ADVERTISEMENT

ಸಚ್ಚಿದಾನಂದ ಸತ್ಯ ಸಂದೇಶ: ಮಂಗ ಬುದ್ಧಿಯ ಮಾನವ

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
Published 30 ಏಪ್ರಿಲ್ 2021, 20:04 IST
Last Updated 30 ಏಪ್ರಿಲ್ 2021, 20:04 IST
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ
ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ   

ಮಂಗನಿಗೂ ಮಾನವನಿಗೂ ಅವಿನಾಭಾವ ಸಂಬಂಧವಿದೆ. ಮಂಗನಿಂದ ಮಾನವನಾದ ಅನ್ನೋ ವೈಜ್ಞಾನಿಕ ಕತೆ ಏನೇ ಇರಲಿ, ಅವನ ವರ್ತನೆಯಂತೂ ಮಂಗನಿಗಿಂತ ಭಿನ್ನವಾಗಿಲ್ಲ. ಮನುಷ್ಯನ ಮನಸನ್ನು ಮರ್ಕಟಕ್ಕೆ ಹೋಲಿಸಲಾಗುತ್ತದೆ. ಇದಂತೂ ಅಕ್ಷರಶಃ ಸತ್ಯ. ಸದಾ ಚಂಚಲಗೊಳ್ಳುವ, ಕೋತಿಯಂತೆಯೇ ಚೇಷ್ಟೆ ಮಾಡುವ ಮನುಷ್ಯನ ಮನಸ್ಥಿತಿ ಗಮನಿಸಿದರೆ, ಅವನಿನ್ನು ಪರಿಪೂರ್ಣ ಮನುಷ್ಯನಾಗಿಲ್ಲ ಅನಿಸುತ್ತೆ. ಮನುಷ್ಯ ಮಂಗನಿಗಿಂತ ಎಷ್ಟೇ ರೂಪಾಂತರವಾದರೂ, ಅವನ ಮನಸು ಮಾತ್ರ ಮಂಗನಂತೆಯೇ ಇದೆ. ಅದು ಬದಲಾಗಲು ಅದೆಷ್ಟು ಯುಗಗಳು ಬೇಕೋ ಗೊತ್ತಿಲ್ಲ. ಅಷ್ಟರೊಳಗೆ ಮಂಗ ಬುದ್ಧಿಯ ಮಾನವನಿಂದ ಎಂತೆಂಥ ಅನಾಹುತಗಳಾಗುವುದೋ ಎಂಬ ಆತಂಕ ಕಾಡುತ್ತಿದೆ.

ಏಕೆಂದರೆ, ಮಂಗನ ಕೈಗೆ ಮಾಣಿಕ್ಯ ಕೊಟ್ಟಂತೆ ಭಗವಂತ ಮಾನವನ ಮತಿಗೆ ಒಂದಿಷ್ಟು ಬುದ್ಧಿ ಕೊಟ್ಟಿದ್ದಾನೆ. ಇಷ್ಟಕ್ಕೆ ದೇಹದ ಮೇಲೆ ಶಿರಸ್ಸು ನಿಲ್ಲದವನಂತೆ ಆಡುತ್ತಿದ್ದಾನೆ. ಇನ್ನೊಂದಿಷ್ಟು ಬುದ್ಧಿ ಬಲಿತರೆ, ಮನುಷ್ಯನ ಕುಚೇಷ್ಟೆ ಮತ್ತಷ್ಟು ಹೆಚ್ಚುವ ಅಪಾಯವಿದೆ. ಆತ ಏನಾದರೊಂದು ಮಾಡದೆ ತೆಪ್ಪಗಿರುವುದಿಲ್ಲ. ಸದಾ ಏನಾದರೊಂದು ಕಿತಾಪತಿ ಮಾಡಲು ಅವನ ಮನಸು ಹೊಂಚು ಹಾಕುತ್ತಿರುತ್ತೆ. ಇಂತಹಮರ್ಕಟ ಮನಸಿನ ಜನರಿಂದಲೇ ಜಗತ್ತಿನ ಎಲ್ಲಾ ಅನಾಹುತಗಳು ಉದ್ಭವವಾಗುತ್ತಿವೆ. ‘ಕೋತಿ ತಾನು ಕೆಡದೆ, ವನವನ್ನೆಲ್ಲಾ ಕೆಡಿಸಿತು’ ಅನ್ನೋ ಗಾದೆ ಮಾತಿನಂತೆ; ಮರ್ಕಟ ಮನಸಿನ ಮನುಷ್ಯರು ತಾವು ಕೆಡುವುದಲ್ಲದೆ ತಮ್ಮ ಸುತ್ತಲಿನ ಸಮಾಜವನ್ನೂ ಕೆಡಿಸುತ್ತಿದ್ದಾರೆ.

