ಅದೊಂದು ಊರು; ಅಲ್ಲೊಂದು ಬೆಕ್ಕು. ಇತ್ತೀಚಿನ ದಿನಗಳಲ್ಲಿ ಅದು ಎಷ್ಟು ಪ್ರಯತ್ನಪಟ್ಟರೂ ಸುಲಭವಾಗಿ ಆಹಾರ ಸಿಕ್ಕುತ್ತಿರಲಿಲ್ಲ.
ಒಂದು ದಿನ ಅದೊಂದು ಉಪಾಯ ಹೂಡಿತು. ಅದು ಧ್ಯಾನದ ಭಂಗಿಯಲ್ಲಿ ಕಣ್ಮುಚ್ಚಿ ಕುಳಿತುಕೊಂಡಿತು. ಇಲಿಗಳಿಗೆ ಅದನ್ನು ನೋಡಿ ಅಚ್ಚರಿಯಾಯಿತು. ಕುತೂಹಲದಿಂದ ಬೆಕ್ಕಿನ ಹತ್ತಿರಕ್ಕೂ ಕೆಲವೊಂದು ಹೋಗಿಬಂದವು. ಆದರೆ ಬೆಕ್ಕು ಮಾತ್ರ ಅವನ್ನು ಏನೂ ಮಾಡಲಿಲ್ಲ. ಇದು ಆ ಇಲಿಗಳ ಪಾಲಿಗೆ ಇನ್ನಷ್ಟು ವಿಚಿತ್ರ ಎನಿಸಿತು. ಅವುಗಳ ನಾಯಕ ಧೈರ್ಯ ಮಾಡಿ ಕೇಳಿಯೇ ಬಿಟ್ಟ:
‘ಬೆಕ್ಕಣ್ಣ! ಬೆಕ್ಕಣ್ಣ!! ಅದೇನು ಹೀಗೆ ಸುಮ್ಮನೆ ಧ್ಯಾನಸ್ಥನಾಗಿ ಕುಳಿತಿರುವೆಯಲ್ಲ?’
ಬೆಕ್ಕು ಹೇಳಿತು: ‘ನಾನು ಮಾಡಿರುವ ಪಾಪಗಳ ಬಗ್ಗೆ ಈಗ ತಿಳಿವಳಿಕೆ ಬಂದಿದೆ. ಅದೆಷ್ಟೋ ಇಲಿಗಳನ್ನು ಕೊಂದು ನಾನು ಮಾಡಿರುವ ಪಾಪ ಸಣ್ಣದಲ್ಲ. ಈಗ ಅದಕ್ಕಾಗಿ ಪ್ರಾಯಶ್ಚಿತ ಮಾಡಿಕೊಳ್ಳಬೇಕಿದೆ. ಇನ್ನು ಮುಂದೆ ನಾನು ಹಿಂಸೆಯನ್ನು ಮಾಡಲಾರೆ. ಅಷ್ಟೇ ಅಲ್ಲ, ಕಾಶಿಗೆ ಹೋಗಿ, ತಪಸ್ಸು ಮಾಡುತ್ತ, ನನ್ನ ಶರೀರವನ್ನು ಅಲ್ಲೇ ತ್ಯಜಿಸಬೇಕು – ಎಂದೂ ತೀರ್ಮಾನಿಸಿರುವೆ.’
ಬೆಕ್ಕಿನ ಈ ಮಾತುಗಳನ್ನು ಕೇಳಿ ಇಲಿಗಳಿಗೆ ಸಂತೋಷವಾಯಿತು. ‘ಬೆಕ್ಕಣ್ಣ! ನಾವೂ ನಿನ್ನ ಜೊತೆ ಕಾಶಿಗೆ ಬರುತ್ತೇವೆ. ಈ ಪಟ್ಟಣದಲ್ಲಿ ಆಹಾರದ ಕೊರತೆ ಉಂಟಾಗಿರುವುದರಿಂದ ಇಲ್ಲಿಯ ರಾಜನೂ ಪ್ರಜೆಗಳೂ ಬೇರೆ ಸ್ಥಳಕ್ಕೆ ವಲಸೆ ಹೋಗುವರೆಂಬ ಸುದ್ದಿಯಿದೆ. ಈಗಾಗಲೇ ಉಗ್ರಾಣ ಖಾಲಿಯಾಗಿದೆ. ದಯವಿಟ್ಟು ನಮ್ಮನ್ನು ಕರೆದುಕೊಂಡು ಹೋಗು’ ಎಂದು ಅವು ಬೆಕ್ಕನ್ನು ಬೇಡಿಕೊಂಡವು.
