ADVERTISEMENT

ರಕ್ಷಾಬಂಧನ: ಬಹುರೂಪಿ ರಾಖಿ

ತಪಶ್ಚರಣ
Published 5 ಆಗಸ್ಟ್ 2022, 19:30 IST
Last Updated 5 ಆಗಸ್ಟ್ 2022, 19:30 IST
ರಾಖಿ
ರಾಖಿ   

ಭ್ರಾತೃತ್ವ ಭಾವವನ್ನು ಗಟ್ಟಿಗೊಳಿಸುವ ‘ರಕ್ಷಾಬಂಧನ’ ಸಂಭ್ರಮದಲ್ಲಿ ರಾಖಿಗೆ ವಿಶಿಷ್ಟ ಮನ್ನಣೆ. ಸಹೋದರನ ಮುಂಗೈಗೆ ಕಟ್ಟುತ್ತಿದ್ದ ಹಳದಿ ಮಿಶ್ರಿತ ಕೆಂಪು ಕಂಕಣದ ದಾರವೀಗ ಬಗೆ ಬಗೆಯ ವಿನ್ಯಾಸದಲ್ಲಿ ಹೊಸತನವನ್ನು ಕಂಡುಕೊಳ್ಳುತ್ತಿದೆ.

ಸಹೋದರಿಗೆ ಸುರಕ್ಷೆಯ ಅಭಯವನ್ನು ನೀಡುವ, ಸಹೋದರನ ನೆತ್ತಿ ಕಾಯುವಂತೆ ಹಾರೈಸುವ ಈ ಸಂಭ್ರಮಕ್ಕೆ ದೊಡ್ಡ ಇತಿಹಾಸವೇ ಇದೆ. ಆದರೆ, ಕೈಗೆ ಕಟ್ಟುವ ರಾಖಿ ಮಾತ್ರ ಬಗೆ ಬಗೆಯ ವಿನ್ಯಾಸ ಪಡೆದಿದ್ದು ಈಚಿನ ವರ್ಷಗಳಲ್ಲಿ. ಸಾಮಾನ್ಯ ಬಣ್ಣದ ದಾರಕ್ಕೆ ಸೃಜನಶೀಲ ಪೆಂಡೆಂಟ್‌ಗಳು ಸೇರಿ ರಾಖಿಯನ್ನು ಕಳೆಗಟ್ಟಿಸುತ್ತಿವೆ. ಸದ್ಯಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಕುದುರಿಸಿಕೊಂಡಿರುವ ರಾಖಿಯ ಪಟ್ಟಿ ದೊಡ್ಡದಿದೆ.

ಸಿಲ್ವರ್‌ ರಾಖಿ: ಇದು ಸದ್ಯಕ್ಕೆ ಹೆಚ್ಚು ಚಾಲ್ತಿಯಲ್ಲಿರುವ ರಾಖಿ. ಶುದ್ಧ ಬೆಳ್ಳಿ ಬಳಸಿ ಮಾಡಿದ ಈ ರಾಖಿ ದೀರ್ಘಕಾಲ ಬಾಳಿಕೆ ಬರುವಂತದ್ದು. ಸೂಕ್ಷ್ಮ ಕುಸುರಿ ಇರುವ ದೇವರ ಪೆಂಡೆಂಟ್‌ಗಳಿಗೆ ಕೆಂಪು, ಹಳದಿ, ಕೇಸರಿ, ಹಸಿರು ಮಿಶ್ರಿತ ದಾರವನ್ನು ಕಟ್ಟಲಾಗಿರುತ್ತದೆ. ರಾಮ, ಕೃಷ್ಣ, ಗಣೇಶ ದೇವರ ಬೆಳ್ಳಿ ಪೆಂಡೆಂಟ್‌ಗಳಿಗೆ ಕಟ್ಟಿರುವ ದಾರಕ್ಕೆ ಹೆಚ್ಚಿನ ಬೇಡಿಕೆ ಇದೆ. ದುಬಾರಿ ಅಲ್ಲದೇ ಇರುವುದರಿಂದ ಸಿಲ್ವರ್‌ ರಾಖಿಗೆ ಹೆಚ್ಚು ಬೇಡಿಕೆ ಇದೆ.

