ADVERTISEMENT

ವೇದವ್ಯಾಸರ ಶಿವಪುರಾಣಸಾರ:  ಪರೀಕ್ಷೆ ಗೆದ್ದ ಪಾರ್ವತಿ

ಭಾಗ -233

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 24 ಸೆಪ್ಟೆಂಬರ್ 2022, 6:06 IST
Last Updated 24 ಸೆಪ್ಟೆಂಬರ್ 2022, 6:06 IST
   

ಸಪ್ತರ್ಷಿಗಳು ‘ನಾರದ ಯಾರನ್ನು ಬೇಕಾದರೂ ಮರಳು ಮಾಡಿ ಸನ್ಯಾಸಿಯಾಗಿಸಬಲ್ಲ ನಿಸ್ಸೀಮ. ಅಂತಹ ಕಪಟಿಯ ಉಪದೇಶವನ್ನು ನಂಬಿ ವೃಥಾ ಘೋರ ತಪಸ್ಸನ್ನು ಮಾಡುತ್ತಲಿರುವೆ. ಯಾವನಿಗಾಗಿ ನೀನು ಇಂತಹ ಘೋರ ತಪಸ್ಸನ್ನು ಮಾಡುತ್ತಲಿರುವೆಯೋ ಆ ಶಿವನು ಸದಾ ಉದಾಸೀನನು; ಅವನಿಗೆ ಯಾವ ವಿಕಾರಗಳೂ ಇಲ್ಲ. ಅವನು ಮನ್ಮಥನ ಶತ್ರು. ಶಿವನ ಶರೀರವು ಅಮಂಗಳವಾದುದು. ಅವನಿಗೆ ಮನೆಯಿಲ್ಲ, ಕುಲವಿಲ್ಲ, ನೀಚವೇಷವುಳ್ಳವನು. ಸದಾ ಪ್ರೇತಭೂತಗಳೊಡನೆ ಇರುವವನು. ದಿಗಂಬರನಾದರೂ ಅವನಿಗೆ ಲಜ್ಜೆಯೇ ಇಲ್ಲ. ಇಂತಹವನನ್ನು ಪಡೆದು ನಿನಗೇನು ಸುಖವು ಲಭಿಸುವುದು? ಮಹಾಸಾಧ್ವಿಯಾದ ದಕ್ಷಸುತೆ ಸತೀದೇವಿಯನ್ನು ಮದುವೆಯಾಗಿದ್ದ. ಕೆಲವು ದಿನಗಳವರೆಗಾದರೂ ಸರಿಯಾಗಿ ಸಂಸಾರಮಾಡಲಿಲ್ಲ. ಮಹಾವಿರಕ್ತನಾದ ಶಿವನಿಗೆ ಯಾರ ಸಹವಾಸವೂ ಸೇರದು. ಈಗಲಾದರೂ ನಮ್ಮ ಮಾತನ್ನು ಕೇಳು. ವಿಷ್ಣುವು ನಿನಗೆ ಯೋಗ್ಯವಾದ ವರ. ಹರಿಯೊಡನೆ ನಿನಗೆ ಮದುವೆಯನ್ನು ಮಾಡಿಸುವೆವು. ನಿನ್ನ ಜೀವನ ಸುಖವಾಗುವುದು’ ಎಂದರು.

