ADVERTISEMENT

Makar Sankranti 2023: ಸಂಕ್ರಾಂತಿ ಬಾಂಧವ್ಯದ ಮಹಾಕ್ರಾಂತಿ

ಎಸ್.ಸೂರ್ಯಪ್ರಕಾಶ ಪಂಡಿತ್
Published 14 ಜನವರಿ 2023, 19:31 IST
Last Updated 14 ಜನವರಿ 2023, 19:31 IST
ನಟಿ ಸಾತ್ವಿಕ
ನಟಿ ಸಾತ್ವಿಕ   

‘ಎಳ್ಳು–ಬೆಲ್ಲ ತಿಂದು ಒಳ್ಳೆಯ ಮಾತನಾಡಿ’ ಎಂಬುದು ಸಂಕ್ರಾಂತಿಯ ಮಾತು. ಇದು ದಿಟವಾಗಿಯೂ ‘ಸಂ–ಕ್ರಾಂತಿ’ಯ ಮಾತು ಆಗಬೇಕಾಗಿದೆಯೆನ್ನಿ!

ಕೋವಿಡ್‌ನ ಕಾರಣದಿಂದ ಸೊಗಸನ್ನು ಕಳೆದುಕೊಂಡಿದ್ದ ನಮ್ಮ ಹಬ್ಬ–ಹರಿದಿನಗಳು ಮತ್ತೆ ಸಹಜ ಸ್ಥಿತಿಗೆ ಮರಳುತ್ತಿವೆ. ಇದರ ಜೊತೆಗೆ ಹಬ್ಬಗಳ ನೈಜ ಅರ್ಥವೂ ಈ ಆಚರಣೆಗಳೊಂದಿಗೆ ಸೇರಿಕೊಂಡರೆ ಆಗ ನಮ್ಮ ಜೀವನ ಇನ್ನಷ್ಟು ಸೊಗಸನ್ನು ಪಡೆದುಕೊಳ್ಳುತ್ತದೆ. ಕೊರೊನಾದ ಹೆದರಿಕೆಯಿಂದ ಬಂಧುಮಿತ್ರರ ಮನೆಗಳ ಸಂಪರ್ಕವನ್ನು ನಾವು ಕಳೆದುಕೊಂಡಿದ್ದೆವು. ಈಗ ಮತ್ತೆ ಅವರ ಮನೆಯ, ಅಷ್ಟೇಕೆ, ಮನದ ಸಂಪರ್ಕವನ್ನೂ ಹೊಂದಲು ಸಂಕ್ರಾಂತಿ ನಮಗೆ ಅವಕಾಶವನ್ನು ಒದಗಿಸಿದೆ.

