ದಕ್ಷಿಣ ಭಾರತದಲ್ಲಿರುವ ಆರ್ಯಪೂರ್ವ ದ್ರಾವಿಡ ಸಂಸ್ಕೃತಿಗಳ ಗೊಂಚಲಿನಲ್ಲಿ ಕಾಡುಗೊಲ್ಲ ಸಮುದಾಯವೂ ಒಂದು. ಇಂದಿಗೂ ತಮ್ಮ ಪೂರ್ವಿಕರ ಸಂಸ್ಕೃತಿಯನ್ನು ಆಚರಣೆ ಹಾಗೂ ಮೌಖಿಕ ಅಭಿವ್ಯಕ್ತಿಗಳ ಮೂಲಕ ಮುಂದುವರಿಸಿಕೊಂಡು ಬರುತ್ತಿರುವ ಮಧ್ಯ ಕರ್ನಾಟಕದ ಬಯಲು ಸೀಮೆಯ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ವಿಶಿಷ್ಟ ಬುಡಕಟ್ಟು ಸಮುದಾಯ ಕಾಡುಗೊಲ್ಲರದು. ಬೇಟೆ ಮತ್ತು ಪಶುಪಾಲನೆಯಿಂದ ವಿಕಾಸಗೊಂಡ ಕಾಡುಗೊಲ್ಲರ ನಾಗರಿಕತೆ, ಇಂದು ಕೃಷಿಯವರೆಗೂ ತನ್ನನ್ನು ವಿಸ್ತರಿಸಿಕೊಂಡಿದೆ.
ಕಾಡುಗೊಲ್ಲರು ಈಗ ಹೊರರೂಪದಲ್ಲಿ ‘ಕೆಳಜಾತಿ’ಯಾಗಿ ಪರಿವರ್ತನೆಯಾಗಿದ್ದರೂ, ಆಂತರ್ಯದಲ್ಲಿ ಅವರು ತಮ್ಮ ಬುಡಕಟ್ಟು ಜೀವನದಲ್ಲಿ ರೂಪಿಸಿಕೊಂಡಿದ್ದ ಆಚರಣೆ, ನಂಬಿಕೆ, ಬೇಟೆ, ಪಶುಪಾಲನೆ, ನೆಲೆ ಕಾಣದ ಅಲೆಮಾರಿ ಜೀವನ, ದೈವದ ನೆನಪುಗಳು ಮತ್ತು ನಂಬಿಕೆಗಳಿಂದ ದೂರ ಸರಿದಿಲ್ಲ.
ದಕ್ಷಿಣ ಭಾರತದ ದ್ರಾವಿಡರಲ್ಲಿ ‘ದೇವರು’ ಮತ್ತು ‘ಗುಡಿ’ಯ ಕಲ್ಪನೆಯೇ ಇರಲಿಲ್ಲ! ಶಿವನ ಮೂಲರೂಪವಾದ ಲಿಂಗವನ್ನೇ ಇವರು ಪೂಜಿಸುತ್ತಿದ್ದರು ಎಂದು ಸಂಸ್ಕೃತಿ ಸಂಶೋಧಕರು ಹೇಳುತ್ತಾರೆ. ಹಾಗೆಯೇ ಇವರ ಹೆಚ್ಚಿನ ದೈವಗಳು ಹುತ್ತದ ಪೂಜೆ ಮತ್ತು ನಾಗಾರಾಧನೆಯ ರೂಪದಲ್ಲೂ ಪ್ರಚಲಿತದಲ್ಲಿವೆ. ಈ ಶೋಧನೆಯ ದರ್ಶನ ಕೂಡ ಕಾಡುಗೊಲ್ಲರ ಸಂಸ್ಕೃತಿಯ ಮೇಲೆ ಹೆಚ್ಚಿನ ಬೆಳಕನ್ನು ಚೆಲ್ಲುತ್ತದೆ. ಆದ್ದರಿಂದಲೇ ಕಾಡುಗೊಲ್ಲರಲ್ಲಿ ‘ಚಿತ್ರಲಿಂಗ’, ‘ಕ್ಯಾತೆಲಿಂಗ’, ‘ಕಾಟುಂ ಲಿಂಗ’, ‘ಬೊಮ್ಮಲಿಂಗ’ ಎಂಬ ಹೆಸರಿನ ದೈವಗಳೂ ಇವೆ. ಹಾಗೆಯೇ ಕಳ್ಳೆಬೇಲಿಗಳ ನಡುವೆ ನಿರ್ಮಿಸಿಕೊಂಡ ಗುಬ್ಬಗಳೇ ಇವರ ‘ಗುಡಿ’ಗಳು! ಇಂದಿಗೂ ಕರ್ನಾಟಕದ ಕೆಲವೆಡೆ ಕಾಡುಗೊಲ್ಲರ ದೈವಗಳಿರುವ ಗುಬ್ಬಗಳನ್ನು ಕಾಣಬಹುದು. ಆಹಾರ ಸಂಗ್ರಹಣೆ, ಪಶುಪಾಲನೆಗಾಗಿ ನಿರಂತರ ಅಲೆಮಾರಿತನದ ಬದುಕನ್ನು ಕ್ಯಾತಪ್ಪನ ಜಾತ್ರೆಯ ವಿವರಗಳು ಕಾಡುಗೊಲ್ಲರ ಆದಿಮ ಜೀವನ ಶೈಲಿಯನ್ನು ಪ್ರತಿಬಿಂಬಿಸುತ್ತವೆ. ಚರಿತ್ರೆಯಲ್ಲಿ ಅಲೆಮಾರಿ ಸಮುದಾಯಗಳ ಇಂತಹ ಜೀವನವನ್ನು ‘ಚಲಿಸುವ ಗ್ರಾಮಗಳು’ ಎಂದು ಡಿ.ಡಿ. ಕೊಸಾಂಬಿ ಅವರು ಹೇಳುತ್ತಾರೆ. ಸ್ಥಾಪಿತ ಧರ್ಮ ಮತ್ತು ಆಚರಣೆಗಳಿಂದ ದೂರವುಳಿದು, ತಮ್ಮದೇ ಆದ ಲೋಕಗ್ರಹಿಕೆ ಮತ್ತು ಜೀವನ ವಿಧಾನಗಳನ್ನು ರೂಪಿಸಿಕೊಂಡಿರುವ ಕಾಡುಗೊಲ್ಲರು ವರ್ತಮಾನದಲ್ಲಿ ವಿಶಿಷ್ಟವಾಗಿ ಕಾಣುತ್ತಾರೆ.
ಕಾಡುಗೊಲ್ಲರ ಪೂರ್ವ ಸಂಸ್ಕೃತಿಯನ್ನು ನೆನಪಿಸುವ ‘ಕ್ಯಾತಪ್ಪನ ಜಾತ್ರೆ’ಯನ್ನು ಹದಿನೈದು ದಿನಗಳ ಕಾಲ ಚಳ್ಳಕೆರೆ ಸಮೀಪದಲ್ಲಿರುವ ಚನ್ನಮ್ಮನಾಗತಿಹಳ್ಳಿಯ ಹತ್ತಿರದ ಪುರ್ಲಹಳ್ಳಿ, ವಸಲುದಿಬ್ಬದ ಕಾವಲಿನಲ್ಲಿ ಪ್ರತಿವರುಷ ಸಂಕ್ರಾಂತಿ ಹಬ್ಬದ ನಂತರ ಅಥವಾ ಹಬ್ಬದ ಮುಂಚೆ ಆಚರಿಸಲಾಗುತ್ತದೆ. ಕ್ಯಾತಪ್ಪ ಚನ್ನಮ್ಮನಾಗತಿಹಳ್ಳಿಯಲ್ಲಿ ನೆಲೆಗೊಂಡಿರುವ ಕಾಡುಗೊಲ್ಲರ ದೈವ. ಕಾಡುಗೊಲ್ಲರ ಹದಿಮೂರು ಗುಡಿಕಟ್ಟಿನ ಬತ(ವ್ರತ) ಹಿಡಿದ ಅಣ್ಣ-ತಮ್ಮಗಳು, ಹೆಣ್ಣುಮಕ್ಕಳುಸೊಸೆಯಂದಿರು ಸೇರಿ, ಬಣ್ಣದ ಸತ್ರಿಕೆ, ಕೊಂಬು-ಕಹಳೆ, ಉರುಮೆಯ ನಡುವೆ ಹದಿನೈದು ದಿನಗಳವರೆಗೆ ನಿರಂತರವಾಗಿ ಆಚರಿಸುವ ವಿಶಿಷ್ಟ ಜಾತ್ರೆ ಇದು.
