ನವರಾತ್ರಿ ಬರುತಲಿರುವಾಗ ಮನೆಯ ಸೀರೆಗಳನ್ನೆಲ್ಲ ಕಿತ್ತಿಡುವುದು ಸಾಮಾನ್ಯ. ಹುಡುಕಿ ಒಂಬತ್ತು ಬಣ್ಣಗಳನ್ನು ಹೊಂದಿಸಿಡಬೇಕು. ಯಾವ ಸೀರೆಗೆ, ಯಾವ ರವಿಕೆ? ಯಾವ ಬಣ್ಣಕ್ಕೆ ಯಾವ ಒಡವೆ? ಆಯ್ಕೆಗಳಿದ್ದಷ್ಟೂ ಕಷ್ಟ ಕಷ್ಟ. ಈ ಸೀರೆಯಲ್ಲಿ ಕಳೆದ ವರ್ಷ ಫೋಟೊ ಶೂಟ್ ಆಗಿದೆ. ಹೊಸದೇನಿದೆ ವಾರ್ಡ್‌ರೋಬಲ್ಲಿ ಅನ್ನುವ ಪ್ರಶ್ನೆ ಚೌತಿ ನಂತರದಿಂದಲೇ ಆರಂಭವಾಗುತ್ತದೆ.
ಈ ನವರಾತ್ರಿಯ ನವರಂಗು ಕಲ್ಪನೆ ಶುರುವಾಗಿದ್ದೇ ಆರೇಳು ವರ್ಷಗಳಿಂದ. ನವದುರ್ಗೆಯರಿಗೆ ಒಂದೊಂದು ಬಣ್ಣವಿದೆ ಎಂಬುದನ್ನು ಕವಿರತ್ನ ಕಾಳಿದಾಸ ಚಿತ್ರದಲ್ಲಿ ಜಯಪ್ರದಾ ಅವರನ್ನು ನೋಡಿಯೇ ಬೆರಗುಗೊಂಡಿದ್ದರು. ಆದರೆ ಪ್ರತಿದಿನವೂ ಒಂದು ಬಣ್ಣ ಉಟ್ಟು ಸಂಭ್ರಮಿಸುವ ಸಂಪ್ರದಾಯ ಶುರುವಾಗಿದ್ದು ಇತ್ತೀಚೆಗೆ.
ಇದೀಗ ಮಾರುಕಟ್ಟೆಯೂ ಈ ಬಣ್ಣಗಳ ಭಾವನೆಗಳನ್ನು, ಭಾವನೆಗಳ ಬಣ್ಣಗಳನ್ನೂ ಧಂಡಿಯಾಗಿ ನೀಡಲಾಗುತ್ತಿದೆ. ಕೆಲವು ಮಳಿಗೆಗಳಂತೂ ಒಂಬತ್ತೂ ಬಣ್ಣಗಳ ಸೀರೆಯ ಸೆಟ್‌ಗಳನ್ನೇ ಮಾರಾಟ ಮಾಡುತ್ತಿದ್ದಾರೆ. ರಿಯಾಯಿತಿ ದರದ ಆಮಿಶವನ್ನೂ ಒಡ್ಡಿದ್ದಾರೆ. ಒಂಬತ್ತು ಬಗೆಯ, ಒಂಬತ್ತು ಬಣ್ಣಗಳ ಸೀರೆಗಳ ಆಯ್ಕೆ ನಿಮಗೆ ನೀಡಲಾಗುತ್ತಿದೆ. ಹಬ್ಬಕ್ಕೆ ವೈವಿಧ್ಯಮಯ ಸೀರೆ ಸಂಗ್ರಹ ನಿಮ್ಮದಾಗಿರಲಿ ಎಂಬ ಆಸೆ ನಿಮಗಿದ್ದರೆ ಭಾರತೀಯ ಪರಂಪರೆಯಲ್ಲಿ ವಿಶೇಷ ಸ್ಥಾನ ಪಡೆದಿರುವ ಈ ಒಂಬತ್ತು ಬಗೆಯ ಸೀರೆಗಳು ನಿಮ್ಮ ಸಂಗ್ರಹದಲ್ಲಿರಲಿ.
