ADVERTISEMENT

ಕಟೀಲು ಜಾತ್ರಾ ಮಹೋತ್ಸವ | ಇದೋ ನೋಡಿ ‘ತೂಟೆದಾರ’

​ಪ್ರಜಾವಾಣಿ ವಾರ್ತೆ
Published 3 ಜೂನ್ 2023, 23:44 IST
Last Updated 3 ಜೂನ್ 2023, 23:44 IST
   

ಚಿತ್ರ-ಲೇಖನ: ಶಶಿಧರಸ್ವಾಮಿ ಆರ್. ಹಿರೇಮಠ

ಕಟೀಲು ಜಾತ್ರಾ ಮಹೋತ್ಸವದ ಮುಖ್ಯ ಆಕರ್ಷಣೆಯೇ ಈ ‘ತೂಟೆದಾರ’. ಎರಡು ಗ್ರಾಮಗಳ ಜನರ ನಡುವೆ ನಡೆಯುವ ಈ ‘ಅಗ್ನಿಖೇಳಿ’ಯ ಹಿಂದೆ ಕಥೆಯೊಂದಿದೆ...

ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ತಲುಪಿದಾಗ ಮಧ್ಯರಾತ್ರಿ ಹನ್ನೆರಡು ಗಂಟೆ. ಮಧ್ಯರಾತ್ರಿಯಾದರೂ ಇನ್ನು ಗಿಜಿಗಿಜಿ ಎನ್ನುತ್ತಿತ್ತು ಆ ಪ್ರದೇಶ. ಭಕ್ತರು ದುರ್ಗಾ ಪರಮೇಶ್ವರಿ ಜಾತ್ರೆಯ ಭಾವಪರವಶತೆಯಲ್ಲಿದ್ದರು. ಅಂದು ಜಾತ್ರೆಯ ಏಳನೇ ದಿನವಾಗಿ ‘ತೂಟೆದಾರ’ ಅಥವಾ ‘ಅಗ್ನಿಖೇಳಿ’ ಸೇವೆಯನ್ನು ಕಣ್ತುಂಬಿಕೊಳ್ಳುವ ಕಾತುರತೆಯಲ್ಲಿದ್ದರು. ಪ್ರತೀ ವರ್ಷ ನಡೆಯುವ ಕಟೀಲು ಜಾತ್ರೆಯ ಕೊನೆಯ ದಿನ ದೇವಿಯ ಅವಭೃತ ಸ್ನಾನ ನಡೆಯುತ್ತದೆ. ಬಳಿಕ ನಡೆಯುವ ಈ ಬೆಂಕಿ ದಿವಟಿಕೆಗಳ ಎರಚಾಟವೇ ‘ತೂಟೆದಾರ’ ಹರಕೆಯ ಸೇವೆ. ಕಟೀಲು ಜಾತ್ರಾ ಮಹೋತ್ಸವದ ಮುಖ್ಯ ಆಕರ್ಷಣೆಯೇ ಈ ‘ತೂಟೆದಾರ’. 

