ADVERTISEMENT

ಹರಿದಾಸಮಾಲಿಕೆಯ ಅಪೂರ್ವರತ್ನ: ರಾಮದಾಸರು

ಮಂಜುನಾಥ ಕೊಳ್ಳೇಗಾಲ
Published 15 ನವೆಂಬರ್ 2019, 19:30 IST
Last Updated 15 ನವೆಂಬರ್ 2019, 19:30 IST
   

ಕರ್ನಾಟಕದ ಹರಿದಾಸ ಪರಂಪರೆ ನಾಲ್ವರು ದಾಸಶ್ರೇಷ್ಠರನ್ನು ಪ್ರಾತಿನಿಧಿಕವಾಗಿ ನೆನೆಯುತ್ತದೆ - ಶ್ರೀಪಾದರಾಜರು, ವ್ಯಾಸರಾಯರು, ಪುರಂದರದಾಸರು ಮತ್ತು ವಿಜಯದಾಸರು. ಇವರ ಜೊತೆ ಜೊತೆಗೇ ವಾದಿರಾಜರು, ಕನಕದಾಸರು, ಜಗನ್ನಾಥದಾಸರೇ ಮೊದಲಾದವರು ಚಿರಪರಿಚಿತ. ಪ್ರಸನ್ನವೆಂಕಟದಾಸರು, ಮಹಿಪತಿದಾಸರು ಮೊದಲಾದವರದ್ದು ಅಲ್ಪಪರಿಚಯ. ಸುರಪುರದ ಆನಂದದಾಸರು, ಗೋಕಾವಿಯ ಅನಂತಾದ್ರೀಶರು, ಪ್ರಸನ್ನತೀರ್ಥರು ಮೊದಲಾದವರಂತೂ ಬಹುತೇಕ ಅಪರಿಚಿತರೇ. ಈ ಅಪರಿಚಿತರ ಪಟ್ಟಿಯಲ್ಲೊಂದು ವಿಶಿಷ್ಟ ಹೆಸರು, ಜೋಳದಡಗಿಯ ಬಡೇಸಾಹೇಬ್ ರಾಮದಾಸರು. ‘ಬಡೇಸಾಹೇಬ್’ ಎನ್ನುವುದು ರಾಮದಾಸರ ಪೂರ್ವನಾಮ. ಹೌದು, ಇವರು ಹುಟ್ಟಿದ್ದು ಒಂದು ಬಡಮುಸ್ಲಿಂ ಕುಟುಂಬದಲ್ಲಿ. ಬೆಳೆದದ್ದು, ಬಾಳಿನ ಸಾರ್ಥಕತೆ ಕಂಡುಕೊಂಡದ್ದು ಓರ್ವ ಹರಿದಾಸರಾಗಿ! ಭಾರತದ ಇತರ ಹಲವು ಮುಸ್ಲಿಮ್ ಸಂತರಂತೆ ಗಡಿರೇಖೆಯಲ್ಲೇ ನಿಲ್ಲದೇ, ತಮ್ಮ ಪರಿಸರದಲ್ಲಿ ದಟ್ಟವಾಗಿದ್ದ ಹರಿದಾಸ ಪ್ರಭಾವಕ್ಕೆ ಮನಸೋತು, ಸೀದಾ ಹರಿದಾಸ ಪಂಥದ ಚೌಕಟ್ಟಿನೊಳಗೇ ಬಂದು ನೆಲೆಯೂರಿಬಿಟ್ಟವರಿವರು.

ದಾಸರು ಕಳೆದ ಶತಮಾನದ ಮಧ್ಯಭಾಗದಲ್ಲಿ ಜೀವಿಸಿದ್ದರೆಂದು ತಿಳಿದುಬರುತ್ತದೆ. ಹುಟ್ಟಿದ್ದು ರಾಯಚೂರು ಜಿಲ್ಲೆಯ ಜೋಳದಡಗಿಯಲ್ಲಿ. ತಂದೆ ಖ್ವಾಜಾಸಾಹೇಬ್, ತಾಯಿ ಪೀರಮ್ಮ. ಜೀವನೋಪಾಯಕ್ಕಾಗಿ ಅಂಗಡಿ ಕೆಲಸ, ದೇವದುರ್ಗದ ಹುಸೇನಮ್ಮ ಎಂಬ ಕನ್ಯೆಯೊಡನೆ ವಿವಾಹ. ಹಂಪೆಯ ರಾಮಾವಧೂತರ ಪ್ರಭಾವ; ಸಂಸಾರ ತ್ಯಾಗ; ಮತ್ತೆ ಕೆಲಕಾಲದನಂತರ ಲಿಂಗದಳ್ಳಿಯ ಅಲ್ಲಮ್ಮನೊಡನೆ ವಿವಾಹ, ಬದುಕಿಗಾಗಿ ಶಿಕ್ಷಕವೃತ್ತಿ. ಈ ಕಾಲದಲ್ಲೇ ಹಲವು ಕೀರ್ತನಕಾರರ, ವಿದ್ವಾಂಸರ ಸ್ನೇಹ, ದಾಸಸಾಹಿತ್ಯದಲ್ಲಿ ಆಸಕ್ತಿ. ಮುಂದಿನ ಹದಿಮೂರು ವರ್ಷ ನಿರಂತರ ದಾಸಸಾಹಿತ್ಯಾಭ್ಯಾಸ, ಸಂಗೀತಸಾಧನೆ, ಪುರಾಣೇತಿಹಾಸಗಳ ಅಧ್ಯಯನ, ತೀರ್ಥಾಟನ - ಬಡೇಸಾಹೇಬರು ಸಂಪೂರ್ಣ ಹರಿದಾಸರೇ ಆಗಿ ಮಾರ್ಪಟ್ಟದ್ದು ಈ ಅವಧಿಯಲ್ಲಿ , ‘ರಾಮ’ ಎಂಬ ಅಂಕಿತದಲ್ಲಿ ಕೃತಿರಚನೆಯನ್ನು ಆರಂಭಿಸಿದವರು, ರಾಮದಾಸರೆಂದೇ ಖ್ಯಾತರಾದರು.