ಸದಾ ಸ್ವಾರ್ಥಪರರಾಗಿ ಯೋಚಿಸುವ ಜನ ಕೋತಿಗಳಂತೆಯೇ ತಿನ್ನುವುದಕ್ಕೂ ಕಿತ್ತಾಡುತ್ತಾರೆ. ಎಲ್ಲಾ ತನಗೇ ಬೇಕೆಂಬ ದುರಾಸೆಯಿಂದ ಬಾಯೊಳಗೆ ತುರುಕಿಕೊಂಡು ಒದ್ದಾಡುತ್ತಾರೆ. ಮಂಗಗಳಂತೆ ಮಗುಮ್ಮಾಗಿ ಮೆಲ್ಲುವ ಮಾನವರು ಈಗ ಜಗತ್ತಿನೆಲ್ಲೆಡೆ ಹೆಚ್ಚಾಗುತ್ತಿದ್ದಾರೆ. ತನ್ನ ಕತ್ತಿನ ಮೇಲೆ ಕತ್ತಿ ಬೀಳುವುದನ್ನು ಅರಿಯದ ಕುರಿ, ಹುಲ್ಲು ಮೆಲ್ಲಲು ಹಾತೊರೆಯುವಂತೆ ಮಾನವ ತನ್ನ ಬೆನ್ನ ಹಿಂದಿರುವ ಯಮನ ನೆರಳು ಕಾಣದೆ ಎದುರಿನ ಬಿಳಲು ಕಡಿಯಲು ತವಕಿಸುತ್ತಿದ್ದಾನೆ. ಇಂದು ಬೇರೆಯವರಿಗೆ ಬಂದ ಸಾವು, ತನಗೆ ಬರುವುದೇ ಇಲ್ಲವೆಂಬಂತೆ ವರ್ತಿಸುತ್ತಿದ್ದಾನೆ. ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸದವರನ್ನು ಮನುಷ್ಯ ಅಂಥ ಕರೆಯಲು ಸಾಧ್ಯವೇ ಇಲ್ಲ. ಹೀಗಾಗಿ ವಾನರ ಮಾನವನಾಗಿ ಇನ್ನೂ ಬದಲಾಗಿಲ್ಲ. ಅವನಿನ್ನು ಮೃಗೀಯ ಮಂಗಬುದ್ಧಿಯಲ್ಲೇ ಇದ್ದಾನೆ ಅನ್ನೋದನ್ನ ಕವಿ ಡಿವಿಜಿ ಚೆನ್ನಾಗಿ ಅರ್ಥೈಸಿ ‘ಮಂಕುತಿಮ್ಮನ ಕಗ್ಗ’ ಬರೆದಿದ್ದರು.

