ಭಾರತೀಯ ಸಂಸ್ಕೃತಿಯ ಮುಖ್ಯ ಲಕ್ಷಣಗಳಲ್ಲಿ ಒಂದು ದೇವತೆಗಳ ಕಲ್ಪನೆ. ವೇದಗಳ ಕಾಲದಿಂದಲೂ ದೇವತೆಗಳು ನಮ್ಮ ಸಂಸ್ಕೃತಿಯ ಮೇಲೆ ಹಲವು ಸ್ತರಗಳಲ್ಲಿ ಪ್ರಭಾವವನ್ನು ಮೂಡಿಸುತ್ತಿದ್ದಾರೆ. ಇದರ ಜೊತೆ ಜೊತೆಗೇ ಹಬ್ಬ, ವ್ರತ ಮತ್ತು ಪರ್ವಗಳ ಕಲ್ಪನೆಯೂ ಸೇರಿಕೊಂಡಿದೆ. ನಾವು ಆಚರಿಸುವ ಪ್ರತಿ ಹಬ್ಬ–ವ್ರತಗಳಿಗೂ ಯಾವುದಾದರೊಂದು ದೇವತೆಯ ನಂಟು ಇದ್ದೇ ಇರುತ್ತದೆ. ನಮ್ಮಲ್ಲಿ ದೇವತೆಗಳ ಸಂಖ್ಯೆಯೂ ಅಪಾರ; ಸುಮಾರು ಮೂರು ಕೋಟಿ ದೇವತೆಗಳು ಎಂಬ ಎಣಿಕೆ ಉಂಟು. ಹೀಗೆಯೇ ವ್ರತ–ಹಬ್ಬಗಳ ಸಂಖ್ಯೆ ಕೂಡ; ಒಂದು ವರ್ಷದಲ್ಲಿ ಸುಮಾರು ಆರುನೂರಕ್ಕೂ ಹೆಚ್ಚು ವ್ರತ–ಹಬ್ಬಗಳ ಆಚರಣೆಯನ್ನು ವಿದ್ವಾಂಸರು ಗುರುತಿಸಿದ್ದಾರೆ. ಇಷ್ಟೆಲ್ಲ ದೇವತೆಗಳ ಬಗ್ಗೆಯೂ ಹಬ್ಬಗಳ ಬಗ್ಗೆಯೂ ತಿಳಿದುಕೊಳ್ಳುವುದು ಸಾಹಸವೇ ಹೌದು. ಆದರೆ ಕೆಲವೊಂದು ದೇವತೆ–ಹಬ್ಬಗಳ ಬಗ್ಗೆಯಾದರೂ ತಿಳಿದುಕೊಂಡರೆ ಆಗ ನಾವು ಆಚರಿಸುವ ಹಲವು ಧಾರ್ಮಿಕ ವಿಧಿ–ವಿಧಾನಗಳ ಸ್ವಾರಸ್ಯ–ಮಹತ್ವ ಸ್ವಲ್ಪವಾದರೂ ಅರಿವಾಗುತ್ತದೆ. ಈ ದೃಷ್ಟಿಯಿಂದ ನಮಗೆ ಕೈಪಿಡಿಯಂತೆ ನೆರವಾಗುತ್ತದೆ, ಮ. ಶ್ರೀಧರಮೂರ್ತಿ ಅವರ ’ದೇವತೆಗಳು ಮತ್ತು ಹಬ್ಬಗಳು.‘
ಗಣಪತಿ, ಶ್ರೀಲಕ್ಷ್ಮೀ, ಜ್ಯೇಷ್ಠಾಲಕ್ಷ್ಮೀ, ಸರಸ್ವತೀ, ಶ್ರೀದೇವೀ, ಸೂರ್ಯ, ದತ್ತಾತ್ರೇಯ, ಹನೂಮಾನ್, ಶ್ರೀರಾಮ ಮತ್ತು ಶ್ರೀಕೃಷ್ಣ – ಇಷ್ಟು ದೇವತೆಗಳ ಬಗ್ಗೆ ಪರಿಚಯಾತ್ಮಕ ಪ್ರಬಂಧಗಳು ಈ ಕೃತಿಯಲ್ಲಿವೆ. ದೇವತೆಗಳ ಕಲ್ಪನೆ, ಅವುಗಳಿಗೆ ಆಧಾರ, ಪ್ರಾಚೀನ ಉಲ್ಲೇಖ, ಅವರ ವಿಶೇಷತೆಗಳ ಬಗ್ಗೆ ವಿವರಗಳಿವೆ. ಹಬ್ಬಗಳ ಪಟ್ಟಿಯಲ್ಲಿ ಯುಗಾದಿ, ನವರಾತ್ರಿ, ದೀಪಾವಳಿ, ಮಕರಸಂಕ್ರಾಂತಿ, ಕಾಮನಹಬ್ಬಗಳು ಸೇರಿವೆ.
ಇವುಗಳ ಜೊತೆಗೆ ರಾಸಲೀಲೆ, ಕಲಶ, ಕಲ್ಪವೃಕ್ಷ, ಆಯುಧಗಳು ಮತ್ತು ಲಾಂಛನಗಳ ಬಗ್ಗೆಯೂ ಲೇಖನಗಳಿವೆ. ಕರಗ ಮತ್ತು ಕಡಲೇಕಾಯಿ ಪರಿಷೆ ಬಗ್ಗೆಯೂ ಇಲ್ಲಿ ಲೇಖನಗಳಿರುವುದು ವಿಶೇಷ. ಒಟ್ಟಿನಲ್ಲಿ ಭಾರತೀಯ ಸಂಸ್ಕೃತಿಯ ಧಾರ್ಮಿಕತೆಯ ಹಲವು ಮೌಲಿಕ ವಿವರಗಳನ್ನು ಈ ಕೃತಿ ಸರಳವಾಗಿಯೂ ಸರಸವಾಗಿಯೂ ತಿಳಿಸಿಕೊಡುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.