ಬಂಜಗೆರೆಯಲ್ಲಿ ಹದಿಮೂರು ಗುಡಿಕಟ್ಟಿನ ಅಣ್ಣ-ತಮ್ಮಗಳು ಸೇರಿ ನಿರ್ಧರಿಸಿದಮೇಲೆ ಸಾರೋಲೆ ಆಗುತ್ತದೆ. ಕೋಣನಗೌಡರು ಮತ್ತು ಬೊಮ್ಮನಗೌಡರು ಮುಂಚೂಣಿಯಲ್ಲಿ ನಿಂತು ಪೂಜೆಯನ್ನು ನಡೆಸುವ ಸಂಪ್ರದಾಯವಿದೆ. ಇದರಲ್ಲಿ ಕಳ್ಳೆಗುಡಿಗೆ ಕಳಸ ಇಡುವುದು ಬೊಮ್ಮನಗೌಡರು. ಕಳಸ ಕೀಳುವವರು ಕೋಣನಗೌಡರ ಐದು ಜನ ಈರಗಾರರು.
ಕ್ಯಾತಪ್ಪನ ಜಾತ್ರೆಗೆ ‘ಬತ’ ಹಿಡಿದೋರ ಮನೆಯಲ್ಲಿ ಹುರುಳಿ-ನವಣೆ ಬಳಸುವಂತಿಲ್ಲ. ಹಾಗೂ ಹುರುಳಿ ಮತ್ತು ನವಣೆ ಮನೆಯಲ್ಲಿ ಕಡ್ಡಾಯವಾಗಿ ಇರುವಂತಿಲ್ಲ! ಇದನ್ನು ‘ಹುರುಳಿಕಾಯಿ ತೊಳೆಯೋದು’ ಎನ್ನುತ್ತಾರೆ. ಹಾಗೆಯೇ ಜಾತ್ರೆ ಮುಗಿಯುವವರೆಗೂ ಮಾಂಸಾಹಾರವನ್ನು ಬಳಸುವಂತಿಲ್ಲ! ಚನ್ನಮ್ಮನಾಗತಿಹಳ್ಳಿ ಕ್ಯಾತಪ್ಪನ ದೇವಸ್ಥಾನದಲ್ಲಿ ಹುರುಳಿ ಬೇಯಿಸಿ ದೇವರಿಗೆ ನೈವೈದ್ಯ ಮಾಡಿ, ಎಲ್ಲರಿಗೂ ಹಂಚಿದ ನಂತರ ಬತ ಬಿಡಿಸುತ್ತಾರೆ. ಅದೇ ದಿನ ಆಯಾ ಗುಡಿಕಟ್ಟಿನ ಅಣ್ಣ-ತಮ್ಮಂದಿರುಗಳ ಮನೆಯಲ್ಲಿ ಹುರುಳಿತೊಕ್ಕು ಮತ್ತು ಬೆಲ್ಲದ ಹಾಲನ್ನು ಮಾಡಿ, ನೆಂಟರಿಗೆ ಮೊದಲು ಊಟ ಹಾಕಿದ ನಂತರ ಬತ ಬಿಡಿಸುತ್ತಾರೆ.
