ADVERTISEMENT

Bakrid 2022: ಬಕ್ರೀದ್‌ನ ಸಂದೇಶ, ಹಬ್ಬದ ಆಚರಣೆ ಮತ್ತು ಹಜ್‌ ಯಾತ್ರೆ

ಮಹಮ್ಮದ್ ನೂಮಾನ್
Published 10 ಜುಲೈ 2022, 2:47 IST
Last Updated 10 ಜುಲೈ 2022, 2:47 IST
ಹಜ್‌ ಯಾತ್ರಿಕರು ಮಕ್ಕಾದ ಗ್ರಾಂಡ್‌ ಮಸೀದಿಯಲ್ಲಿ ಪ್ರಾರ್ಥನೆಯಲ್ಲಿ ತೊಡಗಿರುವುದು –ಎಎಫ್‌ಪಿ ಚಿತ್ರ
ಹಜ್‌ ಯಾತ್ರಿಕರು ಮಕ್ಕಾದ ಗ್ರಾಂಡ್‌ ಮಸೀದಿಯಲ್ಲಿ ಪ್ರಾರ್ಥನೆಯಲ್ಲಿ ತೊಡಗಿರುವುದು –ಎಎಫ್‌ಪಿ ಚಿತ್ರ   

ಪ್ರವಾದಿ ಇಬ್ರಾಹಿಂ ಅವರ ತ್ಯಾಗ-ಬಲಿದಾನಗಳ ನೆನಪಿನಲ್ಲಿ ಆಚರಿಸುವ ಹಬ್ಬವೇ ‘ಈದುಲ್‌ ಅದ್‌ಹಾ’. ಭಾರತದಲ್ಲಿ ಈ ಹಬ್ಬ ‘ಬಕ್ರೀದ್‌’ ಎಂದೇ ಪ್ರಸಿದ್ಧಿ ಪಡೆದುಕೊಂಡಿದೆ. ದೇಶದಾದ್ಯಂತ ಮುಸ್ಲಿಮರು ಇಂದು (ಜುಲೈ 10) ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

‘ರಂಜಾನ್’ ತಿಂಗಳ ಉಪವಾಸದ ಬಳಿಕ ‘ಈದುಲ್‌ ಫಿತ್ರ್’ ಹಬ್ಬ ಆಚರಿಸುವುದಾದರೆ, ಇಸ್ಲಾಮಿಕ್‌ ಕ್ಯಾಲೆಂಡರಿನ ‘ದುಲ್‌ ಹಜ್ಜ್‌’ ತಿಂಗಳ 10ರಂದು ಬಕ್ರೀದ್‌ ಆಚರಣೆ ನಡೆಯುತ್ತದೆ.

ನಾಲ್ಕು ಸಾವಿರ ವರ್ಷಗಳಿಗೂ ಹಿಂದೆ ಹುಟ್ಟಿದ್ದ ಪ್ರವಾದಿ ಇಬ್ರಾಹಿಂ ಅವರ ತ್ಯಾಗವನ್ನು ನೆನಪಿಸುವುದು ‘ಬಕ್ರೀದ್’ನ ಮುಖ್ಯ ಆಶಯ. ಇಬ್ರಾಹಿಂ ಅವರು ಪ್ರವಾದಿ ಮುಹಮ್ಮದ್‌ ಅವರಿಗಿಂತ ಎರಡೂವರೆ ಸಾವಿರ ವರ್ಷಗಳ ಹಿಂದೆ ಹುಟ್ಟಿದ್ದರು.

ADVERTISEMENT

ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವುದು, ಸೋದರತ್ವ ಬೆಳೆಸಿಕೊಳ್ಳುವುದು, ದೇವನಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧರಾಗಬೇಕು ಎಂಬ ಸಂದೇಶವನ್ನು ಈ ಹಬ್ಬ ಸಾರುತ್ತದೆ.