ADVERTISEMENT

ಇವಿಲ್‌ ಐ ರಾಖಿ: ಸಿಲ್ವರ್‌ ರಾಖಿ ನಂತರ ಇವಿಲ್‌ ಐ ರಾಖಿಗಳ ಮಾರಾಟವೂ ಹೆಚ್ಚಾಗಿದೆ. ಗಾಢ ನೀಲಿಗೆ ಆಕಾಶ ಬಣ್ಣದ ವಿನ್ಯಾಸವಿರುವ ಹರಳು ಬಳಸಿ ಮಾಡಿರುವ ರಾಖಿ ಇದು. ಕಣ್ಣಿನ ಪಾಪೆಯನ್ನು ಹೋಲುವ ಹಲವು ಬಗೆಯ ಮಣಿ ಹಾಗೂ ಹರಳುಗಳನ್ನು ಬಳಸಲಾಗುತ್ತದೆ. ಇಲ್ಲಿ ಬಳಕೆಯಾಗುವ ಮಣಿ ಹಾಗೂ ಹರಳು ನೀಲಿ ಬಣ್ಣದ್ದೇ ಆಗಿರುತ್ತದೆ. ನೀಲಿ ಬಿಟ್ಟರೆ ಕಪ್ಪು ಬಣ್ಣದಲ್ಲಿರುವ ಮಣಿಗಳನ್ನು ಬಳಕೆ ಮಾಡಲಾಗುತ್ತದೆ. ಇದರ ದಾರವು ಗಾಢ ನೀಲಿ ಮತ್ತು ತಿಳಿ ನೀಲಿ ಬಣ್ಣದ ಮಿಶ್ರಣವನ್ನು ಹೊಂದಿರುತ್ತದೆ. ಮಕ್ಕಳಿಗೆ ಈ ರಾಖಿ ಅಚ್ಚುಮೆಚ್ಚು.

ರುದ್ರಾಕ್ಷಿ ರಾಖಿ: ಧಾರ್ಮಿಕ ಶ್ರದ್ಧೆಯನ್ನು ಹೊಂದಿರುವವರು ಈ ರುದ್ರಾಕ್ಷಿ ರಾಖಿಯನ್ನು ಹೆಚ್ಚು ಇಷ್ಟ‍ಡು ತ್ತಾರೆ. ಮೂರು ಅಥವಾ ಒಂದು ರುದ್ರಾಕ್ಷಿ ಇರುವ ‍ಪದಕದ ಜತೆ ಬಗೆ ಬಗೆಯ ಮರದ ಮಣಿಗಳನ್ನು ಬಳಸಿ ಈ ರಾಖಿ ಮಾಡಲಾಗುತ್ತದೆ. ಇದನ್ನು ಧರಿಸಿದರೆ ಧನಾತ್ಮಕ ಭಾವ ಹೆಚ್ಚುತ್ತದೆ ಎಂಬ ನಂಬಿಕೆ ಇದೆ.

ಮೆಟಲ್‌ ರಾಖಿ: ಮೆಟಲ್‌ಗಳಲ್ಲಿ ಹೂವು, ನವಿಲು, ಹಂಸ ಹೀಗೆ ನಾನಾ ಚಿತ್ತಾರವನ್ನು ಮೂಡಿಸಿ ಮಾಡಿದ ಪೆಂಡೆಂಟ್ ಇರುವ ರಾಖಿ ಇದು. ಇಷ್ಟದ ವ್ಯಕ್ತಿಯ ಹೆಸರನ್ನು ಈ ಮೆಟಲ್‌ ಪೆಂಡೆಂಟ್‌ನಲ್ಲಿ ಕೆತ್ತಲಾಗುತ್ತದೆ. ಸಾಮಾನ್ಯಾಗಿ ಓಂಕಾರದ ಮೆಟಲ್‌ ಪೆಂಡೆಂಟ್‌ ಇರುವ ರಾಖಿಗಳು ಅಗ್ರ ಸ್ಥಾನ ಪಡೆದಿವೆ.

ಮುತ್ತಿನ ರಾಖಿ ಮತ್ತು ಕುಂದನ್‌ ರಾಖಿ: ಸಾಂಪ್ರಾದಾಯಿಕ ಶೈಲಿಯ ರಾಖಿ ಇದು. ದೊಡ್ಡ ಹಾಗೂ ಸಣ್ಣ ಮುತ್ತಿನ ಮಣಿಗಳನ್ನು ಬಳಸಲಾಗುತ್ತದೆ. ಹೆಚ್ಚಾಗಿ ಕೆಂಪು ದಾರದಲ್ಲಿ ಪೋಣಿಸಿ ಈ ರಾಖಿಯನ್ನು ತಯಾರಿ ಸುತ್ತಾರೆ. ಇನ್ನು ಬಗೆ ಬಗೆಯ ಕುಂದನ್‌ ಬಳಸಿ ಮಾಡಿರುವ ರಾಖಿಯನ್ನು ಹೆಚ್ಚಾಗಿ ಮಧ್ಯವಯಸ್ಸಿನ ಪುರುಷರು ಇಷ್ಟಪಡುತ್ತಾರೆ. ಉತ್ತರ ಭಾರತದಲ್ಲಿ ಮುತ್ತು ಹಾಗೂ ಕುಂದನ್‌ ರಾಖಿಯ ಬಳಕೆ ಹೆಚ್ಚಿದೆ.

