ADVERTISEMENT

Raksha Bandhan 2024: ಒಡಹುಟ್ಟಿದವರ ‘ರಕ್ಷಾ’ ಬಾಂಧವ್ಯ

ಸ್ಮಿತಾ ಶಿರೂರ
Published 16 ಆಗಸ್ಟ್ 2024, 23:36 IST
Last Updated 16 ಆಗಸ್ಟ್ 2024, 23:36 IST
<div class="paragraphs"><p>ಹುಬ್ಬಳ್ಳಿಯಲ್ಲಿ ರಾಖಿ ಹಬ್ಬಕ್ಕಾಗಿ ಮಾರುಕಟ್ಟೆಯಲ್ಲಿ ರಾಖಿ ಖರೀದಿಸುತ್ತಿರುವ ಯುವತಿ </p></div>

ಹುಬ್ಬಳ್ಳಿಯಲ್ಲಿ ರಾಖಿ ಹಬ್ಬಕ್ಕಾಗಿ ಮಾರುಕಟ್ಟೆಯಲ್ಲಿ ರಾಖಿ ಖರೀದಿಸುತ್ತಿರುವ ಯುವತಿ

   

ಪ್ರಜಾವಾಣಿ ಚಿತ್ರ/ ಗೋವಿಂದರಾಜ ಜವಳಿ

ರಕ್ಷಾ ಬಂಧನ ಅರ್ಥಾತ್‌ ರಾಖಿ ಹಬ್ಬ ಮತ್ತೆ ಬಂದಿದೆ. ಅಣ್ಣ-ತಂಗಿ, ಅಕ್ಕ-ತಮ್ಮನ ಬಾಂಧವ್ಯ ಸಾರಿ ಹೇಳಲು ಸಾವಿರಾರು ಮಾದರಿಯ ರಾಖಿಗಳು ಮಾರುಕಟ್ಟೆಯಲ್ಲಿ ಮಿಂಚುತ್ತಿವೆ. ಸ್ವತಃ ತಾವೇ ದಾರ, ವುಲನ್‌ ಹೆಣೆದು ಸುಂದರ ರಾಖಿ ಕೈಯಾರೆ ತಯಾರಿಸಿ ಅಣ್ಣತಮ್ಮನಿಗೆ ಕಟ್ಟಲು ಬಯಸುವ ಅಕ್ಕತಂಗಿಯರೂ ಇದ್ದಾರೆ.

‘ಹೆಣ್ಣಿನ ಜನುಮಕೆ ಅಣ್ಣ ತಮ್ಮರು ಬೇಕು

ADVERTISEMENT

ಬೆನ್ನ ಕಟ್ಟುವರು ಸಭೆಯೊಳಗೆ

ಸಾವಿರ ಹೊನ್ನ ಕಟ್ಟುವರು ಉಡಿಯೊಳಗೆ..’

ಜನಪದ ಹಾಡು ಒಡಹುಟ್ಟಿದವರ ಒಡನಾಟದ ಸವಿಯನ್ನು ತೆರೆದಿಡುತ್ತದೆ. ಶ್ರಾವಣ ಹುಣ್ಣಿಮೆಯಂದು ರಕ್ಷಾ ಬಂಧನದ ಸೊಬಗು ಅರಳುತ್ತದೆ. ಸಹೋದರನ ಆರೋಗ್ಯ, ಆಯಸ್ಸಿಗಾಗಿ ಸಹೋದರಿ ಬಯಸಿದರೆ, ಸಹೋದರಿಯನ್ನು ಸದಾ ಕಾಲ ರಕ್ಷಿಸಲು ಮತ್ತು ಪ್ರೀತಿಸಲು ಸಹೋದರ ಭರವಸೆ ನೀಡುತ್ತಾನೆ. ಸಹೋದರಿ ಸಹೋದರನಿಗೆ ಆರತಿ ಮಾಡಿ ರಾಖಿ ಕಟ್ಟುತ್ತಾಳೆ. ರಾಖಿ ಕಟ್ಟುವಾಗ ತಟ್ಟೆಯಲ್ಲಿ ಅಕ್ಷತೆ, ಕುಂಕುಮ, ಶ್ರೀಗಂಧ, ಸಿಹಿ, ಆರತಿ ಇರಬೇಕು. ಸಹೋದರನಿಗೆ ಆರತಿ ಮಾಡಿ ತಲೆಗೆ ಅಕ್ಷತೆ ಹಾಕಿ, ಹಣೆಗೆ ಕುಂಕುಮ, ಗಂಧವಿಟ್ಟುನಂತರ ಸಿಹಿ ತಿನ್ನಿಸುವ ಪದ್ಧತಿಯಿದೆ. ರಾಖಿ ಇಡುವ ತಟ್ಟೆಯನ್ನು ಹೂಗಳಿಂದ ಸುಂದರವಾಗಿ ಅಲಂಕೃತಗೊಳಿಸಿ ಈ ದಿನವನ್ನು ಇನ್ನಷ್ಟು ಸುಂದರಗೊಳಿಸುವ ಕಲೆಯನ್ನೂ ಕಾಣಬಹುದು.