ಇಳಕಲ್ ಚಂದ್ರಕಾಳಿ, ಈಕತ್ ಅಥವಾ ಪೋಚಂಪಲ್ಲಿ, ಧರ್ಮಾವರಂ, ಕಂಜೀವರಂ, ಪಾಶ್ಮಿನಾ, ಬನಾರಸ್, ಮೈಸೂರು ಸಿಲ್ಕ್ ಕ್ರೇಪ್, ಪಟೋಲಾ, ಜಾಮ್ದಾನಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ, ಗುಜರಾತ್‌ನಿಂದ ಆಸ್ಸಾಮ್‌ವರೆಗೂ ಭಾರತೀಯ ವಸ್ತ್ರವೈಭವವನ್ನು ಕಾಣಬಹುದಾಗಿದೆ. ನಿಮ್ಮ ಸಂಗ್ರಹದಲ್ಲಿ ಈ ಸೀರೆಗಳೊಂದಿಗೆ ಇರಲೇಬೇಕಾದ ಇನ್ನಷ್ಟು ಸೀರೆಗಳೆಂದರೆ, ಪೈಠಣಿ, ಬಾಂಧನಿ, ಗದ್ವಾಲ್, ಮಾಹೇಶ್ವರಿ, ಮಂಗಳಗಿರಿ, ಢಕೈ, ಬೆಂಗಾಲಿ ಕಾಟನ್, ಮಘೈ, ಕೋಟಾ, ಚಿಕನ್‌ಕಾರಿ, ಕಾಶ್ಮೀರಿ, ಟಸ್ಸರ್, ಟಿಶ್ಯು, ಮಲ್‌ಮಲ್, ಮಖಮಲ್ ಮುಂತಾದ ಸೀರೆಗಳು ನಿಮ್ಮ ಸಂಗ್ರಹದಲ್ಲಿರಲೇಬೇಕು.
ಕನ್ನಡಿಗರ ಬಳಿಯಂತೂ ಮೊಳಕಾಲ್ಮೂರು, ಇಳಕಲ್, ಬೆಟಗೇರಿ, ಬೆಳಗಾವಿಯ ಶಾಪುರಿ ಮತ್ತು ಪೈಠಣಿಗಳ ಜೊತೆಗೆ ಉಡುಪಿಯ ಸೀರೆಗಳೂ ಇದ್ದರೆ ಚಂದ.
ಮೊದಲ ದಿನ ಶೈಲಪುತ್ರಿಯನ್ನು ಆರಾಧಿಸಲಾಗುತ್ತದೆ. ಹಳದಿ ಬಣ್ಣದ ಉಡುಗೆ ಧರಿಸಿದರೆ ದಿನವಿಡೀ ಅಮಿತ ಉತ್ಸಾಹದಿಂದ, ಅಚಲ ವಿಶ್ವಾಸದಿಂದ ಇರುತ್ತೀರಿ. ಪರ್ವತ ದೊರೆಯ ಪುತ್ರಿ ಆತ್ಮವಿಶ್ವಾಸದ ಪ್ರತೀಕವಾಗಿದ್ದಾಳೆ.
ಎರಡನೆಯ ದಿನ ಬ್ರಹ್ಮಚಾರಿಣಿ: ಹಸಿರು ಬಣ್ಣ ಸಮೃದ್ಧಿ ಮತ್ತು ಬದ್ಧತೆಯ ಪ್ರತೀಕವಾಗಿದೆ ಈ ಬಣ್ಣ.
ಚಂದ್ರಘಂಟಾ: ಬೂದುಬಣ್ಣದ ಉಡುಗೆ ಧರಿಸಿ ಚಂದ್ರಘಂಟಾ ದೇವಿಯನ್ನು ಭಜಿಸಬೇಕು. ಬದುಕಿನ ಏರಿಳಿತಗಳೇನೇ ಇದ್ದರೂ ಶೋಭಾಯಮಾನವಾಗಿ ಪ್ರಜ್ವಲಿಸಲು ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ.
