ವ್ಯಕ್ತಿಯಾಗಲೀ ಸಮಾಜವಾಗಲೀ ದಾರಿ ತಪ್ಪಿದೆ ಎಂದರೆ ಅದಕ್ಕೆ ಕಾರಣ ಸರಿಯಾದ ಶಿಕ್ಷಣದ ಕೊರತೆ. ಶಿಕ್ಷಣದ ಕೊರತೆಯಾಗಿದೆ ಎಂದರೆ ನಮಗೆ ಯೋಗ್ಯ ಗುರು ದೊರೆತಿಲ್ಲ ಎಂದೇ ಹೌದು. ಎಂದರೆ ಗುರುವಿಗೂ ಶಿಕ್ಷಣಕ್ಕೂ ವ್ಯಷ್ಟಿ–ಸಮಷ್ಟಿಗಳ ಏಳಿಗೆ–ನೆಮ್ಮದಿಗಳಿಗೂ ನೇರ ಸಂಬಂಧವಿದೆ ಎಂದಾಯಿತು. ನಮ್ಮ ಜೀವನದ ಬೆಳಕಾಗಿರುವ ಗುರುತತ್ತ್ವವನ್ನು ಸ್ಮರಿಸಿ, ಆರಾಧಿಸುವ ಪರ್ವದಿನವೇ ‘ಗುರುಪೂರ್ಣಿಮೆ’.
ನಮ್ಮಲ್ಲಿ ಗುರುಪೂರ್ಣಿಮೆಯನ್ನೇ ವ್ಯಾಸಪೂಜೆಯನ್ನಾಗಿಯೂ, ವ್ಯಾಸಪೂಜೆಯನ್ನೇ ಗುರುಪೂರ್ಣಿಮೆಯನ್ನಾಗಿಯೂ ಆಚರಿಸಲಾಗುತ್ತದೆ; ಇದು ಔಚಿತ್ಯಪೂರ್ಣವಾಗಿಯೂ ಇದೆಯೆನ್ನಿ. ಇಡಿಯ ನಮ್ಮ ಸಂಸ್ಕೃತಿಗೆ ಗುರುಸ್ವರೂಪದಲ್ಲಿರುವವರು ವ್ಯಾಸಮಹರ್ಷಿಗಳು.
ಶಿಕ್ಷಣ ಎಂದರೆ ಏನು? ಅರಿವು ಎಂದು ತಾನೆ? ಹಾಗಾದರೆ ಅರಿವು ಎಂದರೆ ಏನು? ನಮ್ಮ ಜೀವನವನ್ನು ಯಾವ ಯಾವ ವಿವರಗಳು ಚೆನ್ನಾಗಿ ಮಾಡುತ್ತವೆಯೋ ಅವೆಲ್ಲವೂ ಅರಿವು ಎಂದೆನಿಸಿಕೊಳ್ಳುತ್ತದೆ. ಈ ಅರಿವಿನ ಮೂಲವೇ ‘ವೇದ’. ಆದರೆ ಇದು ಅಗಾಧವಾಗಿರುವುದರಿಂದ ಇದನ್ನು ನಮಗೆ ಬೇಕಾದಷ್ಟು ಸಂಪಾದಿಸಿ, ಬಳಸಿಕೊಳ್ಳುವುದು ಸುಲಭವಲ್ಲ. ಹೀಗೆ ಅನಂತವೂ ಅಪರಿಮಿತವೂ ಆಗಿರುವ ಜ್ಞಾನರಾಶಿಯನ್ನು ಮಾನವನ ಒಳಿತಿಗಾಗಿ ವಿಭಾಗಿಸಿಕೊಟ್ಟವರು ವ್ಯಾಸಮಹರ್ಷಿಗಳು. ಅವರು ನಮ್ಮ ಜೀವನಕ್ಕೆ ಬೆಳಕಾಗಿ ಒದಗಿದವರು. ಹೀಗಾಗಿ ವ್ಯಾಸರು ನಮಗೆ ಗುರುಗಳು; ಮಾತ್ರವಲ್ಲ, ಅವರು ಎಲ್ಲ ಗುರುಗಳ ಪ್ರತಿನಿಧಿ. ಆದುದರಿಂದಲೇ ಅವರ ಸ್ಮರಣೆಯಲ್ಲಿ ವ್ಯಾಸಪೂಜೆಯನ್ನೂ ಗುರುಪೂರ್ಣಿಮೆಯನ್ನೂ ಆಚರಿಸುತ್ತೇವೆ.