ದಾಸರ ಸುಮಾರು 800 ಕೃತಿಗಳಲ್ಲಿ ಹಲವು ದೀರ್ಘಕೃತಿಗಳೂ ಅಷ್ಟಕಗಳೂ ಕೀರ್ತನೆಗಳೂ ಮುಂಡಿಗೆಗಳೂ ಉಗಾಭೋಗಗಳೂ ಸೇರಿವೆ. ಸಾಂಪ್ರದಾಯಿಕ ರಚನೆಗಳ ಜೊತೆಗೇ ಹಲವಾರು ಉರ್ದೂ ಮತ್ತು ಮಿಶ್ರಭಾಷೆಯ ಕೃತಿಗಳೂ, ಒಂದು ಸಂಪೂರ್ಣ ಸಂಸ್ಕೃತರಚನೆಯೂ ಸೇರಿವೆ. ರಚನೆಗಳಲ್ಲಿ ಪುರಂದರದಾಸರ, ಕನಕದಾಸರ, ವಿಜಯದಾಸರ ಪ್ರಭಾವ, ದಾಸಸಂಪ್ರದಾಯದ ಲಕ್ಷಣಗಳಲ್ಲೊಂದಾದ ಮಾಧ್ವ ತತ್ತ್ವಪ್ರತಿಪಾದನೆ ಒಡಮೂಡಿದೆ. ಶೈಲಿ, ವಿನ್ಯಾಸಗಳಲ್ಲಿ, ಪೌರಾಣಿಕ ದೃಷ್ಟಾಂತಗಳಲ್ಲಿ, ಸಾಮಾನ್ಯ ವಿಶೇಷಣಗಳಲ್ಲಿ ದಾಸಪರಂಪರೆಯನ್ನೇ ಅನುಕರಿಸಿದರೂ, ಚಿಂತನೆ, ಅನುಭವ-ಅನುಭಾವಗಳ ಅಸಲಿಯತ್ತು, ಪಕ್ಕನೆ ಮಿಂಚಿ ಮರೆಯಾಗುವ ಆಡುಮಾತಿನ ಸೊಬಗು ಸೊಗಡುಗಳಲ್ಲಿ ರಾಮದಾಸರು ತಮ್ಮದೇ ಛಾಪನ್ನು ಒತ್ತಿದ್ದಾರೆ. ಉದಾಹರಣೆಗೆ, ತಾವು ಲೌಕಿಕಜೀವನದ ಕಟ್ಟು ಹರಿದುಕೊಂಡು ಹರಿದಾಸರಾದ ಸಾರ್ಥಕದ ಕ್ಷಣಗಳನ್ನು ಬಹುತೇಕ ಎಲ್ಲ ದಾಸರೂ ಬಣ್ಣಿಸಿಕೊಂಡಿದ್ದಾರಲ್ಲ - ಕನಕದಾಸರು ‘ಬದುಕಿದೆನು ಬದುಕಿದೆನು ಭವವೆನಗೆ ಹಿಂಗಿತು’ ಎಂದು ಹಿಗ್ಗಿದರೆ, ಪುರಂದರದಾಸರು ‘ಆದದ್ದೆಲ್ಲಾ ಒಳಿತೇ ಆಯಿತು’ ಎಂದು ಸಂಭ್ರಮಿಸಿದ್ದಾರೆ. ಜಗನ್ನಾಥದಾಸರಿಗೆ ‘ದಿವ್ಯರತುನ’ವೇ ದೊರಕಿದೆ. ಆದರೆ ರಾಮದಾಸರಿಗೆ, ದಾಸರಸಂಗಕ್ಕೆ ಬಿದ್ದುದು ‘ಹರಿಭಕ್ತರ ಮನಿಯಾನ ದೆವ್ವ’ ಬಡಿದಂತಾಯಿತಂತೆ (‘ಮುತ್ತಿ ಎನಗೆ ಬಡಿತವ್ವ, ಹರಿಭಕ್ತರ ಮನಿಯಾನ ದೆವ್ವಾ’). ರಾಮದಾಸರ ಸಂದರ್ಭವೇ ಅಂಥದ್ದು. ಧರ್ಮಬಿಟ್ಟು ಪರಧರ್ಮಕ್ಕೆ ಸೇರುವ ಈ ಕೆಲಸವನ್ನು ತನ್ನ ಕುಲ, ತನ್ನ ಸಮಾಜ ಹೀಗಲ್ಲದೇ ಇನ್ನು ಹೇಗೆ ತಾನೇ ನೋಡೀತು. ತಾವು ದಾಸರಾದ ಬಗೆಯನ್ನು ಆ ದೃಷ್ಟಿಯಿಂದಲೇ ಬಣ್ಣಿಸುತ್ತಾರೆ. ಈ ದೆವ್ವವಾದರೂ ಮಾಡಿದ್ದೇನು? ಬಿದ್ದರೆ ಬೀಳಗೊಡದು, ಸುಮ್ಮನಿದ್ದರೆ ಇರಗೊಡದು, ಬುದ್ಧಿ ಭ್ರಮಿಸಿ ಗದ್ದಲ ಮಾಡಿ ಮುದ್ದಿಟ್ಟು ಒಂದು ದಿನ ಎಬ್ಬಿಸಿಕೊಂಡೇ ಹೋಯ್ತು. ಉಟ್ಟ ದಟ್ಟಿಯನ್ನು ಬಿಡಿಸಿ, ಬಂದ ದಾರಿ ಮರೆಸಿ ಬೆಟ್ಟಕ್ಕೊಯ್ದಿತಂತೆ; ಬಳಗವೆಲ್ಲಾ ಭೋರಿಟ್ಟರೂ ಯಾರನ್ನೂ ಸಮೀಪಕ್ಕೆ ಬರಗೊಡದೇ ಕೊನೆಗೇನು ಮಾಡಿತು? ‘ಸಾರಸೌಖ್ಯಕ್ಕಾಧಾರ ಶ್ರೀರಾಮಪಾದ ಸೇರಿಸಾನಂದಪದವೇರಿಸಿ’ತಂತೆ - ಇದು, ರಾಮದಾಸರ ಪರಿ.

