ADVERTISEMENT

ಶಾರ್ವರಿಯ ವಿ‘ಪ್ಲವ’ ದಾಟಿ...

ಅರ್ಪಣಾ ಎಚ್‌.ಎಸ್‌.
Published 26 ಮಾರ್ಚ್ 2022, 19:30 IST
Last Updated 26 ಮಾರ್ಚ್ 2022, 19:30 IST
ಕಲೆ: ಪ್ರಕಾಶ್‌ ಶೆಟ್ಟಿ
ಕಲೆ: ಪ್ರಕಾಶ್‌ ಶೆಟ್ಟಿ   

ಶಿವಮೊಗ್ಗ ಮೂಲದವರಾದ ನಾವು ನೆಲೆಸಿದ್ದು ಮಾತ್ರ ದಕ್ಷಿಣ ಕನ್ನಡದಲ್ಲಿ. ಭೌಗೋಳಿಕವಾಗಿ ಕರ್ನಾಟಕದ ಭಾಗವಾದರೂ ಸಾಂಸ್ಕೃತಿಕವಾಗಿ ತನ್ನದೇ ಪ್ರತ್ಯೇಕ ಗುರುತು ಹೊಂದಿರುವ ದಕ್ಷಿಣದ ಕರಾವಳಿಗೆ, ಹಬ್ಬಗಳ ವಿಷಯದಲ್ಲಿ ಕೇರಳವೇ ಹತ್ತಿರ. ಹೀಗಾಗಿ, ಬಹುತೇಕ ಹಬ್ಬಗಳನ್ನು ಘಟ್ಟದ ಮೇಲಿನವರಾದ ನಾವು ಬೇರೆಯದೇ ರೀತಿಯಲ್ಲಿ ಅಥವಾ ಬೇರೆಯದೇ ಸಮಯದಲ್ಲಿ ಆಚರಿಸುತ್ತಿದ್ದೆವು. ಯಾವುದೋ ಹಿಂದಿ ಸಿನಿಮಾದಲ್ಲಿ ಹಾಸ್ಯನಟ ಜಾನಿ ಲಿವರ್, ಮನಸ್ಸಿಗೆ ಬಂದ ಹಬ್ಬವನ್ನು ಮನಸ್ಸಿಗೆ ಬಂದಾಗ ಆಚರಿಸುತ್ತಾನಲ್ಲ, ಒಂದು ರೀತಿಯಲ್ಲಿ ಅಂತಹ ಪರಿಸ್ಥಿತಿಯಾಗಿತ್ತು ನಮ್ಮದು.

ಅದರಲ್ಲೂ ಮುಖ್ಯವಾಗಿ ಯುಗಾದಿ ಹಬ್ಬ. ನೆರೆಹೊರೆಯಲ್ಲಿ ಚಾಂದ್ರಮಾನ ಯುಗಾದಿ ಆಚರಿಸುವುದು ನಮ್ಮ ಕುಟುಂಬವೊಂದೇ. ಉಳಿದವರೆಲ್ಲರೂ ಸೂರ್ಯಮಾನ ಯುಗಾದಿ ‘ವಿಶು’ವಿಗಾಗಿ ಕಾಯುತ್ತಿದ್ದರೆ, ನಮ್ಮ ಮನೆಯಲ್ಲಿ ನಾವು ಮಾತ್ರ ಬೇವು–ಬೆಲ್ಲ ತಿಂದು ಹೊಸ ವರ್ಷಕ್ಕೆ ಸ್ವಾಗತ ಕೋರುತ್ತಿದ್ದೆವು. ಈಗ ಹಬ್ಬಗಳೇ ತುಂಬಿರುವ ಸೀರಿಯಲ್‌ಗಳ ಪ್ರಭಾವವೋ ಏನೋ ಘಟ್ಟದವರ ಹಬ್ಬಗಳ ಬಗ್ಗೆ ಕರಾವಳಿಯಲ್ಲಿ ಅರಿವಿದೆ ಮತ್ತು ಕೆಲವಂತೂ ಆಚರಣೆಗೂ ಬಂದು ಬಿಟ್ಟಿವೆ. ಆದರೆ, ಆಗಿನ ಕಾಲದಲ್ಲಿ ಬೇವು-ಬೆಲ್ಲದ ಪರಿಕಲ್ಪನೆಯೇ ಇಲ್ಲದ ಕರಾವಳಿಗರು, ಅದನ್ನು ಸಂಕ್ರಾಂತಿಯ ಎಳ್ಳುಬೆಲ್ಲ ಎಂದು ತಪ್ಪಾಗಿ ತಿಳಿದು ನಮಗೂ ಕೊಡಿ ಎಂದು ಕೇಳಿ ಪಡೆದು ತಿಂದು ಪೆಚ್ಚಾಗುತ್ತಿದ್ದರು.

