ADVERTISEMENT

ಸಂಸ್ಮರಣೆ | ವರ್ತಮಾನದ ಬಿಕ್ಕಟ್ಟು ಮತ್ತು ಶರೀಫರು

ದೇವು ಪತ್ತಾರ
Published 2 ಜುಲೈ 2020, 19:30 IST
Last Updated 2 ಜುಲೈ 2020, 19:30 IST
ಕಲೆ: ಗುರು ನಾವಳ್ಳಿ
ಕಲೆ: ಗುರು ನಾವಳ್ಳಿ   
""

ಸಂತ ಶಿಶುನಾಳ ಶರೀಫರ 201ನೇ ಜನ್ಮ ದಿನವನ್ನೂ ಅವರ ಗುರುಗಳಾದ ಗೋವಿಂದ ಭಟ್ಟರ 150ನೇ ಸಂಸ್ಮರಣೆಯನ್ನೂ ಒಟ್ಟೊಟ್ಟಿಗೆ ಆಚರಿಸುತ್ತಿರುವ ಸಂದರ್ಭವಿದು (ಜುಲೈ 3). ಆ ಅಪರೂಪದ ಗುರು–ಶಿಷ್ಯ ಜೋಡಿ ಬಾಳಿ ಬದುಕಿದ ದಿನಗಳು ಹಿಂದೆ ಸರಿದಷ್ಟೂ ಅವರ ಸಂದೇಶಗಳು ಹೆಚ್ಚು ಹೆಚ್ಚಾಗಿ ಮುನ್ನೆಲೆಗೆ ಬಂದು ಪ್ರಸ್ತುತವಾಗುತ್ತಾ ಸಾಗಿರುವುದು ಒಂದು ಬೆರಗು...

ವರ್ತಮಾನಕ್ಕೂ ಬಿಕ್ಕಟ್ಟಿಗೂ ನೇರ ಸಂಬಂಧ. ಎಲ್ಲ ಕಾಲದ ಸಮಕಾಲೀನ ಸಂಕಟಗಳು ಆಯಾ ಕಾಲ ಸೃಷ್ಟಿಸಿದ ಬಿಕ್ಕಟ್ಟುಗಳೇ ಆಗಿರುತ್ತವೆ. ಹೀಗಾಗಿ ವರ್ತಮಾನದಲ್ಲಿ ಬದುಕುವುದು ಎಂದರೆ ‘ಬಿಕ್ಕಟ್ಟುಗಳಿಗೆ ಮುಖಾಮುಖಿ ಆಗುವುದು’ ಎಂದೇ ಅರ್ಥ. ಸದ್ಯದ ಕಾಲ ಸೃಷ್ಟಿಸಿದ ಸಂಕಟ ದೇಶಾತೀತವಾದದ್ದು. ಹಿಂದೆ ಕಾಲ-ದೇಶಗಳೆರಡೂ ಸೇರಿ ಹುಟ್ಟು ಹಾಕುತ್ತಿದ್ದ ಸಮಸ್ಯೆಯು ‘ಬಿಡುಗಡೆ’ಗೆ ದಾರಿಗಳನ್ನು ಮುಕ್ತವಾಗಿಡುತ್ತಿತ್ತು. ಈಗ ಕೂಡ ಕಂಡುಕೊಳ್ಳಬೇಕು.

ಎರಡು ನೂರು ವರ್ಷಗಳ ಹಿಂದೆ ಜನಿಸಿದ ಶರೀಫರು ತಮ್ಮ ಸಮಕಾಲೀನ ಬಿಕ್ಕಟ್ಟುಗಳಿಗೆ ಮುಖಾಮುಖಿ ಆಗುತ್ತಲೇ, ವರ್ತಮಾನದ ಸವಾಲುಗಳನ್ನು ಎದುರಿಸುತ್ತಲೇ ಬದುಕಿನ ದಾರಿ ಕಂಡುಕೊಂಡರು. ಹೀಗೆ ಕಂಡುಕೊಂಡ ‘ದಾರಿ’ ಅವರಿಗೆ ಮಾತ್ರ ಸೀಮಿತವಲ್ಲ. ಅದೀಗ ದಾರಿದೀಪ-ಕೈಮರ-ಮಾರ್ಗಸೂಚಿ. ಶರೀಫರ ಹಾಡುಗಳು ನೀಡುವ ಸೂಚನೆ-ನಿರ್ದೇಶನಗಳು ಅಂದಂದಿಗೆ ಮುಗಿದು ಹೋದ-ಹೋಗುವ ರೀತಿಯವುಗಳಲ್ಲ.

