ADVERTISEMENT

ಮೊಹರಂ: ನೋವು-ನಲಿವುಗಳ ಮಿಳಿತ

ಅಬ್ದುಲ್ ರಹಿಮಾನ್
Published 16 ಜುಲೈ 2024, 22:54 IST
Last Updated 16 ಜುಲೈ 2024, 22:54 IST
<div class="paragraphs"><p>ಕಲಬುರಗಿಯ ಬ್ರಹ್ಮಪೂರ ಶಾ ಹುಸೇನ್‌ ಬಡಾವಣೆಯಲ್ಲಿ ಮೊಹರಂ ಆಚರಣೆಯ ಅಂಗವಾಗಿ ಶನಿವಾರ ಬೆಳಿಗ್ಗೆ ಪಂಜಾಗಳ ಮೆರವಣಿಗೆ ನಡೆಯಿತು. ಅಪಾರ ಭಕ್ತರು ಪಾಲ್ಗೊಂಡಿದ್ದರು-</p></div>

ಕಲಬುರಗಿಯ ಬ್ರಹ್ಮಪೂರ ಶಾ ಹುಸೇನ್‌ ಬಡಾವಣೆಯಲ್ಲಿ ಮೊಹರಂ ಆಚರಣೆಯ ಅಂಗವಾಗಿ ಶನಿವಾರ ಬೆಳಿಗ್ಗೆ ಪಂಜಾಗಳ ಮೆರವಣಿಗೆ ನಡೆಯಿತು. ಅಪಾರ ಭಕ್ತರು ಪಾಲ್ಗೊಂಡಿದ್ದರು-

   

ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌

ಸಂಭ್ರಮ-ದುಃಖ, ಸೋಲು-ಗೆಲುವಿನ, ನೋವು-ನಲಿವಿನ ಮಿಳಿತವೇ ಮೊಹರಂ. ಇದು ಅಲ್ಲಾಹನ ತಿಂಗಳು ಎನ್ನುವುದು ಪ್ರವಾದಿ ಪೈಗಂಬರರ ನುಡಿ. ಪ್ರಥಮ ಮನುಷ್ಯ ಆದಂ ಅವರನ್ನು ಸೃಷ್ಟಿಸಿದ್ದು, ಪ್ರವಾದಿ ಇಬ್ರಾಹಿಮರು ಅಗ್ನಿಕುಂಡದಿಂದ ರಕ್ಷೆ ಪಡೆದಿದ್ದು, ಪ್ರವಾದಿ ಮೂಸ ಹಾಗೂ ಅವರ ಸಮುದಾಯ ಕ್ರೂರಿ ಫಿರ್‌ಔನ್‌ನಿಂದ (ಫೇರೋ) ಮುಕ್ತಿ ಹೊಂದಿದ್ದು, ಮೀನಿನ ಹೊಟ್ಟೆಯಿಂದ ಪ್ರವಾದಿ ಯೂನುಸರು ಪಾರಾಗಿದ್ದು ಇದೇ ತಿಂಗಳಲ್ಲಿ ಎಂದು ಇಸ್ಲಾಮಿ ಚರಿತ್ರೆಯ ಪುಸ್ತಕಗಳಲ್ಲಿ ದಾಖಲಾಗಿದೆ. ಭೂಮಿಗೆ ಪ್ರಥಮ ಮಳೆ ಬಿದ್ದಿದ್ದು ಈ ತಿಂಗಳಲ್ಲೇ ಎನ್ನುವುದು ಮುಸ್ಲಿಮರ ನಂಬಿಕೆ. ಇದೇ ಮಾಸದ 10ನೇ ದಿನದಂದು ಪ್ರವಾದಿ ಪೈಗಂಬರರ ಮೊಮ್ಮಗ ಹುಸೈನ್‌ರ ವಧೆಯಾಗಿದ್ದು ಮುಸ್ಲಿಮರ ಪಾಲಿಗೆ ಕರಾಳ ಘಟನೆ.