ನಮಗೂ ಬಾಲ್ಯದಲ್ಲಿ ಬೇವು–ಬೆಲ್ಲ ಇಷ್ಟದ ಸಂಗತಿಯೇನೂ ಆಗಿರಲಿಲ್ಲ. ಅದರ ಹಿಂದಿರುವ ಅರ್ಥ, ಸುಖ ದುಃಖದ ಮಾತುಗಳನ್ನೆಲ್ಲ ಹೇಳಿ ಕೊಟ್ಟರೂ ನಾವು ತಿನ್ನಲು ಸಿದ್ಧವಿರುತ್ತಿರಲಿಲ್ಲ. ನನಗಂತೂ ‘ಏನಿದು ವಿಚಿತ್ರ? ಮುಂದಿನ ವರ್ಷಪೂರ್ತಿ ಸಿಹಿಯಾಗಿರಲಿ ಎಂದು ಹಾರೈಸಿ, ಬೆಲ್ಲ ಕೊಡುವುದು ಸರಿಯಾದ ಕ್ರಮವಲ್ಲವೇ? ಬೇವು ಇರಬೇಕೆಂದು ನಾವೇ ಏಕೆ ನಿರ್ಧರಿಸಬೇಕು’ ಎಂದೆಲ್ಲಾ ಯೋಚನೆ. ಆ ಯೋಚನೆಗೆ ಸಂಜೆಯ ಯುಗಾದಿ ಪಂಚಾಗ ಶ್ರವಣ ಉತ್ತರ ಕೊಡುತ್ತಿತ್ತು. ಬೇವಿನ ಪ್ರಮಾಣ ಹೆಚ್ಚು ಕಮ್ಮಿ ಆಗಬಹುದೇ ಹೊರತು, ಬೇವಂತೂ ಇದ್ದೇ ಇರುತ್ತದೆ ಎಂಬುದರ ಅರಿವಾಗಿತ್ತು. ಸಣ್ಣವರಿದ್ದಾಗ ಪಂಚಾಂಗದಲ್ಲಿರುವ ವರ್ಷ ಭವಿಷ್ಯದ ಬಗ್ಗೆ ಭಾರೀ ಕುತೂಹಲ. ಅಂದು ಕೇಳಿ ಮರುದಿನ ಮರೆತುಬಿಡುತ್ತಿದ್ದ ಕಾರಣ, ಅದು ಎಷ್ಚರಮಟ್ಟಿಗೆ ನಿಜವಾಗಿರುತ್ತಿತ್ತೆಂಬುದು ಅರಿವಿಲ್ಲವಾದರೂ ಆ ಕ್ಷಣಕ್ಕೆ ಬೇವು–ಬೆಲ್ಲದ ನಿಜ ಅನುಭವ ಕೊಡುತ್ತಿತ್ತು.