ಆಕ್ಸಿಡೈಸ್ಡ್‌ ರಾಖಿ: ಇದು ಯುವಸಮೂಹದ ನೆಚ್ಚಿನ ರಾಖಿ. ಆಕ್ಸಿಡೈಸ್ಡ್‌ ಪೆಂಡೆಂಟ್‌ ಬಳಸಿ ಮಾಡಿರುವ ಈ ರಾಖಿ ನೋಡಲು ಆಕರ್ಷಕವಾಗಿ ಕಾಣುತ್ತದೆ. ಸೂರ್ಯ, ಆನೆ, ಆಂಜನೇಯಸ್ವಾಮಿ ಹೀಗೆ ಬಗೆ ಬಗೆಯ ಆಕ್ಸಿಡೈಸ್ಡ್‌ ಪೆಂಡೆಂಟ್‌ಗಳು ಲಭ್ಯವಿದೆ. ಆಸಕ್ತಿಗೆ ಅನುಸಾರವಾಗಿ ಪೆಂಡೆಂಟ್‌ಗಳು ಸಿಗುತ್ತವೆ.

ರೇಸಿನ್ ರಾಖಿ: ರೇಸಿನ್ ರಾಖಿಗಳನ್ನು ಎಪೋಕ್ಸಿ ರೇಸಿನ್‌ ಎನ್ನುವ ರಾಸಾಯನಿಕ ಬಳಸಿ ಮಾಡಲಾಗುತ್ತದೆ. ಯಾವುದೇ ವಸ್ತುವಿನ ಮೇಲೆ ಈ ರಾಸಾಯನಿಕವನ್ನು ಹಾಕಿದರೆ ಆ ವಸ್ತುವಿನ ಅಚ್ಚು ಪಡೆಯಬಹುದು. ಈ ಅಚ್ಚಿನ ಮೇಲೆ ಇಷ್ಟದ ಹೆಸರು, ಫೋಟೋ ಬಳಸಿ ರಾಖಿ ತಯಾರಿಸಲಾಗುತ್ತದೆ.

ರಾಖಿ ಜತೆ ಗ್ರೀಟಿಂಗ್‌ ಕಾರ್ಡ್‌

‘ಮೂರು ವರ್ಷಗಳಿಂದ ನಾನೇ ಖುದ್ದು ರಾಖಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೇನೆ. ರುದ್ರಾಕ್ಷಿ ಇರುವ ರಾಖಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಈ ವರ್ಷ ಹೊಸದಾಗಿ ರಾಖಿಯ ಜತೆಗೆ ಅಣ್ಣ ತಂಗಿಯರ ಬಾಂಧವ್ಯವನ್ನು ನಿರೂಪಿಸುವ ಪೌರಾಣಿಕ ಕತೆಗಳ ಗ್ರೀಟಿಂಗ್‌ ಕಾರ್ಡ್‌ಗಳನ್ನು ರೂಪಿಸಲಾಗಿದೆ. ರಾಖಿ ಜತೆ ಗ್ರೀಟಿಂಗ್‌ ಕಾರ್ಡ್‌ ಇರುವುದರಿಂದ ಬಹುತೇಕರು ಇದನ್ನು ಇಷ್ಟಪಡುತ್ತಿದ್ದಾರೆ. ಶ್ರೀಕೃಷ್ಣ– ದ್ರೌಪದಿ, ಗಣೇಶ–ಸಂತೋಷಿಮಾ, ಯಮ–ಯಾಮಿ ನಡುವಿನ ಭ್ರಾತೃತ್ವದ ಕತೆಯನ್ನು ಗ್ರೀಟಿಂಗ್‌ ಕಾರ್ಡ್‌ನಲ್ಲಿ ಹೇಳಲಾಗಿದೆ. ಜತೆಗೆ ಮುಂಬೈನಲ್ಲಿ ‘ಫ್ಯಾಮಿಲಿ ರಾಕಿ ಸೆಟ್‌’ಗೆ ಬೇಡಿಕೆ ಇದೆ. ಅತ್ತಿಗೆಗೂ ರಾಕಿ ಕಟ್ಟಲಾಗುತ್ತದೆ. ಹಾಗಾಗಿ ಅಣ್ಣ, ಅತ್ತಿಗೆ ಮತ್ತು ಮಕ್ಕಳಿಗೆಂದು ರಾಕಿ ಸೆಟ್‌ ತೆಗೆದುಕೊಳ್ಳುತ್ತಾರೆ.

– ಸೌಪರ್ಣಿಕ ಹೊಳ್ಳ, ಕ್ರಾಫ್ಟ್‌ ಖಜಾನಾ ಸಂಸ್ಥಾಪಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.