ADVERTISEMENT

ಮುಸ್ಲಿಮರು ಅನುಸರಿಸುವ ಚಂದ್ರಮಾನ ಕ್ಯಾಲೆಂಡರ್‌ನ ಪ್ರಥಮ ತಿಂಗಳು ಮೊಹರಂ; ಎಂದರೆ ಮುಸಲ್ಮಾನರಿಗೆ ಹೊಸ ವರ್ಷ. ಇಸ್ಲಾಮಿನ ಎರಡನೇ ಖಲೀಫಾ ಉಮರ್‌ರವರ ಕಾಲದಲ್ಲಿ ಮೊಹರಂನಿಂದ ಪ್ರಾರಂಭವಾಗುವ ‘ಹಿಜರಿ’ ಕ್ಯಾಲೆಂಡರ್ ಜಾರಿಗೆ ಬಂತು.‌ ಈ  ತಿಂಗಳ‌ 9 ಹಾಗೂ 10ನೇ ದಿನಕ್ಕೆ ವಿಶೇಷ ಮಹತ್ವ ಇದೆ. ಈ ಎರಡು ದಿನಗಳಲ್ಲಿ ಉಪವಾಸವಿರುವುದು ಪುಣ್ಯದಾಯಕ ಎನ್ನುವುದು ನಂಬಿಕೆ. ಯುದ್ಧವನ್ನು ನಿಷೇಧಗೊಳಿಸಿರುವ ನಾಲ್ಕು ತಿಂಗಳುಗಳಲ್ಲಿ ಮೊಹರಂ ಕೂಡ ಒಂದಾಗಿರುವುದರಿಂದ, ಶಾಂತಿ, ಸಹೋದರತ್ವ ಹಾಗೂ‌ ಸಹಬಾಳ್ವೆಯ ಸಂದೇಶವೂ ಮೊಹರಂನಲ್ಲಿದೆ.

ಪ್ರವಾದಿ ಮೊಹಮ್ಮದರ ಕಾಲದ ಬಳಿಕ, ಅವರು ಹಾಕಿದ ಅಡಿಪಾಯದಲ್ಲೇ ಇಸ್ಲಾಮಿ ಆಡಳಿತವನ್ನು ಖಲೀಫರು ಮುನ್ನಡೆಸಿಕೊಂಡು ಹೋದರು. ಜನರಿಂದಲೇ‌ ಆಯ್ಕೆಯಾದ ವ್ಯಕ್ತಿಯೊಬ್ಬ ನಾಯಕತ್ವ ವಹಿಸಿಕೊಳ್ಳುವ ಪ್ರಜಾಪ್ರಭುತ್ವ ಮಾದರಿಯ ಆಡಳಿತ ಅದಾಗಿತ್ತು. ಮೊಹಮ್ಮದರು ಕಾಲವಾದ 50 ವರ್ಷಗಳ ತರುವಾಯ ಈ ಆಡಳಿತವು ವಂಶಾಡಳಿತಕ್ಕೆ ಜಾರುವ ಪರಿಸ್ಥಿತಿ ಎದುರಾದಾಗ ನಡೆದ ‘ಕರ್ಬಲಾ’ ಸಮರವು ಮೊಹರಂ ಆಚರಣೆಯಲ್ಲಿ ಪ್ರಮುಖ ಪಾತ್ರ ಪಡೆದುಕೊಂಡಿದೆ.

ಐದನೇ ಖಲೀಫಾ ಎಂದು ಪ್ರಖ್ಯಾತಿ ಪಡೆದಿದ್ದ ಮುಆವಿಯಾ ಅವರ ಮರಣದ ಬಳಿಕ, ಅವರ ಪುತ್ರ ಯಝೀದನು ತಾನೇ ಮುಂದಿನ ಖಲೀಫಾ ಎಂದು ಸ್ವಯಂಘೋಷಿಸಿಕೊಂಡಿದ್ದನು. ಆದರೆ, ಪ್ರವಾದಿ ಮೊಹಮ್ಮದರ ಪೌತ್ರ ಹಝ್ರತ್ ಹುಸೇನರು ನಾಯಕನಾಗಬೇಕು ಎನ್ನುವುದು ಜನರ ಅಭಿಲಾಷೆಯಾಗಿತ್ತು. ಪ್ರವಾದಿಯವರ ಅನುಯಾಯಿಗಳೂ ಹುಸೇನರನ್ನೇ ಅನುಮೋದಿಸಿದ್ದರು. ಈ ನಡುವೆ ಇರಾಕ್‌ನ ಕೂಫಾ ಜನರ ಆಹ್ವಾನವನ್ನು ಸ್ವೀಕರಿಸಿ ತೆರಳಿದ್ದ ಹುಸೇನ್ ಹಾಗೂ 70ರಷ್ಟಿದ್ದ ಅವರ ಸಂಗಡಿಗರನ್ನು ಕರ್ಬಲಾ ಎನ್ನುವಲ್ಲಿ ಯಝೀದನ ಸೇನೆ ಸುತ್ತುವರಿಯಿತು. ಮಕ್ಕಳು, ಮಹಿಳೆಯರು ಎನ್ನದೇ ಎಲ್ಲರನ್ನೂ ಯಝೀದನ ಸೇನೆ ಕೊಂದುಹಾಕಿತು. ಹಝ್ರತ್ ಹುಸೇನರು ಹುತಾತ್ಮರಾದರು. ಹುಸೇನರ ಸ್ಮರಣಾರ್ಥವಾಗಿ ಮೊಹರಂ ಅನ್ನು ಆಚರಿಸುವ ಸಂಪ್ರದಾಯ ಕೆಲವು ಮುಸಲ್ಮಾನ ಪಂಗಡಗಲ್ಲಿ ಇವೆ.

