪ್ರವೇಶದಲ್ಲಿ ಡಾಕಿನಿ ಮತ್ತು ಯೋಗಿನಿ ಎಂಬ ರಾಕ್ಷಸರ ಆಕೃತಿಗಳನ್ನು ಕಾಣಬಹುದು.

ದೆಹಲಿ, ಉತ್ತರ ಪ್ರದೇಶ, ಬಿಹಾರ, ಉತ್ತರಾಖಂಡ ಒಳಗೊಂಡಂತೆ ಉತ್ತರ ಭಾರತದಲ್ಲಿ ರಾಮ, ಸೀತೆ ಹಾಗೂ ಲಕ್ಷ್ಮಣ ವನವಾಸ ಮುಗಿಸಿ ವಾಪಸಾಗಿದ್ದನ್ನು ದೀಪಾವಳಿ ವೇಳೆ ಸಂಭ್ರಮಿಸಲಾಗುತ್ತದೆ. ಜನರು ಸರಯೂ ನದಿ ತಟದ 55 ಘಾಟ್‌ಗಳಲ್ಲಿ 25 ಲಕ್ಷ ದೀಪಗಳನ್ನು ಹಚ್ಚಿ ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡುತ್ತಾರೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳುವುದೇ ನಿಜದ ಹಬ್ಬ!

ಉತ್ತರ ಪ್ರದೇಶದಲ್ಲಿ ‘ದೇವ ದೀಪಾವಳಿ’ ಎಂದೂ ಇದನ್ನು ಕರೆಯಲಾಗುತ್ತದೆ. ‘ದೇಗುಲಗಳ ಬೀಡು ವಾರಾಣಸಿಯಲ್ಲಿ ಈ ಸಮಯದಲ್ಲಿ ದೇವತೆಗಳು ಪವಿತ್ರ ಗಂಗಾ ನದಿಯಲ್ಲಿ ಮುಳುಗುಹಾಕಲು ಬರುತ್ತಾರೆ’ ಎಂಬ ಪ್ರತೀತಿ ಇದೆ. ಅಗಣಿತ ದೀಪಗಳು ಮತ್ತು ಮನಮೋಹಕ ರಂಗೋಲಿಯಿಂದ ಅಲಂಕರಿಸಲಾದ ಗಂಗಾ ನದಿತಟಗಳಲ್ಲಿ ದೀಪಗಳನ್ನು ಹಚ್ಚಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಕಾರ್ತೀಕ ಮಾಸದ ಹುಣ್ಣಿಮೆಯಂದು ದೇವ ದೀಪಾವಳಿ ಸಂಪನ್ನವಾಗುವ ಮೂಲಕ 15 ದಿನಗಳ ಆಚರಣೆ ಪೂರ್ಣಗೊಳ್ಳುತ್ತದೆ.

ಒಡಿಶಾ ರಾಜ್ಯದ ಜನರು ದೀಪಾವಳಿಯಂದು ‘ಕೌಡಿಯಾ ಕಥಿ’ ಎಂಬ ಆಚರಣೆಯಲ್ಲಿ ತೊಡಗುತ್ತಾರೆ. ಸ್ವರ್ಗವಾಸಿಗಳಾದ ತಮ್ಮ ಪೂರ್ವಜರಿಗೆ ಪೂಜೆ ಸಲ್ಲಿಸುತ್ತಾರೆ. ಸೆಣಬಿನ ಕಟ್ಟಿಗೆಯನ್ನು ಸುಡುವ ಮೂಲಕ ಹಿರಿಯರ ಆಶೀರ್ವಾದ ಬೇಡುತ್ತಾರೆ. ದೀಪಾವಳಿಯ ಅಂಗವಾಗಿ ಲಕ್ಷ್ಮಿ, ಗಣೇಶ ಹಾಗೂ ಕಾಳಿಯನ್ನು ಪೂಜಿಸುತ್ತಾರೆ.