ಕಾಲ ಉರುಳುತ್ತಿದ್ದರೂ ರಾಖಿಗಳ ಕ್ರೇಜ್ ಅಂತೂ ಜನರಲ್ಲಿ ಕಮ್ಮಿಯಾಗಿಲ್ಲ. ರಾಖಿಗಳ ವೈವಿಧ್ಯ ಕಂಡರೆ ಅಣ್ಣತಮ್ಮಂದಿರಿಲ್ಲದ ಹುಡುಗಿಯೂ ತನಗೂ ಒಬ್ಬ ಅಣ್ಣನಿದ್ದಿದ್ದರೆ ಎಂದು ಯೋಚಿಸದೇ ಇರುವುದಿಲ್ಲ. ಸ್ವಂತ ಅಣ್ಣ-ತಮ್ಮಂದಿರಿಗಷ್ಟೇ ಅಲ್ಲದೇ ಸುತ್ತಮುತ್ತಲಿನ ಹುಡುಗರಿಗೂ ರಾಖಿ ಕಟ್ಟಿ ಸಿಹಿ ತಿನಿಸುವ ರೂಢಿ ಬೆಳೆದು ಬಂದಿರುವುದರಿಂದ ರಾಖಿಗೆ ಈಗ ಸಕತ್‌ ಬೇಡಿಕೆ. ಪುರುಷ-ಮಹಿಳೆ ಎನ್ನುವ ಭೇದವಿಲ್ಲದೇ ಎಲ್ಲರಿಗೂ ರಾಖಿ ಕಟ್ಟಿ ಪರಸ್ಪರ ರಕ್ಷಣೆ ಮಾಡಬೇಕೆನ್ನುವ ಭಾವ ಬಿತ್ತುವ ಹಲವು ಸಂಘಟನೆಗಳೂ ನಮ್ಮಲ್ಲಿವೆ.

ಕುಂಬಳ ಬೀಜ, ಸವತೆ ಬೀಜ, ಕಲ್ಲಂಗಡಿ ಬೀಜ, ಬಾಳೆಯ ಎಲೆ, ಥರಥರದ ಹೂಗಳು, ಇತರ ಪರಿಸರ ಸ್ನೇಹಿ ವಸ್ತುಗಳು ಹಾಗೂ ಮನೆಯಲ್ಲೇ ಇರುವ ಕೆಲವು ವಸ್ತುಗಳಿಂದಲೇ ಸುಂದರ ರಾಖಿ ತಯಾರಿಸಬಹುದು. ಅಂಗವಿಕಲ, ಬುದ್ಧಿಮಾಂದ್ಯ ಮಕ್ಕಳು ತಯಾರಿಸಿದ ರಾಖಿಗಳಿಗೂ ವಿಶೇಷ ಬೇಡಿಕೆಯಿದೆ. ಸಮಾಜ ಸೇವಾ ಮನೋಭಾವದವರು, ಮಾನವೀಯ ಅಂತಃಕರಣ ಉಳ್ಳವರು ಇಂಥ ರಾಖಿಗಳನ್ನು ಖರೀದಿಸಿ ಈ ವಿಶೇಷ ಜನರ ಸ್ವಾವಲಂಬನೆಗೂ ದಾರಿ ಮಾಡಿಕೊಡುತ್ತಿದ್ದಾರೆ. ರೇಷ್ಮೆ ದಾರದಿಂದ ಮಾಡಿದ ರಾಖಿಗಳಿಗೂ ವಿಶೇಷ ಮಹತ್ವವಿದೆ.