‘ಆಶೂರಾ’ ಎಂದು ಕರೆಯಲ್ಪಡುವ ಈ ದಿನವನ್ನು ಕರಾಳ‌ದಿನ ಎಂದು ಶಿಯಾ‌ ಮುಸ್ಲಿಮರು ಆಚರಿಸುತ್ತಾರೆ. ಕಪ್ಪುಬಟ್ಟೆಯನ್ನು ಧರಿಸಿ, ದೇಹವನ್ನು ದಂಡಿಸಿ ಶೋಕವನ್ನು ವ್ಯಕ್ತಪಡಿಸುತ್ತಾರೆ. ಸುನ್ನಿ ಮುಸಲ್ಮಾನರು ವ್ರತಾಚರಣೆ ಮಾಡಿ ಆರಾಧನೆಯಲ್ಲಿ ತೊಡಗುತ್ತಾರೆ. ಪ್ರಾದೇಶಿಕ ಸಂಸ್ಕೃತಿಯೊಂದಿಗೆ ಮೊಹರಂ ಆಚರಿಸುವ ವಿವಿಧ ಮುಸ್ಲಿಂ‌ ಪಂಗಡಗಳೂ ಇವೆ‌.

ಕರ್ನಾಟಕದಲ್ಲಿ, ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಆದಿಲ್ ಶಾಹಿಗಳ ಕಾಲದಿಂದ ಬಂದ ಮೊಹರಂ ಆಚರಣೆಯು ಧಾರ್ಮಿಕ ಸಾಮರಸ್ಯದ ಆಚರಣೆಯಾಗಿ ಮಾರ್ಪಾಡಾಗಿದೆ. ಧರ್ಮಾತೀತವಾಗಿ ಮೊಹರಂ ಆಚರಿಸಲಾಗುತ್ತದೆ. ಆಲಾಯಿ‌, ಪೀರಲ ದೇವರುಗಳನ್ನು ಪ್ರತಿಷ್ಠಾಪಿಸುವುದು, ಮೆರವಣಿಗೆ ಮಾಡುವುದು, ಹರಕೆ ಹೇಳುವುದು, ಶೋಕಗೀತೆ ಹಾಡುವುದು, ಸುಖಗಳನ್ನು‌ ತ್ಯಜಿಸುವುದು ಮಾಡುತ್ತಾರೆ. ಮುಸಲ್ಮಾನರು‌ ಇಲ್ಲದ ಊರುಗಳಲ್ಲೂ ಮೊಹರಂ ಆಚರಣೆ ವಿಜೃಂಭಣೆಯಿಂದ ನಡೆಯುತ್ತದೆ. ಶರಣ-ಸೂಫಿ ತತ್ವಗಳ, ಹಿಂದೂ-ಮುಸಲ್ಮಾನರ ಅಪೂರ್ವ ಮಿಲನ‌ವನ್ನು ಮೊಹರಂನ ಆಚರಣೆಯಲ್ಲಿ ಕಾಣಬಹುದು.‌ ಎಲ್ಲ ಗಡಿಗಳನ್ನು ದಾಟಿದ ಕರ್ನಾಟಕದ ಮೊಹರಂ ಆಚರಣೆಯು ಈ ಮಣ್ಣಿನ ಗುಣದ‌ ಪ್ರತೀಕವೂ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.