ADVERTISEMENT

ರಥ ಬೀದಿ ‘ರಣರಂಗ’ವಾದಾಗ: ದೇವಾಲಯದ ರಥ ಬೀದಿಯಲ್ಲಿ ನಿಂತ ರಥದ ಮುಂದಿನ ಪ್ರದೇಶದಲ್ಲಿ ಸುತ್ತುವರೆದ ಭಕ್ತರು ‘ತೂಟೆದಾರ’ದ ಕಾತುರತೆಯಲ್ಲಿ ನಿಂತಿದ್ದಾರೆ. ಮಧ್ಯದಲ್ಲೇ ಭವ್ಯ ರಥ ಕಂಗೊಳಿಸುತ್ತಿತ್ತು. ಇದ್ದಕ್ಕಿದ್ದಂತೆ ಚೆಂಡೆಯ ಸದ್ದು. ವ್ರತ ನಿಯಮದಲ್ಲಿರುವ ಬರಿ ಮೈಯಲ್ಲಿ ಕೇಸರಿ ಬಣ್ಣದ ಲುಂಗಿಯುಟ್ಟ ನೂರಾರು ಹರಕೆಯ ಸೇವಕರ ಎರಡು ಗುಂಪುಗಳು ಹರ್ಷದಿಂದ ಕೂಗುತ್ತ ಅಲ್ಲಿ ನೆರೆದರು. ತಕ್ಷಣವೇ ಅಲ್ಲಿಗೆ ತೆಂಗಿನ ಗರಿಗಳಿಂದ ಮಾಡಿದ ತೂಟೆ(ಸೂಟೆ)ಗಳನ್ನು ರಾಶಿಯಲ್ಲಿ ಹಾಕಿದರು. ಆ ಕಡೆ ಒಂದು ಗುಂಪು ಈ ಕಡೆ ಗುಂಪು... ಮದ್ಯದಲ್ಲಿದ್ದ ಹಿರಿಯರು ‘ತೂಟೆದಾರ’ ಪ್ರಾರಂಭಿಸಲು ಸೂಚಿಸಿದರು. ಆಗ ಇಡೀ ರಥ ಬೀದಿ ರಣರಂಗದಂತೆಯೇ ತೋರಿತು. ಸಿದ್ಧವಿದ್ದ ಸೂಟೆಗಳಿಗೆ ಬೆಂಕಿ ಹಚ್ಚಿ ಎದುರಿದ್ದ ಗುಂಪಿನ ಮೇಲೆ ಎಸೆಯ ತೊಡಗಿದ್ದರು. ಸುತ್ತುವರಿದ ದಟ್ಟ ಹೊಗೆ ಬಿಳಿ ಕಾರ್ಮೋಡದಂತೆ ಆವರಿಸಿತು. ಇದನ್ನು ಸಾಕ್ಷಾತ್‌ ಅನುಭವಿಸುವಾಗ ಮೈ ಜುಮ್ಮೆನ್ನುತ್ತದೆ. 

‘ತೂಟೆದಾರ’ದ ಸಂದರ್ಭದಲ್ಲಿ ಎರಡೂ ಊರಿನ ಜನರಿಗೆ ಕುಂಕುಮ ಹಾಗೂ ಹೂವು ನೀಡಲಾಗುತ್ತದೆ. ದೇಹಕ್ಕೆ ಕುಂಕುಮ ಲೇಪನ ಮಾಡಿಕೊಳ್ಳುತ್ತಾರೆ. ಈ ಆಟದ ವೇಳೆ ಯಾವುದೇ ಅನಾಹುತಗಳು ನಡೆದಿಲ್ಲ. ಈ ತೂಟೆದಾರ ಹಿಂದಿನ ಕಾಲದಿಂದಲೂ ನಡೆದು ಬಂದಿರುವ ವಿಶೇಷವಾದ ನಂಬಿಕೆ ಹಾಗೂ ಆಚರಣೆ. ಇದು ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆಯೂ ಹೌದು.

ಅತ್ತೂರು-ಕೊಡೆತ್ತೂರು ಗ್ರಾಮಗಳ ಜನರ ನಡುವಿನ ಬೆಂಕಿ ಆಟ: ಊರಿನ ಜನರಿಗೆ ಕಷ್ಟ ಕಾರ್ಪಣ್ಯಗಳು ಬರಬಾರದೆಂದು ಹರಕೆ ರೂಪದಲ್ಲಿ ಈ ಸೇವೆಯನ್ನು ನಡೆಸಲಾಗುತ್ತದೆ. ತುಳುನಾಡಿನ ಪರಂಪರೆಯ ಪ್ರತೀಕವಾಗಿರುವ ಈ ತೂಟೆದಾರ, ಕಟೀಲು ಸಮೀಪದ ಎರಡು ಮಾಗಣೆಗಳ ಅತ್ತೂರು ಮತ್ತು ಕೊಡೆತ್ತೂರು ಗ್ರಾಮಗಳ ಜನರ ನಡುವೆ ನಡೆಯುತ್ತದೆ. ಈ ಎರಡು ಗ್ರಾಮಗಳನ್ನು ಹೊರತುಪಡಿಸಿ ಬೇರೆಯವರು ಇದರಲ್ಲಿ ಭಾಗವಹಿಸುವಂತಿಲ್ಲ. ತೂಟೆದಾರದಲ್ಲಿ ಭಾಗವಹಿಸುವವರು ಉಪವಾಸದಿಂದ ವ್ರತದಿಂದಿರುತ್ತಾರೆ. ತಾವೇ ತಯಾರಿಸಿದ ಸೂಟೆಯನ್ನು ತರುತ್ತಾರೆ. 

