ಶಿವಭಕ್ತರು ಪಾರ್ಥಿವಲಿಂಗವನ್ನು ಪೂಜಿಸಬೇಕಾದ ವಿಧಾನವನ್ನು ಸೂತಮುನಿ ಮತ್ತಷ್ಟು ತಿಳಿಸುತ್ತಾನೆ.
ಗೃಹ್ಯಸೂತ್ರದಲ್ಲಿ ಹೇಳಿರುವ ವಿಧಿಯಂತೆ ನಿತ್ಯಕರ್ಮಗಳನ್ನೆಲ್ಲಾ ಆಚರಿಸಿದ ಬಳಿಕ ಶಿವನನ್ನು ಸ್ಮರಿಸುತ್ತಾ ಭಸ್ಮ ಮತ್ತು ರುದ್ರಾಕ್ಷಿಗಳನ್ನು ಧರಿಸಿಕೊಂಡು ಪಾರ್ಥಿವಲಿಂಗವನ್ನು ಪೂಜಿಸಬೇಕು. ಇದಕ್ಕಾಗಿ ನದಿಯ ದಡ, ಸರೋವರತೀರ, ಬೆಟ್ಟ ಮತ್ತು ಶಾಂತವಾದ ಅರಣ್ಯ, ಶಿವದೇವಾಲಯಗಳಂಥ ಶುದ್ಧವಾದ ಪ್ರದೇಶದಲ್ಲಿ ಮಣ್ಣನ್ನು ಜಲದಿಂದ ಶೋಧಿಸಿ, ವೇದೋಕ್ತವಿಧಿಯಂತೆ ಪಾರ್ಥಿವಲಿಂಗವನ್ನು ನಿರ್ಮಿಸಬೇಕು. ‘ನಮಃ ಶಿವಾಯ’ ಎಂಬ ಮಂತ್ರದಿಂದ ಪೂಜಾಸಾಮಗ್ರಿಗಳನ್ನು ಪ್ರೋಕ್ಷಿಸಬೇಕು. ಭೂರಸಿ ಎಂಬ ಮಂತ್ರದಿಂದ ಕ್ಷೇತ್ರಸಿದ್ಧಿಯನ್ನು ಮಾಡಬೇಕು. ‘ಆಪೋ ಸ್ಮಾò’ ಎಂಬ ಮಂತ್ರದಿಂದ ಜಲಶುದ್ಧಿಯನ್ನು ಮಾಡಬೇಕು. ‘ನಮಸ್ತೇ ರುದ್ರ’ ಎಂಬ ಮಂತ್ರದಿಂದ ಘಾಟಿಕಾಬಂಧ ಮಾಡಬೇಕು. ‘ನಮಃ ಶಂಭವಾಯ’ ಎಂಬ ಮಂತ್ರದಿಂದ ಪಂಚಾಮೃತಗಳಿಗೆ ಪ್ರೋಕ್ಷಣ ಮಾಡಬೇಕು. ‘ನೀಲಗ್ರೀವಾಯ ನಮಃ’ ಎಂಬ ಮಂತ್ರದಿಂದ ಶಿವಲಿಂಗವನ್ನು ಭಕ್ತಿಯಿಂದ ಪ್ರತಿಷ್ಠಾಪಿಸಬೇಕು. ಬಳಿಕ ‘ಎತತ್ತೇ ರುದ್ರಾಯ’ ಎಂಬ ಮಂತ್ರದಿಂದ ಆಸನವನ್ನು, ‘ಮಾನೋಮಹಾಂತಂ’ ಎಂಬ ಮಂತ್ರದಿಂದ ಶಿವನನ್ನು ಆವಾಹನೆ ಮಾಡಬೇಕು. ‘ಯಾತೇ ರುದ್ರ’ ಎಂಬ ಮಂತ್ರದಿಂದ ಉಪದೇಶ(ಕೂರಿಸುವಿಕೆ)ವನ್ನು ಮಾಡಬೇಕು.
