ADVERTISEMENT

ವೇದವ್ಯಾಸರ ಶಿವಪುರಾಣಸಾರ: ಪಾರ್ವತಿಯ ಅವತಾರಕ್ಕೆ ಪ್ರಾರ್ಥನೆ

ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2022, 21:13 IST
Last Updated 11 ಆಗಸ್ಟ್ 2022, 21:13 IST
ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಗಣಪತಿ ಸಚ್ಚಿದಾನಂದ ಸ್ವಾಮೀಜಿ    

ಹಿಮವಂತ ಮತ್ತು ಮೇನಾದೇವಿ ಮದುವೆ ನಂತರ ವಿಷ್ಣು ಮೊದಲಾದ ದೇವತೆಗಳು, ಮಹಾತ್ಮರಾದ ಮುನಿಗಳು ಹಿಮವಂತನ ಮನೆಗೆ ಬರುತ್ತಾರೆ. ತನ್ನ ಮನೆಗೆ ಬಂದ ದೇವತೆಗಳನ್ನೂ ಮುನಿಗಳನ್ನೂ ನೋಡಿ ಹಿಮವಂತನು ತನ್ನ ಅದೃಷ್ಟವೆಂದು ಅವರೆಲ್ಲರನ್ನೂ ಸತ್ಕರಿಸುತ್ತಾನೆ. ನಂತರ ‘ಮಹಾತ್ಮರಾದ ನೀವೆಲ್ಲಾ ಏಕಕಾಲದಲ್ಲಿ ನನ್ನ ಮನೆಗೆ ಬಂದುದರಿಂದ ನಾನು ಧನ್ಯನಾದೆ. ನನ್ನ ರಾಜ್ಯವು ಧನ್ಯವಾಯಿತು. ನನ್ನನ್ನು ಸೇವಕನೆಂದು ತಿಳಿದು ನನ್ನಿಂದ ನಿಮಗಾಗಬೇಕಾದ ಕಾರ್ಯವನ್ನು ಪ್ರೀತಿಯಿಂದ ಅಪ್ಪಣೆಮಾಡಿ’ ಎಂದು ಪ್ರಾರ್ಥಿಸುತ್ತಾನೆ.

ಹಿಮವಂತನ ಮಾತನ್ನು ಕೇಳಿದ ತಮ್ಮ ಕಾರ್ಯವು ಸಿದ್ಧಿಸಿತೆಂದು ಸಂತೋಷದಿಂದ, ‘ಎಲೈ ಹಿಮವಂತನೇ, ಹಿಂದೆ ಜಗನ್ಮಾತೆಯಾದ ದೇವಿಯು ದಕ್ಷನ ಪುತ್ರಿಯಾಗಿ (ಸತೀದೇವಿ) ‘ಉಮಾ’ ಎಂಬ ಹೆಸರಿನಿಂದ ಜನಿಸಿ ರುದ್ರನನ್ನು ಮದುವೆಯಾಗಿ ಬಹುಕಾಲ ವಿಹರಿಸಿದಳು. ಆಮೇಲೆ ತಂದೆಯಿಂದಲೇ ಅವಮಾನಿತಳಾಗಿ ತನ್ನ ಪ್ರತಿಜ್ಞೆಯಂತೆ ಶರೀರವನ್ನು ಬಿಟ್ಟು ತನ್ನ ಸ್ವಸ್ಥಾನವನ್ನು ಸೇರಿದಳು. ಈಗ ದೇವಿಯನ್ನು ತಪಸ್ಸು ಮಾಡಿ ನೀ ಕರೆತಂದರೆ ಎಲ್ಲರಿಗೂ ಕ್ಷೇಮವಾಗುವುದು’ ಎಂದರು.