ADVERTISEMENT

ಯುಗಾದಿ ವಿಶೇಷವೆನಿಸಲು ಮತ್ತು ಪಂಚಾಂಗ ಶ್ರವಣಕ್ಕೆ ವಿಶೇಷ ಅರ್ಥ ಸಿಗಲು ಇನ್ನೂ ಒಂದು ಕಾರಣವಿತ್ತು. ಈ ಹಬ್ಬ ಬಹುತೇಕ ವಾರ್ಷಿಕ ಪರೀಕ್ಷೆ ನಡೆಯುತ್ತಿರುವ ಸಮಯದಲ್ಲೇ ಬರುತ್ತಿತ್ತು. ಹಬ್ಬಕ್ಕೆಂದು ಸಿಕ್ಕ ರಜೆಯನ್ನು ಹಾಗೂ ಹೀಗೂ ಓದದೇ ಕಳೆದುಬಿಡುತ್ತಿದ್ದೆವು. ಹಬ್ಬ, ಅದರಲ್ಲೂ ವರ್ಷದ ಮೊದಲ ಹಬ್ಬ ಎಂಬ ಕಾರಣಕ್ಕೆ ಬೈಬಾರದು, ಹೊಡಿಬಾರದು ಎಂದು ತಮಗೆ ತಾವೇ ನಿಷೇಧಾಜ್ಞೆ ಹೇರಿಕೊಂಡಿರುತ್ತಿದ್ದ ಹಿರಿಯರು ಹೆಚ್ಚಾಗಿ ನಮ್ಮ ತಂಟೆಗೆ ಬರುತ್ತಿರಲಿಲ್ಲ. ಹೀಗಾಗಿ, ಕತ್ತಲಾಗುವ ವೇಳೆಗೆ ಏನೇನೂ ಓದಿಲ್ಲದ ಕಾರಣ, ಮರುದಿನದ ಪರೀಕ್ಷೆ ನೆನೆದು ಎದೆಯಲ್ಲಿ ಢವಡವ ಶುರುವಾಗಿರುತ್ತಿತ್ತು. ನನಗಂತೂ ಪಂಚಾಗದ ಭವಿಷ್ಯದಲ್ಲಿ ನನಗೆಷ್ಚು ಮಾರ್ಕ್ಸ್ ಬರುತ್ತದೆ ಎಂಬುದರ ಸುಳಿವು ಸಿಗಬಹುದೆಂಬ ದೂರದ ಆಶಯ. ಅಂತಹ ಸಂತಸದ ಸುದ್ದಿ ದೊರೆಯದೇ ಹೋದಾಗ ಶಾಲೆಯಲ್ಲಿ ಬಾಯಿಪಾಠ ಮಾಡಿದ್ದ ಬೇಂದ್ರೆ ಕವನ ನೆನಪಾಗುತ್ತಿತ್ತು. ‘ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ ನಮ್ಮನಷ್ಟೆ ಮರೆತಿದೆ’ ಎಂದು ಮನ ಅಳುತ್ತಿತ್ತು.

ಅಂತೂ ಈ ರೀತಿ, ನಮ್ಮ ಮನೆಯ ಬಾಗಿಲು ಮಾತ್ರ ಹಸಿರು ತೋರಣ ಧರಿಸಿ, ಬೇವಿನ ಎಲೆಯನ್ನು ಮುಡಿದುಕೊಂಡು ವಿಶೇಷವಾಗಿ ಕಾಣುವಾಗ, ನಮ್ಮ ತಂದೆ ಕೆಲವೊಮ್ಮೆ ಬೇರೆ ಊರಿಗೆ ಹೋಗಿ ನೆಲೆಯೂರುವ ಮಾತನಾಡುವುದಿತ್ತು. ನಮಗೆ ಅದರ ಅಗತ್ಯವೇನಿದೆ ಎಂಬ ಅರ್ಥವಾಗದೆ ಮಿಕಿ ಮಿಕಿ ನೋಡುತ್ತಿದ್ದೆವು. ಆಗೆಲ್ಲಾ ನನ್ನಪ್ಪ ಕೊಡುತ್ತಿದ್ದ ಕಾರಣ ಇದೊಂದೇ, ‘ಇಲ್ಲಿ ನಮ್ಮ ಹಬ್ಬಹರಿದಿನ ಒಂದೂ ಇಲ್ಲ. ಇದ್ದರೂ ಆಚರಣೆ ಬೇರೆ ರೀತಿ. ಎಷ್ಚು ವರ್ಷ ಅಂತ ನಾವಷ್ಟೇ ಹಬ್ಬ ಮಾಡ್ಕೊಂಡು ಇರೋದು?’ ನೆಲೆಸಿದ ಊರು ಬದಲಿಸುವಂತಹ ದೊಡ್ಡ ನಿರ್ಧಾರಕ್ಕೆ, ಎಲ್ಲರ ಜೊತೆ ಹಬ್ಬ ಆಚರಿಸಲು ಸಿಗೋದಿಲ್ಲ ಎಂಬ ಕಾರಣ ನೀಡುತ್ತಿದ್ದ ಅಪ್ಪ ನನಗೆ ಆಗ ಆಶ್ಚರ್ಯ ತರಿಸುತ್ತಿದ್ದರು. ಈಗ ಯೋಚಿಸುವಾಗ ಅರ್ಥವಾಗುತ್ತಾರೆ.