(ಮುಂದಿನ ಶ್ಲೋಕಗಳಲ್ಲಿ ಹೇಳಿರುವ ಮಂತ್ರಗಳು ಯಜುರ್ವೇದದ ರುದ್ರಾಧ್ಯಾಯದಲ್ಲಿವೆ. ತೈ.ಸಂ. 4-5)
‘ಯಾಮಿಷುಂ’ ಎಂಬ ಮಂತ್ರದಿಂದ ಶಿವನಿಗೆ ನ್ಯಾಸವನ್ನೂ, ‘ಆಧ್ಯವೋಚತ್’ ಎಂಬ ಮಂತ್ರದಿಂದ ಅಧಿವಾಸವನ್ನೂ ಭಕ್ತಿಯಿಂದ ಆಚರಿಸಬೇಕು. ‘ಅಸೌ’ ಎಂಬ ಮಂತ್ರದಿಂದ ದೇವತಾನ್ಯಾಸಗಳನ್ನು ಮಾಡಬೇಕು. ‘ಅಸೌಯೊವಸರ್ಪತಿ’ ಎಂಬ ಮಂತ್ರದಿಂದ ಉಪಸರ್ಪಣ (ಅಂದರೆ ಸೇರುವಿಕೆ)ವನ್ನು ಆಚರಿಸಬೇಕು. ‘ನಮೋ ಅಸ್ತು ನೀಲಗ್ರೀವಾಯ’ ಎಂಬ ಮಂತ್ರದಿಂದ ಪಾದ್ಯವನ್ನೂ, ರುದ್ರಗಾಯತ್ರಿಯಿಂದ (ತತ್ಪುರುಷಾಯ ವಿದ್ಮಹೇ–ಯಾತ್) ಅರ್ಘ್ಯವನ್ನೂ, ‘ತ್ರ್ಯಂಬಕಂ ಯಜಾಮಹೆ’ ಎಂಬ ಮಂತ್ರದಿಂದ ಆಚಮನವನ್ನು ಶಿವನಿಗೆ ಅರ್ಪಿಸಬೇಕು.
ಶಿವಲಿಂಗಕ್ಕೆ ಪಂಚಾಮೃತಸ್ನಾನ ಮಾಡಿಸುವಾಗ ‘ಪಯಃ ಪ್ರಥಿವ್ಯಾಂ’ ಎಂಬ ಮಂತ್ರದಿಂದ ಕ್ಷೀರಸ್ನಾನವನ್ನೂ, ‘ದಧಿಕ್ರಾವ್ಣೋ ಅಕಾರಿಷಂ’ ಎಂಬ ಮಂತ್ರದಿಂದ ದಧಿ(ಮೊಸರು)ಸ್ನಾನವನ್ನೂ, ‘ಘೃತಂ ಘೃತಯೋನೇಪಿಬ ಪ್ರಪ್ರಯಜ್ಞಪತಿಂತಿರ’ ಎಂಬ ಮಂತ್ರದಿಂದ ಘೃತ(ತುಪ್ಪ)ಸ್ನಾನವನ್ನೂ ‘ಮಧುವಾತಾ’ ‘ಮಧುನಕ್ತಂ’ ’ಮಧುಮಾನ್ನೋ’ ಎಂಬ ಮೂರು ಮಂತ್ರಗಳಿಂದ ಮಧು(ಜೇನುತುಪ್ಪ)ಸ್ನಾನವನ್ನೂ ಮಾಡಿಸಬೇಕು. ಅಥವಾ ಶಿವಲಿಂಗವನ್ನು ‘ನಮೋ ಅಸ್ತು ನೀಲಗ್ರೀವಾಯ’ ಎಂಬ ಪಾದ್ಯಮಂತ್ರ ಹೇಳಿ ಪಂಚಾಮೃತಸ್ನಾನ ಮಾಡಿಸಬೇಕು.