ರಕ್ಷಾ ಸೂತ್ರವೇ ರಾಖಿ: ಹಲವು ವರ್ಷಗಳಿಂದ ರಾಖಿಗಳಲ್ಲಿ ನವಿಲುಗರಿ ಬಹಳವಾಗಿ ಬಳಕೆಯಾಗುವ ಚಿತ್ರ. ಕೃಷ್ಣನ ಕೈ ಬೆರಳಿಗೆ ಸುದರ್ಶನ ಚಕ್ರ ತಾಗಿ  ಗಾಯವಾದಾಗ ಹೆಚ್ಚು ರಕ್ತ ಹೋಗದಿರಲಿ ಎಂದು ದ್ರೌಪದಿ ತನ್ನ ಸೀರೆಯ ಸೆರಗಿನ ತುಂಡು ತೆಗೆದು ಆತನ ಮಣಿಕಟ್ಟಿಗೆ ಕಟ್ಟುತ್ತಾಳೆ. ಇದರಿಂದ ಹರ್ಷಗೊಂಡ ಕೃಷ್ಣ ಅದನ್ನು ‘ರಕ್ಷಾ ಸೂತ್ರ’ ಎಂದು ಕರೆದ ಎನ್ನಲಾಗುತ್ತದೆ. ಅವಳ ಕಾಳಜಿಗೆ ಮೆಚ್ಚಿ ಅವಳಿಗೆ ರಕ್ಷಣೆಯ ಭರವಸೆ ನೀಡುತ್ತಾನೆ. ಮುಂದೆ ದುಷ್ಯಾಸನ ದ್ರೌಪದಿಯ ವಸ್ತ್ರಾಪಹರಣ ಮಾಡಿದ ಸಂದರ್ಭದಲ್ಲಿ ಅಕ್ಷಯ ವಸ್ತ್ರವನ್ನು ಕೃಷ್ಣ ಪ್ರದಾನ ಮಾಡುತ್ತಾನೆ. ಸಹೋದರತ್ವದ ಈ ರಕ್ಷಣೆಯ ಭರವಸೆಯ ಭಾವವೇ ರಾಖಿ ಹಬ್ಬಕ್ಕೆ ತಳಹದಿ ಎಂಬ ಮಾತಿದೆ. ಇನ್ನೂ ಹಲವು ಕಥೆಗಳು ರಾಖಿ ಹಬ್ಬದ ಜೊತೆ ತಳಕು ಹಾಕಿಕೊಂಡಿವೆ.

ಹಿನ್ನೆಲೆ ಏನೇ ಇರಲಿ ರಾಖಿಗಳಲ್ಲಿ ನವಿಲಿನ ಚಿತ್ರಕ್ಕೆ ಹೆಚ್ಚಿನ ಮನ್ನಣೆ. ಗರಿಬಿಚ್ಚಿದ ನವಿಲು, ಕೃಷ್ಣ, ಕೊಳಲು ಹಾಗೂ ನವಿಲುಗರಿ, ಕೃಷ್ಣನ ಚಿತ್ರಗಳಿರುವ ರಾಖಿಗಳಿಗೆ ಸಾಂಪ್ರದಾಯಿಕ ಮನ್ನಣೆ ಲಭ್ಯವಿದೆ. ಅದು ಬಿಟ್ಟರೆ ಗಣೇಶನ ವಿಧವಿಧ ಚಿತ್ತಾರಗಳು ಲಭ್ಯವಿವೆ. ಅರಳಿದ ಕಮಲ, ಶಂಖ, ರುದ್ರಾಕ್ಷಿ, ಹಲವು ವಿಧದ ಮಣಿಗಳು, ಕುಂದನ್‌ಗಳು, ವುಲನ್‌, ಹಂಸ, ಓಂ ಆಕಾರ, ಸ್ವಸ್ತಿಕ್‌ ಹೀಗೆ.... ಹಲವು ಆಕೃತಿಗಳು ಕಾಯಂ ಆಗಿ ಬಳಕೆಯಾಗುತ್ತವೆ.

