ADVERTISEMENT

ಸಮಬಾಳು ಸಮಪಾಲು ತತ್ವದ ಕನಕದಾಸರು

ನಿಂಗಪ್ಪ ಮುದೇನೂರು
Published 17 ನವೆಂಬರ್ 2024, 19:50 IST
Last Updated 17 ನವೆಂಬರ್ 2024, 19:50 IST
ಕನಕದಾಸರು
ಕನಕದಾಸರು   

ಮಧ್ಯಕಾಲೀನ ಸಮಾಜದಲ್ಲಿ ನಿಂತುಕೊಂಡು ಕನಕದಾಸರು ‘ಕಲಿ ಏರಿ ಬಂತು' ಎನ್ನುವ ಕೀರ್ತನೆಯನ್ನು ಬರೆಯುವ ಮೂಲಕ ತಮ್ಮ ಬಂಡುಕೋರ ಮನೋಧರ್ಮವನ್ನು ತೋರಿರುವರು. ಪ್ರಭುತ್ವ, ಪ್ರಬಲ ವರ್ಗ, ಜಾತಿಗಳು ಹೇಗೆ ತಳ ಸಮುದಾಯಗಳ ಅಸ್ಮಿತೆಯನ್ನು ಕಲಕುತ್ತಿದ್ದವು ಎನ್ನುವ ಅರ್ಥದಲ್ಲಿ ಕನಕರು ಅಂದು ಮಾತನಾಡಿದ್ದು ಅಪಾರವಿದೆ. ಅವರ ರಾಮಧಾನ್ಯಚರಿತೆ ಒಂದೇ ಸಾಕು ಎಲ್ಲ ಕಾಲಮಾನಕ್ಕೂ ಕನ್ನಡಿ ಹಿಡಿಯಲು. ಅದರ ಸಣ್ಣ ಸಣ್ಣ ಬಿಂಬಗಳಂತೆ ಪ್ರಖರ ವೈಚಾರಿಕ ಚಿಂತನೆಯನ್ನು ಕನಕದಾಸರು ತಮ್ಮ ಹಲವು ಕೀರ್ತನೆಗಳಲ್ಲಿ, ಕೃತಿಗಳ ಒಡಲಲ್ಲಿ ಸಾರಿರುವರು.

ಅತ್ತೆ ಸೊಸೆಯಾಗುವ, ಸೊಸೆ ಅತ್ತೆಯಾಗುವ, ಪುತ್ರ ಪಿತನಾಗುವ, ಪಿತ ಪುತ್ರನಾಗುವ ಇಂತಹ ಕೌಟುಂಬಿಕ ಯಾಜಮಾನ್ಯ ವ್ಯವಸ್ಥೆಯ ನಡುವೆ ತಮ್ಮ ಅನ್ನ ವಸ್ತ್ರಗಳಿಂದ ಚೆನ್ನಾಗಿ ಬಾಳುವವರನ್ನೂ ಭಿನ್ನ ತಂತ್ರವ ಮಾಡಿ ಕೆಡಿಸುತ್ತಿರುವ ಜನರ ಕುರಿತು ಕನಕ ಮಾತನಾಡಿದರು.

ಸತ್ಯ ಧರ್ಮಗಳೆಲ್ಲ ಎತ್ತಪೋದವೋ ಕಾಣೆ. ಉತ್ತಮರ ಜೀವನಕ್ಕೆ ದಾರಿ ಇಲ್ಲವೇ ಎನ್ನುವ ಆತಂಕಭರಿತ ಮಾತುಗಳಲ್ಲೇ ಕನಕರು, ನಿತ್ಯದಲ್ಲಿ ಕಳವು ಮಾಡುವ, ವ್ಯಭಿಚಾರ ಮಾಡುವ, ಅರ್ಥ ಸಂಪದರಾಗಿ ಮೆರೆಯುವ ಗರ್ವಿಗಳು ಇರುವಾಗ ಹರಿಹರರ ಪೂಜೆಗಳು ಹಗರಣಗಳಾಗದೆ ಇರಲು ಸಾಧ್ಯವೇ ಎನ್ನುವ ನಿತ್ಯ ಸತ್ಯದ ಮಾತುಗಳನ್ನು ಪ್ರಶ್ನೆಯಾಗಿಸಿದ್ದಾರೆ. ವಿಜಯನಗರ ಸಾಮ್ರಾಜ್ಯದ ಒಳ ಹೊರಗನ್ನು ಚೆನ್ನಾಗಿ ಬಲ್ಲವರಾಗಿದ್ದ ಕನಕದಾಸರು ತಮ್ಮ ಮೋಹನ ತರಂಗಿಣಿ ಹಾಗೂ ರಾಮಧಾನ್ಯ ಚರಿತೆ ಕಾವ್ಯಗಳಲ್ಲಿ ಕಾಲಮಾನದ ಕಡು ಚರಿತ್ರೆಯನ್ನು ಕಟ್ಟಿಕೊಟ್ಟಿರುವರು. ಅವರ ಸಾಹಿತ್ಯದೊಳಗಿರುವ ವಿಜಯನಗರದ ಇತಿಹಾಸ ನಮಗೆ ಮುಖ್ಯವಾಗಲೇ ಇಲ್ಲ. ಆ ಕಾಲದ ಕವಿ ಕೃತಿಗಳನ್ನು ಶೋಧಿಸಿದರೆ ಪ್ರಭುತ್ವದ ಚರಿತ್ರೆಯಷ್ಟೇ ಅಲ್ಲ, ಜನಚರಿತ್ರೆಯೂ ತೆರೆದುಕೊಳ್ಳುತ್ತದೆ.