ಜಾತ್ರೆಯ ನಾಲ್ಕನೆಯ ದಿನ ಕಳ್ಳೆಗುಡಿ ಕಟ್ಟಲು ಮರ ಕಡಿದುಕೊಂಡುಬರಲು ಗಣಸ್ತುತಿ ಮಾಡಿ, ಮೊದಲೇ ನಿರ್ಧರಿಸಿದ್ದ ಮರದ ಬಳಿಗೆ ಹೊರಡುತ್ತಾರೆ. ‘ತುಪ್ಪದ ಬಾನ ಉಂಡು, ಇಪ್ಪತ್ತು ವಿಳ್ಳೇವು ಮೆದ್ದು, ಉಕ್ಕಿನ ಕೊಡಲಿ ಹೆಗಲಿಗಿಟ್ಟು ಅಪ್ಪಗಳು ಆಲದ ಮರನಾ ಕಡಿದಾರು’ ಎನ್ನುವುದು ಈ ಸಂದರ್ಭದ ವರ್ಣನೆಗಾಗಿಯೇ ಹುಟ್ಟಿಕೊಂಡ ಹಾಡು. ಗುಡಿ ಕಟ್ಟುವ ಸ್ಥಳವನ್ನು ಕೆಸರಿನಿಂದ ಒಪ್ಪವಾಗಿ ಸಾರಿಸಿ ಕಣ ಮಾಡುತ್ತಾರೆ. ಐದನೇ ದಿನ, ವಸಲುದಿನ್ನೆ ಗುಡಿ ಸುತ್ತ ಕಳ್ಳೆ ಬೇಲಿ (ಮುಳ್ಳಿನ ಬೇಲಿ) ಹಾಕಲು, ಊಬಿನ ಮುಳ್ಳು, ತುಗ್ಗಲಿ ಮುಳ್ಳು, ಬಂದ್ರೆ ಸೊಪ್ಪು ಕಡಿದು ರಾಶಿ ಹಾಕುತ್ತಾರೆ. ಆರನೇ ದಿನ ಚನ್ನಮ್ಮನಾಗತಿಹಳ್ಳಿಯಲ್ಲಿರುವ ಕ್ಯಾತೇದೇವರ ಗುಡಿ ಸುತ್ತ ‘ಜೂಜಿನ ಕಳ್ಳೆ’ ಎಳೆಯುತ್ತಾರೆ.
ಏಳನೇ ದಿನ ಕಡಿದ ಊಬಿನ ಮುಳ್ಳು, ತುಗ್ಗಲಿ ಮುಳ್ಳು, ಬಂದ್ರೆ ಸೊಪ್ಪುನ್ನು ರಾಶಿ ಮಾಡಿತಂದು ವಸಲುದಿನ್ನೆಗೆ ತಂದು ಹಾಕುತ್ತಾರೆ. ಎಂಟನೇ ದಿನ, ವಸಲುದಿನ್ನೆಯಲ್ಲಿ ಮಾಡಿರುವ ಕಣದಲ್ಲಿ ಆಲದ ಮರವನ್ನು ನಡುವಿನಲ್ಲಿ ನೆಟ್ಟು, ಮೊದಲು ಬಂದ್ರಿಸೊಪ್ಪು ಹಾಸಿ, ಅದರ ಮೇಲೆ ಎರೆದ ಬಾರೆಕಳ್ಳೆ, ತುಗ್ಗಲಿ ಕಳ್ಳೆಯಿಂದ ಸುಮಾರು 20 ರಿಂದ 25 ಅಡಿ ಎತ್ತರದ ಗುಡಿ ಕಟ್ಟುತ್ತಾರೆ. ಕಟ್ಟಿದ ನಂತರ ಸಂಜೆಗೆ ಅದರ ತುದಿಯಲ್ಲಿ ಕಳಸ ನೆಡುತ್ತಾರೆ. ನಂತರ ಗುಡಿಯ ಸುತ್ತ ಊಬಿನ ಮುಳ್ಳು, ತುಗ್ಗಲಿಮುಳ್ಳಿನ ಬೇಲಿ ಎಳೆಯುತ್ತಾರೆ. ಅದೇ ದಿನ ಸಂಜೆಗೆ ಬಂಜಗೆರೆಯಿಂದ ಕಾಟುಂಲಿಂಗ ದೇವರು, ವೀರಣ್ಣ ದೇವರು, ಬತುವಿನ ದೇವರು, ಐಗಾರ್ಲಹಳ್ಳಿ ತಾಳಿದೇವರು ಬಂದು ಚನ್ನಮ್ಮನಾಗತಿಹಳ್ಳಿಯ ಕ್ಯಾತಪ್ಪ ದೇವರ ಗುಡಿಯಲ್ಲಿ ತಂಗುತ್ತವೆ.
