ADVERTISEMENT

Maha Shivratri ವಿಶೇಷ: 'ಶಿವ ವ್ಯಕ್ತಿಯಲ್ಲ, ಅತೀ ಸುಂದರವಾದ ತತ್ವ'

ಶ್ರೀ ಶ್ರೀ ರವಿಶಂಕರ್
Published 7 ಮಾರ್ಚ್ 2024, 7:37 IST
Last Updated 7 ಮಾರ್ಚ್ 2024, 7:37 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   
ದೇಶಾದ್ಯಂತ ಮಹಾ ಶಿವರಾತ್ರಿಯ ಸಂಭ್ರಮ, ಸಡಗರ. ಶಿವ ಎಂಬ ತತ್ವದ ಹಿನ್ನೆಲೆ, ದೈವೀ ತತ್ವದ ಪಾರಮ್ಯ ಮತ್ತು ನಟರಾಜನೆಂಬ ಶಿವನ ಬಗೆಗೆ ಬೆಳಕು ಚೆಲ್ಲಿದ್ದಾರೆ ಶ್ರೀ ಶ್ರೀ ರವಿಶಂಕರ್ ಗುರೂಜಿ.

ನಟರಾಜನ ಸುತ್ತಲೂ ಇರುವ ಪ್ರಭಾವಳಿ ಹೇಗಿದೆಯೆಂದರೆ, ತೇಜಪುಂಜದಿಂದ, ಅಗ್ನಿತತ್ವದಿಂದ ಮಾಡಲ್ಪಟ್ಟಿದೆ. ನಟರಾಜನು ವಿಶ್ವದಲ್ಲಿರುವ ಊರ್ಜೆ, ಶಕ್ತಿ. ಆ ಶಕ್ತಿಯ ಒಳಗೆ ನಟರಾಜನಿದ್ದಾನೆ. ವೈಶ್ವಿಕ ಶಕ್ತಿಯ ಒಳಗಿರುವಂತಹ ತತ್ವವೇ ನಟರಾಜ.

ನಟರಾಜನು ಒಂದು ಕೈಯಲ್ಲಿ ಜಿಂಕೆಯನ್ನು ಹಿಡಿದುಕೊಂಡಿದ್ದಾನೆ. ಈ ಜಿಂಕೆಯೇನು? ವಾಯು, ಗಾಳಿ ತತ್ವದ ಪ್ರತೀಕ. ಮತ್ತೊಂದು ಕೈಯಲ್ಲಿ ಅಗ್ನಿತತ್ವವಿದೆ. ಅವನು ಸ್ವಯಂ 'ಚಿದಂಬರಂ – ಚಿತ್ – ಅಂಬಾಂ ಚಿದಾಕಾಶ'. ಅವನೇ ಸ್ವಯಂ ಆಕಾಶತತ್ವ. ಒಂದು ಕಾಲು ಮೇಲಿದೆ, ಒಂದು ಕಾಲು ಕೆಳಗಿದೆ. ಇವೆರಡೂ ಪೃಥ್ವಿ ತತ್ವ ಹಾಗೂ ಜಲತತ್ವದ ಸೂಚಕ. ಅಭಯ-ವರದ ಹಸ್ತಗಳಿವೆ. ಹೀಗೆ ನಟರಾಜನ ಭಂಗಿಯು ಒಂದು ಅದ್ಭುತವಾದ ತತ್ವವನ್ನು ಪ್ರತಿಪಾದಿಸುವ ಒಂದು ಚಿಹ್ನೆ.

ADVERTISEMENT

'ಅಪಸ್ಮಾರ'ನೆಂಬ ರಾಕ್ಷಸ

ನಟರಾಜನ ಕಾಲಿನ ಕೆಳಗೆ 'ಅಪಸ್ಮಾರ'ನೆಂಬ ರಾಕ್ಷಸನಿದ್ದಾನೆ. ದೈವೀ ತತ್ವ ಮತ್ತು ಅಸುರಿ ತತ್ವಗಳೆರಡೂ ಇದ್ದೇ ಇರುತ್ತದೆ. ಅಸುರಿ ತತ್ವವು ದೈವೀ ತತ್ವದ ಕೆಳಗಿದ್ದರೆ ಎಲ್ಲವೂ ಸರಿಯಿರುತ್ತದೆ, ಇಲ್ಲವಾದರೆ, ಅದು ದೈವೀ ತತ್ವದ ತಲೆಯ ಮೇಲೆ ಹತ್ತಿದರೆ, ಅದನ್ನು ಆಪತ್ತಿನ ಕಾಲ ಎನ್ನುತ್ತೇವೆ.