ಹಬ್ಬದ ಆಚರಣೆ: ಬಕ್ರೀದ್‌ನ ದಿನ ಬೆಳಿಗ್ಗೆ ಈದ್ಗಾಗಳು ಮತ್ತು ಮಸೀದಿಗಳಲ್ಲಿ ಸಾಮೂಹಿಕ ಈದ್ ನಮಾಜ್‌ ಇರುತ್ತದೆ. ಮಕ್ಕಳು, ಹಿರಿಯರು ಹೊಸ ಉಡುಗೆ ತೊಟ್ಟು ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವರು. ನಮಾಜ್‌ಗೂ ಮುನ್ನ ಕೆಲ ಹೊತ್ತು ‘ತಕ್ಬೀರ್‌’ ಮೊಳಗಿಸಲಾಗುತ್ತದೆ.

ನಮಾಜ್‌ ಬಳಿಕ ಪರಸ್ಪರ ಶುಭಾಶಯ ತಿಳಿಸಿ, ಗೆಳೆಯರ ಮತ್ತು ಸಂಬಂಧಿಕರ ಮನೆಗೆ ಭೇಟಿ ನೀಡುವರು. ಯಾವುದಾದರೂ ಕಾರಣದಿಂದ ಕೋಪಿಸಿಕೊಂಡಿರುವರು ಕೂಡ ದ್ವೇಷವನ್ನು ಮರೆತು ಶುಭಾಶಯ ವಿನಿಮಯ ಮಾಡುವರು. ವ್ಯಕ್ತಿಗಳು, ಕುಟುಂಬಗಳ ನಡುವೆ ಬಾಂಧವ್ಯ ಬೆಳೆಯಲು ಹಬ್ಬ ನೆರವಾಗುತ್ತದೆ.

ಮನೆಗಳಲ್ಲಿ ಹಬ್ಬದ ಊಟ, ವಿಶೇಷ ಖಾದ್ಯಗಳನ್ನು ತಯಾರಿಸುವರು. ಗೆಳೆಯರು, ಬಂಧುಗಳನ್ನು ಆಹ್ವಾನಿಸಿ ಜೊತೆಯಾಗಿ ಊಟ ಮಾಡಿ, ಸಂಭ್ರಮ ಹಂಚಿಕೊಳ್ಳುವರು. ಹಬ್ಬದ ದಿನ ದಾನವಾಗಿ ದೊರೆಯುವ ಮಾಂಸ, ಹಣ, ದಿನಸಿ ಸಾಮಗ್ರಿಗಳಿಂದ ಎಷ್ಟೋ ಬಡಕುಟುಂಬಗಳಿಗೂ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ಕಲ್ಪಿಸುತ್ತದೆ.

ಜಾನುವಾರು ಬಲಿ: ಜಾನುವಾರು ಬಲಿ ನೀಡುವುದು ‘ಬಕ್ರೀದ್‌’ನ ಪ್ರಮುಖ ಆಚರಣೆಯಾಗಿದೆ. ಪ್ರವಾದಿ ಇಬ್ರಾಹಿಂ ಅವರ ಜೀವನದಲ್ಲಿ ನಡೆದಿದ್ದ ಘಟನೆಯೊಂದರ ನೆನಪಿನಲ್ಲಿ ಜಾನುವಾರು ಬಲಿ ನೀಡಲಾಗುತ್ತದೆ.

ಅಲ್ಲಾಹನ ಆದೇಶದಂತೆ ಇಬ್ರಾಹಿಂ, ತಮ್ಮ ಪುತ್ರ ಇಸ್ಮಾಯಿಲ್‌ ಅವರನ್ನು ಬಲಿಯರ್ಪಿಸಲು ಮುಂದಾಗುವರು. ತಮ್ಮ ಮಗನನ್ನೇ ಬಲಿ ನೀಡಲು ಸಿದ್ಧವಾಗಿದ್ದ ಇಬ್ರಾಹಿಂ ಅವರ ಭಕ್ತಿಯನ್ನು ಅಲ್ಲಾಹನು ಮೆಚ್ಚಿ ಪುತ್ರನ ಬದಲು ಒಂದು ಟಗರನ್ನು ಬಲಿಯರ್ಪಿಸುವಂತೆ ಸೂಚಿಸುತ್ತಾರೆ ಎಂದು ಮುಸ್ಲಿಮರ ಧರ್ಮಗ್ರಂಥದಲ್ಲಿ ತಿಳಿಸಲಾಗಿದೆ.