ಭಾರತೀಯ ಚಿತ್ರಕಲಾ ಪ್ರಕಾರಗಳೂ ರಾಖಿಗಳ ಚಿತ್ತಾರದಲ್ಲಿ ಹಾಸು ಹೊಕ್ಕಾಗಿವೆ. ಮಧುಬನಿ, ವರ್ಲಿ, ಮೀನಾಕರಿ ಕಲೆ ಇರುವ ರಾಖಿಗಳು ಖ್ಯಾತವಾಗಿವೆ. ಬುಕ್‌ ಮಾರ್ಕರ್‌ಗಳಂತೆ ಬಳಸಬಲ್ಲ ರಾಖಿ, ಬಾಲ್ಯದ ಅನುಬಂಧವನ್ನು ನೆನಪಿಸುವ ವಸ್ತುಗಳನ್ನು ಹಾಕಿ ತಯಾರಿಸಿದ ರಾಖಿ, ಲೆದರ್‌ನಲ್ಲಿ ಮಾಡಿದ ಹಲವು ವಿನ್ಯಾಸಗಳು, ಹಳೆಯ ಭಾವಚಿತ್ರ ಇರುವ ರಾಖಿ, ಕಾಗದವನ್ನು ಸುತ್ತಿ ಮಾಡಿದಂಥವು, ಕಸೂತಿಯ ತುಂಡು ಇರುವಂಥದ್ದು, ಆಕರ್ಷಕ ಸೂಕ್ತಿಗಳಿರುವಂಥವು, ಸಹೋದರ ಎಂಬ ಒಕ್ಕಣೆ ಇರುವಂಥವು, ರಾಷ್ಟ್ರಧ್ವಜ ಚಿತ್ರ ಇರುವ ಹೀಗೆ ಇನ್ನೂ ಕಲ್ಪನೆಗೆ ಮೀರಿದಂಥ ವಿಧಗಳು ಇವುಗಳಲ್ಲಿ ಬಂದಿವೆ. ಇಮೋಜಿಗಳ ಕಾಲವಾದ್ದರಿಂದ ಅವುಗಳಂತೂ ಇದ್ದೇ ಇವೆ.

ಮಕ್ಕಳಿಗಾಗಿ ವಿಶೇಷ: ಮಕ್ಕಳ ಮನಗೆದ್ದಿರುವ ಎನಿಮೇಟೆಡ್ ಕಾರ್ಟೂನ್‌ಗಳ ಪಾತ್ರಗಳೂ ರಾಖಿ ವಿನ್ಯಾಸಗಳಾಗಿ ರೂಪು ತಳೆದಿವೆ. ಛೋಟಾ ಭೀಮ್‌, ಡೊರೆಮಾನ್‌, ಸ್ಪೈಡರ್‌ ಮ್ಯಾನ್‌, ಬ್ಯಾಟ್‌ ಮ್ಯಾನ್‌, ಪೆಪ್ಪಾ ಪಿಗ್‌, ಪಾ ಪೆಟ್ರೋಲ್‌ಗಳಂಥ ಮಕ್ಕಳ ನೆಚ್ಚಿನ ಕಾರ್ಟೂನ್‌ಗಳ ಪಾತ್ರಧಾರಿಗಳನ್ನು ಕೈಯಲ್ಲಿ ಕಟ್ಟಿಕೊಳ್ಳಲು ಚಿಕ್ಕಮಕ್ಕಳಿಗೆ ಖುಷಿಯಾಗುವ ಕಾರಣ ಪಾಲಕರು ಇಂಥವೇ ಕ್ರಿಯೆಟಿವ್‌ ರಾಖಿಗಳನ್ನು ಖರೀದಿಸುತ್ತಿದ್ದಾರೆ.

