ADVERTISEMENT

ಭಕ್ತಿಸಾಗರಕ್ಕೆ ಕನ್ನಡದ ನದಿಗಳು

ನವೀನ ಗಂಗೋತ್ರಿ
Published 1 ನವೆಂಬರ್ 2019, 19:31 IST
Last Updated 1 ನವೆಂಬರ್ 2019, 19:31 IST
   

ಭಾರತೀಯ ಭಾಷೆಗಳ ಸಾಹಿತ್ಯದ ಇತಿಹಾಸವನ್ನು ಗಮನಿಸಿದರೆ ನಮಗೆ ಢಾಳಾಗಿ ಕಾಣುವ ಹೆಜ್ಜೆಗುರುತು ಭಕ್ತಿಯದ್ದು. ಭಕ್ತಿಯು ಸಮಾಜವನ್ನು ಕಟ್ಟಿದೆ, ಸಾಹಿತ್ಯವನ್ನು ನಿರ್ಮಿಸಿದೆ, ನಿರ್ಮಾಣಾತ್ಮಕವಾದ ಬಹುತೇಕ ಎಲ್ಲ ಸಂಗತಿಗಳ ಹಿಂದೆ ಭಕ್ತಿ ಇದೆ. ಕನ್ನಡದ ಮಟ್ಟಿಗೂ ಇದು ಬಹಳ ಸತ್ಯವಾದ ಮಾತು. ವಚನ ಸಾಹಿತ್ಯವು ಭಕ್ತಿಯ ಜೊತೆಯಲ್ಲಿ ತಾತ್ತ್ವಿಕ ಮತ್ತು ಸಾಮಾಜಿಕ ಅಂಶಗಳನ್ನೂ ಪರಿಗಣಿಸುತ್ತಿದ್ದರೆ, ದಾಸಸಾಹಿತ್ಯವು ವಿಶೇಷವಾಗಿ ಭಕ್ತಿಗೆ ಪ್ರಾಶಸ್ತ್ಯ ಕೊಟ್ಟಿದೆ.

ತಾವು ಬದುಕಿನಲ್ಲಿ ಕಂಡುಕೊಂಡ ತತ್ತತ್ಕಾಲಿಕವಾದ ಮತ್ತು ಸಾರ್ವಕಾಲಿಕವಾದ ಸತ್ಯಗಳನ್ನು ನೆನಪಿನ ಗಂಟಿನಂತೆ ಸಾಹಿತ್ಯದಲ್ಲಿ ಅಡಕವಾಗಿಸಿಡುವುದು ಭಾರತೀಯ ಭಾಷಾ ಸಮುದಾಯಗಳ ಪರಂಪರೆ. ಸಂಸ್ಕೃತದ ಸುಭಾಷಿತಗಳು, ತಮಿಳಿನ ತಿರುಕ್ಕುರಳ್, ಕನ್ನಡದ ಸರ್ವಜ್ಞನ ತ್ರಿಪದಿಗಳು ಕೂಡ ಈ ಬಗೆಯ ದೈನಂದಿನ ಸತ್ಯಗಳನ್ನು ಹೊತ್ತು ಸಾಗುವ ಮುಕ್ತಕಗಳೇ. ಇವುಗಳಲ್ಲಿ ಹಲವು ಕೃತಿಗಳು ಕಾಲ ಕಳೆದಂತೆ ಧಾರ್ಮಿಕ ಮಹತ್ತನ್ನು ಪಡೆದುಕೊಂಡವು. ಭಾರತೀಯ ವಿಚಾರದಲ್ಲಿ ಹೇಳುವುದಾದರೆ ರಾಜಕೀಯ, ಧಾರ್ಮಿಕ, ಸಾಮಾಜಿಕ ಮತ್ತು ವೈಯಕ್ತಿಕ ಅನ್ನುವ ವರ್ಗೀಕರಣವು ಇಲ್ಲಿ ನಿಚ್ಚಳವಲ್ಲದ್ದರಿಂದ ಗೌರವಾನ್ವಿತವಾದ ಎಲ್ಲವೂ ಇಲ್ಲಿ ಧಾರ್ಮಿಕ ಬಣ್ಣದಲ್ಲೇ ಕಾಣಿಸಿಕೊಳ್ಳುತ್ತದೆ. ತಮಿಳಿನ ತಿರುಕ್ಕುರಳ್ ಮತ್ತು ಕನ್ನಡದ ವಚನ ಸಾಹಿತ್ಯ ಈ ಸಾಲಿಗೆ ಸೇರುವಂತಹವು. ಇದೇ ಸಾಲಿನಲ್ಲಿ ಇನ್ನೂ ಹಿಂದಿನ ಕಾಲವನ್ನು ಗಮನಿಸುವಾಗ ಉಪನಿಷತ್ತುಗಳು ಗಹನವಾದ ಜೀವನಸತ್ಯಗಳನ್ನು ತಮ್ಮದೇ ಶೈಲಿಯಲ್ಲಿ ಅರುಹಿದ್ದನ್ನು ಕಾಣುತ್ತೇವೆ. ಕನ್ನಡದ ಸಂದರ್ಭದಲ್ಲಿ ತೀರಾ ಅರ್ವಾಚೀನ ಕಾಲದಲ್ಲಿ ಈ ಎತ್ತರಕ್ಕೆ ನಿಲ್ಲಬಹುದಾದ ಸಾಹಿತ್ಯವೆಂದರೆ ಡಿ.ವಿ. ಗುಂಡಪ್ಪನವರ ಮಂಕುತಿಮ್ಮನ ಮತ್ತು ಮರುಳ ಮುನಿಯನ ಕಗ್ಗಗಳು. ಈ ಎಲ್ಲ ಸಾಹಿತ್ಯವೂ ಅರುಹಲೆತ್ನಿಸಿದ ಮತ್ತು ಪ್ರತಿಪಾದಿಸಿದ ವಸ್ತುಸಂಗತಿಯು ಅಂಶತಃ ಅಥವಾ ಪೂರ್ಣತಃ ಒಂದೇ ಆಗಿದೆ. ವಿಷಯಕ್ಕೆ ಸಂಬಂಧಿಸಿದ್ದು ಮಾತ್ರವಲ್ಲದೆ ಇವುಗಳ ಸಂರಚನೆಯಲ್ಲಿಯೂ ಒಂದಿಷ್ಟು ಸಾಮ್ಯವನ್ನು ಕಾಣುತ್ತೇವೆ; ಕಾವ್ಯದಷ್ಟು ಲಲಿತವಾಗಿ ಹರಿಯಬಾರದೆಂಬೊಂದು ಎಚ್ಚರವನ್ನು ವಚನ ಸಾಹಿತ್ಯವಾಗಲೀ ಸರ್ವಜ್ಞನ ತ್ರಿಪದಿಗಳಾಗಲೀ ಕಾಯ್ದುಕೊಳ್ಳುತ್ತವೆ.