ದೇವತೆಗಳ ಮಾತನ್ನು ಕೇಳಿದ ಹಿಮವಂತ ಸಂತೋಷದಿಂದ ಹಾಗೆಯೇ ಆಗಲಿ ಎಂದೊಪ್ಪಿದ. ಬಳಿಕ ಆ ದೇವತೆಗಳು ಹಿಮವಂತನಿಗೆ ತಪಸ್ಸಿನ ವಿಧಿಯನ್ನು ಉಪದೇಶಿಸಿ, ತಾವೂ ಉಮಾದೇವಿಯನ್ನು ಮೊರೆಹೊಕ್ಕರು. ಶುದ್ಧವಾದ ಸ್ಥಳದಲ್ಲಿ ನಿಂತು ಆ ಜಗನ್ಮಾತೆಯನ್ನು ಅನೇಕ ಪ್ರಕಾರವಾಗಿ ಸ್ತುತಿಸಿದರು. ‘ಜಗನ್ಮಾತೆಯಾದ ಓ ಉಮಾದೇವಿ, ನೀನು ಸದಾಶಿವನ ಪ್ರಿಯಭಾರ್ಯೆಯು. ಸದಾಶಿವನ ಲೋಕದಲ್ಲಿಯೇ ಸದಾ ಇರುವವಳು. ಜನರ ದುರ್ಗತಿಯನ್ನು ಹೋಗಲಾಡಿಸುವವಳು. ನೀನು ಲಕ್ಷ್ಮೀರೂಪಳು, ಶಕ್ತಿರೂಪಳು, ಶಾಂತಳು, ಪುಷ್ಟಿಯು, ಮಹಾಪವಿತ್ರಳು, ಮಹತ್ತತ್ವ, ಪ್ರಕೃತಿರೂಪಳು. ನೀನು ಸರ್ವಮಂಗಳೆಯು, ಆತ್ಮವಿದ್ಯೆ ಮತ್ತು ಅದರಂಗವಾದ ಸುವಿದ್ಯೆಯ ಸ್ವರೂಪಳು. ಸೂರ್ಯನಲ್ಲಿರುವ ಕಿರಣಪ್ರಕಾಶವು ನೀನು, ಎಲ್ಲ ಪ್ರಾಣಿಗಳಲ್ಲಿರುವ ನಿದ್ರೆ, ಹಸಿವು, ತೃಪ್ತಿ, ಆಸೆ, ಕಾಂತಿ, ಹೊಳಪು, ಸಂತೋಷಗಳೆಲ್ಲವೂ ನೀನು. ಪುಣ್ಯವಂತರಿಗೆ ಲಕ್ಷ್ಮೀರೂಪಳು. ಪಾಪಿಗಳಿಗೆ ಜ್ಯೇಷ್ಠಾಲಕ್ಷ್ಮಿರೂಪಳು. ಬ್ರಹ್ಮಾಂಡದಲ್ಲಿರುವ ಅಖಂಡಕೋಟಿ ಜೀವರನ್ನೂ ಪೋಷಿಸುವೆ.

ADVERTISEMENT

‘ನೀನು ವೇದಮಾತೆಯಾದ ಗಾಯತ್ರಿಯು, ಸಾವಿತ್ರಿಯು ಮತ್ತು ಸರಸ್ವತಿಯು. ಜಗತ್ತಿನಲ್ಲಿ ನಡೆಯುವ ವೃತ್ತಾಂತಗಳ ಸ್ವರೂಪವು ನೀನೆ. ವೇದರೂಪಳೂ, ಅದರಲ್ಲಿ ಬೋಧಿಸುವ ಧರ್ಮದ ಸ್ವರೂಪಳೂ ನೀನೆ ಆಗಿರುವೆ. ನೀನು ತತ್ವರೂಪಳು, ಪಂಚಭೂತಗಳ ಸಾರವು, ನೀತಿವಂತರ ನೀತಿಯು, ವ್ಯವಸಾಯರೂಪಳೂ, ಸಾಮವೇದದ ಗಾನವು, ಯಜುರ್ವೇದದ ಗ್ರಂಥಿಯು, ಋಗ್ವೇದದ ಹುತಿಯು, ಅಥರ್ವಣವೇದದ ಮಾತ್ರೆ – ಎಲ್ಲವೂ ನಿನ್ನ ಸ್ವರೂಪಗಳೇ ಆಗಿವೆ. ನೀನೆ ಎಲ್ಲರಿಗೂ ಗತಿಯು, ಮತಿಯು.

‘ಓ ದೇವಿ, ನೀನು ಎಲ್ಲ ದೇವಗಣಗಳ ಶಕ್ತಿಯು. ರಜೋಗುಣರೂಪಳಾಗಿ ಸಂಸಾರರೂಪವನ್ನು ಹೊಂದುವೆ. ನೀನು ಸಂಸಾರವೆಂಬ ಭಯಂಕರವಾದ ಸಾಗರವನ್ನು ದಾಟಿಸುವ ಮಹಾನೌಕೆಯು. ಅಷ್ಟಾಂಗಗಳುಳ್ಳ ಯೋಗವನ್ನು ಸದಾ ರಕ್ಷಿಸುವ ಯೋಗಿನಿಯು. ಸದಾ ವಿಂಧ್ಯಗಿರಿಯಲ್ಲಿ ಪ್ರೀತಿಯಿಂದ ವಾಸಿಸುವ ವಿಂಧ್ಯವಾಸಿನಿಯು, ಎಲ್ಲ ಪ್ರಾಣಿಗಳ ಮೂಗು, ಕಣ್ಣು, ಭುಜ, ಎದೆ, ಮನಸ್ಸು ಮುಂತಾದ ಅಂಗಗಳಿಗೆ ಆಯಾಸವನ್ನು ಪರಿಹರಿಸಿ ಸುಖವನ್ನುಂಟುಮಾಡುವ ನಿದ್ರೆಯ ಸ್ವರೂಪವೂ ನೀನೆ. ಓ ದೇವಿ, ಜಗತ್ತನ್ನು ರಕ್ಷಿಸಲು ಈಗ ಪ್ರಸನ್ನಳಾಗು’ ಎಂದು ಸ್ತುತಿಸಿದರು ಎಂಬಲ್ಲಿಗೆ ಶ್ರೀಶಿವಮಹಾಪುರಾಣದಲ್ಲಿ ಎರಡನೆಯದಾದ ರುದ್ರಸಂಹಿತೆಯ ಪಾರ್ವತೀಖಂಡದಲ್ಲಿ ಮೂರನೆಯ ಅಧ್ಯಾಯ ಮುಗಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.