ಮಣಿಗಳನ್ನು ಪೋಣಿಸಿ ಮಾಡಿದಂಥ ರಾಖಿಗಳು ಜನರ ಮನಗೆದ್ದಿವೆ. ಹಲವು ದುಬಾರಿ ರಾಖಿಗಳು ಬ್ರೇಸ್ಲೆಟ್ ಮಾದರಿಯಲ್ಲಿಯೂ ಬರುತ್ತಿವೆ. ಕೆಟ್ಟ ದೃಷ್ಟಿ ನಿವಾರಿಸುವ ಸಂಕೇತದ ರಾಖಿ ಕಳೆದ ವರ್ಷದಿಂದ ಸದ್ದು ಮಾಡುತ್ತಿದೆ. ಕಪ್ಪು, ನೀಲಿ ಹಾಗೂ ಬಿಳಿಯ ಬಣ್ಣದ ಸಂಯೋಜನೆಯ ಈ ರಾಖಿಗೆ ಬಹಳ ಬೇಡಿಕೆ ಸೃಷ್ಟಿಯಾಗಿದೆ. ಬರ್ಗರ್‌, ಪಿಜ್ಜಾ, ಜಿಲೇಬಿ ಹಾಗೂ ಕೆಲವು ಜನಪ್ರಿಯ ಆಹಾರ ಪದಾರ್ಥಗಳ ಚಿತ್ರಗಳಿರುವ ರಾಖಿಗಳೂ ಆಹಾರ ಪ್ರಿಯರ ಮನಸ್ಸು ಕದ್ದಿವೆ. ಪ್ರಾಣಿಗಳ ಚಿತ್ರಗಳುಳ್ಳ ರಾಖಿಗಳು ಪ್ರಾಣಿ ರಕ್ಷಣೆಯ ಮಹತ್ವವನ್ನು ಸಾರಿ ಹೇಳುತ್ತವೆ.

ಉಡುಗೊರೆಯೂ ವಿಶೇಷ: ಕುಟುಂಬದಲ್ಲಿ ಅಥವಾ ತವರಿನಲ್ಲಿ ತಂದೆ–ತಾಯಿಯ ನಂತರ ಹೆಣ್ಣುಮಕ್ಕಳಿಗೆ ಇರುವ ಬಲವಾದ ಸಂಬಂಧ ಸಹೋದರರದ್ದು. ಒಡಹುಟ್ಟಿದವರಲ್ಲಿ ಸಂಬಂಧ ಬಲಗೊಳಿಸುವ ರಾಖಿ ಹಬ್ಬದಲ್ಲಿ ಉಡುಗೊರೆಯೂ ಮಹತ್ವದ ಪಾತ್ರ ಹೊಂದಿದೆ. ಸಹೋದರರಿಗಾಗಿಯೇ ಒಂದು ದಿನ ಸಂಭ್ರಮ ಪಡುವ ಸಹೋದರಿಯರಿಗೆ ಉಡುಗೊರೆ ನೀಡುವ ಸಂಪ್ರದಾಯ ನಡೆದು ಬಂದಿದೆ. ಹೀಗಾಗಿ ಅಕ್ಕನಿಗೆ, ತಂಗಿಗೆ ಏನು ಉಡುಗೊರೆ ಕೊಡಲಿ ಎಂಬ ಚಿಂತೆ ಹುಡುಗರ ಪಾಲಿಗೆ ಇದ್ದೇ ಇರುತ್ತದೆ.