ADVERTISEMENT

ಭಕ್ತಿ ಎನ್ನುವುದು ಆಡಂಬರವಾಗಬಾರದು. ದೇವಾಲಯಗಳು ವ್ಯಾಪಾರ ಕೇಂದ್ರಗಳಾಗಬಾರದು. ಪುರೋಹಿತರು ಜನಸಾಮಾನ್ಯರ ವಿರೋಧಿಗಳಾಗಬಾರದು. ದೇವರು ಧರ್ಮದ ಹೆಸರಿನಲ್ಲಿ ಕೇಡನ್ನು ಬಯಸುವ ಸಂಗತಿಗಳಳಿದು ಮುಕ್ತವಾದ ಮಾನವ ಸಮಾಜ ರೂಪಗೊಳ್ಳಬೇಕಾದ ಸಂಗತಿಗಳತ್ತ ಕನಕದಾಸರು ನಮ್ಮ ಗಮನ ಸೆಳೆಯುತ್ತಾರೆ. ಕನಕರು ನಂಬಿಕೆಯಲ್ಲಿ ವಿಶ್ವಾಸ ಇಟ್ಟವರು. ಸಮಾಜದ ಹಲವು ವೈರುಧ್ಯಗಳಿಗೆ ಸಮತೆಯ ಹಕ್ಕುಗಳನ್ನು ಒದಗಿಸಿದವರು. ದ್ವೇಷ ಇರುವಲ್ಲಿ ಪ್ರೀತಿಯ ಜೇನ ಹನಿಸಿದವರು. ಇಂಥ ಕನಕದಾಸರು ಪುರಾಣಗಳು ನಂಬಿಸಿದ ಹಲವು ಸಂಗತಿಗಳತ್ತ ತಮ್ಮ ಗಮನ ಹರಿಸುತ್ತಾರೆ. ಜನಕ ಹಿತದವನೆಂದು ನಂಬಬಹುದೇ, ಸಹೋದರನು ಮಮತೆ ಉಳ್ಳವನೆಂದು ನಂಬಬಹುದೇ, ಅದಿರಲಿ, ದೇಹಾನುಬಂಧಗಳೇ ತನಗೆ ಬಂಧುಗಳೆಂದು ಮನದ ನಿಚ್ಚಳವಾಗಿ ನಂಬಬಹುದೇ, ಆರು ಹಿತದವರೆಂದು ನಂಬುವುದು? ಈ ಪ್ರಶ್ನೆಗಳನ್ನ ನಾವು ವರ್ತಮಾನದಲ್ಲೂ ಕೇಳಿಕೊಳ್ಳಬಹುದು.

ಪುರಾಣದ ವಾಲಿ, ಸುಗ್ರೀವ, ಕರ್ಣ, ಕುಂತಿಯರ ಪಾಡು ಏನೇ ಇರಲಿ, ನಮ್ಮ ಕಾಲಮಾನ ಜ್ಞಾನದ ವಿಕಸಿತ ಭಾರತದ ಕಾಲಮಾನ. ವಿಶ್ವಪ್ರಜ್ಞೆಯನ್ನು ಕನ್ನಡದ ಮೂಲಕ ಬೆಳೆಸಿಕೊಳ್ಳುವ ಕಾಲಮಾನ. ಇದು ಏನನ್ನು ಬಯಸಿ ನಿಂತಿದೆ ಎಂದು ನಮ್ಮನ್ನು ನಾವು ಆತ್ಮಾವಲೋಕನ ಮಾಡಿಕೊಂಡರೆ ಕನಕರು ಇಂದು ನಮ್ಮ ಮಧ್ಯೆ ನಿಂತು ಮತ್ತೆ ಕೇಡುಗಳಿಲ್ಲದ, ಜಾತಿ, ವರ್ಗ ಅಸಮಾನತೆಗಳಿಲ್ಲದ ಭಾರತೀಯ ಸಮ ಸಮಾಜದ ಕನಸ ಬಿತ್ತುವವರಾಗಿ ಕಾಣಿಸುತ್ತಾರೆ. ಕನಕರೇ ಒಂದೆಡೆ ಹೇಳಿರುವಂತೆ ‘ಗಳಿಸದಿರು ಸೀಮೆಯನು ಗಳಿಸದಿರು ದ್ರವ್ಯವನು...’ ಇದು ವರ್ತಮಾನದಲ್ಲಾಗಲಿ, ಭವಿಷ್ಯದಲ್ಲಾಗಲಿ ಸಾಧ್ಯವೇ?

