ಭಾರತದಲ್ಲಿ ಹಲವು ಧಾರ್ಮಿಕ ಪಂಥಗಳು ಅರಳಿವೆ. ಅವುಗಳಲ್ಲಿ ಒಂದು ಸಿಖ್‌ಮತವೂ ಒಂದು. ಇದರ ಪ್ರವರ್ತಕ ಗುರು ನಾನಕ್.
ಗುರು ನಾನಕ್ (ಕ್ರಿ. ಶ. 1469–1538) ಪಂಜಾಬಿನ (ಈಗಿನ ಪಾಕಿಸ್ತಾನ) ತಳಮಂಡಿಯಲ್ಲಿ (ನಾಂಕಾನಾ ಸಾಹಿಬ್) ಜನಿಸಿದರು; ಕಲ್ಯಾಣ್ ದಾಸ್ ಮತ್ತು ಮೆಹ್ತಾ ತೃಪ್ತ ಇವರ ತಂದೆ–ತಾಯಿ. ಬಾಲ್ಯದಿಂದಲೇ ನಾನಕರಿಗೆ ಧರ್ಮದ ವಿಷಯದಲ್ಲಿ ಶ್ರದ್ಧೆ–ಆಸಕ್ತಿಗಳಿದ್ದವು. ಭಾರತದ ಉದ್ದಗಲಕ್ಕೂ ಪ್ರವಾಸಮಾಡಿದ ಅವರು, ಪರ್ಶಿಯಾ, ತುರ್ಕಸ್ತಾನ್, ಇರಾಕ್ ಮತ್ತು ಮೆಕ್ಕಾಗಳನ್ನೂ ಸಂದರ್ಶಿಸಿದ್ದರಂತೆ. ಹಿಂದೂ–ಮುಸ್ಲಿಮ್ ಧರ್ಮಗಳ ನಡುವೆ ಸಾಮರಸ್ಯವನ್ನು ಸಾಧಿಸಲು ಪ್ರಯತ್ನಿಸಿದವರು ಅವರು. ಅವರು ಹೀಗೆ ನಿರೂಪಿಸಿದ ಧಾರ್ಮಿಕ ಸಿದ್ಧಾಂತವೇ ‘ಸಿಖ್‌ಧರ್ಮ’ ಎಂದು ಹೆಸರಾಯಿತು. ನಾನಕರ ಕಾಲಾನಂತರ ಒಬ್ಬರಾದ ಮೇಲೆ ಒಬ್ಬರಂತೆ ಬಂದ ಒಂಬತ್ತು ಮಂದಿ ಗುರುಗಳಿಂದ ಸಿಖ್‌ಧರ್ಮ ಕ್ರಮಕ್ರಮವಾಗಿ ಅಭಿವೃದ್ಧಿಹೊಂದಿ, ತನ್ನ ಅಂತಿಮ ಸ್ವರೂಪವನ್ನು ಪಡೆಯಿತು. ನಾನಕ್ ಸಿಖ್‌ಧರ್ಮದ ಮೊದಲ ಗುರು ಎನಿಸಿದರು.
