ADVERTISEMENT

Krishna Janmashtami: ಕೃಷ್ಣನ ನೆನೆವ ಪರಿ...

ಕೃಷ್ಣಾಷ್ಟಮಿ

ಮಂಜುನಾಥ ಕೊಳ್ಳೇಗಾಲ
Published 29 ಆಗಸ್ಟ್ 2021, 19:31 IST
Last Updated 29 ಆಗಸ್ಟ್ 2021, 19:31 IST
   

ಮಧುಪಕಿತವಬಂಧೋ ಮಾ ಸ್ಪೃಶಾಂಘ್ರಿಂ ಸಪತ್ಯಾಃ
ಕುಚವಿಲುಲಿತಮಾಲಾಕುಂಕುಮಶ್ಮಶ್ರುಭಿರ್ನಃ
ವಹತು ಮಧುಪತಿಸ್ತನ್ಮಾನಿನೀನಾಂ ಪ್ರಸಾದಂ
ಯದುಸದಸಿವಿಡಂಬಂ ಯಸ್ಯದೂತಸ್ತ್ವಮೀದೃಕ್

(ಎಲೋ ದುಂಬಿಯೇ, ನೀನು ಎಷ್ಟಾದರೂ ಆ ಕಪಟಿಯಾದ ಕೃಷ್ಣನ ಬಂಧುವೇ ತಾನೆ? ಅವನ ಮಾಲೆಯಲ್ಲಿನ ಜೇನು ಹೀರಲು ಹೋಗಿದ್ದೆಯಷ್ಟೇ? ಆ ಸವತಿಯರ ಮೊಲೆಯಿಂದ ಮಾಲೆಯ ಮೇಲುದುರಿದ ಕುಂಕುಮದ ಕೆಂಪು ನಿನ್ನ ಮೀಸೆಗೂ ಹತ್ತಿದೆ ನೋಡು. ಅದರಿಂದ ನಮ್ಮ ಕಾಲನ್ನೇನು ಮುಟ್ಟಬೇಡ. ಆ ಮಾನಿನಿಯರ ಪ್ರಸಾದವನ್ನೂ, ನಿನ್ನಂಥವನನ್ನು ದೂತನನ್ನಾಗಿ ಕಳಿಸಿದ್ದರಿಂದ ಯಾದವಸಭೆಯಲ್ಲಿ ಬರುವ ಅಪಹಾಸ್ಯವನ್ನೂ ಆ ನಿನ್ನ ಸ್ವಾಮಿಯೇ ಇಟ್ಟುಕೊಳ್ಳಲಿ!)

ಮಹಾಭಾರತ-ಭಾಗವತಗಳು ಕೃಷ್ಣನ ಎರಡು ಸಂಪೂರ್ಣ ವಿಭಿನ್ನ ಚಿತ್ರಗಳನ್ನು ಕಟ್ಟಿಕೊಡುತ್ತವೆ. ಸಂಭಾವಿತರಲ್ಲಿ ಸಂಭಾವಿತ, ಮಹಾಮುತ್ಸದ್ದಿ, ಪಾಂಡವಬಂಧು, ದ್ರೌಪದೀವತ್ಸಲ, ಗೀತಾಚಾರ್ಯನಾದ ಜಗದ್ಗುರು ಶ್ರೀಕೃಷ್ಣನ ವಿಶ್ವರೂಪವನ್ನೇ ಮಹಾಭಾರತ ಕಟ್ಟಿಕೊಟ್ಟರೆ, ಕರುಗಳ ಬಾಲವೆಳೆಯುತ್ತಾ, ಬೆಣ್ಣೆಕದ್ದು ಮಂಗಗಳಿಗೆ ತಿನ್ನಿಸುತ್ತಾ, ಗೋಪಿಯರನ್ನು ಕಾಡುತ್ತಾ, ಮಣ್ಣು ತಿಂದು ಅಮ್ಮನಿಗೆ ಬಾಯಲ್ಲೇ ಬ್ರಹ್ಮಾಂಡ ತೋರುವ, ಗೋಪಿಯರೊಡನೆ ರಾಸಲೀಲೆಯಾಡುವ ತುಂಟ ಕೃಷ್ಣನ ಚಿತ್ರ ಭಾಗವತದ್ದು.

ADVERTISEMENT

ಮಹಾಭಾರತವನ್ನು ರಚಿಸಿ ಮುಗಿಸಿದ ಮೇಲೆ ವೇದವ್ಯಾಸರ ಮನಸ್ಸು ಕಟ್ಟರೆಯಾಗಿಯೇ ಉಳಿಯಿತಂತೆ. ವೇದಗಳನ್ನು ವಿಭಾಗಿಸಿದ್ದಾಯಿತು, ಸೂತ್ರಗಳನ್ನು ರಚಿಸಿದ್ದಾಯಿತು, ಧರ್ಮಾರ್ಥಸೂಕ್ಷ್ಮಗಳನ್ನು ತಿಳಿಸುವ ಮಹಾಭಾರತವನ್ನೂ ರಚಿಸಿದ್ದಾಯಿತು, ಮನಸ್ಸಿನ ದುಗುಡವಂತೂ ಕಳೆಯಲೊಲ್ಲದು. ಆಗ ನಾರದರು, ಮನಸ್ಸು ನಿರ್ಮಲವಾಗಲೋಸುಗ ಭಗವಂತನ ಲೀಲಾವಿನೋದಗಳನ್ನು ಕೀರ್ತಿಸುವ ಭಾಗವತವನ್ನು ರಚಿಸಲು ಹೇಳಿದರಂತೆ.