ಒಂಬತ್ತನೇ ದಿನ ಚನ್ನಮ್ಮನಾಗತಿಹಳ್ಳಿಯಿಂದ ಕ್ಯಾತಪ್ಪ, ಕಾಟುಂಲಿಂಗ, ವೀರಣ್ಣ, ಬತುವಿನ ದೇವರು, ಐಗಾರ್ಲಹಳ್ಳಿ ತಾಳಿದೇವರುಗಳನ್ನು ಹದಿಮೂರು ಗುಡಿಕಟ್ಟಿನ, ಕಾಶಿದಟ್ಟಿ ಕಟ್ಟಿಕೊಂಡು, ಅರವತ್ತು ರುಮಾಲು ಸುತ್ತಿಕೊಂಡ ಅಣ್ಣ-ತಮ್ಮಗಳು, ಬಣ್ಣದ ಸೀರೇರು, ಬಂದಿ ತೋಳಿನೋರು ಕೂಡಿಕೊಂಡು, ಒಂಟಿ ಉರುಮೆ, ಒಂಟಿ ಛತ್ರಿಕೆ, ತುಂಬಿಲ್ಲದ ಕಾಯಿ (ಜುಟ್ಟಿಲ್ಲದ ತೆಂಗಿನಕಾಯಿ) ಮುಂದು ಮಾಡಿಕೊಂಡು, ಹೊಳೆಗಂಗಮ್ಮನಲ್ಲಿ ಪೂಜೆ ಮುಗಿಸಿಕೊಂಡು ಕಳ್ಳೆಗುಡಿ ಇರುವ ವಸಲುದಿಬ್ಬಕ್ಕೆ ಮೆರವಣಿಗೆಯಲ್ಲಿ ಬರುತ್ತಾರೆ. ಅಲ್ಲಿಯೇ ಕ್ಯಾತಪ್ಪದೇವರಿಗೆ ದೃಷ್ಟಿ ತೆಗೆಯಲು ದೇವರಿಗೆ ತೆರೆಕಟ್ಟಿ ಹೊಳೆಮರಿಯನ್ನು ನೀವಳಿಸಿ ಬಲಿಕೊಡುತ್ತಾರೆ. ಅಲ್ಲಿಯವರೆಗೆ ಉಗ್ರರೂಪದಲ್ಲಿರುವ ಕ್ಯಾತಪ್ಪ ಬಲಿಯಿಂದ ಶಾಂತ ರೂಪಕ್ಕೆ ಬರುತ್ತಾನೆ ಎನ್ನುವ ನಂಬಿಕೆ ಅವರಲ್ಲಿದೆ.
ಬಲಿಕೊಟ್ಟ ದೂಳುಮರಿಯನ್ನು ಮಡಿವಾಳರಿಗೆ ಕೊಟ್ಟು, ಬಿತ್ತಿದಾ ಹೊಲದಾಗೆ, ಛತ್ರಿ ಚಾಮರದೊಂದಿಗೆ ವಸಿಲುದಿಬ್ಬಕ್ಕೆ ಬರುತ್ತಾರೆ. ವಸಿಲುದಿಬ್ಬದಲ್ಲಿರುವ ಮಜ್ಜನ ಬಾವಿಯಲ್ಲಿ (ಅಕ್ಕಗಳ ಬಾವಿ ಎಂದೂ ಕರೆಯುತ್ತಾರೆ) ಗಂಗೆ ಪೂಜೆಯನ್ನು ಪೂರೈಸಿದ ನಂತರ ಅಕ್ಕಮ್ಮನ ಗುಡಿಯಲ್ಲಿ ಪೂಜೆ ಸಲ್ಲಿಸಿ ದೇವರುಗಳಿಗೆ ಕಂಕಣ ಕಟ್ಟುತ್ತಾರೆ. ನಂತರ ಕಳ್ಳೆಗುಡಿಗೆ ಎಲ್ಲ ದೇವರುಗಳನ್ನು ಮೆರವಣಿಗೆಯಲ್ಲಿ ಕರೆತಂದು ಕೂರಿಸುತ್ತಾರೆ. ಮತ್ತೆ ಮೂರು ದಿವಸ ಹುತ್ತದ ಪೂಜೆ, ಕೊಣದ ಪೂಜೆ, ಆವಿನಗೂಡು (ಹಸುಗಳನ್ನು ಬಿಡುವ ಜಾಗ), ಮಜ್ಜನ ಬಾವಿ ಪೂಜೆ ಮತ್ತು ನವಣೆ ದಾಸೋಹ ನಡೆಯುತ್ತದೆ. ನವಣೆ ದಾಸೋಹದ ದಿನ ನವಣೆ ಕುಟ್ಟಲು ಹೆಣ್ಣುಮಕ್ಕಳು ದೇವರುಗಳ ಮುಂದೆ ಐದು ‘ಮಣ್ಣಿನ ಒರಳು’ ತೋಡುತ್ತಾರೆ. ಮಣ್ಣಿನ ಒರಳಿಗೆ ನವಣೆ ಸುರಿದು ಕುಟ್ಟುತ್ತಾರೆ. ಮರುದಿನ ಬೆಳಗ್ಗೆ ಕುಟ್ಟಿದ ನವಣೆಯನ್ನು ಒಪ್ಪಗೊಳಿಸಿ ನವಣೆ ಬಾನ (ಅನ್ನ) ಮಾಡಿ, ಅದಕ್ಕೆ ಬೆಲ್ಲ ಮತ್ತು ಬಾಳೆಹಣ್ಣು ಬೆರೆಸಿ ಎಲ್ಲರಿಗೂ ಹಂಚುತ್ತಾರೆ.
ಇಡೀ ಜಾತ್ರೆ ರಂಗೇರುವುದೇ ಹದಿಮೂರನೆಯ ದಿನ. ಗುಡಿ ಕಳಸ ಕೀಳೋ ದಿನ. ಕಳಸ ಕೀಳುವ ಸರದಿ ಕೋಣನೋರ ಗೊಲ್ಲರದ್ದು. ಇದು ಇವರಿಗೆ ವಂಶಪಾರಂಪರ್ಯವಾಗಿ ಬಂದಿರುವ ಹಕ್ಕು. ಅದಕ್ಕಾಗಿ ಐದು ಜನ ಈರಗಾರರನ್ನು ಮೊದಲೇ ಅವರು ಆರಿಸಿರುತ್ತಾರೆ. ಕಳಸ ಕೀಳಲು ಸಿದ್ಧರಾದ ಈರಗಾರರನ್ನು ಉರುಮೆ, ಕಹಳೆಯ ನಡುವೆ ಮೆರವಣಿಗೆಯಲ್ಲಿ ಅಕ್ಕಗಳಬಾವಿಗೆ (ಮಜ್ಜನ ಬಾವಿ) ಕರೆದುಕೊಂಡು ಹೋಗಿ ಅವರಿಗೆ ಸ್ನಾನ ಮಾಡಿಸಿ ಮತ್ತೆ ಕಳ್ಳೆಗುಡಿಗೆ ಕರೆತರುತ್ತಾರೆ. ಅವರನ್ನು ಗುಡಿಯ ಮುಂದೆ ಸಾಲಾಗಿ ಕುಳ್ಳಿರಿಸಿ, ಅವರ ಮೇಲೆ ದೇವರುಗಳ ಹೂವುಗಳನ್ನು ಹಾಕಿ ಸಿದ್ಧರಾಗಿರುವಂತೆ ಸೂಚಿಸುತ್ತಾರೆ. ಮುಖ್ಯಸ್ಥರೊಬ್ಬರು ಕೈಯಲ್ಲಿದ್ದ ವಲ್ಲಿಯನ್ನು ಗಾಳಿಯಲ್ಲಿ ಬೀಸುತ್ತಿದ್ದ ಹಾಗೆ, ಆ ಯುವುಕರು ಕಳ್ಳೆಗುಡಿಯನ್ನು ಪೈಪೋಟಿಯಿಂದ ಹತ್ತುತ್ತಾರೆ. ಅವರಲ್ಲೊಬ್ಬ ಎಲ್ಲರಿಗಿಂತ ವೇಗವಾಗಿ ಹತ್ತಿ ಗುಡಿ ಮೇಲಿನ ಕಳಸದ ಗೋಪುರವನ್ನು ಕಿತ್ತು ಮೇಲೆತ್ತಿ ಹಿಡಿಯುತ್ತಾನೆ. ನೀವು ಕಣ್ಣು ಮುಚ್ಚಿ ತೆರೆಯುವುದರೊಳಗೆ ಈ ಎಲ್ಲ ಕ್ರಿಯೆಗಳು ನಡೆದುಹೋಗುತ್ತವೆ!