‘ಮಾನಸ್ತೋಕೆ’ ಎಂಬ ಮಂತ್ರದಿಂದ ಉಡುವ ವಸ್ತ್ರವನ್ನೂ, ‘ನಮಃ ಶ್ವಭ್ಯಃ’ ಎಂಬ ಮಂತ್ರದಿಂದ ಗಂಧವನ್ನೂ, ‘ನಮಸ್ತ ಕ್ಷಭ್ಯಃ’ ಎಂಬ ಮಂತ್ರದಿಂದ ಅಕ್ಷತೆಗಳನ್ನೂ ಭಕ್ತಿಯಿಂದ ಅರ್ಪಿಸಬೇಕು. ‘ನಮಃ ಪಾರ್ಯಾಯ’ ಎಂಬ ಮಂತ್ರದಿಂದ ಪುಷ್ಪಗಳನ್ನೂ, ‘ನಮಃ ಪರ್ಣಾಯ’ ಎಂಬ ಮಂತ್ರದಿಂದ ಬಿಲ್ವಪತ್ರಗಳನ್ನೂ ಅರ್ಪಿಸಬೇಕು. ‘ನಮಃ ಕಪರ್ದಿನೇ ಚ’ ಎಂಬ ಮಂತ್ರದಿಂದ ಧೂಪವನ್ನೂ ಮತ್ತು ‘ನಮಃ ಆಶವೇ’ ಎಂಬ ಮಂತ್ರಗಳಿಂದ ದೀಪವನ್ನೂ ಅರ್ಪಿಸಬೇಕು. ‘ನಮೋ ಜ್ಯೇಷ್ಠಾಯಚ’ ಎಂಬ ಮಂತ್ರದಿಂದ ಉತ್ತಮವಾದ ನೈವೇದ್ಯವನ್ನು, ‘ತ್ರ್ಯಂಬಕಂ ಯಜಾಮಹೆ’ ಎಂಬ ಮಂತ್ರದಿಂದ ಪುನರಾಚಮನವನ್ನೂ ಅರ್ಪಿಸಬೇಕು. ‘ಇಮಾ ರುದ್ರಾಯ’ (ಇಮಾ ರುದ್ರಾಯತವಸೇ ಯ.ಸಂ.1-8) ಎಂಬ ಮಂತ್ರದಿಂದ ಫಲಗಳನ್ನು ಸಮರ್ಪಿಸಬೇಕು. ‘ನಮೋ ವ್ರಜ್ಯಾಯ ಚ’ ಎಂಬ ಮಂತ್ರದಿಂದ ಎಲ್ಲಾ ವಸ್ತುಗಳನ್ನು ಅರ್ಪಿಸಬೇಕು.
‘ನಮಃ ಆಶವೇ’ ಎಂಬ ಮಂತ್ರದಿಂದ ಶಿವನಿಗೆ ಮಂಗಳಾರತಿಯನ್ನು ಮಾಡಬೇಕು. ‘ಇಮಾ ರುದ್ರಾಯ’ ಎಂಬ ಮೂರು ಮಂತ್ರಗಳಿಂದ ಮಂತ್ರಪುಷ್ಪವನ್ನು ಅರ್ಪಿಸಬೇಕು. ‘ಮನೋಮಹಾಂತಂ’ ಎಂಬ ಮಂತ್ರದಿಂದ ಪ್ರದಕ್ಷಿಣವನ್ನೂ, ‘ಮಾನಸ್ತೋಕೆ’ ಎಂಬ ಮಂತ್ರದಿಂದ ಸಾಷ್ಟಾಂಗ ನಮಸ್ಕಾರವನ್ನೂ, ‘ಏಷತೇ’ ಎಂಬ ಮಂತ್ರದಿಂದ ಶಿವಮುದ್ರೆಯನ್ನು ಪ್ರದರ್ಶಿಸಬೇಕು. ‘ಯಶೋಯತ’ ಎಂಬ ಮಂತ್ರದಿಂದ ಅಭಯಮುದ್ರೆಯನ್ನು ಮತ್ತು ‘ತ್ರ್ಯಂಬಕಂ’ ಎಂಬ ಮಂತ್ರದಿಂದ ಜ್ಞಾನಮುದ್ರೆಯನ್ನು ಪ್ರದರ್ಶಿಸಬೇಕು. ‘ನಮಃ ಸೇನಾಭ್ಯಃ‘ ಎಂಬ ಮಂತ್ರದಿಂದ ಮಹಾಮುದ್ರೆಯನ್ನು, ‘ನಮೋ ಗೋಭ್ಯಃ’ ಎಂಬ ಮಂತ್ರದಿಂದ ಸುರಭಿಮುದ್ರೆಯನ್ನು ಪ್ರದರ್ಶಿಸಬೇಕು. ಶಿವಮಂತ್ರವನ್ನು ಮಾಡಬೇಕು. ನೂರು ಬಾರಿ ರುದ್ರನಮಕ- ಚಮಕಗಳನ್ನು ಜಪಿಸಿ, ಪಂಚಾಂಗವನ್ನು ಪಠಿಸಬೇಕು. ಬಳಿಕ ‘ದೇವಾಗಾತು ವಿದೋಗಾತುಂ ವಿತ್ವಾ’ ಎಂಬ ಮಂತ್ರದಿಂದ ಶಿವನನ್ನು ವಿಸರ್ಜಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.