ಭಾಗವತದ ದಶಮಸ್ಕಂಧವಂತೂ ಸ್ವತಃ ಕಾವ್ಯವಷ್ಟೇ ಅಲ್ಲ, ಅಸಂಖ್ಯ ಕವಿಭಾವುಕರಿಗೆ, ಮೊಗೆದಷ್ಟೂ ಮುಗಿಯದ ಅಕ್ಷಯಸ್ಫೂರ್ತಿಯ ಭಂಡಾರ. ಅಲ್ಲಲ್ಲಿ ಹೊಮ್ಮುವ ಕೆಲವು ‘ಗೀತೆ’ಗಳು ನಿಜಕ್ಕೂ ರಮ್ಯವಾದ ಭಾವಗೀತೆಗಳೇ.

ಕೃಷ್ಣನು ಅಕ್ರೂರನ ಕರೆಯನ್ನು ಮನ್ನಿಸಿ ಮಥುರೆಗೆ ಹೋದನಷ್ಟೇ? ಅವನು ತಮ್ಮನ್ನು ಎಂದೆಂದಿಗೂ ಬಿಟ್ಟೇ ಹೋಗುವನೆಂದು ಬಡಗೋಕುಲಕ್ಕೆ ಹೇಗೆ ತಾನೇ ತಿಳಿದೀತು; ಅವರಿಗೆ ತಾನೇ ಕಟ್ಟಿಕೊಟ್ಟಿದ್ದ ರಮ್ಯವಾದ ಗಂಧರ್ವಲೋಕವೊಂದು ಸುಳಿವೂ ಇಲ್ಲದಂತೆ ಕರಗಿಯೇ ಹೋದೀತೆಂದು ಸ್ವತಃ ಕೃಷ್ಣನಾದರೂ ಎಣಿಸಿದ್ದಾನೇ? ಮಥುರೆಗೆ ಹೋದ ಮೇಲೆ ಕೃಷ್ಣನ ಬದುಕೇ ಬೇರೆ; ಅದೊಂದು ಮಹಾ ಅಶ್ವತ್ಥವೃಕ್ಷದಂತಹ ಬೆಳವಣಿಗೆ. ಗೋವುಗಳನ್ನು ಗೋಪಿಯರನ್ನು ನೆನೆಯುವುದಿರಲಿ, ಆಮೇಲೆ ಆ ವೇಣುಗೋಪಾಲ ಕೊಳಲನ್ನಾದರೂ ಹಿಡಿದು ಮನಸ್ತೃಪ್ತಿಯಾಗಿ ನುಡಿಸಿದನೋ?

ಕಂಸಸಂಹಾರದ ನಂತರ ಮಥುರೆಯಲ್ಲೇ ನೆಲೆನಿಂತ ಕೃಷ್ಣನಿಗೂ ನಂದಗೋಕುಲದ ನೆನಪು ಆಗಾಗ ಕಾಡುವುದುಂಟು. ಹಾಗೊಮ್ಮೆ ಪ್ರಿಯಸ್ನೇಹಿತನಾದ ಉದ್ಧವನನ್ನು ತನ್ನವರೆಲ್ಲರ ಕ್ಷೇಮಸಮಾಚಾರ ವಿಚಾರಿಸಲೋಸುಗ ನಂದಗೋಕುಲಕ್ಕೆ ಅಟ್ಟುತ್ತಾನೆ. ಉದ್ಧವನೊಡನೆ ಕೃಷ್ಣನ ನೆನಪುಗಳನ್ನು ಹಂಚಿಕೊಳ್ಳುತ್ತ ಗೋಪಿಕೆಯರು ಗದ್ಗದಿತರಾಗಿ ಹಲವು ಭಾವಗಳಿಗೆ ಸಿಕ್ಕಿ ನಲುಗುತ್ತಾರೆ. ತನ್ನನ್ನು ಮುತ್ತಲು ಬಂದ ದುಂಬಿಯೊಂದನ್ನು ಕೃಷ್ಣನ ದೂತನೆಂದೇ ಭಾವಿಸಿ ಗೋಪಿಯೊಬ್ಬಳು ಅದರೊಂದಿಗೆ ಸಿಟ್ಟಿನಿಂದ ಮಾತಾಡತೊಡಗುತ್ತಾಳೆ. ಮೇಲಿನಂತೆ ಆರಂಭವಾಗುವ ಹತ್ತು ಶ್ಲೋಕಗಳಲ್ಲಿ ಕೃಷ್ಣನನ್ನು ಜರಿಯುತ್ತಾಳೆ, ಹಂಬಲಿಸುತ್ತಾಳೆ, ‘ಅವನೆಷ್ಟಾದರೂ ಈಗ ಬಹಳ ದೊಡ್ಡ ಮನುಷ್ಯನಪ್ಪಾ, ನಾವೆಷ್ಟರವರು’ ಎಂದು ಹತಾಶೆಗೊಳ್ಳುತ್ತಾಳೆ, ಯಾವತ್ತಾದರೂ ಅವನು ಮತ್ತೆ ತಮ್ಮೊಡನೆ ಬಂದು ಸೇರುವನೆಂದು ಆಶಿಸುತ್ತಾಳೆ, ಕುಶಲ ವಿಚಾರಿಸುತ್ತಾಳೆ, ಪ್ರೇಮ ನಿವೇದಿಸುತ್ತಾಳೆ. ಭ್ರಮರಗೀತೆಯೆಂದೇ ಪ್ರಸಿದ್ಧವಾದ ಈ ಭಾಗ, ಭಾಗವತದಲ್ಲಿ ಕಾಣುವ ಬಹುಮನೋಜ್ಞವಾದ ಭಾವಗೀತೆಗಳಲ್ಲೊಂದು.