ಕಳಸ ಕಿತ್ತ ನಂತರ ಗುಡಿಯಲ್ಲಿದ್ದ ದೇವರಗಳನ್ನು ಹೊರಗಡೆ ತಂದು, ಮೆರವಣಿಗೆ ಮೂಲಕ ಚನ್ನಮ್ಮನಾಗತಿಹಳ್ಳಿಗೆ ಹೊರಡುತ್ತಾರೆ. ದೇವರುಗಳ ಮೆರವಣಿಗೆಯು ಪುರ್ಲಹಳ್ಳಿಗೆ ಬಂದು ಚನ್ನಮ್ಮನಾಗತಿಹಳ್ಳಿ ಹಾದಿ ತುಳಿಯುವವರೆಗೂ ಜಾತ್ರೆಗೆ ಬಂದವರು ತಮ್ಮ ಊರುಗಳಿಗೆ ಹೋಗುವಂತಿಲ್ಲ! ದೇವರುಗಳು ಚನ್ನಮ್ಮನಾಗತಿಹಳ್ಳಿ ಹಾದಿಗೆ ಮುಖ ಮಾಡಿದ ನಂತರವೇ ಜಾತ್ರೆಗೆ ಬಂದಿದ್ದವರೆಲ್ಲರೂ ತಮ್ಮ ತಮ್ಮ ಊರುಗಳಿಗೆ ತೆರಳುತ್ತಾರೆ. ಮರುದಿನ ಚನ್ನಮ್ಮನಾಗತಿಹಳ್ಳಿ ಕ್ಯಾತಪ್ಪನಗುಡಿಯಲ್ಲಿ ಹುರುಳಿ ಧಾನ್ಯದ ಎಡೆಮಾಡಿ ಕಂಕಣ ವಿಸರ್ಜಿಸುತ್ತಾರೆ. ಇದರೊಂದಿಗೆ ಹದಿನೈದು ದಿನಗಳ ಕ್ಯಾತಪ್ಪನ ಜಾತ್ರೆಯು ಮುಕ್ತಾಯಗೊಳ್ಳುತ್ತದೆ.
ಹೀಗೆ ಪುರ್ಲಹಳ್ಳಿ ಕ್ಯಾತಪ್ಪನ ಪರಿಸೆಯ ಎಲ್ಲ ವಿಧಿ-ವಿಧಾನಗಳನ್ನು ನಡೆಸುವವರು ಕಾಡುಗೊಲ್ಲರು ಮಾತ್ರ. ಹೀಗಾಗಿ ಇದು ಒಂದು ಸಮುದಾಯಕ್ಕೆ ಸಂಬಂಧಿಸಿದ ಜಾತ್ರೆ. ಈ ಜಾತ್ರೆಯ ವಿವರಗಳನ್ನು ಗಮನಿಸಿದಾಗ, ಕೃಷಿಪೂರ್ವ ಅಲೆಮಾರಿ ನಾಗರಿಕತೆಯಲ್ಲಿ ಮಾತೃಪ್ರಧಾನ ಸಮಾಜ ಕಾಡುಗೊಲ್ಲ ಸಮುದಾಯದ ಬದುಕಿನ ವೈಶಿಷ್ಟ್ಯ, ನಿಸರ್ಗದೊಡನಿರುವ ಅವರ ಸಂಬಂಧ, ದೈವದ ಕಲ್ಪನೆ, ಆರಾಧನೆಯ ಸ್ವರೂಪ ಮತ್ತು ಅಲೆಮಾರಿ ಜೀವನದ ಕುರುಹುಗಳು ನಿಚ್ಚಳವಾಗುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.