ADVERTISEMENT

ಶರೀಫರು ಹಾಡಿದ್ದು-ಬರೆದದ್ದು ಸಾಹಿತ್ಯಕ್ಕಾಗಿ ಅಲ್ಲ, ಸುತ್ತಲಿನ ಜನರ ಇಹ-ಪರದ ಬದುಕು ಹಸನಾಗಬೇಕು ಎಂಬ ಉದ್ದೇಶದಿಂದ. ವರ್ತಮಾನದಲ್ಲಿ ತೀವ್ರವಾಗಿ ಬದುಕಿ-ಬರೆದರೆ ಅದು ಕಾಲಕಾಂತರದ ವರೆಗೆ ದೇಶದ ಗಡಿಗಳನ್ನು ಮೀರಿದ ‘ಸಂದೇಶ’ವನ್ನು ಸೃಷ್ಟಿಸುತ್ತದೆ. ಅದು ಶರೀಫರ ವಿಷಯದಲ್ಲಿಯೂ ನಿಜ.

ತಂದೆ ಇಮಾಮ್‌ ಸಾಹೇಬರು ಕನ್ನಡ-ಉರ್ದು ಕಲಿಸುವ ಜತೆಗೆ ರಾಮಾಯಣ, ಮಹಾಭಾರತ, ಶರಣರ-ಸೂಫಿ ಸಂತರ ಕತೆಗಳನ್ನು ಹೇಳುತ್ತ ಬಾಲಕನನ್ನು ಬೆಳೆಸಿದರು. ತಾಯಿ ಹಜ್ಜುಮಾ ಮಗನಿಗೆ ಪ್ರೀತಿಯ ಹಂಚುವ ಬಗೆ ಕಲಿಸಿದರು. ಮುಲ್ಕೀವರೆಗೆ ಓದಿದ ಶರೀಫರು ನಂತರ ಶಿಶುನಾಳದ ಚಂದ್ರಮೌಳೇಶ್ವರ ದೇವಾಲಯದಲ್ಲಿ ಶಾಲೆ ಆರಂಭಿಸಿ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದರು. ನಂತರ ಸುತ್ತಲಿನ ಗ್ರಾಮಗಳಾದ ಬಸನಾಳ, ಮಂಡಿಗನಾಳ ಕ್ಯಾಲಕೊಂಡ, ಎರೆಬೂದಿಹಾಳ ಮುಂತಾದ ಕಡೆಗಳಲ್ಲಿಯೂ ಶರೀಫರು ‘ಗಾಂವಠಿ’ ಸಾಲಿ ತೆರೆದು ಕಲಿಸಿದರು.

ಕುಂದಗೋಳದ ಫಾತಿಮಾ ಅವರೊಂದಿಗೆ ವಿವಾಹವೂ ಆಯಿತು. ಒಂದು ಹೆಣ್ಣುಮಗುವೂ ಜನಿಸಿತು. ಪತ್ನಿ–ಮಗಳ ಅಕಾಲ ಮೃತ್ಯು ಶರೀಫರನ್ನು ಕಲಕಿತು. ಶರೀಫರ ಒಳಗಿದ್ದ ಹುಡುಕಾಟ ಜಾಗೃತಗೊಂಡಿತು. ವಚನಗಳ ಓದು, ಕುಮಾರವ್ಯಾಸ, ಜೈಮಿನಿ ಭಾರತ- ಶೈವ ಪುರಾಣಗಳ ಅರಿವು ಶರೀಫರ ‘ನಡೆ’ ನಿರ್ಧರಿಸಲು ಅನುವು ಮಾಡಿಕೊಟ್ಟವು.

ಕಳಸದ ಗೋವಿಂದ ಭಟ್ಟರು ಶಾಕ್ತಪಂಥದಲ್ಲಿ ನಂಬಿಕೆ ಇಟ್ಟವರು. ಅನುಭಾವಿ-ಸಾಧಕರು. ಆಧ್ಯಾತ್ಮದ ಹಾದಿಯಲ್ಲಿ ಶರೀಫರನ್ನು ಕೈ ಹಿಡಿದು ನಡೆಸಿದರು. ಗೋವಿಂದಭಟ್ಟರ ಶಿಷ್ಯತ್ವದಲ್ಲಿನ ಕಲಿಕೆ ಮುಲ್ಲಾ, ಮೌಲ್ವಿಗಳಿಗೂ ಹಿಡಿಸಲಿಲ್ಲ. ಹೀಗೆ ರೂಢಿಗತ ಧಾರ್ಮಿಕರ ತಕರಾರು-ಆಕ್ಷೇಪಗಳನ್ನು ಎದುರಿಸುತ್ತಲೇ ಶರೀಫರು ‘ನನ್ನೊಳಗೆ ನಾ ತಿಳಕೊಂಡೆ, ಬೇಕಾದ ಗಂಡನ್ನ ಮಾಡಿಕೊಂಡೆ’ ಎಂದು ಹಾಡಿದರು.

