ಬೆಂಗಳೂರು: ರಕ್ಷಾ ಬಂಧನ ಹೆಣ್ಣು ಮಕ್ಕಳಿಗೆ ತವರಿನ ನಂಟು ಭದ್ರಪಡಿಸುವ ಹಬ್ಬ. ಜತೆಗೆ ಇದು ಭ್ರಾತೃತ್ವದ ಭಾವ ಬೆಸುಗೆಗೆ ಸೇತುವೆ.
ಅಣ್ಣ ತಂಗಿಯರ ಬಾಂಧವ್ಯ ಬೆಸೆಯುವ ಹಬ್ಬ ಎಂದೇ ಖ್ಯಾತಿ ಪಡೆದಿರುವ ರಕ್ಷಾ ಬಂಧನ ಭಾನುವಾರ ರಾಜ್ಯದ ಹಲವೆಡೆ ಆಚರಿಸಲಾಗುತ್ತಿದೆ.
ರಕ್ಷಾ ಬಂಧನವು ನೂಲು ಹುಣ್ಣಿಮೆ ದಿನದಂದು ಪ್ರತಿ ವರ್ಷ ನಡೆಯುವ ಹಬ್ಬವಾಗಿದೆ. ರಕ್ಷಣೆ ಮಾಡುವ ಪ್ರತಿಯೊಬ್ಬ ಪುರುಷನಿಗೆ ಸ್ತ್ರೀಯರು ನೂಲಿನ ರೂಪದಲ್ಲಿ ದಾರ, ರಾಖಿ ಕಟ್ಟುವುದು ಸಂಪ್ರದಾಯ.
ಹಿಂದೂ ಪುರಾಣದಂತೆ ದೇವರು ಮತ್ತು ರಾಕ್ಷಸರ ನಡುವೆ 12 ವರ್ಷ ನಿರಂತರವಾಗಿ ಯುದ್ಧ ನಡೆಯಿತು. ಯುದ್ಧದ ಕೊನೆಯಲ್ಲಿ ರಾಕ್ಷಸರು ಗೆದ್ದರು. ಆ ವೇಳೆ ರಾಕ್ಷಸರು ಇಂದ್ರನ ಸಿಂಹಾಸನವನ್ನು ವಶಪಡಿಸಿಕೊಂಡಿದ್ದಲ್ಲದೇ ಮೂರು ಲೋಕ ವಶಪಡಿಸಿಕೊಂಡಿದ್ದು ತಿಳಿದು ಬರುತ್ತದೆ.
ಇಂದ್ರನು ಯುದ್ಧದಲ್ಲಿ ಸೋತಾಗ, ದೇವತೆಗಳ ಅಧ್ಯಾತ್ಮ ಶಿಕ್ಷಕ ಬೃಹಸ್ಪತಿಯ ಬಳಿಗೆ ಹೋಗಿ ಸಲಹೆ ಪಡೆಯುತ್ತಾರೆ. ಈ ವೇಳೆ, ಇಂದ್ರನಿಗೆ ಆತನ ಪತ್ನಿ ಶಚಿ ರಾಖಿ ಕಟ್ಟಿದ್ದು, ಕಳೆದು ಹೋದ ರಾಜ್ಯವನ್ನು ಇಂದ್ರ ಮರಳಿ ಪಡೆದದ್ದು ಅನೇಕ ದಂತ ಕಥೆಗಳಿಂದ ತಿಳಿದು ಬರುತ್ತದೆ.
ರಜಪೂತರಲ್ಲಿ ಗಂಡನಿಗೆ ಹೆಂಡತಿ ರಾಖಿ ಕಟ್ಟಿ ಯುದ್ಧದಲ್ಲಿ ಗೆದ್ದು ಬಾ ಎಂದು ಹರಸುವುದು ಇತಿಹಾಸದ ಕಥೆಗಳಿಂದ ತಿಳಿದು ಬರುತ್ತದೆ. ಒಟ್ಟಾರೆ ರಾಖಿ ಹಬ್ಬಕ್ಕೆ ತನ್ನದೇ ಆದ ಹಿನ್ನೆಲೆ, ಮಹತ್ವ ಇರುವುದು ಮಾತ್ರ ಸತ್ಯವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.