ಸ್ನೇಹಿತರಾಗಿರುವ ಅತ್ತೂರು ಮತ್ತು ಕೊಡೆತ್ತೂರು ಜನರು ತೂಟೆದಾರ ಸಂದರ್ಭದಲ್ಲಿ ಮಾತ್ರ ಅಕ್ಷರಶಃ ವೈರಿಗಳಂತೆ ಬೆಂಕಿ ಯುದ್ಧದಲ್ಲಿ ಕಾದಾಡುತ್ತಾರೆ. ಮೂರು ಸುತ್ತು ಬೆಂಕಿಯ ಪಂಜನ್ನು ಎಸೆಯುತ್ತಾರೆ. ಆಯಾ ಗ್ರಾಮದ ಗುತ್ತು ಬರ್ಕೆಯವರು ಇದು ಅತಿರೇಕಕ್ಕೆ ಹೋಗದಂತೆ ಹತೋಟಿಗೆ ತರುತ್ತಾರೆ. ‘ತೂಟೆದಾರ’ ನೋಡುಗರಿಗೆ ಮನರಂಜನೆಯಾದರೂ ಇದರ ಹಿಂದೆ ಧಾರ್ಮಿಕ ನಂಬಿಕೆಯು ಇದೆ. ಅರುಣಾಸುರನನ್ನು ಸಂಹರಿಸಿದ ದೇವಿ ವಿಜಯಿಯಾಗಿ ಬರುವ ವೇಳೆ ಈ ರೀತಿ ಬೆಂಕಿಯಿಂದ ಸ್ವಾಗತ ಕೋರುವುದು ಎಂಬ ಪ್ರತೀತಿ ಇದೆ. ಈ ಭಯಂಕರ ಹೋರಾಟದಲ್ಲಿ ಯಾರು ಹಿಂದಕ್ಕೆ ಸರಿಯುತ್ತಾರೋ ಅವರು ಸೋಲುತ್ತಾರೆ. ಹಾಗಾಗಿ ಗೆಲ್ಲುವ ಛಲದಿಂದಲೇ ‘ತೂಟೆದಾರ’ ನಡೆಸುತ್ತಾರೆ.

ಹದಿನೈದರಿಂದ ಇಪ್ಪತ್ತು ನಿಮಿಷಗಳ ಕಾಲ ರಥ ಬೀದಿಯಲ್ಲಿ ನಡೆಯುವ ಈ ಬೆಂಕಿ ಕಾಳಗ ನೋಡುಗರಲ್ಲಿ ಮೈ ಜುಮ್ಮೆನ್ನಿಸುತ್ತದೆ. ಈ ಕಾಳಗ ಸಮಾಪ್ತಿಯಾದ ನಂತರ ಕೆಳಗೆ ಬಿದ್ದಿರುವ ಸೂಟೆಗಳನ್ನು ನಾಲ್ಕಾರು ರಾಶಿ ಮಾಡಿ ಬೆಂಕಿ ಹಾಕುತ್ತಾರೆ. ನಂತರ ಅತ್ತೂರು-ಕೊಡೆತ್ತೂರು ಗ್ರಾಮಗಳ ಜನರು ಜೊತೆಯಾಗಿ ದೇವಸ್ಥಾನದ ಒಳಗೆ ಪ್ರವೇಶಿಸಿ ದೇವಿಯ ಆಶೀರ್ವಾದ ಪಡೆಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.