ವಸಾಹತುಷಾಹಿ ತನ್ನ ಅಧಿಕಾರ ವಿಸ್ತರಿಸುತ್ತಿದ್ದ, ಇಂಗ್ಲಿಷ್‌ ಶಿಕ್ಷಣ ಆರಂಭವಾಗುತ್ತಿದ್ದ, ಆಧುನಿಕತೆಯು ತೆರಕೊಳ್ಳುತ್ತಿದ್ದ ಕಾಲದಲ್ಲಿ ಬದುಕಿದ್ದ ಶರೀಫರು, ಅವುಗಳಿಗೆ ಪ್ರತಿಕ್ರಿಯಿಸುವುದು ಅನಿವಾರ್ಯವಾಗಿತ್ತು. ಶರೀಫರ ಹಾಡುಗಳಲ್ಲಿ ಹುಬ್ಬಳ್ಳಿ ಪೇಟೆ-ಗಿರಣಿ, ಕಂಪನಿ ಸರಕಾರ, ಸರಕಾರದ ಶಾಲೆಗಳು ಕಾಣಿಸಿಕೊಂಡವು. ಶರೀಫರು, ಸ್ಥಾಪಿತ ಧರ್ಮಗಳ ಮುಖಂಡರ ಸವಾಲಿಗೆ ಮಾತ್ರ ಎದುರಾಗುತ್ತಿರಲಿಲ್ಲ. ಆಧುನಿಕತೆ ಹಾಗೂ ಅದು ತಂದು ಒಡ್ಡುತ್ತಿದ್ದ ಸಂಕೀರ್ಣ ಸಮಸ್ಯೆಗಳಿಗೂ ಮುಖಾಮುಖಿ ಆಗುತ್ತಿದ್ದರು. ಸಾಂಕ್ರಾಮಿಕ ರೋಗ ಹಾಗೂ ಅದು ಉಂಟು ಮಾಡುವ ತಲ್ಲಣಗಳಿಗೂ ಶರೀಫರು ಮಿಡಿಯಬೇಕಾಗುತ್ತಿತ್ತು. ‘ಮಹಾಮಾರಿ’ಯಂತೆ ಬಂದ ಪ್ಲೇಗ್‌ ಹುಟ್ಟುಹಾಕಿದ ಆತಂಕ ಶರೀಫರನ್ನು ಕಲಕಿತ್ತು. ಎದುರಿಗಿದ್ದ ಸಂಕಟವನ್ನು ಶರೀಫರು ಹಾಡಾಗಿಸಿದರು. ಪದಕಟ್ಟಿ, ಹಾಡು ಹಾಡಿ ಭವದ ಬದುಕನ್ನು ಹಸನು ಮಾಡಲು ಯತ್ನಿಸಿದರು.