ದಾಸ ಸಾಹಿತ್ಯದಲ್ಲಿ ಸುಕುಮಾರ ಲಾಲಿತ್ಯವೂ ಗೇಯತೆಯೂ ಮಾಧುರ್ಯವೂ ಆರಾಧನಾಭಾವವೂ ಸಂಗೀತವೂ ಹದವಾಗಿ ಬೆರೆತು ವಿವಿಧ ವರ್ಗದ ಮನಸುಗಳನ್ನು ಸೋಕುವಲ್ಲಿ ಯಶಸ್ವಿಯಾಗುತ್ತದೆ. ಅದರಲ್ಲೂ ಪುರಂದರ ದಾಸರಂಥ ಸಂಗೀತವರೇಣ್ಯರಿಂದ ರಚಿತವಾದ ಭಕ್ತಿ ಪ್ರಧಾನವಾದ ಸಾಹಿತ್ಯವಂತೂ ಹಾಡಿದಷ್ಟೂ ಮತ್ತೆ ಮತ್ತೆ ನೂತನವಾಗುತ್ತಲೇ ಸಾಗುತ್ತದೆ. ಗೇಯತೆಗೊಂದು ಅಸಾಧಾರಣವಾದ ಶಕ್ತಿಯಿದೆ, ಅದು ತತ್ತ್ವ ಮತ್ತು ಭಕ್ತಿಯನ್ನು ಇನ್ನಷ್ಟು ಹೊಳೆಯುವಂತೆ ಮಾಡುತ್ತದೆ. ದಾಸ ಸಾಹಿತ್ಯದ ಚಿರಂಜೀವತೆ ಮತ್ತು ಲೋಕಪ್ರಿಯತೆಯ ಗುಟ್ಟು ಇದೇ ಆಗಿದೆ. ಕನ್ನಡವನ್ನು ಅನನ್ಯಗೊಳಿಸುವಲ್ಲಿ ದಾಸಸಾಹಿತ್ಯದ್ದು ಅವಿಸ್ಮರಣೀಯವಾದ ಕೊಡುಗೆ.