ಸೀಮೆಯನ್ನು ಗಳಿಸಿ, ಭೂಮಿಯನ್ನು ನಾವು ಹೇಗೆ ಬಂಜರು ಮಾಡಿದ್ದೇವೆ. ಭೂಮಿಯ ಒಡಲಲ್ಲಿರುವ ಬೇರುಗಳನ್ನು ನಾವು ಹೇಗೆಲ್ಲಾ ನಾಶ ಮಾಡಿದ್ದೇವೆ. ಧನ ಕನಕ ಸಂಪತ್ತನ್ನು ನಾವು ಹೇಗೆ ಲೂಟಿ ಮಾಡಿದ್ದೇವೆ. ನಮ್ಮ ಸಾಮಾಜಿಕ ಅಧಃಪತನ, ರಾಜಕೀಯ ಹೊಸ ಪತನಗಳ ನಡುವೆ ಮಾನವೀಯ ಜೀವಸೆಲೆಯೇ ಇಂದು ಕಣ್ಮರೆಯಾಗುತ್ತಿರುವ ಕಾಲಮಾನದಲ್ಲಿ ಕನಕರ ನುಡಿಯನ್ನು, ಸಂತರ ನುಡಿಯನ್ನು ಬಾಳಿಸುವವರು ಯಾರು ಎನ್ನುವ ಪ್ರಶ್ನೆ ನಮ್ಮೆದುರಿಗಿದೆ.

ಕನಕರು ದೇವರಿಗೆ, ತಮ್ಮ ಆದಿಕೇಶವನಿಗೆ, ಉಡುಪಿಯ ಶ್ರೀಕೃಷ್ಣನಿಗೆ ಎಷ್ಟು ಪ್ರಿಯರೋ ಗೊತ್ತಿಲ್ಲ. ಆದರೆ, ಸಾಮಾನ್ಯ ಮನುಷ್ಯನಿಗೂ ಹತ್ತಿರವಾಗಿ ಜೀವಪರವಾಗುವ, ಮನುಷ್ಯ ಸಮಾಜವನ್ನು ಜಾಗೃತಿಯಲ್ಲಿರಿಸುವ ಕಾರ್ಯವನ್ನು ಮಾಡಿರುವರು. ಅವರು ಸಾರಿದ ಬಹುದೊಡ್ಡ ಮಾತೃವಾತ್ಸಲ್ಯದ ಸಾದೃಶ್ಯ ತತ್ವವೆಂದರೆ- ಜಲವೇ ಸಕಲ ಕುಲಕ್ಕೂ ತಾಯಿ ಎಂಬುದು. ಜಲದಲ್ಲಿ ಕುಲವನರಸಬಾರದೆಂಬುದು. ಇಂತಹ ಸಮಾನತೆಯ ನಡೆ, ಆಶಯಗಳೇ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಉಸಿರ ತಂತುಗಳಂತಿವೆ. ನಮ್ಮ ನುಡಿಯ ಇಂತಹ ಗುಡಿಗಾರರು ಇರುವುದರಿಂದಲೇ ಸಮಾಜ ಒಂದಿಷ್ಟು ಹಸನಾಗಿದೆ.