ನನ್ನ ಅಪ್ಪನಿಗೆ ಮಾತ್ರವಲ್ಲ, ಆ ಪೀಳಿಗೆಗೇ ಹಬ್ಬ, ಧಾರ್ಮಿಕ ಆಚರಣೆ ಎಂದರೆ ಅದೊಂದು ಭಾವನಾತ್ಮಕ ಸಂಭ್ರಮ. ಅವರು ಮಕ್ಕಳಾಗಿದ್ದ ಕಾಲಕ್ಕೆ ಹೊಟ್ಟೆ ತುಂಬ ಊಟ ಸಿಗುವುದೇ ಕಷ್ಟವಾಗಿದ್ದಾಗ, ಸಿಹಿ ತಿನ್ನಬೇಕಿದ್ದರೆ ಹಬ್ಬವೇ ಬರಬೇಕು, ಹೊಸ ಬಟ್ಟೆ ಬೇಕೆಂದರೂ ಹಬ್ಬಕ್ಕೇ ಕಾಯಬೇಕು. ಜೊತೆಗೆ, ಕೂಡು ಕುಟುಂಬಗಳಲ್ಲಿ ಹಬ್ಬಕ್ಕೊಂದು ವಿಶೇಷ ಸೊಬಗು ಸಿಗುತ್ತದೆ. ಈ ಬಾಲ್ಯದ ನೆನಪುಗಳಿಂದಾಗಿಯೇ ಇರಬೇಕು ಅವರಿಗೆ ಹಬ್ಬದೊಂದಿಗೆ ಒಂದು ಚಂದದ ನಂಟಿದೆ. ಹೀಗಾಗಿಯೇ ಇರಬೇಕು, ನಮ್ಮ ಮನೆಯಲ್ಲಿ ಹಬ್ಬದ ದಿನ ಪೂಜೆಗೆಲ್ಲ ಹೆಚ್ಚಿನ ಮಹತ್ವ ಕೊಡುತ್ತಿದ್ದ ನೆನಪಿಲ್ಲ. ನಮಗೆ ಹಬ್ಬವೆಂದರೆ ತೋರಣ, ರಂಗೋಲಿ, ಹಬ್ಬದೂಟ, ಹೊಸ ಬಟ್ಟೆ. ಒಟ್ಟು ಅದೊಂದು ಸಾಂಸ್ಕೃತಿಕ ಸಂಭ್ರಮ.

ನಮ್ಮ ಪೀಳಿಗೆಯೂ ಬಾಲ್ಯದಲ್ಲಿ ಹಬ್ಬಕ್ಕಾಗಿ ಕಾಯುತ್ತಿತ್ತು. ನಮ್ಮ ಹೆತ್ತವರಷ್ಚು ಸಂಭ್ರಮ ಇರಲಿಲ್ಲವಾದರೂ ಹಬ್ಬ ತನ್ನ ಚಾರ್ಮ್ ಕಳೆದುಕೊಂಡಿರಲಿಲ್ಲ. ನಮ್ಮ ಮಕ್ಕಳಿಗೆ, ಅಂದರೆ ಈಗಿನ ಪೀಳಿಗೆಗೆ ಮಾತ್ರ ಹಬ್ಬ ಯಾವುದೇ ದೊಡ್ಡ ಅನುಭೂತಿ ನೀಡುವುದು ಕಾಣುವುದಿಲ್ಲ. ಶಾಲೆಗೆ ರಜೆ ಎಂಬ ಸಂತೋಷವೊಂದು ಬಿಟ್ಟರೆ, ಅವರಿಗೆ ಸಿಹಿಯಾಗಲಿ, ಹೊಸ ಬಟ್ಟೆಯಾಗಲಿ ದೊಡ್ಡ ಮಟ್ಟಿನ ಸಂತಸ ತರುವುದಿಲ್ಲ. ಏಕೆಂದರೆ, ಇವು ಯಾವುವೂ ಅಪರೂಪವಾದ ವಸ್ತುಗಳಲ್ಲ ಅವರಿಗೆ. ಹಾಗೇ ನೋಡಿದರೆ, ತೋರಣ ಕಟ್ಟುವ ಕೆಲಸ ಕೊಡುತ್ತಾರೆ, ಎಣ್ಣೆ ನೀರು ಹಾಕುತ್ತಾರೆ, ಬೇಗ ಎಬ್ಬಿಸುತ್ತಾರೆ ಎಂಬಂತಹ ಸಣ್ಣ ಕಿರಿಕಿರಿಗಳೇ ಹಬ್ಬದ ಅಂಶವಾಗಿರುವಂತೆ ಕಾಣುತ್ತದೆ ಈಗಿನ ಮಕ್ಕಳಿಗೆ.

