ವ್ಯಕ್ತಿಯ ಸಾರ್ಥಕತೆಯಲ್ಲಿ ಕುಟುಂಬದ ಸಾರ್ಥಕತೆ ಇದೆ; ಕುಟುಂಬದ ಸಾರ್ಥಕತೆಯಲ್ಲಿ ಸಮಾಜದ ಸಾರ್ಥಕತೆ ಇದೆ; ಸಮಾಜದ ಸಾರ್ಥಕತೆಯಲ್ಲಿ ನಾಡಿನ ಸಾರ್ಥಕತೆ ಇದೆ; ನಾಡಿನ ಸಾರ್ಥಕತೆಯಲ್ಲಿ ಮನುಕುಲದ ಹಿತವೇ ಅಡಗಿದೆ.
ಸಾಮಾನ್ಯವಾಗಿ ನಮ್ಮ ದೇಶವನ್ನು ಅಧ್ಯಾತ್ಮದ ಬೀಡು ಎನ್ನುವುದುಂಟು. ಅಧ್ಯಾತ್ಮ ಎಂದರೆ ಜನರಿಂದ ದೂರವಾಗಿ, ಒಂಟಿಯಾಗಿ ಬದುಕುವುದು ಎಂಬ ತಪ್ಪುತಿಳಿವಳಿಕೆಯೂ ಉಂಟೆನ್ನಿ! ಆದರೆ ನಮ್ಮ ಪ್ರಾಚೀನ ಋಷಿ–ಮುನಿಗಳು ಜೀವನದ ಸಮಗ್ರತೆಯನ್ನು ಎತ್ತಿಹಿಡಿದವರು ಎಂಬುದನ್ನು ಮರೆಯುವಂತಿಲ್ಲ. ಜೀವನದ ಎಲ್ಲ ಹಂತಗಳನ್ನೂ ತೃಪ್ತಿಯಿಂದಲೂ ಸಂತೋಷದಿಂದಲೂ ಅನುಭವಿಸತಕ್ಕದ್ದು; ಅದೂ ನೂರು ವರ್ಷ ಎಂದು ಹಂಂಬಲಿಸಿದವರು; ಮಾತ್ರವಲ್ಲ, ಅದರಂತೆ ಬದುಕಿದವರು ಕೂಡ. ಪುರುಷಾರ್ಥಗಳ ಕಲ್ಪನೆಯಲ್ಲೂ, ನಾಲ್ಕು ಆಶ್ರಮಗಳ ಕಲ್ಪನೆಯಲ್ಲೂ ಈ ನಿಲುವು ಎದ್ದುಕಾಣುತ್ತದೆ.
ಹೀಗೆ ಬದುಕಿನ ಎಲ್ಲ ವಿವರಗಳ ಕೇಂದ್ರವಾಗಿ ಅವರು ಕುಟುಂಬವನ್ನೇ ಆದರಿಸಿದರು; ಕುಟುಂಬದ ಕಲ್ಪನೆಯನ್ನು ಕಂಡರಿಸಿದರು. ಸಮಾಜದ ಎಲ್ಲ ವಿಧದ ಜನರನ್ನೂ – ಸಂಸಾರಿಗಳಿಂದ ಮೊದಲುಗೊಂಡು ಸನ್ಯಾಸಿಗಳ ತನಕ – ಕಾಪಾಡಬಲ್ಲ ಶಕ್ತಿಕೇಂದ್ರ ಎಂದರೆ ಮನೆಯೇ ಹೌದು, ಕುಟುಂಬವೇ ಹೌದು – ಎಂಬ ಆದರ್ಶವನ್ನು ನಮ್ಮ ಪೂರ್ವಜರು ಸ್ಥಾಪಿಸಿದ್ದಾರೆ. ಆದುದರಿಂದಲೇ ಕುಟುಂಬಗಳು ಯಾವಾಗಲೂ ಸಂತೋಷವಾಗಿರಬೇಕೆಂದು ಬಯಸಿದರು. ಅಂಥದೊಂದು ಆದರ್ಶಮಯವೂ ಆನಂದಮಯವೂ ಆದ ಕುಟುಂಬದ ಚಿತ್ರಣವೊಂದು ಇಲ್ಲಿದೆ, ನೋಡಿ:
ಸನ್ಮಿತ್ರಂ ಸಧನಂ ಸ್ವಯೋಷಿತಿ ರತಿಶ್ಚಾಜ್ಞಾಪರಾಃ ಸೇವಕಾಃ
ಸಾನಂದಂ ಸದನಂ ಸುತಾಶ್ಚ ಸುಧಿಯಃ ಕಾಂತಾ ಮನೋಹಾರಿಣೀ
ಆತಿಥ್ಯಂ ಶಿವಪೂಜನಂ ಪ್ರತಿದಿನಂ ಮಿಷ್ಟಾನ್ನಪಾನಂ ಗೃಹೇ
ಸಾಧೋಃ ಸಂಗಮುಪಾಸತೇ ಹಿ ಸತತಂ ಧನ್ಯೋ ಗೃಹಸ್ಥಾಶ್ರಮಃ