ಕುಷ್ಮಾಂಡ: ನಗುತ್ತಲೇ, ಮುಗುಳ್ನಗೆಯಿಂದಲೇ ವಿಶ್ವ ಸೃಷ್ಟಿಸಿದಳು ಎಂಬುದೊಂದು ಪ್ರತೀತಿ. ಕಿತ್ತಳೆ ಬಣ್ಣ, ಖುಷಿಯನ್ನು ಪ್ರತಿಪಾದಿಸುತ್ತ, ಎಲ್ಲವನ್ನೂ ನಗುನಗುತ್ತಲೇ ಸ್ವೀಕರಿಸುವೆ ಎಂಬ ಗುಣವನ್ನು ನೀಡುತ್ತದೆ.
ಸ್ಕಂದಮಾತಾ: ಸ್ಥೈರ್ಯ ಮತ್ತು ಪರಿಶುದ್ಧತೆಯ ಪ್ರತೀಕ. ಶುಭ್ರಶ್ವೇತ ವರ್ಣದ ವಸ್ತ್ರ ಧರಿಸಬೇಕು.
ಕಾತ್ಯಾಯಿನಿ: ದುಷ್ಟಸಂಹಾರ ಮಾಡಿ, ಭಕ್ತರನ್ನು ಪ್ರೀತಿಯಿಂದ ಸಲುಹುವ ಕಾತ್ಯಾಯಿನಿ ಮಾತೆ. ಕೆಂಪು ಬಣ್ಣದ ವಸ್ತ್ರಗಳನ್ನು ಧರಿಸುವುದು ಆಪ್ಯಾಯಮಾನವಾಗಿದೆ.
ಕಾಳರಾತ್ರಿ: ದುಷ್ಟಸಂಹಾರಕ್ಕಾಗಿ ಅತ್ಯುಗ್ರ ರೂಪ ಧರಿಸುವ ರಾತ್ರಿ ಇದಾಗಿದೆ. ಕಡುನೀಲಿ ಬಣ್ಣದ ಉಡುಪನ್ನು ಧರಿಸಿ, ದುಷ್ಟತನ, ಕೆಡುಕುಗಳ ವಿರುದ್ಧ ಹೋರಾಡುವ ಕೆಚ್ಚೆದೆಯನ್ನು ಮೈಗೂಡಿಸಿಕೊಳ್ಳಬೇಕು.
ಮಹಾಗೌರಿ: ತಾಯ್ತನದ ರೂಪವನ್ನೇ ಹೊತ್ತು, ತಪ್ಪುಗಳನ್ನೆಲ್ಲ ಕ್ಷಮಿಸಿ ಪರಿಶುದ್ಧವಾಗಿಸುವ ದೇವಿ. ಗುಲಾಬಿ ಸೀರೆಯನ್ನುಟ್ಟು, ಕ್ಷಮಿಸಬಹುದಾದ ದೋಷಗಳನ್ನು ಕ್ಷಮಿಸಿ, ತಾಯ್ತನದಿಂದ ಎಲ್ಲವನ್ನೂ ಒಪ್ಪಿಕೊಳ್ಳುವ ಸಂಕೇತ ಈ ದೇವಿಯದ್ದಾಗಿದೆ.
ಸಿದ್ಧಿಧಾತ್ರಿ: ನಿಮ್ಮೆಲ್ಲ ಪರಿಶ್ರಮಗಳನ್ನು ಪರಿಗಣಿಸಿ ಸಾಧಕರಾಗಿಸುವ ಶಕ್ತಿದಾತೆ ಸಿದ್ಧಿ ಧಾತ್ರಿ. ನೇರಳೆ ಬಣ್ಣವನ್ನು ಧರಿಸಿ, ನವರಾತ್ರಿಯನ್ನು ಸಂಪನ್ನಗೊಳಿಸಬಹುದು. ಈ ನವಶಕ್ತಿಗಳನ್ನು ಉಡುವುದು ತೊಡುವುದು ಅಷ್ಟೇ ಅಲ್ಲ, ಧಾರಣೆಯೊಂದಿಗೆ ಆಚರಣೆಯೂ ಸೇರ್ಪಡೆಯಾಗಬೇಕು. ನವರಾತ್ರಿಯ ನಂತರ ನಿಮ್ಮ ವ್ಯಕ್ತಿತ್ವದಲ್ಲಿಯೂ ಬದಲಾವಣೆ ಕಂಡು ಬರುವುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.