ಇಬ್ರಾಹಿಂ ಅವರ ತ್ಯಾಗವನ್ನು ನೆನಪಿಸಲು ಹಬ್ಬದ ದಿನ ಜಾನುವಾರು ಬಲಿ ಅರ್ಪಿಸಲಾಗುತ್ತದೆ. ಆರ್ಥಿಕವಾಗಿ ಸಬಲರಾಗಿರುವ ಎಲ್ಲರೂ ಪ್ರಾಣಿಬಲಿ ನೀಡಬೇಕು. ಪ್ರಾಣಿಯಿಂದ ಲಭಿಸಿದ ಮಾಂಸವನ್ನು ಸಮನಾಗಿ ಮೂರು ಪಾಲು ಮಾಡಬೇಕು. ಅದರಲ್ಲಿ ಒಂದು ಭಾಗವನ್ನು ಸ್ವತಃ ಬಳಸಿಕೊಳ್ಳಬಹುದು. ಇನ್ನೆರಡು ಪಾಲುಗಳನ್ನು ಸಂಬಂಧಿಕರು ಹಾಗೂ ಬಡವರಿಗೆ ಹಂಚಬೇಕು.

ಹಜ್‌ ಯಾತ್ರೆ

ಸೌದಿ ಅರೇಬಿಯಾದ ಮಕ್ಕಾದಲ್ಲಿ ಪವಿತ್ರ ಹಜ್‌ ಯಾತ್ರೆ ನಡೆಯುವ ಸಮಯದಲ್ಲೇ ಈ ಹಬ್ಬ ಆಚರಿಸಲಾಗುತ್ತದೆ. ಜೀವನದಲ್ಲಿ ಒಂದು ಬಾರಿಯಾದರೂ ಹಜ್‌ ಯಾತ್ರೆ ಕೈಗೊಳ್ಳಬೇಕು ಎಂದು ಇಸ್ಲಾಂ ಹೇಳುತ್ತದೆ. ಹಜ್‌ನ ಧಾರ್ಮಿಕ ವಿಧಿ-ವಿಧಾನಗಳು ಈ ಹಬ್ಬದೊಂದಿಗೆ ಮುಕ್ತಾಯಗೊಳ್ಳುತ್ತದೆ.

ಬಕ್ರೀದ್‌ ಮುನ್ನಾದಿನ ಅಥವಾ ‘ದುಲ್‌ ಹಜ್ಜ್’ ತಿಂಗಳ ಒಂಬತ್ತರಂದು ಹಜ್‌ ಯಾತ್ರಿಕರು ಮಕ್ಕಾ ನಗರದ ಅರಫಾತ್ ಎಂಬ ಬೆಟ್ಟದ ಬಳಿ ಸೇರುತ್ತಾರೆ. ಈ ಯಾತ್ರಿಕರಿಗೆ ಬೆಂಬಲ ನೀಡಲು ವಿಶ್ವದಾದ್ಯಂತ ಮುಸ್ಲಿಮರು ಈ ದಿನ ಉಪವಾಸವಿರುತ್ತಾರೆ.

ಈ ಬಾರಿ ವಿದೇಶದ 8.50 ಲಕ್ಷ ಯಾತ್ರಿಕರು ಸೇರಿದಂತೆ ಒಟ್ಟು 10 ಲಕ್ಷ ಮಂದಿಗೆ ಹಜ್‌ನಲ್ಲಿ ಪಾಲ್ಗೊಳ್ಳಲು ಸೌದಿ ಸರ್ಕಾರ ಅವಕಾಶ ನೀಡಿದೆ. ಕೋವಿಡ್‌ಗೆ ಮುಂಚೆ ಅಂದರೆ 2019 ರಲ್ಲಿ ಸುಮಾರು 25 ಲಕ್ಷ ಮಂದಿ ಹಜ್‌ನಲ್ಲಿ ಭಾಗವಹಿಸಿದ್ದರು. ಕೋವಿಡ್‌ ಕಾರಣ 2020 ಮತ್ತು 2021ರಲ್ಲಿ ವಿದೇಶಿಯರಿಗೆ ಹಜ್‌ಗೆ ಅವಕಾಶ ನೀಡಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.