ಒಡೆಯುವ, ಎರಡಾಗಿಸುವುದರ ವಿರುದ್ಧ ಇದ್ದ ಶರೀಫರು ಸೇರುವ, ಬೆಸೆಯುವುದರಲ್ಲಿ ನಂಬಿಕೆಯುಳ್ಳವರು. ‘ಅಲ್ಲಾ ಅಲ್ಲಮ ಭೇದ್‌ ನ ಸಮಜೋ, ರಾಮ ರಹೀಮ ಏಕ್‌ ಹೈ ಸಮಜೊ’ ಎಂದು ಹೇಳುವಲ್ಲಿ ಶರೀಫರು, ಇರುವುದು-ನೋಡುವುದು ಎರಡಲ್ಲ; ಅದು ಒಂದೇ ಎಂದು ಸಾರುತ್ತಾರೆ. ನಾಥ-ಸಿದ್ಧ ಪರಂಪರೆಯ ಅಲ್ಲಮ ಚೌಕಟ್ಟನ್ನು ಮೀರುವುದರ ಸಂಕೇತ. ಮೇರೆ ಮೀರುವ ಮೌಖಿಕ ಪರಂಪರೆಯ ಅಲ್ಲಮ ಶರೀಫರಿಗೆ ದೊರಕಿದ್ದು ಚಾಮರಸನ ‘ಪ್ರಭುಲಿಂಗ ಲೀಲೆ’ಯ ಮೂಲಕ. ಶರೀಫರು ‘ಆರು ಶಾಸ್ತ್ರ, ಹದಿನೆಂಟು ಪುರಾಣ ನನ್ನ ಬಗಲಾಗ, ಪ್ರಭುಲಿಂಗ ಲೀಲಾ ನನ್ನ ತಲೀಮ್ಯಾಲ’ ಎನ್ನುತ್ತಿದ್ದರಂತೆ. ಶರೀಫರ ಹಾಡುಗಳಲ್ಲಿ ಮೇಲಿಂದ ಮೇಲೆ ಅಲ್ಲಮನ ಪ್ರಸ್ತಾಪ ಬರುತ್ತದೆ. ಅಲ್ಲಮನ ಆಯ್ಕೆಯ ಮೂಲಕ ಶರೀಫರು ತನ್ನ ಹುಡುಕುವ-ಕಂಡುಕೊಳ್ಳಬೇಕಾದ ನೆಲ-ನೆಲೆಗಳನ್ನು ಖಚಿತ ಪಡಿಸಿಕೊಂಡಿದ್ದಾರೆ. ಎಲ್ಲ ಹಂಗುಗಳ ತೊರೆದ ಅಲ್ಲಮ ಹಲವು ನೆಲೆಗಳು ಬಂದು ಸೇರುವ ನಿಲು-ದಾಣ ಕೂಡ.

‘ಸೂಫಿ’ ಎನ್ನುವುದು ಧರ್ಮಾತೀತ. ಅಂದರೆ, ರೂಢಿಗತ ಧರ್ಮದ ಆಚರಣಾ ಪ್ರಧಾನ ನಡವಳಿಕೆಯನ್ನು ಪ್ರಶ್ನಿಸುವ ಮತ್ತು ಅಂಧಶ್ರದ್ಧೆ ಹಾಗೂ ಕರ್ಮಠತನವನ್ನು ನಿರಾಕರಿಸಿ ಸತ್ಯಶುದ್ಧ ಬೆಳಕಿನ ಹಾದಿಯಲ್ಲಿ ನಡೆಯುವಂತಹದ್ದು. ಶರೀಫರನ್ನು ‘ಸೂಫಿ’ಗಳಲ್ಲಿ ಸೇರಿಸುವುದಿಲ್ಲವಾದರೂ ಅವರ ಬದುಕು-ಬರವಣಿಗೆ ‘ಸೂಫಿತತ್ವ’ ಮಾದರಿಯಲ್ಲಿಯೇ ಇದೆ.

‘ಬರಕೋ ಪದ ಬರಕೋ’ ಎಂದ ಶರೀಫರಿಗೆ ಬರೀ ಬರೆದುಕೊಂಡು ಹಾಡಿದರೆ ಅದು ಸಾಕಾಗುವುದಿಲ್ಲ; ‘ಇದರನ್ವಯ ತಿಳಕೋ’ಬೇಕು. ‘ಮೈ ಜಂಗಮ್‌ ಹೋಕರ್‌ ಗಲಿಗಲಿ ಫಿರಿಯಾ’ ಎನ್ನುವ ಶರೀಫರು ‘ಕಚ್ಚುವ ನಾಯಿಯಂತೆ ಬೊಗಳ್ವರು ಹುಚ್ಚರಂದೊಳಿಹರು ಎಚ್ಚರ ಇಲ್ಲದವರು ನಾಚಿಕಿ ತೊರೆದಿಹರು ಮುಚ್ಚಿದ ಸುದ್ದಿಯ ಬಚ್ಚಿಡದಂಥ ಕುತ್ಸಿತ ಮನುಜರನಗಲಿರಬೇಕು’ ಎಂದು ಎಚ್ಚರಿಸದೇ ಇರಲಾರರು.

ಶರೀಫರು ತೋರಿದ ‘ದಾರಿ’ ನಿನ್ನೆಯದಲ್ಲ. ಅದು ನಾಳಿನದು ಕೂಡ. ಅದು- ನಡಿಯೋ ದೇವರ ಚಾಕರಿಗೆ/ಮುಕ್ತಿಗೊಡೆಯ ಖಾದರಲಿಂಗ/ನೆಲೆಸಿಪ್ಪ ಗಿರಿಗೆ....

ಲೇಖಕ:ದೇವು ಪತ್ತಾರ, ‘ಬುಕ್‌ ಬ್ರಹ್ಮ’ದ ಸಂಪಾದಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.