ADVERTISEMENT

ವೇದವ್ಯಾಸರ ಶಿವಪುರಾಣಸಾರ: ಕಲ್ಯಾಣಕ್ಕೆ ಮುಹೂರ್ತ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅಂಕಣ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2022, 23:30 IST
Last Updated 17 ಅಕ್ಟೋಬರ್ 2022, 23:30 IST
   

ಪದ್ಮಾದೇವಿಯ ಪಾತಿವ್ರತ್ಯವನ್ನು ಪರೀಕ್ಷಿಸಲು ಹೋಗಿ ಶಾಪಗ್ರಸ್ತನಾದ ಧರ್ಮಪುರುಷ, ಅವಳ ಪಾತಿವ್ರತ್ಯಕ್ಕೆ ಸಂತುಷ್ಟನಾದ. ಆದರೆ ಸಾಧ್ವಿ ಪದ್ಮಾದೇವಿಗೆ ಪಶ್ಚಾತ್ತಾಪವಾಯಿತು. ‘ಓ ಧರ್ಮಪುರುಷ, ನೀನು ಎಲ್ಲ ಕರ್ಮಗಳಿಗೂ ಸಾಕ್ಷಿ. ಹೀಗಾಗಿ ನಿನ್ನ ಪರೀಕ್ಷೆಯಿಂದ ನನಗೇನು ನೋವಾಗಲಿಲ್ಲ. ಆದರೆ ನಾನು ಶಪಿಸಿದ್ದರಿಂದ ನೋವಾಗಿದೆ. ನಾನು ಕೊಟ್ಟ ಶಾಪ ಎಂದೆಂದಿಗೂ ಶಮನವಾಗಲಾರದು. ನನ್ನ ಶಾಪದ ತಾಪವನ್ನು ನೀನು ಅನುಭವಿಸಲೇಬೇಕು; ಆದರೆ ನಿನ್ನ ಅಸ್ತಿತ್ವ ನಾಶವಾಗಬಾರದು. ಏಕೆಂದರೆ, ನೀನಿಲ್ಲದೆ ಜಗವಿಲ್ಲ. ಹೀಗಾಗಿ, ನೀನು ಕೃತಯುಗದಲ್ಲಿ ನಾಲ್ಕು ಪಾದಗಳಿಂದ ಪೂರ್ಣನಾಗಿ ಹುಣ್ಣಿಮೆಯ ಚಂದ್ರನಂತೆ ವಿರಾಜಿಸು. ಆದರೆ ತ್ರೇತಾಯುಗದಲ್ಲಿ ನಿನ್ನ ಒಂದು ಪಾದವು ನಾಶವಾಗುತ್ತೆ. ದ್ವಾಪರದಲ್ಲಿ ಎರಡು ಪಾದಗಳು ಕ್ಷಯಿಸುತ್ತವೆ. ಕಲಿಯುಗದಲ್ಲಿ ಮೂರನೆಯ ಪಾದವೂ ಕ್ಷಯಿಸುತ್ತದೆ. ಕಲಿಯುಗದ ಕೊನೆಯಲ್ಲಿ ನಿನ್ನ ನಾಲ್ಕನೇ ಪಾದವೂ ನಾಶವಾಗುವುದು. ನಾಲ್ಕು ಯುಗಗಳು ಕೊನೆಗೊಂಡು, ಮತ್ತೆ ಹೊಸ ಕೃತಯುಗ ಬಂದಾಗ ನೀನು ನಾಲ್ಕು ಪಾದಗಳುಳ್ಳವನಾಗಿ ಪರಿಪೂರ್ಣನಾಗುವೆ. ಕೃತಯುಗದಲ್ಲಿ ಎಲ್ಲೆಲ್ಲಿಯೂ ನೀನು ಧರ್ಮವನ್ನು ಹರಡುವೆ. ಮಿಕ್ಕ ಯುಗಗಳಲ್ಲಿ ಅಷ್ಟು ವ್ಯಾಪಕತೆ ನಿನಗಿರುವುದಿಲ್ಲ’ ಎಂದಳು.