ADVERTISEMENT

ಮೇಲುನೋಟಕ್ಕೆ ಭಕ್ತಿರಸ ಮತ್ತು ಗೇಯತೆಯ ಕಾರಣಕ್ಕೆ ಆಪ್ಯವೆನ್ನಿಸುವ ದಾಸರ ಪದಗಳು ನಿಜಕ್ಕೂ ಅಷ್ಟು ಸಲೀಸಲ್ಲವೇ ಅಲ್ಲ. ದಾಸರ ಪದಗಳು ತುಂಬಾ ಎಚ್ಚರದಿಂದ ತಮ್ಮ ತತ್ತ್ವಗಳ ಮೂಲವನ್ನು ಸ್ಮರಿಸುತ್ತವೆ. ದಾಸ ಸಾಹಿತ್ಯವನ್ನು ಮಾತ್ರ ಓದಿಕೊಂಡು ಆಸ್ವಾದಿಸುವವನಿಗೆ ಆ ಸೂಕ್ಷ್ಮ ಕಾಣದೇ ಹೋಗಬಹುದು. ಆದರೆ ಪರಂಪರೆಯ ಪೂರ್ವಪೂರ್ವ ಭಾಗಗಳನ್ನು ಗಮನಿಸುವವನಿಗೆ ದಾಸರ ಅಧ್ಯಯನ ಗಹನತೆ ಅರಿವಿಗೆ ಬರುತ್ತದೆಯಷ್ಟೆ.

ಒಂದು ಸಣ್ಣ ಉದಾಹರಣೆ ನೋಡಿ – ಶ್ರೀ ಪುರಂದರ ದಾಸರ ಜಗದೋದ್ಧಾರನ ಆಡಿಸಿದಳೆಶೋದೆ ಅನ್ನುವ ಅವಿನಾಶಿಯಾದ ಹಾಡಿನಲ್ಲಿ ’ಅಣೋರಣೀಯನ, ಮಹತೋಮಹೀಯನ’ ಅಂತೊಂದು ಸಾಲು ಬರುತ್ತದೆ. ಅದು ಉಪನಿಷತ್ತಿನ ಮಾತು. ಅದೇ ತತ್ತ್ವವನ್ನು ಶ್ರುತಿಯೂ ’ನಮೋ ಮಹದ್ಭ್ಯಃ, ಕ್ಷುಲ್ಲಕೇಭ್ಯಃ’ ಇತ್ಯಾದಿ ಬೇರೆ ಮಾತುಗಳಲ್ಲಿ ಹೇಳಿದೆ. ಆದರೆ ದಾಸರು ತಮ್ಮ ಪದ್ಯದಲ್ಲಿ ಅರ್ಥವನ್ನು ಮಾತ್ರ ಆಯ್ದುಕೊಳ್ಳದೇ ಆ ನುಡಿಗಟ್ಟನ್ನೇ ಉಪನಿಷತ್ತಿನಿಂದ ಆಯ್ದು ಬಳಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ, ಅಣೋರಣೀಯಾನ್ ಅನ್ನುವುದನ್ನೇ ಕನ್ನಡದ ಅಂದಣಕ್ಕೆ ಮತ್ತು ತಮ್ಮ ಪದ್ಯದ ವಿಭಕ್ತಿಗೆ ಹೊಂದುವಂತೆ ’ಅಣೋರಣೀಯನ’ ಅಂತ ಬಳಸಿಕೊಂಡಿದ್ದು ಕಾಕತಾಳೀಯವಂತೂ ಆಗಿರಲಿಕ್ಕಿಲ್ಲ. ಪರಂಪರೆಯನ್ನು ಮೆರೆಸುವ, ಮರೆಯದಂತೆ ಕಾಪಿಡುವ ಒಬ್ಬ ನಿಜವಾದ ಸಂತನ ಪ್ರಯತ್ನವದು.

ವೇದ ಮತ್ತು ಉಪನಿಷತ್ತುಗಳ ಅಂತಸ್ಸತ್ತ್ವವನ್ನೇ ಉಸಿರಾಗಿಸಿಕೊಂಡು ವಿವಿಧ ಪ್ರಕಾರಗಳಲ್ಲಿ ಹರಿದುಬಂದ, ಕನ್ನಡ ಸೇರಿದಂತೆ ದೇಶದ ಎಲ್ಲ ಭಾಷೆಗಳ ಭಕ್ತಿಪರಂಪರೆ/ಧಾರ್ಮಿಕಪರಂಪರೆ ಆಸ್ವಾದಯೋಗ್ಯ ಮಾತ್ರವಲ್ಲ, ಅಧ್ಯಯನ ಯೋಗ್ಯವೂ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.