ಅಪಸ್ಮಾರ ಎಂದರೆ ಓಡಾಡಲೂ ಆಗದಿರುವ, ನಡೆದಾಡಲೂ ಆಗದಿರುವ ಒಂದು ಜಡತೆ. ಆ ಜಡತೆಯನ್ನು ತುಳಿದು, ಅದರ ಮೇಲೆ ನರ್ತನ ಮಾಡುತ್ತಿರುವುದೇ ನಟರಾಜನ ಭಂಗಿ. ಚಂದ್ರನು ಜಟೆಯಲ್ಲಿದ್ದಾನೆ. ಕಾಲಿನಿಂದ ನೂಪುರ ತೆಗೆದು ಮೇಲೆತ್ತಿದ್ದಾನೆ. ಕಾಲು ಮತ್ತು ಕಿವಿಗೆ ಸಮನ್ವಯ ಮಾಡಿದ್ದಾನೆ. ನಾವು ಕೇಳಿದ್ದರ ಹಾಗೂ ನಡೆದುಕೊಳ್ಳುವುದರ ಸಮನ್ವಯವಿರಬೇಕು. ನಾವು ಕೇಳುವುದು, ನಡೆದುಕೊಳ್ಳುವುದು ಬೇರೆ ಬೇರೆಯಾಗಿದ್ದರೆ ಸರಿ ಹೊಂದುವುದಿಲ್ಲ. ಅವೆಲ್ಲವೂ ಒಂದು ಸಂಯುಕ್ತವಾಗಿ ಸಂಯೋಜಕವಾಗಿ ನಡೆಯುವುದನ್ನು ಸೂಚಿಸುವುದೇ ನಟರಾಜ ತತ್ವ.

ಶಿವ ವ್ಯಕ್ತಿಯಲ್ಲ, ಅತೀ ಸುಂದರವಾದ ತತ್ವ

ಶಿವನು ಒಂದು ತತ್ವ, ವ್ಯಕ್ತಿಯಲ್ಲ. ಕೆಲವರು, ಶಿವನು 10,000 ವರ್ಷಗಳ ಹಿಂದೆ, 50,000 ವರ್ಷಗಳ ಹಿಂದೆ ಜೀವಿಸಿದ್ದ ಒಂದು ವ್ಯಕ್ತಿ ಎಂದು ಭಾವಿಸಿಕೊಂಡಿದ್ದಾರೆ. ಇದು ಮೂರ್ಖತನ.

ಶಿವನನ್ನು ಎಂದಿಗೂ ಕಾಲಕ್ಕೆ ಸೀಮಿತಗೊಳಿಸಬೇಡಿ. ಆದ್ದರಿಂದಲೇ ಅವನನ್ನು 'ಮಹಾಕಾಲ' ಎಂದು ಕರೆಯುವುದು, 'ಕಾಲದ ಕಾಲ', 'ಎಲ್ಲಾ ಕಾರಣಗಳ ಕಾರಣ'. ಶಿವನನ್ನು ಬಹಳ ಆಸಕ್ತಕರವಾಗಿ ವಿವರಿಸಲಾಗಿದೆ. ಅವನ ದೇಹ ಇಡೀ ಸೃಷ್ಟಿಯನ್ನು ಪಸರಿಸಿದೆ ಎನ್ನುತ್ತಾರೆ. ಆದ್ದರಿಂದ, ಅವನೇ ಆ ಚೇತನ, ಆ ಶಕ್ತಿ. ಭೂಮಿಯ ಮೇಲೆ ನಡೆದಂತಹ ಒಂದು ವ್ಯಕ್ತಿಯಲ್ಲ.

'ಕೈಲಾಸ' ಎಂದರೆ ಅವನು ತನ್ನ ಜೀವನವಿಡೀ ವಾಸಿಸುತ್ತಿದ್ದ ಒಂದು ಪರ್ವತವಲ್ಲ. ಇದೆಲ್ಲವೂ ಮೂರ್ಖತನ. ಕೈಲಾಸ ಎಂಬ ಪದದ ಅರ್ಥವನ್ನು ನನಪಿನಲ್ಲಿಟ್ಟುಕೊಳ್ಳಿ. 'ಲಾಸ' ಎಂದರೆ ಉತ್ಸವ, ಆನಂದ, ಸಂತೋಷ, ಉತ್ಸಾಹ. ಕೈಲಾಸ ಎಂದರೆ ಕೇವಲ ಉತ್ಸವವನ್ನು ಹೊಂದಿರುವಂತದ್ದು, ಕೇವಲ ಆನಂದವನ್ನು ಹೊಂದಿರುವಂತದ್ದು.