ಇಂದಿನ ಶಿಕ್ಷಣಪದ್ಧತಿಯಲ್ಲಿ ಜೀವನದ ಗುರಿಯ ಕಡೆಗೆ ಬೆಳಕನ್ನು ಚೆಲ್ಲುವಂಥ ಮನೋಧರ್ಮವೇ ಮಾಯವಾಗಿದೆ. ಕೃತಕವಾದ ಆಸೆಗಳನ್ನು ಸೃಷ್ಟಿಸುವುದು, ಅವುಗಳನ್ನು ಪೂರೈಸಿಕೊಳ್ಳಲು ಜೀವನದುದ್ದಕ್ಕೂ ಮಾಡಬೇಕಾದ ತಂತ್ರಗಾರಿಕೆಯನ್ನು ಕಲಿಸುವುದು – ಇದೇ ಶಿಕ್ಷಣ ಎಂಬಂತಾಗಿದೆ. ಇಂಥ ಸಂದರ್ಭದಲ್ಲಿ ಗುರುಪೂರ್ಣಿಮೆಯ ದಿಟವಾದ ಅರ್ಥವನ್ನು ಕಂಡುಕೊಂಡರೆ ಆಗ ಅದು ನಮ್ಮ ಜೀವನಸಾಫಲ್ಯಕ್ಕೆ ಒದಗಬಹುದಾದ ದಾರಿಯನ್ನು ಕಾಣಿಸೀತು. ಈ ಹಿನ್ನೆಲೆಯಲ್ಲಿ ನಮ್ಮ ಹಬ್ಬ–ಹರಿದಿನಗಳ ನಿಜವಾದ ಮಾರ್ಗ–ಗುರಿಗಳನ್ನು ನಾವು ಸಾಕ್ಷಾತ್ಕರಿಸಿಕೊಳ್ಳಬೇಕಿದೆ.
ನಮ್ಮ ಪರಂಪರೆಯ ಪ್ರಕಾರ, ಮಾನವರೂಪದಲ್ಲಿರುವವರು, ನಮಗೆ ಅಕ್ಷರಗಳನ್ನು ಕಲಿಸಿದವರು ಮಾತ್ರವೇ ಗುರುಗಳು ಅಲ್ಲ; ಪ್ರಕೃತಿಯ ಒಂದೊಂದು ವಿವರವೂ ನಮ್ಮ ಪಾಲಿಗೆ ಒದಗುವ ಗುರುತತ್ತ್ವವೇ ಆಗಿರುತ್ತದೆ. ಮರ, ಗಿಡ, ಪ್ರಾಣಿ, ಪಕ್ಷಿ – ಎಲ್ಲವೂ ನಮಗೆ ಗುರುಗಳೇ. ಆದರೆ ಅವುಗಳಿಂದ ಅರಿವನ್ನು ಕಲಿಯುವ ಕುತೂಹಲ ನಮ್ಮದಾಗಬೇಕಷ್ಟೆ.
ಬುದ್ಧ ಭಗವಂತನು ತಾನು ಪಡೆದ ಅರಿವಿನ ಬೆಳಕನ್ನು ಲೋಕಕ್ಕೆ ಅರುಹಿದ ದಿನವೂ ಇದೇ ದಿನ ಎಂಬ ನಂಬಿಕೆಯೂ ನಮ್ಮಲ್ಲುಂಟು. ಸನ್ಯಾಸಿಗಳ ಚಾತುರ್ಮಾಸ್ಯವ್ರತ ಆರಂಭವಾಗುವುದು ಕೂಡ ವ್ಯಾಸಪೂಜೆಯಿಂದಲೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.