ಹಬ್ಬಗಳು ಇರುವುದೇ ಆತ್ಮೀಯರೊಂದಿಗೆ ಸಂತೋಷ–ಸಂಭ್ರಮಗಳನ್ನು ಹಂಚಿಕೊಳ್ಳಲು. ಒಂದೊಂದು ಹಬ್ಬದಲ್ಲಿ ಒಂದೊಂದು ರೀತಿಯಲ್ಲಿ ನಲಿವಿಗೆ ಕಾರಣಗಳು ಇರುತ್ತವೆಯಷ್ಟೆ. ಸಂಕ್ರಾಂತಿಯಲ್ಲಿಯ ಸಂತೋಷದ ಕಾರಣವೂ ವಿಶಿಷ್ಟವಾಗಿದೆ. ನಮ್ಮ ಸ್ನೇಹಿತರ ಮತ್ತು ಬಂಧುಗಳ ಮನೆಗೆ ತೆರಳುತ್ತೇವೆ; ಎಳ್ಳು–ಬೆಲ್ಲಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ. ‘ಒಳ್ಳೆಯ ಮಾತನಾಡೋಣ’ ಎಂದು ಹಾರೈಸುತ್ತವೆ. ಇದೊಂದು ವಿಶಿಷ್ಟ ಸಂಕಲ್ಪವೇ ಹೌದು. ಮಾತು ನಮ್ಮ ಜೀವನದ ಬಹಳ ಮುಖ್ಯ ಸಂಗತಿ; ಮಾತಿನಿಂದ ಬಾಂಧವ್ಯ ಗಟ್ಟಿಯೂ ಆಗುತ್ತದೆ; ಮಾತಿನಿಂದಲೇ ಬಾಂಧವ್ಯ ಮುರಿಯಲೂಬಹುದು. ಅಷ್ಟೇಕೆ, ಇಡಿಯ ನಮ್ಮ ಜಗತ್ತು ನಿಂತಿರುವುದೇ ಮಾತಿನ ಮೇಲೆ. ಆದರೆ ಇಂದು ಮಾತು ತುಂಬ ಅಪಮೌಲ್ಯಗೊಳ್ಳುತ್ತಿದೆ. ಚುನಾವಣೆ ಹತ್ತಿರದಲ್ಲಿರುವ ಸದ್ಯದ ವಾತಾವರಣದಲ್ಲಂತೂ ಮಾತಿನ ದುರ್ಬಳಕೆ ಎದ್ದುಕಾಣುತ್ತದೆಯಲ್ಲವೆ? ಇಂಥ ಸಂದರ್ಭದಲ್ಲಿ ಮಾತು ಎಂಬುದು ನಮ್ಮ ಸಂಬಂಧಗಳ ಸ್ಥಾಪನೆಗೆ ಅಮೃತವಾಗಬೇಕು; ಸಮಾಜದಲ್ಲಿ ಸೌಹಾರ್ದಕ್ಕೆ ಸೇತುವೆಯಾಗಬೇಕು. ಇಂಥದೊಂದು ಸಮ್ಯಕ್‌ ಕ್ರಾಂತಿಗೆ ಎಂದರೆ, ‘ಸಂ–ಕ್ರಾಂತಿ’ಗೆ ಇಂದಿನ ಸಂಕ್ರಾಂತಿ ನಾಂದಿ ಹಾಡಲಿ. ಎಳ್ಳು ಎಂಬುದು ಋಣಾನುಬಂಧಕ್ಕೆ ಸಂಕೇತ ಕೂಡ. ನಮಗೆ ನೆರವಾದವರನ್ನು ಕೃತಜ್ಞತೆಯಿಂದ ಸ್ಮರಿಸಿಕೊಳ್ಳಬೇಕೆಂಬ ಕರ್ತವ್ಯಬುದ್ಧಿಯನ್ನು ಋಣದ ಕಲ್ಪನೆಯಲ್ಲಿ ಕಾಣಬಹುದು. ನಮ್ಮ ಜೀವನ ಹಲವರ ಸಹಾಯದಿಂದ, ಸಹಕಾರದಿಂದ ಮಾತ್ರವೇ ಸಾಧ್ಯವಾಗುವುದು. ಹೀಗಾಗಿ ಸಂಕ್ರಾಂತಿಯ ಎಳ್ಳು–ಬೆಲ್ಲಗಳ ವಿತರಣೆ ನಮ್ಮನ್ನೂ ಸಮಾಜವನ್ನೂ ಬಂಧುಗಳನ್ನೂ ಸ್ನೇಹಿತರನ್ನೂ ಬೆಸೆಯುವ ಕಲಾಪವೇ ಹೌದು.