ಇದರ ತಾತ್ಪರ್ಯ ಹೀಗೆ: ಗೃಹಸ್ಥನಿಗೆ ಒಳ್ಳೆಯ ಸ್ನೇಹಿತರಿರುತ್ತಾರೆ; ಧನಕನಕಗಳೂ ಇರುತ್ತವೆ; ಪ್ರೀತಿಯನ್ನು ಕೊಡುವ ಹೆಂಡತಿಯೂ ಇರುತ್ತಾಳೆ; ಕೆಲಸಕ್ಕೆ ನೆರವಾಗುವ ಸೇವಕರೂ ಇರುತ್ತಾರೆ; ಇಷ್ಟೆಲ್ಲ ಇದ್ದ ಮೇಲೆ ಅಂಥ ಮನೆಯಲ್ಲಿ ಆನಂದ ಸಹಜವಾಗಿಯೇ ಇರುತ್ತದೆ; ಇದರ ಜೊತೆಗೆ ಮಕ್ಕಳು ಬುದ್ಧಿವಂತರು; ಹೆಂಡತಿ ಸುಂದರಿ. ಇಷ್ಟೆಲ್ಲ ಸಂತೋಷ, ಅನುಕೂಲಗಳು ಇದ್ದಾಗ ಅತಿಥಿಸತ್ಕಾರಕ್ಕೆ ಕೊರತೆಯಾದರೂ ಇದ್ದೀತೆ? ಮನೆಯಲ್ಲಿ ಪೂಜೆ ವ್ರತ ಹಬ್ಬಗಳ ಸಂಭ್ರಮ; ದೇವತಾಕಾರ್ಯವೂ ನಿರಂತರ. ‘ಇವೆಲ್ಲಕ್ಕೂ ಮೀರಿದ ಗುಣವಾಗಿ ಹಲವರು ಸಜ್ಜನರ ಸ್ನೇಹ. ಇಷ್ಟೆಲ್ಲ ಸಂತಸಗಳ ನೆಲೆಯನ್ನು ಒದಗಿಸಿರುವ ಗೃಹಸ್ಥಾಶ್ರಮವೇ ಧನ್ಯ, ಅಲ್ಲವೆ?’
ದಿಟ, ಇಲ್ಲಿರುವುದು ಆದರ್ಶ ಕುಟುಂಬವೊಂದರ ಚಿತ್ರಣ. ಆದರೆ ಇದನ್ನು ಸಾಧಿಸುವುದು ಕಷ್ಟವೇನಿಲ್ಲವೆನ್ನಿ! ಹೀಗೆ ಸಂತೋಷವಾಗಿಯೂ ಸಂಭ್ರಮದಿಂದಲೂ ಸಾರ್ಥಕದಿಂದಲೂ ಬದುಕಬೇಕು ಎಂಬ ಆಸೆ ಯಾರಿಗೆ ತಾನೆ ಇರದು? ಇದು ಸಾಕ್ಷಾತ್ಕಾರವಾಗಬೇಕಾದರೆ ನಾವು ಅದಕ್ಕೆ ತಕ್ಕ ಯೋಗ್ಯತೆಯನ್ನು ಸಂಪಾದಿಸಿಕೊಳ್ಳಬೇಕಷ್ಟೆ.
ನಮ್ಮ ಜೀವನವನ್ನು ದೊಡ್ಡ ಆದರ್ಶವೊಂದಕ್ಕೆ ಅರ್ಪಿಸಿಕೊಳ್ಳಬೇಕು; ಅದು ನೆರವೇರಲು ನೆರವಾಗುವ ಮೌಲ್ಯಗಳನ್ನು ನಾವು ಅಳವಡಿಸಿಕೊಳ್ಳಬೇಕು. ನಮ್ಮ ಜೀವನಯಾನದ ಸಾರಥಿಗಳು ನಾವು ಎಂಬುದನ್ನು ಮರೆಯದೆ ಜೀವನದ ಪ್ರತಿ ಕ್ಷಣವನ್ನೂ ವಿವೇಕದಿಂದ ಸಾರ್ಥಕಗೊಳಿಸಿಕೊಳ್ಳಬೇಕು.
ವ್ಯಕ್ತಿಯ ಸಾರ್ಥಕತೆಯಲ್ಲಿ ಕುಟುಂಬದ ಸಾರ್ಥಕತೆ ಇದೆ; ಕುಟುಂಬದ ಸಾರ್ಥಕತೆಯಲ್ಲಿ ಸಮಾಜದ ಸಾರ್ಥಕತೆ ಇದೆ; ಸಮಾಜದ ಸಾರ್ಥಕತೆಯಲ್ಲಿ ನಾಡಿನ ಸಾರ್ಥಕತೆ ಇದೆ; ನಾಡಿನ ಸಾರ್ಥಕತೆಯಲ್ಲಿ ಮನುಕುಲದ ಹಿತವೇ ಅಡಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.