ನಿಮ್ಮೊಳಗೆ ಶಿವತತ್ವವು ಉದಯಿಸಿದಾಗ, ನಿಮ್ಮ ಜೀವನವೇ ಉತ್ಸವವಾಗಿ ಬಿಡುತ್ತದೆ. ಎಲ್ಲವೂ ಉತ್ಸವವಾಗುತ್ತದೆ. ಉತ್ಸವವಿರುವಲ್ಲಿ ಶಿವತತ್ವವು ಅಲ್ಲಿ ವಾಸವಾಗಿದೆ, ಅಲ್ಲಿ ಅರಳಿದೆ, ಅಲ್ಲಿ ಪ್ರಕಟವಾಗಿದೆ. ಬೆಳಕಿಗೆ ಬಂದಿದೆ.

ಶಿವನಲ್ಲಿ ಐದು ಕಾರ್ಯಗಳಿವೆ:
ಸೃಷ್ಟಿ - ಸೃಷ್ಟಿ ಮಾಡುವುದು, ಸ್ಥಿತಿ - ಸಂರಕ್ಷಣೆ, ಸಂಹಾರಲಯ,ಅನುಗ್ರಹ – ಆಶೀರ್ವಾದ, ಕೃಪೆ, ಕರುಣೆ ಮತ್ತು ತಿರೋಭಾವ ಎಂದರೆ ಅಡಗಿಕೊಳ್ಳುವುದು, ಪರದೆಯೊಳಗಿರುವುದು. ಪ್ರಕಟವಾಗುವುದು ಮತ್ತು ಪರದೆಯ ಹಿಂದೆ ಅಡಗಿರುವುದು. ಇವು 'ಪಂಚಕೃತ್ಯ ಪರಾಯಣ' ಚೈತನ್ಯದಲ್ಲಿ ನಡೆಯುವ ಐದು ಕೃತ್ಯಗಳು, ಕಾರ್ಯಗಳು.

ಜಗತ್ತಿನ ಸಾರವೇ ಶಿವತತ್ವ

ನಮ್ಮ ಆಗಮ ಶಾಸ್ತ್ರಗಳಲ್ಲಿ ಹೇಳಲಾಗಿರುವಂತೆ, ಮೊದಲನೆಯ ತತ್ವವು ಪೃಥ್ವಿ. ಶಿವನು ಮೂವತ್ತಾರನೆಯ ತತ್ವ ಈ ಸಂಸಾರದಲ್ಲಿ ಸೂಕ್ಷ್ಮಕ್ಕಿಂತಲೂ ಸೂಕ್ಷ್ಮವಾದುದದೇನಾದರೂ ಇದ್ದರೆ, ಅದು ಶಿವತತ್ವ. ಶಿವತತ್ವದಿಂದ ಇವೆಲ್ಲವೂ ನಡೆಯುತ್ತಿದೆ. ಈ ಜಗತ್ತಿನ ಸಾರವೇ ಶಿವತತ್ವ. ಈ ತತ್ವದ ಆಳವನ್ನು ಒಂದು ಅಬೋಧವಾದ ಮಗುವೂ ತಿಳಿಯಲೆಂದು ಅದಕ್ಕೊಂದು ರೂಪವನ್ನು ನೀಡಲಾಗಿದೆ. ಶಿವನಿಗೆ ರೂಪವಿಲ್ಲ. ಆದ್ದರಿಂದಲೇ, ಶಿವನ ಪ್ರತಿಮೆಗೆ ಪೂಜೆ ನಡೆಯದೆ, ಶಿವಲಿಂಗದ ಪೂಜೆ ನಡೆಯುವುದು. ಶಿವನೊಬ್ಬ ವ್ಯಕ್ತಿ ಎಂದು ತಪ್ಪಾಗಿ ತಿಳಿಯಬೇಡಿ ಎಂದು ಹೇಳಲು ಲಿಂಗದ ಪೂಜೆಯನ್ನು ಮಾಡಲಾಗುತ್ತದೆ. ಶೂನ್ಯವಾದರೂ ಪೂರ್ಣ. ಅರೂಪಿಯಾದರೂ ಎಲ್ಲಾ ರೂಪಗಳಲ್ಲೂ ಅವನೇ ಇದ್ದಾನೆ. ಸುಂದರವಾಗಿದ್ದರೂ ಅದೃಶ್ಯನು. ಸತ್ಯವಾದರೂ ಈ ಮಿಥ್ಯವಾದ ಜಗತ್ತಿನ ಅಧಿಷ್ಠಾತನು ಶಿವ.‌‌

ಇಡೀ ವಿಶ್ವವೇ ಅವನ ರೂಪ:

ಶಿವನು ಇಡೀ ಜಗತ್ತು. ಶಿವನಿಂದ ಎಲ್ಲವೂ ಬಂದಿದೆ. – 'ಯತೋ ಜಾಯತೆ' . 'ಪಾಲ್ಯತೆ' – ಎಲ್ಲವೂ ಅವನಲ್ಲಿ ಸಂರಕ್ಷಿತವಾಗುತ್ತದೆ. ಅದರೊಳಗೆ ಎಲ್ಲವೂ ಲಯವಾಗುತ್ತದೆ. ಅದೇ ಶಿವತತ್ವ. ಯಾವುದೇ ಸಮಯದಲ್ಲಿ ನೀವು ಶಿವನಿಂದ ಹೊರಗುಳಿಯುವ ಪ್ರಮೇಯವೇ ಇಲ್ಲ. ಶಿವನು ಇಡೀ ಜಗತ್ತಿನ ಸಾರ. ಶಿವನು 'ವಿಶ್ವರೂಪ – ಇಡೀ ವಿಶ್ವವೇ ಅವನ ರೂಪ'. ಆದರೂ ಅವನು 'ನಿರಾಕಾರ'. 'ನಿರೀ ಹಂ ನಿರಾಕಾರ ಓಂಕಾರ ವೇದ್ಯಂ'. ಹಾಗಿದ್ದರೆ ಅವನನ್ನು ತಿಳಿಯುವುದು ಹೇಗೆ? ಓಂಕಾರದ ಮೂಲಕ ತಿಳಿಯಬಹುದು. ಓಂಕಾರ ವೇದ್ಯಂ – ಓಂಕಾರದೊಳಗೆ ಆಳವಾಗಿ ಹೊಕ್ಕಿ. ಅದೇ ವಿಶ್ವದ ಆದ್ಯ ಶಬ್ದ. ಓಂ ಮಂತ್ರವನ್ನು ಪುನರುಚ್ಚಿಸುತ್ತಿರುವುದಿಲ್ಲ, ಅದನ್ನು ಕೇಳಿಸಿಕೊಳ್ಳುತ್ತೇವೆ. 'ಶೃತಿ ಜ್ಞಾನ ಗಮ್ಯ'. ಶಿವನನ್ನು ಹೇಗೆ ಅರ್ಥಮಾಡಿಕೊಳ್ಳುವುದು? ಶೃತಿಗಳ ಜ್ಞಾನದ ಮೂಲಕ, ಆಳವಾದ ಧ್ಯಾನದಲ್ಲಿ ಕೇಳಿಸಿಕೊಳ್ಳುವುದರ ಮೂಲಕ ಅದರ ಮೂಲಕ ಮಾತ್ರವೇ ನೀವು ಶಿವನನ್ನು ಅರಿಯಬಲ್ಲಿರಿ, ಶಿವನ ಸಾಕ್ಷಾತ್ಕಾರವನ್ನು ಪಡೆಯಬಲ್ಲಿರಿ. ಕೇವಲ ಧ್ಯಾನದ ಮೂಲಕ ಮಾತ್ರ, ವೈದಿಕ ಜ್ಞಾನದ ಮೂಲಕ, ಕೇವಲ ಧ್ಯಾನದ ಮೂಲಕ ಮಾತ್ರ, ಶೃತಿಗಳ ಜ್ಞಾನದ ಆಳದ ಮೂಲಕ ಮಾತ್ರ ಶಿವನು ಏನೆಂದು ಅರಿಯಬಲ್ಲಿರಿ.

'ತಪೋ ಯೋಗ ಗಮ್ಯ' – ತಪಸ್ಸಿನ ಮೂಲಕ, ಯೋಗ ಮೂಲಕ ಅನುಭವಿಸಬಹುದು. ತಿಳಿಯಬಹುದು ಎಂದು ಹೇಳುವುದೂ ಸರಿಯಲ್ಲ. ಅದನ್ನು ತಿಳಿಯಲು ಸಾಧ್ಯವಿಲ್ಲ.

'ಶಿವಲಿಂಗ'.