ADVERTISEMENT

ಸೂರ್ಯ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವುದನ್ನೇ ‘ಸಂಕ್ರಾಂತಿ’ ಎಂದು ಕರೆಯುವುದು. ಈ ಎಣಿಕೆಯಂತೆ ಹನ್ನೆರಡು ಸಂಕ್ರಾಂತಿಗಳು ಒಂದು ವರ್ಷದಲ್ಲಿ ಉಂಟಾಗುತ್ತವೆ. ಆದರೆ ಮಕರಸಂಕ್ರಾಂತಿಯನ್ನೇ ವಿಶೇಷವಾಗಿ ಆಚರಿಸಲು ಕಾರಣ ಎಂದರೆ, ಸೂರ್ಯನು ತನ್ನ ಸಂಚಾರವನ್ನು ದಕ್ಷಿಣ ದಿಕ್ಕಿನಿಂದ ಉತ್ತರದ ಕಡೆಗೆ ತಿರುಗಿಸಿಕೊಳ್ಳುತ್ತಾನೆ ಎನ್ನುವುದು. ಅವನು ಪಿತೃಗಳ ದಾರಿಯಿಂದ ದೇವತೆಗಳ ದಾರಿಯ ಕಡೆಗೆ ಸೂರ್ಯ ತನ್ನ ಪ್ರಯಾಣವನ್ನು ಇಂದು ಆರಂಭಿಸುತ್ತಾನಂತೆ. ಸೂರ್ಯನಿಗೂ ನಮ್ಮ ಜೀವನಕ್ಕೂ ನೇರ ನಂಟಿದೆ. ಅವನೇ ನಮ್ಮ ಎಲ್ಲ ಚಟುವಟಿಕೆಗಳಿಗೆ ಪ್ರೇರಕ. ಗಾಯತ್ರೀಮಂತ್ರವೂ ಸೂರ್ಯನ ಪ್ರಾರ್ಥನೆಯೇ; ಒಳ್ಳೆಯ ಬುದ್ಧಿಯನ್ನು ನಮ್ಮಲ್ಲಿ ಪ್ರಚೋದಿಸು – ಎಂಬುದು ಅದರ ತಾತ್ಪರ್ಯ. ಬದುಕಿನಲ್ಲಿ ನಮಗೆ ಒದಗಬಹುದಾದ ಎಲ್ಲ ರೀತಿಯ ಸಂಕಷ್ಟಗಳಿಂದ ಪಾರಾಗಲು ನಮ್ಮ ಮನಸ್ಸು–ಬುದ್ಧಿ–ದೇಹಗಳು ಸರಿಯಾದ ಕ್ರಮದಲ್ಲಿ ಕೆಲಸಮಾಡಬೇಕು; ಈ ತಿಳಿವಳಿಕೆ ಹರಳುಗಟ್ಟುವುದೇ ಸೂರ್ಯನ ಅನುಗ್ರಹದಿಂದ. ನಾವು ಮರ್ತ್ಯದ ಮಾರ್ಗದಿಂದ ಅಮೃತದ ಮಾರ್ಗದಲ್ಲಿ ನಡೆಯಲು ಬೇಕಾದ ಬೆಳಕಿನ ಮೂಲವೇ ಅವನು. ಈ ಅಮೃತಯಾನಕ್ಕೆ ಮಾತು ನಮಗೆ ದಾರಿಬುತ್ತಿಯಾಗಲಿ ಎಂಬ ಆಶಯವನ್ನು ಸಂಕ್ರಾಂತಿಯ ಆಚರಣೆಯಲ್ಲಿ ನಾವು ನೋಡಬಹುದಾಗಿದೆ.

ಸಂಕ್ರಾಂತಿಯಂದು ನಮ್ಮ ದನಕರುಗಳನ್ನು ಸಿಂಗರಿಸುತ್ತೇವೆ; ಪೂಜಿಸುತ್ತೇವೆ. ನಮ್ಮ ಮಕ್ಕಳಿಗೆ ಆರತಿ ಎತ್ತುತ್ತೇವೆ; ಹೊಲ–ಗದ್ದೆಗಳಿಗೆ ಕೃತಜ್ಞತೆಯಿಂದ ನಮಿಸುತ್ತೇವೆ. ಒಟ್ಟು ನಮ್ಮ ಜೀವನವೇ ಸಂಕ್ರಾಂತಿಯ ಸಂಭ್ರಮದಲ್ಲಿ ಒಂದಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.