ಜನವರಿ ಒಂದನೇ ತಾರೀಖನ್ನು ಶ್ರೀರಾಮಕೃಷ್ಣರ ಭಕ್ತರು ಕಲ್ಪತರು ದಿನವನ್ನಾಗಿ ಪ್ರತಿವರ್ಷ ಆಚರಿಸಿಕೊಂಡು ಬರುತ್ತಿದ್ದಾರೆ. ಶ್ರೀರಾಮಕೃಷ್ಣ ಆಶ್ರಮಗಳಲ್ಲಿ ಈ ಒಂದು ಹಬ್ಬವನ್ನು ಮಾತ್ರ ಗ್ರೆಗೇರಿಯನ್ ಕ್ಯಾಲೆಂಡರ್ ಪ್ರಕಾರ ಆಚರಿಸಲಾಗುತ್ತದೆ; ಇನ್ನುಳಿದ ಹಬ್ಬಗಳನ್ನು ಹಿಂದೂ ಪಂಚಾಂಗದ ರೀತಿ ಆಚರಿಸಲಾಗುವುದು. 1886ರ ಜನವರಿ 1ರಂದು ಭಗವಾನ್ ಶ್ರೀರಾಮಕೃಷ್ಣ ಪರಮಹಂಸರು ಸಾರ್ವತ್ರಿಕವಾಗಿ ತಮ್ಮ ಭಕ್ತರ ಎಲ್ಲ ಆಕಾಂಕ್ಷೆಗಳನ್ನು, ಪ್ರಾರ್ಥನೆಗಳನ್ನು ಈಡೇರಿಸಿದ ಶುಭದಿನ; ಇದೇ ‘ಕಲ್ಪತರು ದಿನ’.
ಜನವರಿ 1ರಂದು ಕ್ರೈಸ್ತರಿಗೆ ಹೊಸ ವರ್ಷ; ರಜಾದಿನ; ಅನೇಕ ಭಕ್ತರು ಶ್ರೀರಾಮಕೃಷ್ಣರ ದರ್ಶನವನ್ನು ಪಡೆಯಲು ಬಂದಿದ್ದರು. ಹಲವರು ಜನರ ಮೇಲೆ ಕೃಪೆ ಮಾಡಿ, ಅವರ ಪಾಪಗಳನ್ನು ಸ್ವೀಕರಿಸಿದ್ದರ ಫಲವಾಗಿ ಶ್ರೀರಾಮಕೃಷ್ಣರ ಗಂಟಲಿನಲ್ಲಿ ನೋವು ಉಂಟಾಗಿ ಅವರು ಊಟವನ್ನೂ ಮಾಡಲು ಆಗದೆ, ಶರೀರವು ಕೃಶವಾಗಿತ್ತು. ಅಂದು ಅವರು ತುಸು ಚೇತರಿಸಿಕೊಂಡಿದ್ದರಿಂದ ಮಧ್ಯಾಹ್ನ ಸುಮಾರು ಮೂರು ಗಂಟೆಯ ಹೊತ್ತಿಗೆ ತೋಟದಲ್ಲಿ ಸ್ವಲ್ಪ ಓಡಾಡಲು ಹೊರ ಬಂದರು. ಭಕ್ತರು ಗುಂಪುಗಳಲ್ಲಿ ಕುಳಿತು ಮಾತನಾಡುತ್ತಿದ್ದರು. ಅವರು ನಡೆದುಬರುತ್ತಿರುವುದನ್ನು ಕಂಡ ಭಕ್ತರಿಗೆ ಆನಂದ ಉಂಟಾಯಿತು. ಕಲ್ಕತ್ತೆಯ ಪ್ರಸಿದ್ಧ ನಾಟಕಕಾರ, ಸಾಹಿತಿ ಗಿರೀಶ್ ಚಂದ್ರ ಘೋಷನು ಶ್ರೀರಾಮಕೃಷ್ಣರ ಪರಮ ಭಕ್ತ. ಅವನ ಬಳಿ ಬಂದು ಶ್ರೀರಾಮಕೃಷ್ಣರು, ‘ಏನು ತನ್ನ ಬಗ್ಗೆ ಅವತಾರಪುರುಷ, ದೇವರು ಎಂದು ಹೇಳುತ್ತಿದ್ದೀಯಂತೆ! ತನ್ನಲ್ಲಿ ಅಂತಹದ್ದು ಏನು ಕಂಡೆ,” ಎಂದರು.