ಒಂದು ಸುಂದರವಾದ ಕಥೆಯಿದೆ. ಶಿವರಾತ್ರಿಗೆ ಸಂಬಂಧಪಟ್ಟಿದೆ. ಒಮ್ಮೆ ಬ್ರಹ್ಮ ಮತ್ತು ವಿಷ್ಣು ಶಿವನನ್ನು ಕಂಡುಕೊಳ್ಳಲು ನಿರ್ಧರಿಸಿದರು. ಶಿವನನ್ನು ಪೂರ್ಣವಾಗಿ ಅರ್ಥಮಾಡಿಕೊಳ್ಳಲು ನಿರ್ಧರಿಸಿದರು. ಬ್ರಹ್ಮನು ವಿಷ್ಣುವಿಗೆ, ‘ನಾನು ಹೋಗಿ ಶಿವನ ತಲೆಯನ್ನು ಕಂಡು ಹಿಡಿಯುತ್ತೇನೆ, ನೀನು ಹೋಗಿ ಅವನ ಪಾದಗಳನ್ನು ಕಂಡು ಹಿಡಿ' ಎಂದನು. ಆದ್ದರಿಂದ ವಿಷ್ಣುವು ಕೆಳಭಾಗಕ್ಕೆ ಶಿವನ ಪಾದಗಳನ್ನು ಹುಡುಕಲು ಅನೇಕ ಸಾವಿರ ವರ್ಷಗಳವರೆಗೆ ಹೋಗುತ್ತಲೇ ಇದ್ದ. ಎಷ್ಟು ಕೆಳ ಹೊಕ್ಕರೂ ಶಿವನ ಪಾದಗಳು ವಿಷ್ಣುವಿಗೆ ಕಾಣಲೇ ಇಲ್ಲ. ಬ್ರಹ್ಮನು ಮೇಲೆ ಮೇಲೆ ಹೋದರೂ ಶಿವನ ತಲೆ ಕಾಣಲಿಲ್ಲ. ಎಂದರೆ ಶಿವನಿಗೆ ತಲೆಯೂ ಇಲ್ಲ, ಪಾದಗಳೂ ಇಲ್ಲ, ಎಂದರೆ ಶಿವನಿಗೆ ಕೊನೆಯೇ ಇಲ್ಲ. ಕೊನೆಗೆ ಇಬ್ಬರೂ ಮಧ್ಯಕ್ಕೆ ಬಂದು ಶಿವನನ್ನು ಕಾಣಲಿಲ್ಲ ಎಂದು ಒಪ್ಪುವಂತಾಯಿತು. ಅದೇ 'ಶಿವಲಿಂಗ'.

'ಲಿಂಗ' ಎಂದರೆ ಚಿಹ್ನೆಯಷ್ಟೆ. ಆದರೆ ಶಿವತತ್ವವು ಅತೀ ಸುಂದರ. ಆದ್ದರಿಂದಲೇ ಆ ತತ್ವದ ಬಗ್ಗೆ ಮಾತನಾಡುವುದೂ ಬಲು ಕಷ್ಟ. ಅದನ್ನು ಅನುಭವಿಸಲು ಮಾತ್ರ ಸಾಧ್ಯ. ಅದು ತಿಳಿವಳಿಕೆಗೆ ಅತೀತವಾಗಿದೆ. ಅಲೌಕಿಕವಾದ ಈ ತತ್ವವನ್ನು ತಿಳಿಯಲು ಸ್ವಲ್ಪ ಯತ್ನಬೇಕು. ಮಾತಿಗಿಂತಲೂ ಅತೀತವಾಗಿರುವ ತತ್ವ. ಶಿವತತ್ವದ ಬಳಿಗೆ ಮಾತುಗಳು ಹೋಗಿ, ಪುನಃ ಹಿಂದಿರುಗುತ್ತವೆ. ಶಿವನ ಬಳಿ ಮಾತುಗಳು ತಲುಪಲು ಸಾಧ್ಯವಿಲ್ಲ. ಮನಸ್ಸು ಅವನ ಹತ್ತಿರ ಹೋಗಿ, ಅವನನ್ನು ತಲುಪಲು ಸಾಧ್ಯವಾಗದೆ ಹಿಂದಿರುಗುತ್ತದೆ.

'ಯತೋ ವಾಚೋ ನಿವರ್ತಂತೆ ಅಪ್ರಾಪ್ಯ ಮನಸಾ ಸಹ' ಎಂದು ಹೇಳುತ್ತವೆ ಶೃತಿಗಳು. 'ಮಾತುಗಳು ಅವನ ಬಳಿಗೆ ಹೋಗಿ ಹಿಂದಿರುಗುತ್ತವೆ, ಮನಸ್ಸಿಗೆ ಅದು ಅರ್ಥವಾಗುವುದಿಲ್ಲ'. ಇದರ ಬಗ್ಗೆ ಮಾತನಾಡುವುದೂ ಒಂದು ದೊಡ್ಡ ಸವಾಲೇ ಸರಿ. ಅಷ್ಟು ಸುಂದರವಾದ, ಅತೀ ಸುಂದರವಾದ ತತ್ವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.