ಪದ್ಮಾದೇವಿಯ ಮಾತನ್ನು ಕೇಳಿ ಧರ್ಮಪುರುಷ ‘ಎಲೈ ಸಾಧ್ವಿ, ಪತಿಭಕ್ತಳಾದ ನಿನಗೆ ಮಂಗಳವಾಗಲಿ. ನಿನ್ನ ಪತಿಗೆ ವರವನ್ನು ಕೊಡುವೆ. ನಿನ್ನ ಪತಿಯು ಯುವಕನಾಗಲಿ, ರತಿಯಲ್ಲಿ ಸಮರ್ಥನೂ, ನೀತಿಯಲ್ಲಿ ಧಾರ್ಮಿಕನೂ ಆಗಲಿ. ರೂಪವಂತನಾಗಿ, ಗುಣವಂತನಾಗಿ ಅವನ ಯೌವನ ಸ್ಥಿರವಾಗಿರಲಿ. ಹಾಗೆಯೇ, ನಿನ್ನ ಪತಿಯು ಮಾರ್ಕಂಡೇಯನಿಗಿಂತಲೂ ಚಿರಂಜೀವಿಯಾಗಲಿ, ಕುಬೇರನಿಗಿಂತಲೂ ಧನವಂತನಾಗಲಿ, ಇಂದ್ರನಿಗಿಂತಲೂ ಐಶ್ವರ್ಯವಂತನಾಗಲಿ. ಹರಿಯಂತೆ ಶಿವಭಕ್ತನಾಗಿರಲಿ, ಕಪಿಲನಿಗಿಂತಲೂ ಶ್ರೇಷ್ಠಸಿದ್ಧನಾಗಿರಲಿ, ಬುದ್ಧಿಯಲ್ಲಿ ಬೃಹಸ್ಪತಿಯಂತಾಗಲಿ. ವಿಧಿಯಂತೆ ಸರ್ವಸಮತೆಯುಳ್ಳವನಾಗಲಿ. ನೀನು ಜೀವಮಾನಪರ್ಯಂತ ಪತಿಸೌಭಾಗ್ಯವುಳ್ಳವಳಾಗು. ನಿನ್ನ ಯೌವನ ಸಹ ನಿನ್ನ ಪತಿಯಂತೆ ಸ್ಥಿರವಾಗಿರಲಿ. ನೀನು ಹತ್ತು ಮಕ್ಕಳ ತಾಯಿಯಾಗುವೆ. ಆ ಮಕ್ಕಳು ಗುಣಶೀಲರೂ, ಬಹಳ ಕಾಲ ಬದುಕುವವರೂ ಆಗುವರು. ತಂದೆಗಿಂತಲೂ ಉತ್ತಮರಾಗುವರು’ ಎಂದು ವರವನ್ನಿತ್ತ.

ಮುಂದೆ ಪದ್ಮಾದೇವಿಯು ಯುವಕನಾದ ಪತಿ ಪಿಪ್ಪಲಾದನೊಡನೆ ಏಕಾಂತದಲ್ಲಿ ಯಥೇಚ್ಛೆಯಾಗಿ ವಿಹರಿಸಿದಳು. ಅವಳಿಗೆ ಗುಣವಂತರಾದ ಮಕ್ಕಳು ಜನಿಸಿದರು. ಪದ್ಮಾ ಪಿಪ್ಪಲಾದ ದಂಪತಿಗಳು ಇಹಪರಗಳೆರಡರಲ್ಲೂ ಸುಖಪಡೆಯುವಂತಹ ಕರ್ಮವನ್ನು ಮಾಡಿದರು ಎಂದು ಅನರಣ್ಯನ ಕಥೆಯನ್ನ ಹೇಳಿದ ವಸಿಷ್ಠ, ‘ಎಲೈ ಹಿಮವಂತ, ಪದ್ಮಾ ಪಿಪ್ಪಲಾದ ದಂಪತಿಗಳ ಇತಿಹಾಸವನ್ನು ವಿಸ್ತಾರವಾಗಿ ಹೇಳಿರುವೆ. ಪಾರ್ವತಿಯನ್ನು ಶಂಕರನಿಗೆ ಮದುವೆ ಮಾಡಿಕೊಡು. ಈ ವಿಷಯದಲ್ಲಿ ಹಠವನ್ನು ಬಿಡಿ. ಇಂದಿಗೆ ಏಳು ದಿವಸ ಕಳೆದು ಎಂಟನೆಯ ದಿನದಲ್ಲಿ ಸೋಮವಾರ ಬರುವುದು. ಕರ್ಕಾಟಕ ಲಗ್ನ, ಲಗ್ನಾಧಿಪತಿಯಾದ ಚಂದ್ರನು ಲಗ್ನದಲ್ಲಿಯೇ ಬುಧನೊಡನೆ ಇರಬೇಕು. ಚಂದ್ರನಕ್ಷತ್ರವಾದ ರೋಹಿಣಿಯೊಡನೆ ಕೂಡಿದ್ದು, ಚಂದ್ರನು ಶುದ್ಧನಾಗಿ ಮುದಿತಾವಸ್ಥೆಯಲ್ಲಿರಬೇಕು. ಶುಭಗ್ರಹಗಳ ದೃಷ್ಟಿ ಅಥವಾ ಸಂಬಂಧವು ಲಗ್ನಕ್ಕಿರಬೇಕು. ಪಾಪಗ್ರಹದೃಷ್ಟಿ ಇರಬಾರದು. ಪುತ್ರಕಾರಕನಾದ ಗುರುವು ಕೇಂದ್ರದಲ್ಲಿರಬೇಕು. ಇಂತಹ ಪುತ್ರಪ್ರದವೂ ಪತಿಸೌಭಾಗ್ಯಕರವೂ ಆದ ಮುಹೂರ್ತದಲ್ಲಿ ಪಾರ್ವತಿಯನ್ನು ಪರಮೇಶ್ವರನಿಗೆ ಧಾರೆಯೆರೆದುಕೊಟ್ಟು ನೀನು ಕೃತಕೃತ್ಯನಾಗು’ ಎಂದ.

ADVERTISEMENT

ಇಲ್ಲಿಗೆ ಪಾರ್ವತೀಖಂಡದಲ್ಲಿ ಮೂವತ್ತೈದನೆಯ ಅಧ್ಯಾಯ ಮುಗಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.