ಪಶ್ಚಿಮದ ಮೆಕ್ಕಾ ಮದೀನ ಮತ್ತು ಬಾಗದಾದ್‌ಗಳಿಂದ ಪೂರ್ವದ ಡಾಕ್ಕಾ, ಕಾಮರೂಪಗಳವರೆಗೆ, ಉತ್ತರದ ಕಾಶ್ಮೀರ ಟಿಬೆಟ್‌ಗಳಿಂದ ದಕ್ಷಿಣದ ಕನ್ಯಾಕುಮಾರಿ ಶ್ರೀಲಂಕೆಯವರೆಗೆ, ತಮ್ಮ ಸ್ಫೂರ್ತಿದಾಯಕ ಸಂದೇಶವನ್ನು ಮುಟ್ಟಿಸುವ ಸಲುವಾಗಿ ಗುರು ನಾನಕ್ ಬಹುಪಾಲು ಬರಿಗಾಲಿನಲ್ಲಿಯೇ ಸುತ್ತಾಡಿದರು. ಭಗವಂತನ ಏಕತೆ, ಮಾನವ ಭ್ರಾತೃತ್ವ ಹಾಗೂ ಪ್ರೇಮ ಸಹನೆಗಳ ತಮ್ಮ ಸಂದೇಶವನ್ನು ಅವರು ಎಲ್ಲೆಡೆ ಪ್ರಚಾರ ಮಾಡಿದರು. ಅವರು ಭಗವಂತನ ಏಕತೆಯನ್ನು ಈ ಮಾತುಗಳಲ್ಲಿ ಒತ್ತಿ ಉದ್ಘೋಷಿಸಿದರು:
ನನಗೆ ಒಂದು ನಾಲಗೆಗೆ ಬದಲಾಗಿ
ನೂರು ಸಹಸ್ರ ನಾಲಗೆಗಳಿದ್ದಿದ್ದರೆ
ಸೂರುಸಹಸ್ರ ಇಪ್ಪತ್ತು ಮಡಿ ಹೆಚ್ಚಿದ್ದರೆ
ಸೂರುಸಹಸ್ರ ಸಲ ನಾನು ಹೇಳುತ್ತೇನೆ –
ಮತ್ತೆ ಮತ್ತೆ ಹೇಳುತ್ತೇನೆ –
ಜಗತ್ತಿನ ಒಡೆಯ ಒಬ್ಬನೆ:
ಅವನ ನಾಮಸ್ಮರಣೆ ಮಾಡು.
ಎಲ್ಲ ಮಾನವರೂ ಒಬ್ಬ ದೇವನ ಸಂತತಿಯವರೆಂದೂ, ಆದ್ದರಿಂದ ಅವರೆಲ್ಲ ಸಹೋದರರೆಂದೂ ಗುರು ನಾನಕ್ ಪರಿಗಣಿಸಿದರು:
ಏಕ್ ಪಿತಾ ಏಕಸ ಕೇ ಹಮ ಬಾಲಕ,
ತೂಂ ಮೇರಾ ಗುರ್ ಹೈ
ಎಲ್ಲ ಧರ್ಮಗಳಲ್ಲೂ ಇರುವ ಮೂಲಸತ್ಯವನ್ನು ಗುರು ಒತ್ತಿ ಹೇಳಿದರು. ಅವರು ಯಾರಿಗೂ ತಮ್ಮ ಧರ್ಮವನ್ನು ತ್ಯಜಿಸಬೇಕೆಂದು ಹೇಳಲಿಲ್ಲ. ಅವರಿಗೆ ಹಿಂದುಗಳಿರಲಿಲ್ಲ, ಮುಸ್ಲಿಮರಿರಲಿಲ್ಲ – ಮನುಷ್ಯರಿದ್ದರು. ಅವರ ಅಭಿಪ್ರಾಯದಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ – ಎಲ್ಲರೂ ಸಮಾನರು. ಅವರು ಜಾತಿಪದ್ಧತಿಯನ್ನೂ ಅಸ್ಪೃಶ್ಯತೆಯನ್ನೂ ಮುಚ್ಚುಮರೆಯಿಲ್ಲದೆ ಖಂಡಿಸಿದರು. ಹುಟ್ಟಿನಿಂದಲ್ಲ, ಸದ್ವರ್ತನೆಯಿಂದ ಮಾತ್ರ ಯಾರಾದರೂ ಉತ್ತಮ ಜಾತಿಯವರೆಂದು ಹೇಳಿಕೊಳ್ಳಬಹುದು ಎಂದು ಅವರು ಹೇಳಿದರು (ಸಾ ಜಾತ ಸಾ ಪಾತ ಹೈ ಜೇಹೇ ಕರಮ ಕಮಾಈ).
ಗುರು ನಾನಕ್ ವಿಖ್ಯಾತರಾದ ವಿಶ್ವಬೋಧಕರಲ್ಲಿ ಒಬ್ಬರು. ಅವರ ಸಂದೇಶ ಎಲ್ಲ ಕಾಲಕ್ಕೂ ಸಮ್ಮತವಾಗುತ್ತದೆ.
(ಮಾಹಿತಿಸಂಗ್ರಹ: ‘ಯುಗಯಾತ್ರೀ ಭಾರತೀಯ ಸಂಸ್ಕೃತಿ’ ಮತ್ತು ’ವಿಶ್ವಧರ್ಮದರ್ಶನ’) v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.