ಇಂತಹ ಯುಗಾದಿಯಂತಹ ಯುಗಾದಿ ಹಬ್ಬವೇ ಈಗೆರಡು ವರ್ಷಗಳಿಂದ ಕಳೆ ಕಳೆದುಕೊಂಡಿದೆ. ಕೊರೊನಾ ನುಂಗಿ ಹಾಕಿದ್ದ ಮೊತ್ತಮೊದಲ ದೊಡ್ಡ ಹಬ್ಬವೇ ಯುಗಾದಿ. 2020ರ ಮಾರ್ಚ್ ತಿಂಗಳಲ್ಲಿ ಎಂದಿನಂತೆ ಭೂತಾಯಿ ಹೊಸ ಚಿಗುರುಗಳ ಮೂಲಕ, ತನ್ನ ಹಸಿರ ಹೊದಿಕೆಯನ್ನು ನವೀಕರಿಸಿಕೊಳ್ಳಲು ಆರಂಭಿಸಿಯಾಗಿತ್ತು. ಯುಗಾದಿಗೆ ಇನ್ನೇನು ಎರಡು ದಿನವಷ್ಟೇ ಬಾಕಿ ಉಳಿದಿತ್ತು. ಹಬ್ಬದ ಆಚರಣೆಗೆ ಭರ್ಜರಿ ಖರೀದಿ, ಸಿದ್ಧತೆ ನಡೆಯಬೇಕಿದ್ದ ಭಾನುವಾರದಂದು, ಜನರೆಲ್ಲಾ ಮನೆಯೊಳಗೇ ಕುಳಿತು ಜನತಾ ಕರ್ಫ್ಯೂ ಆಚರಿಸಿದ್ದರು. ಕೊರೊನಾ, ಕೋವಿಡ್, ಲಾಕ್‌ಡೌನ್ ಪದಗಳು ದಿನದ ಮಾತುಕತೆಯ ಅವಿಭಾಜ್ಯ ಅಂಗವಾಗಿ ಬಿಟ್ಟಿದ್ದವು. ಆಗ ಹಬ್ಬಕ್ಕಾಗಿ ಕಷ್ಟಬಿದ್ದು ಹೇಗೇಗೋ ಪ್ರಯಾಣಿಸಿ ತಮ್ಮೂರು ತಲುಪಿದ್ದ ಹಲವರು ಇನ್ನೂ ನಗರಕ್ಕೆ ಮರಳಿಲ್ಲ ಎಂಬುದು ಎರಡು ವರ್ಷಗಳಲ್ಲಿ ಸಂಪೂರ್ಣ ಬದಲಾದ ಬದುಕಿಗೆ ದೊಡ್ಡ ಸಾಕ್ಷಿಯಾಗಿದೆ.

ಲಾಕ್‌ಡೌನ್, ಜನತಾ ಕರ್ಫ್ಯೂಗಳೆಲ್ಲಾ ಹೊಸದಾಗಿದ್ದ, ಕೊರೊನಾ ಭಯ ಅತಿಯಾಗಿದ್ದ ಆ ಅವಧಿಯಲ್ಲೂ ಸಂವತ್ಸರದ ಮೊದಲ ಹಬ್ಬವನ್ನು, ಹೊಸ ವರ್ಷವನ್ನು ಜನ ಆಚರಿಸದೇ ಬಿಡಲಿಲ್ಲ. ನಾವಿಲ್ಲಿ ಹಬ್ಬದ ದಿನ ಮನೆಯಿಂದ ಹೊರಗೆ ಕಾಲಿಡದೆ, ಸಿಕ್ಕಿದ್ದರಲ್ಲಿ ಹಬ್ಬ ಮಾಡಿ, ಒಬ್ಬಟ್ಟಿನ ಜೊತೆ ಹಬ್ಬದೂಟ ಮುಗಿಸಿದ್ದೆವು. ಅಲ್ಲಿ ನನ್ನಪ್ಪ-ಅಮ್ಮ ಲಾಕ್‌ಡೌನ್ ತೆರವಾಗುವ ಬೆಳಗಿನ ಸಣ್ಣ ಅವಧಿಯಲ್ಲೇ ಮಾವಿನಸೊಪ್ಪು, ಮಾವಿನಕಾಯಿ ತಂದು ಹಬ್ಬಕ್ಕೆ ಏನೂ ಕೊರತೆಯಾಗದಂತೆ ನೋಡಿಕೊಂಡಿದ್ದರು. ‘ಈ ಟೈಮ್‌ನಲ್ಲಿ ಯಾಕೆ ಹೊರಗೆ ಹೋಗೋಕೆ ಹೋದ್ರಿ’ ಎಂಬ ಮಕ್ಕಳ ಅಸಮಾಧಾನಕ್ಕೆ ‘ಮಾವಿನಕಾಯಿ ಚಿತ್ರಾನ್ನ ಇಲ್ಲದೆ ಯುಗಾದಿ ಮಾಡೋಕೆ ಆಗುತ್ತಾ? ವರ್ಷದ ಮೊದಲ ಹಬ್ಬ’ ಎಂದಿದ್ದರು ಹಬ್ಬಗಳ ಅಭಿಮಾನಿ ನನ್ನಪ್ಪ.