ಬೆಕ್ಕಿಗೂ ಅದೇ ಬೇಕಾಗಿದ್ದದ್ದು! ‘ಅಯ್ಯೋ ಇದಕ್ಕಿಂತ ಪುಣ್ಯದ ಕೆಲಸ ಮತ್ತೊಂದು ಉಂಟೇ? ಖಂಡಿತ ನಿಮ್ಮನ್ನು ನನ್ನೊಂದಿಗೆ ಕರೆದುಕೊಂಡು ಹೋಗುವೆ. ಆದರೆ ಒಂದು ವಿಷಯ; ನೀವೆಲ್ಲ ಮುಂದೆ ಹೋಗಿ, ನಿಮ್ಮ ಹಿಂದೆ ನಾನು ಕಾವಲುಗಾರನಾಗಿ ಕೊನೆಯಲ್ಲಿ ಬರುವೆ’ ಎಂದಿತು ಬೆಕ್ಕು. ಅದೇ ರೀತಿಯಲ್ಲಿ ಕಾಶಿಗೆ ಪ್ರಯಾಣ ಹೊರಟಿತು. ಇಲಿಗಳೆಲ್ಲ ಮುಂದೆ; ಕೊನೆಯಲ್ಲಿ ಬೆಕ್ಕು.
ಬೆಕ್ಕು ಒಂದೊಂದೇ ಇಲಿಯನ್ನು ತಿನ್ನುತ್ತ ಇಲಿಗಳನ್ನು ಹಿಂಬಾಲಿಸುತ್ತಿದೆ. ಇಲಿಗಳಿಗೆ ಈ ವಿಷಯ ಅರಿವಿಗೇ ಬರಲಿಲ್ಲ. ಇನ್ನು ಹತ್ತಾರು ಇಲಿಗಳು ಮಾತ್ರವೇ ಉಳಿದುಕೊಂಡಿವೆ. ಒಮ್ಮೆ ಇಲಿನಾಯಕ ಹಿಂದಿರುಗಿ ನೋಡಿದ – ಇಲಿಗಳೆಲ್ಲ ಖಾಲಿ! ಸಂದರ್ಭ ಏನೆಂದು ಅದಕ್ಕೆ ಕೂಡಲೇ ಗೊತ್ತಾಯಿತು. ‘ನೀಚ ಬೆಕ್ಕೆ! ನಿನ್ನನ್ನು ನಂಬಿ ನಾವು ಮೋಸಹೋದೆವು. ನಿನ್ನನ್ನು ನಂಬಿದ್ದು ನಮ್ಮ ತಪ್ಪು’ ಎಂದು ಹೇಳುತ್ತ, ಉಳಿದ ಇಲಿಗಳಿಗೂ ಹಾಗೇ ಮಾಡಿರೆಂದು ಸೂಚನೆ ಕೊಟ್ಟು ಅದು ಓಡಿತು.
* * *
ಕೆಲವರ ಮಾತನ್ನು ನಾವು ಸುಲಭವಾಗಿ ನಂಬಿಬಿಡುತ್ತೇವೆ. ಆ ಮಾತನ್ನು ವಿಶ್ಲೇಷಣೆಗೆ ಒಳಪಡಿಸುವುದಿಲ್ಲ. ಅದರ ಸತ್ಯಾಸತ್ಯತೆಯನ್ನು ಯೋಚಿಸುವುದಿಲ್ಲ. ಸಾಧ್ಯಾಸಾಧ್ಯತೆಗಳನ್ನು ಗಮನಿಸುವುದಿಲ್ಲ. ಬೆಕ್ಕು ಎಂದಾದರೂ ಇಲಿಗಳನ್ನು ತಿನ್ನುವುದನ್ನು ಬಿಡಲು ಸಾಧ್ಯವೆ? ಇಲಿಗಳು ಅದನ್ನು ಯೋಚಿಸಬೇಕಿತ್ತು.
‘ಹುಟ್ಟುಗುಣ ಸುಟ್ಟರೂ ಹೋಗದು’ ಎಂಬ ಮಾತೊಂದಿದೆ. ಸ್ವಭಾವಗಳನ್ನು ಬದಲಿಸುವುದು ಅಷ್ಟು ಸುಲಭವಲ್ಲ. ಕೆಲವೊಂದು ಗುಣಗಳಂತೂ ನಮಗೆ ರಕ್ತವಾಗಿಯೇ ಬಂದಿರುತ್ತವೆ. ಸುಡುವುದು ಬೆಂಕಿಯ ಗುಣ; ಚಲಿಸುವುದು ಗಾಳಿಯ ಗುಣ. ಅವನ್ನು ಬದಲಾಯಿಸಲು ಸಾಧ್ಯವೇ ಇಲ್ಲ. ಆದುದರಿಂದ ನಾವು ಯಾರ ಮಾತನ್ನಾದರೂ ನಂಬುವ ಮೊದಲು ಚೆನ್ನಾಗಿ ಅದನ್ನು ಪರೀಕ್ಷಿಸಬೇಕು. ಸುಳ್ಳು ಆಕರ್ಷಕವಾಗಿರುತ್ತದೆ. ಆದರೆ ಅದು ಅಪಾಯಕಾರಿ. ಈ ಎಚ್ಚರ ಸದಾ ನಮ್ಮ ಜೊತೆ ಇರಬೇಕು. ಇಲ್ಲವಾದಲ್ಲಿ ನಮ್ಮ ಪಾಡು ಕೂಡ ಆ ಇಲಿಗಳ ಪಾಡಿನಂತೆಯೇ ಆಗುತ್ತದೆ, ಅಷ್ಟೆ!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.