ADVERTISEMENT

ಮಾಧ್ವಪ್ರಮೇಯಗಳು ದಾಸರಲ್ಲಿ ಢಾಳಾಗಿಯೇ ಮೂಡಿದ್ದರೂ, ಅದಕ್ಕೆ ಹೊರತಾದ ನಿರ್ಗುಣೋಪಾಸನೆಯೂ ಅಲ್ಲಲ್ಲಿ ಒಡಮೂಡಿವೆ. ದಾಸರದು ಸಹಜವಾಗಿಯೇ ಸಮನ್ವಯದೃಷ್ಟಿ - ‘ತಾಮಸವನು ತ್ಯಜಿಸಿ ದಾಸರ ಪ್ರೇಮವನ್ನು ಬಯಸಿ ಭೂಮಿಯೊಳು ಶ್ರೀರಾಮರಹೀಮನೆಂದು ನೇಮಿಸಿಕೊಂಡ ನಿಸ್ಸೀಮಕುಲ ನನ್ನದು’ ಎನ್ನುತ್ತಾರೆ. ರಾಮ, ಕೃಷ್ಣ, ಲಕ್ಷ್ಮೀ ಮೊದಲಾದ ಪರಂಪರೆಯ ದೈವಗಳಂತೆ ಮಹಾಂಕಾಳಿ, ಶನಿ ಮೊದಲಾದವರನ್ನೂ ಸ್ತುತಿಸಿದ್ದಾರೆ. ಕನಕಪುರಂದರರೇ ಮೊದಲಾದವರೊಡನೆಯೇ ನಾಮದೇವ, ತುಕಾರಾಮ, ಪುಂಡಲೀಕರೂ ದಾಸರಿಗೆ ಸ್ತುತ್ಯರೇ. ಅಷ್ಟೇಕೆ, ಮಹಾನ್ ಶಿವಶರಣ ಬಸವಣ್ಣನವರೂ ಕೃತಿಯೊಂದರಲ್ಲಿ ದಾಸರ ಸ್ತುತಿಗೆ ಪಾತ್ರರಾಗಿದ್ದಾರೆ. ಶ್ರೀರಾಮದಾಸರು ಹರಿದಾಸಮಾಲಿಕೆಯ ಅಪೂರ್ವರತ್ನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.