ಭ್ರಮರಗೀತೆಯನ್ನು ನೆನೆದಾಗ ನಮ್ಮವರೇ ಆದ ಶ್ರೀಪಾದರಾಜರ ಕನ್ನಡ ಭ್ರಮರಗೀತೆಯನ್ನು ಮರೆಯುವುದು ಸಾಧ್ಯವೇ? ‘ಭೃಂಗ ನಿನ್ನಟ್ಟಿದನೇ? ಶ್ರೀ ರಂಗ ಮಧುರೇಲಿ ನಿಂದು’ ಎಂದು ಪ್ರಾರಂಭವಾಗುವ ಈ ಕೃತಿಯಲ್ಲಿ ಗೋಪಿಯರ ಆ ವಿಹ್ವಲತೆ ಬಲುಮುದ್ದಾಗಿ ಮನೋಹರವಾಗಿ ಮೂಲಕ್ಕೆ ಹೊಯಿಗೈಯ್ಯಾಗಿ ಮೂಡಿದೆ. ವ್ಯಾಸರ ಗೋಪಿ ಆ ದುಂಬಿಯನ್ನು ‘ಕಿತವಬಂಧೋ" (ಕಪಟಿಯ ಮಿತ್ರನೇ) ಎಂದು ಕರೆದರೆ, ನಮ್ಮ ಕನ್ನಡಗೋಪಿ ಇನ್ನೂ ಸಿಟ್ಟಾಗಿ ‘ಹೇ ಕಿತವಾ’ (ಕಪಟಿಯೇ) ಎಂದೇ ಕರೆಯುತ್ತಾಳೆ. ಅದು ಸಹಜವೇ, ಏಕೆಂದರೆ ಆ ದುಂಬಿಯನ್ನು ನೋಡಿ ಅವಳಿಗೆ ಕೃಷ್ಣನನ್ನೇ ಕಂಡಂತಾಗಿದೆ. ಆಕೆ ಉದ್ಗರಿಸುತ್ತಾಳೆ:

‘ನಿನ್ನ ನೋಡೆ ನಮ್ಮ ಅಚ್ಯುತನ್ನ ಕಂಡಂತಾಯಿತಯ್ಯ
ಚನ್ನಿಗರರಸ ಕುಶಲೋನ್ನತಿಯೊಳಿಹನೇನೋ?’
ಸಿಟ್ಟುಗೊಳ್ಳುತ್ತಲೇ ಅವನ ಕುಶಲವನ್ನೂ ವಿಚಾರಿಸಿಕೊಳ್ಳುವ ಗೋಪಿ -
‘ಲಕ್ಷುಮಿರಮಣನವ ಸೂಕ್ಷುಮ ಗೊಲ್ಲತೇರಾವು,
ಕುಕ್ಷಿಯೊಳು ಬೊಮ್ಮಾಂಡವವಗೆ ಮಕ್ಷಿಕಗಳಂತಿಪ್ಪೆವು;
ಮೋಕ್ಷದರಸನು ಅವ, ಗೋಕ್ಷೀರದಿ ತೃಪ್ತರಾವು;
ಲಕ್ಷಿಸುವುದೆಂತೊ ಎಮ್ಮನು ಶ್ರೀ ಹರಿಯು’
ಎಂದು ತನ್ನನ್ನೇ ಸಮಾಧಾನಿಸಿಕೊಳ್ಳುತ್ತಾಳೆ.
ಕೃಷ್ಣನ ನೆನಪುಗಳಿರಲಿ, ಅವನ್ನು ಅವನವರು ನೆನಪಿಸಿಕೊಳ್ಳುವ ಪರಿಯೂ ಮಧುರವೇ ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.