‘ಮುತ್ತು ಬಂದಿದೆ ಕೇರಿಗೆ ಜನರು ಕೇಳಿ ಭಕ್ತಿಯುಳ್ಳವರೆಲ್ಲ ಕಟ್ಟಿಕೊಳ್ಳಿ ಸೆರಗಿನಲ್ಲಿ’ ಎಂದು ತಮ್ಮನ್ನು ತಾವೇ ಸುಜ್ಞಾನಕ್ಕೆ ಒಡ್ಡಿಕೊಂಡು ದಾಸಪಂಥದ ಯುಗಮಾನವನ್ನು ಕಾವ್ಯಗಂಧದ ಮೂಲಕ ಪಸರಿಸಿದ ಸಂತರು ಅವರು. ಈ ವರ್ತಮಾನದ ಎಲ್ಲ ಬಗೆಯ ಸಂಕಟಗಳಿಗೂ ಪ್ರಗತಿಪರವಾದ ಒಂದು ಮನೋಧರ್ಮ ಬೇಕು. ಅದು ಬುದ್ಧ, ಬಸವ, ಕನಕ, ಅಂಬೇಡ್ಕರ್ ಅಂಥವರಲ್ಲಿದೆ. ಹಿಮ್ಮರಳುವ ಸಂಪ್ರದಾಯಕ್ಕೆ ಸಾಣೆಹಿಡಿದು ನಮ್ಮನ್ನು ದುಃಖದಿಂದ ಪಾರುಮಾಡಿದವರು. ಬದುಕುವ ಹಕ್ಕು, ಸ್ವಾಭಿಮಾನ, ಹೊಸ ಅರಿವು, ಆತ್ಮವಿಶ್ವಾಸವ ತುಂಬಿದವರು. ದುಡಿಮೆ ಮತ್ತು ಶ್ರಮಕ್ಕೆ ತಮ್ಮ ತನುವಿನ ನೇಗಿಲು ನೀಡಿದವರು. ಬಿತ್ತಿ ಬೆಳೆಯುವುದರ ಸಮತೆಯನು ಪ್ರಜ್ಞಾಪೂರ್ವಕವಾಗಿ ಸಾರಿದವರು.

ಕನಕರೇ ನುಡಿವಂತೆ- ‘ಒಳಗಿವಿಯಲ್ಲಿ ಕಾಣೋ ನಾದದ ಬೇರ’. ಕನಕದಾಸರ ಕಾವ್ಯದ ಕರುಳ ಸಂವಾದಗಳೇ ಎಣಿಕೆಗೆ ನಿಲುಕಲಾರದಷ್ಟು. ಅವರು ಎಷ್ಟೊಂದು ಆಧ್ಯಾತ್ಮಿಕವಾದಿಯೋ ಅಷ್ಟೇ ಪ್ರಖರ ವಿಚಾರವಂತರು ಕೂಡ. ದೇವನಾಗಲೀ, ಮನುಷ್ಯನಾಗಲೀ ಬದ್ಧತೆ ಇರಬೇಕು ಎಂದು ನಂಬಿದವರು. ಕೆಳ ಹಂತದಿಂದ ಮೇಲು ಹಂತಕ್ಕೆ ಮುಟ್ಟುವ ಸಾಂಸ್ಕೃತಿಕ ವ್ಯವಧಾನವಂತೂ ಕನಕರಲ್ಲಿ ಅಪಾರವಾಗಿದೆ. ಹಾಗಾಗಿ ನಾವು ಕನಕರೊಂದಿಗೆ ಇಂದೂ ಮತ್ತು ನಾಳೆಯೂ ಸಂವಾದಿಸುತ್ತಲೇ ಇರಬಹುದು.

‘ಹುಟ್ಟುವುದಕ್ಕೆ ಮೊದಲಿಲ್ಲ ಸಾವುದಕೆ ಕೊನೆಯಿಲ್ಲ
ಹುಟ್ಟು ಸಾವಿನ ಹೊಲಬ ಬಲ್ಲ ನಮ್ಮಜ್ಜ
ಅಷ್ಟು ಪ್ರಾಣಿಗಳಿಗೆ ಇಷ್ಟು ಅಂಬಲಿ ಮಾಡಿ
ಹೊಟ್ಟೆ ತುಂಬುವ ಹಾಗೆ ಎರೆವ ನಮ್ಮಜ್ಜ’
ತಲೆಮಾರುಗಳನ್ನು ಸದಾ ಬಾಳಿಸುವ, ಎಲ್ಲರಿಗೂ ಸಮಬಾಳು ಸಮಪಾಲು ಎಂಬುವ ತತ್ವದ ಕ್ರಿಯೆಯನ್ನಿಡಿದು ಮುನ್ನಡೆಸುವ ಇಂತಹ ಅಂಬಲಿ ಧ್ಯಾನದ ಕನಕರಂತಹ ನಮ್ಮಜ್ಜಂದಿರು ಬೇಕು. ಯುದ್ಧದಾಹಿಯಾಗಿರುವ ಲೋಕದೊಡಲನ್ನು ತಣ್ಣಗಾಗಿರಿಸಲು ಇವರ ನುಡಿಮಮತೆ ಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.