ADVERTISEMENT

ಮಂಗಬುದ್ಧಿಯ ಜನ ಹಣ ಬರುವುದನ್ನು ರೂಢಿಸಿಕೊಂಡಿರುತ್ತಾರೆಯೇ ಹೊರತು, ವೃತ್ತಿಪರ ಕೆಲಸದೆಡೆನಿಷ್ಠೆ ಇರುವುದಿಲ್ಲ. ಶ್ರಮವಿಲ್ಲದೆ ಫಲ ಬಯಸುವ, ದಿಢೀರನೇ ಶ್ರೀಮಂತಿಕೆಯಲ್ಲಿ ಮೆರೆಯುವ ದುರಾಸೆ ಜನ ಯಾರನ್ನೂ ಚೆನ್ನಾಗಿರಲು ಬಿಡುವುದಿಲ್ಲ. ಇಂಥ ಕೊಂಕುಬುದ್ಧಿ ಜನ ತಮ್ಮ ಕುಟುಂಬದಲ್ಲೂ ನೆಮ್ಮದಿಯಾಗಿರುವುದಿಲ್ಲ. ತಮ್ಮಸುತ್ತಲಿರುವ ಸಮಾಜದಲ್ಲೂ ಸ್ನೇಹಜೀವಿಯಾಗಿರುವುದಿಲ್ಲ. ತಾನುಮಾಡುವ ಕೆಲಸದಲ್ಲೂ ಉತ್ತಮವಾಗಿರುವುದಿಲ್ಲ. ವೃತ್ತಿಯಲ್ಲಿನೈಪುಣ್ಯ ತೋರಿಸದಿದ್ದರೂ, ಉತ್ತಮವಾಗಿ ಕೆಲಸಮಾಡುವಸಹೋದ್ಯೋಗಿಗಳ ಚಿತಾವಣೆಯಲ್ಲಿನಿಸ್ಸೀಮರಾಗಿರುತ್ತಾರೆ.

ಕೆಲಸ ಬಾರದವ ತನ್ನ ಮನೆಯ ಸೂರುಗಳ ಕಿತ್ತ ಎಂಬಂತೆ, ಸಹೋದ್ಯೋಗಿಯೊಬ್ಬನ ಹಣಿಯಲು ತಮಗೆ ಅನ್ನ ನೀಡುವ ಸಂಸ್ಥೆಯನ್ನೆ ಹಾಳು ಮಾಡುತ್ತಾರೆ. ಇದೆಲ್ಲಾ ದುರ್ಬಲಬುದ್ಧಿಯವರ ಕುಚೇಷ್ಟೆ ಅಂತ ಭಾವಿಸಿದರೆ ತಪ್ಪಾಗುತ್ತದೆ. ಇವರೆಲ್ಲಪದವೀಧರರಾಗಿರುತ್ತಾರೆ. ಏನೊ ಎಳೆವಯಸ್ಸು ಒಂದಿಷ್ಟು ತಿಳಿವಳಿಕೆ ಇಲ್ಲದೆ ಮಾಡಿದ್ದಾರೆಂದುಕೊಂಡರೆ, ಅವರವಯಸ್ಸು ವೃದ್ದಾಪ್ಯದತ್ತ ದಾಪುಗಾಲಿಟ್ಟಿರುತ್ತದೆ.

ಮಾನವರ ಪೂರ್ವ ಜನ್ಮದ ಮಂಗಬುದ್ದಿ ಫಲ ಹೀಗೆಲ್ಲಾ ಆಡಿಸುತ್ತಿದೆ. ಇದರ ನಿವಾರಣೆಗೆ ಮಾನವರೆಲ್ಲಾ ಸ್ವಾರ್ಥ ಬುದ್ಧಿ ಬಿಟ್ಟು, ಧರ್ಮ-ಕರ್ಮಗಳಲ್ಲಿ ಶ್ರದ್ದೆ ಇಟ್ಟು, ಭಗವಂತನ ಧ್ಯಾನದಲ್ಲಿದ್ದರೆ ಸಂಕುಚಿತ ಬುದ್ದಿ ಅಳಿದು, ‘ಸಚ್ಚಿದಾನಂದ’ ಬುದ್ಧಿ ಪ್ರಾಪ್ತವಾಗುತ್ತದೆ. .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.