ಮುಂದಿನ ವರ್ಷದ ಯುಗಾದಿ ವೇಳೆಗೂ ಪರಿಸ್ಥಿತಿ ಸುಧಾರಿಸಿರಲಿಲ್ಲ. ಒಂದೇ ವ್ಯತ್ಯಾಸವೆಂದರೆ ಕೊರೊನಾ ಪೀಡಿತರ ಸಂಖ್ಯೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಿಕ್ಕಾಪಟ್ಟೆ ಹೆಚ್ಚಿತ್ತು. ಆದರೆ, ಭಯ ಕಡಿಮೆಯಾಗಿತ್ತು. ಜನ ಮಾಸ್ಕ್, ಲಾಕ್‌ಡೌನ್‌ಗಳ ಜೊತೆ ಬದುಕುವುದನ್ನೂ ಕಲಿತಿದ್ದರು. ಲಾಕ್‌ಡೌನ್ ತಂದೊಡ್ಡಿದ್ದ ಸಂಕಷ್ಟದ ನಡುವೆ ನೂರಾರು ಕಿ.ಮೀ. ನಡೆದಿದ್ದ ಪಾದಗಳ ಗಾಯ ಆರಿತ್ತು. ಆದರೆ, ಮುಂದೆ ರಕ್ಕಸನಂತೆ ಕಾದು ಕುಳಿತಿದ್ದ ಕೋವಿಡ್ ಎರಡನೇ ಅಲೆಯ ವಿನಾಶಕಾರಿತ್ವದ ಬಗ್ಗೆ ಅರಿವಿರಲಿಲ್ಲ. ಹೀಗಾಗಿ, ಹಲವು ಕೊರತೆಗಳ ನಡುವೆಯೇ, ಕಳೆದ ವರ್ಷವೂ ಯುಗಾದಿ ಆಚರಿಸಲ್ಪಟ್ಟಿತು. ಆದರೆ, ಒಬ್ಬಟ್ಟಿನ ಸವಿ ಇನ್ನೂ ನಾಲಗೆಯ ಮೇಲೆ ಇರುವಾಗಲೇ ಕೋವಿಡ್ ಮುಂದಿನ ಅನಾಹುತದ ಸೂಚನೆ ನೀಡತೊಡಗಿತ್ತು. ನಂತರದ ಎರಡು ತಿಂಗಳಿನದ್ದು ಒಂದು ಕರಾಳ ಅಧ್ಯಾಯ. ಅದರ ನೆನಪು, ಅದರ ಪರಿಣಾಮ ಹಲವರ ಬದುಕಲ್ಲಿ ಶಾಶ್ವತ ಗಾಯ ಉಳಿಸಿ ಹೋಗಿದೆ.

ಈ ಎಲ್ಲಾ ಕಹಿ ನೆನಪುಗಳನ್ನು ಕೊಂಚವಾದರೂ ಮರೆಸುವಂತೆ ಯುಗಾದಿ ಮರಳಿ ಬಂದಿದೆ. ಬಹುತೇಕ ಸಾಮಾನ್ಯ ಸ್ಥಿತಿಗೆ ಮರಳಿರುವ ಜಗತ್ತಿಗೆ ಎರಡು ವರ್ಷಗಳ ನಂತರ ಮತ್ತೆ ಸಂಭ್ರಮದ ಯುಗಾದಿ ಆಚರಣೆಗೆ ಅವಕಾಶ ದೊರೆತಿದೆ. ಶಾರ್ವರಿ, ಪ್ಲವಗಳು ಕಳೆದು ಶುಭಕೃತ್ ಅಡಿಯಿಡುತಿದೆ. ಅದು ಹೆಸರಿನಲ್ಲಷ್ಟೇ ಅಲ್ಲದೆ ಎಲ್ಲರ ಬಾಳಲ್ಲೂ ಶುಭತರಲಿದೆ ಎಂಬ ಆಶಯ ನಿಜವಾಗಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.