ಗಿರೀಶನು ಮಂಡಿಯೂರಿ ಗದ್ಗದಿತನಾಗಿ, ‘ವಾಲ್ಮೀಕಿ, ವ್ಯಾಸ ಮಹರ್ಷಿಗಳಂತಹ ಮಹಾಮಹಿಮರು ತಮ್ಮನ್ನು ರಾಮನಾಗಿ, ಕೃಷ್ಣನಾಗಿ ಅವತರಿಸಿ ಬಂದಾಗ ವರ್ಣಿಸಲು ಸಂಪೂರ್ಣವಾಗಿ ಸಾಧ್ಯವಾಗಲಿಲ್ಲ. ಈಗ ಅವರೇ ಶ್ರೀರಾಮಕೃಷ್ಣರಾಗಿ ಬಂದಿದ್ದಾರೆ. ಇನ್ನು ಈ ಪಾಮರ ಏನು ತಾನೇ ಹೇಳಲು ಸಾಧ್ಯ’ ಎಂದು ನಮಸ್ಕರಿಸಿದ. ಅವನ ನಿಷ್ಕಲ್ಮಶ, ಸರಳ ಭಕ್ತಿಯನ್ನು ಕಂಡ ಶ್ರೀರಾಮಕೃಷ್ಣರು ಭಾವಾವಿಷ್ಟರಾದರು, ಭಾವಸಮಾಧಿಗೆ ಹೋದರು. ಆ ಉನ್ನತ ಭಾವದಲ್ಲಿ ಅವರು ಭಕ್ತರನ್ನು ಉದ್ದೇಶಿಸಿ, ‘ನಿಮಗೆ ನಾನಿನ್ನೇನು ತಾನೆ ಹೇಳಲಿ? ನೀವು ಚೈತನ್ಯವಂತರಾಗಿ’ ಎಂದು ಹರಸಿದರು. ಅತ್ಯುನ್ನತ ಆಧ್ಯಾತ್ಮಿಕದ ಭಾವದಲ್ಲಿ ಆಡಿದ ಮಾತುಗಳು ವಿದ್ಯುಚ್ಛಕ್ತಿಯಂತೆ ಎಲ್ಲರ ಮನಸ್ಸನ್ನು ಉನ್ನತ ಮಟ್ಟಕ್ಕೆ ಏರಿಸಿತು. ಅಲ್ಲೆಲ್ಲ ಒಂದು ದಿವ್ಯ ವಾತಾವರಣ ನಿರ್ಮಾಣವಾಯಿತು. ಗಿರೀಶನು ‘ಜೈ ರಾಮಕೃಷ್ಣ! ಜೈ ರಾಮಕೃಷ್ಣ!’ ಎಂದು ಕೂಗುತ್ತಾ ಶ್ರೀರಾಮಕೃಷ್ಣರಿಗೆ ಸಾಷ್ಟಾಂಗ ಪ್ರಾಣಾಮ ಮಾಡಿದ. ಅಲ್ಲಿ ನೆರದಿದ್ದ ಪ್ರತಿಯೊಬ್ಬ ಭಕ್ತನಿಗೂ ಅಲೌಕಿಕ ಅನುಭವಗಳಾದವು. ಎಲ್ಲರೂ ಅವರಿಗೆ ನಮಸ್ಕರಿಸಿದರು, ಕೆಲವರು ಅವರ ಪಾದಕ್ಕೆ ಹೂಗಳನ್ನು ಸಮರ್ಪಿಸಿದರು. ಭಕ್ತರ ಆಸೆಗಳು ಪೂರ್ಣಗೊಳ್ಳಲಿ – ಎಂದು ಶ್ರೀರಾಮಕೃಷ್ಣರು ಪ್ರತಿಯೊಬ್ಬರನ್ನೂ ಆಶೀರ್ವದಿಸಿದರು.
ಅಂದು ಅಹೇತುಕ ಕೃಪೆಗೆ ಪಾತ್ರನಾಗಿದ್ದ ರಾಮಕುಮಾರನು ತನ್ನ ಅನುಭವವನ್ನು ಮುಂದೆ ಹೀಗೆ ಹೇಳುತ್ತಾನೆ: ‘ನನಗೆ ಧ್ಯಾನಕ್ಕೆ ಕುಳಿತಾಗ ನನ್ನ ಇಷ್ಟದೇವರ ಮೂರ್ತಿಯ ಯಾವುದಾದರೂ ಒಂದು ಭಾಗ ಮಾತ್ರ ಕಾಣುತ್ತಿತ್ತು. ಧ್ಯಾನ ಮಾಡಲು ತುಂಬಾ ಶ್ರಮಿಸುತ್ತಿದ್ದೆ. ಆದರೆ ಅಂದು ಶ್ರೀರಾಮಕೃಷ್ಣರ ಕೃಪೆ ದೊರೆತ ಮೇಲೆ ಧ್ಯಾನಕ್ಕೆ ಕುಳಿತಾಗ ನನ್ನ ಇಷ್ಟದೇವರ ಮೂರ್ತಿ ಸಂಪೂರ್ಣವಾಗಿ ಕಾಣಲು ಪ್ರಾರಂಭವಾಯಿತು. ಅದು ಚಿನ್ಮಯವಾಗಿ, ಜೀವಂತವಾಗಿರುವ ಅನುಭವವೂ ಉಂಟಾಯಿತು. ಅಂದಿನಿಂದ ಇಂದಿಗೂ ನಾನು ಧ್ಯಾನದ ಸಮಯದಲ್ಲಿ ಅಲೌಕಿಕ ಆನಂದವನ್ನು ಅನುಭವಿಸುತ್ತಿದ್ದೇನೆ’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.