ಗೋವುಗಳನ್ನು ಆರಾಧಿಸುವ ‘ವಸು ಬರಸ್’ ಆಚರಣೆಯೊಂದಿಗೆ ಮಹಾರಾಷ್ಟ್ರದ‌ಲ್ಲಿ ದೀಪಾವಳಿ ಆಚರಣೆ ಶುರುವಾಗುತ್ತದೆ. ಧನ್‌ತೆರಾಸ್ ಆಚರಣೆ ಮೂಲಕ ಮೊದಲ ವೈದ್ಯ ಧನ್ವಂತರಿಯನ್ನು ಸ್ಮರಿಸಲಾಗುತ್ತದೆ. ಲಕ್ಷ್ಮೀ ಪೂಜೆ ನೆರವೇರಿಸಲಾಗುತ್ತದೆ. ಪತಿ ಮತ್ತು ಪತ್ನಿಯ ಪ್ರೀತಿಯನ್ನು ಸಂಭ್ರಮಿಸುವ ‘ದೀಪಾವಳಿ ಚಾ ಪಾಡ್ವಾ’ ಇಲ್ಲಿನ ವಿಶೇಷಗಳಲ್ಲೊಂದು. ಭಾವ್ ಬಿಜ್ ಮತ್ತು ತುಳಸಿ ವಿವಾಹದ ಮೂಲಕ ದೀಪಾವಳಿ ಮುಕ್ತಾಯಗೊಂಡು, ಮದುವೆ ಸಮಾರಂಭಗಳು ಇಲ್ಲಿಂದ ಆರಂಭವಾಗುತ್ತವೆ.

ದೀಪಾವಳಿಯ ಮೂಲಕ ಗುಜರಾತಿಗಳ ವರ್ಷ ಕೊನೆಗೊಳ್ಳುತ್ತದೆ. ದೀಪಾವಳಿಯ ನಂತರದ ದಿನ ಹೊಸ ವರ್ಷ ‘ಬೆಸ್ತು ವರಸ್’ ಅಡಿಯಿಡುತ್ತದೆ. ವಾಗ ಬರಸ್‌ನಿಂದ ಶುರುವಾಗುವ ಆಚರಣೆಗಳು ಧನ್‌ತೆರಾಸ್, ಕಾಳಿ ಚೌದಶ, ದೀಪಾವಳಿ, ಬೆಸ್ತು ಬರಸ್, ಭಾಯ್ ಬಿಜ್‌ವರೆಗೆ ಮುಂದುವರಿಯುತ್ತವೆ.

ನರಕಾಸುರನನ್ನು ವಧೆ ಮಾಡಿದ ಕೃಷ್ಣನನ್ನು ಸ್ಮರಿಸಲು ಗೋವಾ ಜನರು ದೀಪಾವಳಿ ಆಚರಿಸುತ್ತಾರೆ. ದೀಪಾವಳಿಯ ಮುನ್ನಾ ದಿನ ನರಕ ಚತುರ್ದಶಿಯಂದು ನರಕಾಸುರನ ಬೃಹತ್ ಪ್ರತಿಕೃತಿಯನ್ನು ದಹಿಸಲಾಗುತ್ತದೆ. ಗೋವಾ ಮತ್ತು ದಕ್ಷಿಣ ಭಾರತದ ಕೆಲವು ಭಾಗಗಳಲ್ಲಿ ತೆಂಗಿನ ಎಣ್ಣೆಯನ್ನು ಜನರು ದೇಹಕ್ಕೆ ಲೇಪಿಸಿಕೊಳ್ಳುವ ವಾಡಿಕೆಯಿದೆ. ಸಾವಿರಾರು ಸಮುದಾಯಗಳು ಸಾವಿರಾರು ಆಚರಣೆಗಳನ್ನು ಪಾಲಿಸಿದರೂ ಇವೆಲ್ಲವುಗಳ ಆಶಯ, ದುಷ್ಟಶಕ್ತಿಗಳ ವಿರುದ್ಧದ ಸಂಘರ್ಷದಲ್ಲಿ ಗೆಲುವಿನ ಬೆಳಕನ್ನು ಹೊತ್ತಿಸುವ ಮೂಲತತ್ವವೇ ವಿಜೃಂಭಿಸುತ್ತದೆ.

ಪಂಜಾಬ್‌ನ ಅಮೃತಸರದಲ್ಲಿ ದೀಪಾವಳಿಯ ಮರುದಿನ ‘ಫತೇ ದಿವಸ್’ ಆಚರಿಸುವ ‘ನಿಹಾಂಗ್‌’ ಸಮುದಾಯದವರು ಕುದುರೆ ಸವಾರಿ ಕೌಶಲ ಪ್ರದರ್ಶಿಸುವ ಸಂಪ್ರದಾಯವಿದೆ
ಕೇರಳದ ಕೋಯಿಕ್ಕೋಡ್‌ ಕಡಲತೀರದಲ್ಲಿ ದೀಪಾವಳಿ ಆಚರಣೆಯ ಭಾಗವಾಗಿ ಜನರು ಬಲಿ ತರ್ಪಣ ನೀಡುತ್ತಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.