ಪುಟ್ಟ ಮಕ್ಕಳಿಗಾದರೆ ರಾಖಿ ಹಾಗೂ ಉಡುಗೊರೆ ಎರಡನ್ನೂ ಪಾಲಕರೇ ಖರೀದಿಸಿ ಕೊಡುತ್ತಾರೆ. ಶೋಕೇಸ್‌ನಲ್ಲಿ ಪ್ರದರ್ಶನಕ್ಕೆಂದು ಇಡುವುದಕ್ಕಿಂದ ಉಪಯುಕ್ತ  ವಸ್ತುಗಳನ್ನೇ ಉಡುಗೊರೆಯಾಗಿ ನೀಡುವುದು ಸೂಕ್ತ. ಚಾಕೊಲೆಟ್‌, ಚಿತ್ರಕಥಾ ಪುಸ್ತಕಗಳು, ಪರ್ಸ್‌, ಬಳೆಗಳು, ಕಂಪಾಸ್‌, ಪೆನ್‌ ಸೆಟ್‌, ಡೈರಿ, ನೋಟ್‌ಬುಕ್‌, ಶಬ್ದಕೋಶ ಹೀಗೆ... ಹೀಗೆ ಆಯ್ಕೆಗೆ ಹಲವು ಅವಕಾಶಗಳಿವೆ. ಯುವತಿಯರಿಗಾದರೆ ಸೀರೆ, ಡ್ರೆಸ್‌, ಜುವೆಲರಿ, ಪುಸ್ತಕ, ಮೇಕ್‌ಅಪ್‌ ಸೆಟ್‌, ಬಳೆ, ವ್ಯಾನಿಟಿ ಬ್ಯಾಗ್‌ ಉಡುಗೊರೆ ನೀಡುವ ರೂಢಿ ಬೆಳೆದು ಬಂದಿದೆ. ಗೃಹಿಣಿಯರಿಗೆ ಸೀರೆ, ವ್ಯಾನಿಟಿ ಬ್ಯಾಗ್‌, ಪರ್ಸ್, ಡ್ರೆಸ್‌, ಸ್ವೆಟರ್‌, ಉಂಗುರ, ಬಳೆ, ನೆಕ್ಲೆಸ್‌ ಹೀಗೆ ಹಲವು ಉಡುಗೊರೆಗಳನ್ನು ಕೊಡಿಸಬಹುದು. ಹೀಗೆ  ಸಹೋದರಿಯರ ಅಗತ್ಯ ಅರಿತು ಅದನ್ನೇ ಹುಡುಕಿ ತಂದು ಕೊಡುವ ಅಣ್ಣತಮ್ಮಂದಿರಿದ್ದಾರೆ. ಹಣವನ್ನು ನೀಡಿ ಇಷ್ಟವಾದುದನ್ನು ತೆಗೆದುಕೋ ಎನ್ನುವ ಸಹೋದರರೂ ಇದ್ದಾರೆ. ಒಟ್ಟಿನಲ್ಲಿ ಸಹೋದರ–ಸಹೋದರಿಯ ಬಾಂಧವ್ಯಕ್ಕೆ ರಾಖಿ ಹಬ್ಬ ಮೆರುಗು ತರುತ್ತಿದೆ.

ರಾಖಿ ಸಡಗರ ಹೆಚ್ಚಳ
ಸಹೋದರ–ಸಹೋದರಿಯರ ಬಾಂಧವ್ಯಕ್ಕೆ ಮೆರುಗು ನೀಡುವ ರಾಖಿ ಹಬ್ಬದ ಸಡಗರ ವರ್ಷ–ವರ್ಷವೂ ಹೆಚ್ಚಳವಾಗುತ್ತಿದೆ. ದಾರಗಳಿಗೆ ಮಣಿ ಪೋಣಿಸಿದಂಥ ರಾಖಿಗಳು ಹೆಚ್ಚಾಗಿ ಮಾರಾಟವಾಗುತ್ತವೆ. ₹ 1ರಿಂದ ಆರಂಭಿಸಿ ₹ 200 ದರದ ರಾಖಿಗಳನ್ನು ಮಹಿಳೆಯರು ಯುವತಿಯರು ಖರೀದಿಸುತ್ತಾರೆ. ಈಚೆಗೆ ಆನ್‌ಲೈನ್‌ ಮೂಲಕ ತರಿಸುವ ಪರಿಪಾಠ ಹೆಚ್ಚುತ್ತಿದೆ ಎಂದು ಹುಬ್ಬಳ್ಳಿಯ ರಾಖಿ ಹೋಲ್‌ಸೇಲ್‌ ಮಾರಾಟಗಾರರಾದ ಹನುಮಾನ್ ಸಿಂಗ್ ಜಿ. ಪುರೋಹಿತ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.