ADVERTISEMENT

ಬಾಂಧವ್ಯ ಬೆಸೆಯುವ ರಾಖಿ ಹಬ್ಬ: ರಕ್ಷಾ ಬಂಧನ ರಕ್ಷಣೆಯ ಸಂಕಲ್ಪ

ರಾಮಸುಬ್ರಾಯ ಶೇಟ್
Published 11 ಆಗಸ್ಟ್ 2022, 6:59 IST
Last Updated 11 ಆಗಸ್ಟ್ 2022, 6:59 IST
ರಕ್ಷಾ ಬಂಧನ
ರಕ್ಷಾ ಬಂಧನ   

ಭಾರತೀಯರಿಗೆ ರಕ್ಷಾ ಬಂಧನ ಒಂದು ಪ್ರಮುಖ ಆಚರಣೆ ಮತ್ತು ನಂಬುಗೆ. ಇದಕ್ಕೆ ಪೌರಾಣಿಕ ಹಾಗೂ ಚಾರಿತ್ರಿಕ ಹಿನ್ನೆಲೆಗಳಿವೆ.

ಒಮ್ಮೆ ಶ್ರೀಕೃಷ್ಣನ ನಿವಾಸದಲ್ಲಿ ವಿಶೇಷ ಕಾರ್ಯಕ್ರಮ ಏರ್ಪಡಿಸಲ್ಪಟ್ಟಿತ್ತು. ಅತಿಥಿಗಳೆಲ್ಲಾ ಸೇರಿದ್ದಾರೆ; ಎಲ್ಲರನ್ನೂ ಸ್ವಾಗತಿಸುತ್ತಿದ್ದ ಶ್ರೀಕೃಷ್ಣನೇ ಹಣ್ಣುಗಳನ್ನು ಕತ್ತರಿಸುತ್ತಿದ್ದಾನೆ. ಪ್ರಮಾದವಶಾತ್ ಹರಿತವಾದ ಕತ್ತಿಯು ಕೃಷ್ಣನ ಕೈಗೆ ತಗುಲಿ, ರಕ್ತ ಚಿಮ್ಮುತ್ತದೆ. ನೆರೆದವರೆಲ್ಲಾ ಅಯ್ಯೋ ರಕ್ತ, ರಕ್ತ, ಬಟ್ಟೆ ಬಟ್ಟೇ ಎಂದು ಬಟ್ಟೆಗಾಗಿ ಹುಡುಕುತ್ತಿದ್ದಾಗ ಅಲ್ಲಿದ್ದ ಪಾಂಚಾಲಿ ತಾನುಟ್ಟ ಜರತಾರಿ ಸೀರೆಯನ್ನು ಸರ್ರನೆ ಹರಿದು ಕೃಷ್ಣನ ಕೈಗೆ ಕಟ್ಟುತ್ತಾಳೆ. ರಕ್ತ ನಿಲ್ಲುತ್ತದೆ. ಕೃಷ್ಣನು ಕೃತಜ್ಞತೆ ಸೂಚಿಸುತ್ತಾನೆ. ಆಕೆಯಲ್ಲಿ ಒಡಹುಟ್ಟಿದ ತಂಗಿಗಿಂತ ಹೆಚ್ಚಿನ ವಾತ್ಸಲ್ಯ ಮೂಡುತ್ತದೆ. ಕೃಷ್ಣೆಯ ರಕ್ಷಣೆಯ ಸಂಪೂರ್ಣ ಹೊಣೆಗಾರಿಕೆ ತನ್ನದೆಂಬ ದೃಢನಿರ್ಧಾರ ಅಂದು ಅವನ ಮನಸ್ಸಿನಲ್ಲಿ ಸ್ಥಿರವಾಗುತ್ತದೆ.

ಪಾಂಚಾಲಿಯ ಪರಿಣಯದ ಸಂದರ್ಭದಲ್ಲೂ ದ್ರೌಪದಿಯು ಕೃಷ್ಣನನ್ನು ಅಣ್ಣನೆಂದು ಗೌರವಿಸಿದರೆ, ಅವಳನ್ನು ತಂಗಿಯ ಸ್ಥಾನದಲ್ಲಿಯೇ ಕಂಡಿದ್ದ ಶ್ರೀಕೃಷ್ಣ. ಗುರಿ ತಲುಪಿ ಪಣವನ್ನು ಗೆದ್ದ ಅರ್ಜುನನ ಮೇಲೆ ಕೌರವರು ಹಲ್ಲೆಗೆ ಪ್ರಯತ್ನಿಸಿದಾಗ ಪಾಂಡವರಿಗೆ ಶ್ರೀಕೃಷ್ಣನೇ ರಕ್ಷಣೆ ನೀಡುತ್ತಾನೆ. ಮೋಸದ ಜೂಜಾಟದಲ್ಲಿ ಪಾಂಡವರನ್ನು ಸೋಲಿಸಿ ದ್ರೌಪದಿಯನ್ನು ಆಸ್ಥಾನಕ್ಕೆ ಕರೆತಂದು ಆಕೆಯ ಮಾನಭಂಗಕ್ಕೆ ಪ್ರಯತ್ನಿಸಿದಾಗ ಆಸ್ಥಾನದಲ್ಲಿ ಕುಳಿತಿದ್ದ ಭೀಷ್ಮ ದ್ರೋಣರೂ, ಭೀಮಾರ್ಜುನರೂ ಮೂಕಪ್ರೇಕ್ಷಕರಾಗಿದ್ದಾಗ ಕೃಷ್ಣೆಯು ಸಂಪೂರ್ಣ ಶ್ರೀಕೃಷ್ಣನ ಮೊರೆ ಹೋಗುತ್ತಾಳೆ. ತಕ್ಷಣ ಅಕ್ಷಯಾಂಬರ ನೀಡಿ ತಂಗಿಯನ್ನು ರಕ್ಷಿಸುತ್ತಾನೆ. ಆಕೆ ಅಂದುಕಟ್ಟಿದ ರಕ್ಷೆಗೆ ಇಂದು ಕೃಷ್ಣನಿಂದ ರಕ್ಷಣೆ ದೊರೆಯುತ್ತದೆ. ಅದೇ ರಕ್ಷಾಬಂಧನ!

ADVERTISEMENT

ವಾಮನನಾಗಿ ಬಂದ ವಿಷ್ಣು, ಬಲಿಯನ್ನು ರಸಾತಲದ ಅಧಿಪತಿಯನ್ನಾಗಿ ಮಾಡಿದ ಮೇಲೆ ಭಕ್ತನಾದ ಬಲಿಯ ಬೇಡಿಕೆಯಂತೆ ಅವನ ನಿವಾಸದಲ್ಲಿಯೇ ವಾಸಿಸಬೇಕಾದ ಅನಿವಾರ್ಯತೆ ವಿಷ್ಣುವಿಗೆ. ಆ ಸಂದರ್ಭದಲ್ಲಿ ಮಹಾಲಕ್ಷ್ಮಿಯು ಬಲಿಗೆ ರಕ್ಷೆಯನ್ನು ಕಟ್ಟಿ ವಿಷ್ಣುವನ್ನು ಬಂಧನದಿಂದ ಬಿಡಿಸಿದ್ದಳು ಎಂಬ ಪ್ರತೀತಿ.

ಈ ಸಂಗತಿಗಳಿಂದ ರಕ್ಷಾಬಂಧನದ ಮಹತ್ವ ನಮಗೆ ಅರಿವಾಗುತ್ತದೆ. ಇದು ಭ್ರಾತ್ವತ್ವದ ಸಂಕೇತವಾದರೂ ಸಹೋದರನೇ ಸಹೋದರಿಯನ್ನು ಕಾಪಾಡಬೇಕೆಂದೇನೂ ಇಲ್ಲ. ಕೆಲವು ಸಂದರ್ಭಗಳಲ್ಲಿ ಸಹೋದರಿಯರೂ ಸಹೋದರರನ್ನು ರಕ್ಷಿಸಿದ ಸಂದರ್ಭಗಳಿವೆ. ‘ರಕ್ಷೆ’ ಅಥವಾ ‘ರಾಖಿ’ ಎಂದರೆ ಕೇವಲ ಒಂದು ದಾರವಲ್ಲ. ಹಿಂದೆ ಅನೇಕ ರಾಜರು ತಮ್ಮ ಶತ್ರುಗಳಿಗೆ ರಕ್ಷೆಯನ್ನು ಕಳುಹಿಸಿ ಮಿತ್ರತ್ವದ ಸಹಕಾರವನ್ನು ನಿರೀಕ್ಷಿಸಿದ ಐತಿಹ್ಯಗಳಿವೆ.

ನಮ್ಮ ರಾಷ್ಟ್ರದ ಗಡಿಯುದ್ದಕ್ಕೂ ಕಣ್ಣೆವೆಯನ್ನು ಮುಚ್ಚದೆ ಹಗಲೆನ್ನದೇ ರಾತ್ರಿ ಎನ್ನದೇ ಛಳಿ ಎನ್ನದೇ ಮಳೆ ಎನ್ನದೇ ಸದಾ ಸನ್ನದ್ಧರಾಗಿ ಗಡಿಯನ್ನು ಕಾಯುತ್ತಿರುವ ಯೋಧರು ಭಾರತಾಂಬೆಗೆ ರಕ್ಷಣೆಯ ಭರವಸೆಯನ್ನು ನೀಡಿದ್ದಾರೆ. ತಮ್ಮ ಪ್ರಾಣವನು ಪಣಕ್ಕಿಟ್ಟು ಭಾರತಾಂಬೆಯ ಸಹೋದರ–ಸಹೋದರಿಯರ ರಕ್ಷಣೆ ಮಾಡುತ್ತೆವೆಂಬ ದೃಢ ಪ್ರತಿಜ್ಞೆಯನ್ನು ಮಾಡಿ ರಕ್ಷಣೆಯ ತಪಸ್ಸಿನಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ಹೆಂಡತಿ ಮಕ್ಕಳ ಯೋಗಕ್ಷೇಮವನ್ನು ಬದಿಗೊತ್ತಿ, ಸಮಷ್ಟಿಯ ಹಿತಕ್ಕಾಗಿ ದೇಶದ ರಕ್ಷಣೆಗಾಗಿ ಶತ್ರುಗಳ ಗುಂಡೇಟಿಗೆ ತಮ್ಮ ಗುಂಡಿಗೆಯನ್ನೊಡ್ಡಿ ಹುತಾತ್ಮರಾಗುವ ಸೇನಾನಿಗಳು ಪ್ರತ್ಯಕ್ಷವಾಗಿ ರಕ್ಷೆ ಕಟ್ಟದಿದ್ದರೂ ಸಮಷ್ಟಿಯ ರಕ್ಷೆಯ ನಿರ್ಧಾರವೇ ನಮಗೆಲ್ಲರಿಗೂ ರಕ್ಷಣೆಯಲ್ಲವೇ? ನಾವು ಸಹೋದರ ಸಹೋದರಿಯರಿಗೆ ರಕ್ಷೆ ಕಟ್ಟೋಣ; ಯೋಧರಿಗೆಲ್ಲರಿಗೂ ಯೋಗಕ್ಷೇಮದ ಹಾರೈಕೆಯ ರಕ್ಷಾಬಂಧನವನ್ನು ಸಲ್ಲಿಸೋಣ.⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.