ಗಿರಿಜೆ ಹೇಳಿದಳು, ‘ಓ ಮುನಿಗಳೇ, ನನ್ನ ಶರೀರವು ಪರ್ವತದಿಂದ ಜನಿಸಿದುದು. ಆದಕಾರಣ ಅದು ಸ್ವಭಾವತಃ ಕಠಿಣವಾದುದು. ಅದು ತನ್ನ ಹಠವನ್ನು ಎಂದಿಗೂ ಬಿಡಲಾರದು. ನೀವು ನನ್ನನ್ನು ತಡೆಯುವ ಕೆಟ್ಟಪ್ರಯತ್ನ ಮಾಡಬೇಡಿ. ನಾರದಮುನಿಯ ಮಾತು ನನಗೆ ಹಿತವಾಗಿದೆ. ಮನೆಯಲ್ಲಿರಲಿ ಅಥವಾ ಇಲ್ಲದಿರಲಿ, ಅದರಿಂದ ನನಗೆ ಸುಖವಾಗಲಿ ಅಥವಾ ಆಗದಿರಲಿ, ನನ್ನ ಹಠವನ್ನು ಮಾತ್ರ ಬಿಡಲಾರೆ. ನೀವೀಗ ನನಗೆ ಹೇಳಿದ ಮಾತುಗಳು ಸರಿಯಾದುದಲ್ಲ. ವಿಷ್ಣು ಗುಣಗಳುಳ್ಳವನು; ಅದರಿಂದ ಅವನು ವಿಹಾರ ಮಾಡುವನು. ಆದರೆ ಶಿವನು ನಿರ್ಗುಣ; ಪರಬ್ರಹ್ಮಸ್ವರೂಪ. ಅವನಿಗೆ ವಿಕಾರಗಳಿಲ್ಲ. ಭಕ್ತರಿಗಾಗಿ ಅವನು ಸಗುಣರೂಪವನ್ನು ಕೈಗೊಳ್ಳುವವನಾದರೂ, ಅವನು ತನ್ನ ನಿಜವಾದ ಪ್ರಭುತ್ವವನ್ನು ತೋರಿಸಲು ಇಚ್ಛಿಸುವುದಿಲ್ಲ. ಶಿವನು ಅವಧೂತ(ದಿಗಂಬರ)ರ ಸ್ವರೂಪವನ್ನು ಧರಿಸಿ, ಆತ್ಮಾನಂದವನ್ನು ಅನುಭವಿಸುತ್ತಾ, ಪರಮಹಂಸರ ಮಾರ್ಗವನ್ನು ಅನುಸರಿಸುವವನು. ಅಜ್ಞಾನಿಗಳಿಗೆ ಮಾತ್ರ ವೇಷಭೂಷಣ ಮೊದಲಾದ ಅಲಂಕಾರಗಳಲ್ಲಿ ಪ್ರೀತಿಯುಂಟಾಗುವುದು. ಆದರೆ ಜ್ಞಾನರೂಪನಾದ ಪರಮೇಶ್ವರನಿಗೆ ಆ ರೀತಿ ಇಲ್ಲ. ಅವನ ಗತಿಯನ್ನು ತಿಳಿಯುವುದು ಅಸಾಧ್ಯ. ಅವನು ವಿರಾಟ್ಪುರುಷ.ಇಂಥ ಶಿವನು ನನ್ನನ್ನು ಮದುವೆಯಾಗಲು ಇಚ್ಛಿಸದಿದ್ದರೆ ನಾನು ಸದಾ ವಿವಾಹವಿಲ್ಲದೇ ಬ್ರಹ್ಮಚಾರಿಣಿಯಾಗಿಯೇ ಇರುವೆ. ಸೂರ್ಯನು ಪಶ್ಚಿಮದಿಕ್ಕಿನಲ್ಲಿ ಉದಯಿಸಬಹುದು. ಆದರೆ ನನ್ನ ಪ್ರತಿಜ್ಞೆಯ ಪಥ ಬದಲಾಗದು. ಮೇರುಪರ್ವತವು ಚಲಿಸಬಹುದು, ಅಗ್ನಿಯು ಶೀತಸ್ವಭಾವ ರೂಢಿಸಿಕೊಳ್ಳಬಹುದು, ಕಮಲವು ಬೆಟ್ಟದ ಶಿಖರದ ಕಲ್ಲಿನ ಮೇಲೆ ಹುಟ್ಟಲೂ ಬಹುದು. ಆದರೆ ನನ್ನ ಹಠ ಮಾತ್ರ ಎಂದಿಗೂ ವಿಚಲಿತವಾಗುವುದಿಲ್ಲ’ ಎಂದಳು ದೃಢ ದನಿಯಲ್ಲಿ.

ಗಿರಿಜೆಯ ನಿರ್ಧಾರ ಕೇಳಿದ ಸಪ್ತರ್ಷಿಗಳಿಗೆ ಬಹಳ ಸಂತೋಷವಾಯಿತು. ಅವರು ಜಯಧ್ವನಿ ಮಾಡುತ್ತಾ, ಗಿರಿಜೆಗೆ ಅವಳ ಇಚ್ಛೆ ಸಿದ್ಧಿಸಲೆಂಬ ಆಶೀರ್ವಾದ ಮಾಡಿದರು. ಬಳಿಕ ಮುನಿಗಳು ಶಿವನ ಬಳಿಗೆ ಬಂದು ನಡೆದ ಸಮಾಚಾರವನ್ನೆಲ್ಲಾ ತಿಳಿಸಿದರು. ಪಾರ್ವತಿಯ ತಪಸ್ಸು ಪವಿತ್ರವಾದುದು. ಇದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಶಿವನಿಗೆ ಹೇಳಿ, ಅವನ ಅಪ್ಪಣೆಯನ್ನು ಸ್ವರ್ಗಲೋಕಕ್ಕೆ ತೆರಳಿದರು.

ADVERTISEMENT

ಇಲ್ಲಿಗೆ ಶ್ರೀಶಿವಮಹಾಪುರಾಣದಲ್ಲಿ ಪಾರ್ವತೀಖಂಡದ ಇಪ್ಪತ್ತೈದನೆಯ ಅಧ್ಯಾಯ ಮುಗಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.