ದೇವರು ಮಾತನಾಡುವುದು ನಿಜವಾದರೆ ಯಾವ ಭಾಷೆಯಲ್ಲಿ ಮಾತನಾಡುತ್ತಿರಬಹುದು? ಸಂಸ್ಕೃತ, ಅರಬಿಕ್, ಗ್ರೀಕ್, ಕನ್ನಡ – ಎಂದು ಆಯಾ ಭಾಷಾಭಿಮಾನಿಗಳೂ, ಕರುಣೆಯೇ ದೇವರ ಭಾಷೆ ಎಂದು ಭಾವುಕರೂ, ಗಣಿತವೇ ದೇವರ ಭಾಷೆ ಎಂದು ವಿಜ್ಞಾನಿಗಳೂ, ಪ್ರಪಂಚದ ಪ್ರತಿಯೊಂದು ಶಬ್ದವೂ ದೇವರ ಧ್ವನಿಯೇ ಆಗಿದೆ ಎಂದು ವೈಯಾಕರಣಿಗಳೂ, ಮೌನವೇ ದೇವರ ಭಾಷೆ ಎಂದು ಆಧ್ಯಾತ್ಮವಾದಿಗಳೂ, ಪ್ರಕೃತಿಯ ಪ್ರತಿಯೊಂದು ಘಟನೆಯೂ ದೇವರ ಮಾತು ಎಂದು ಕವಿಗಳೂ ಹೇಳಬಹುದೇನೋ?
ಪ್ರತಿಯೊಂದು ಧರ್ಮವೂ ಒಂದೊಂದು ಕಾಲ, ದೇಶ, ಸಂಸ್ಕೃತಿಯಲ್ಲಿ ನೆಲೆಯೂರಿದ್ದು, ಧರ್ಮವೂ ಸಂಸ್ಕೃತಿಯೂ ಒಂದನ್ನೊಂದು ಆಶ್ರಯಿಸಿ ಪೋಷಿಸುತ್ತಲೂ ಇರುವಂಥದ್ದು. ಹಾಗಾಗಿ ಪ್ರತಿಯೊಂದು ಧರ್ಮಕ್ಕೂ ಒಂದೊಂದು ಭಾಷೆ. ಅದು ಯಾವತ್ತೂ ಭಾವಕ್ಕೆ, ನೆನಪಿಗೆ, ನಮ್ಮದು - ನಮ್ಮವರು ಎಂಬ ಅಭಿಮಾನಕ್ಕೆ ಸಂಬಂಧಪಟ್ಟಿದ್ದು; ಎಲ್ಲರಿಗೂ ಅವರವರ ಭಾಷೆಯೇ ಶ್ರೇಷ್ಠ, ಸುಮಧುರ. ಅದರಲ್ಲೂ ಒಂದಿಡೀ ಸಮುದಾಯವನ್ನು ಧರ್ಮ ಒಂದುಗೂಡಿಸುವಂತೆ ಬೇರೆ ಯಾವುದೂ ಒಟ್ಟುಗೂಡಿಸುವುದಿಲ್ಲ. ಹೀಗಾಗಿ ಧರ್ಮಕ್ಕಂಟಿದ ಭಾಷೆಯನ್ನು ಕದಲಿಸುವುದು ಅಸಾಧ್ಯ. ವೈಚಾರಿಕತೆಗೆ ದಕ್ಕದ ನಂಬಿಕೆ-ಬಾಂಧವ್ಯವನ್ನು ಅಲುಗಾಡಿಸುವುದು ಅಸಾಧ್ಯ ಎಂಬರ್ಥದಲ್ಲಿಯೇ ನಮ್ಮಲ್ಲಿ ಬದಲಾಯಿಸಲಾಗದ, ಪ್ರಶ್ನಿಸಲಾಗದ ಅಲಿಖಿತ ನಿಯಮಗಳನ್ನು 'ವೇದವಾಕ್ಯ' ಎನ್ನುವುದರ ಹಿಂದಿನ ಆಶಯವಿರಬಹುದು. ನಮ್ಮ ನಮ್ಮ ಭಾಷೆಯೊಟ್ಟಿಗಿನ ಬಂಧವೂ ಹೀಗೆ ಅಲಿಖಿತ ಮತ್ತು ಪ್ರಶ್ನಾತೀತ.
ಒಂದೇ ಧರ್ಮ ಆಚರಿಸುವ ಇಬ್ಬರಿಗಿಂತ, ಒಂದೇ ರಾಜ್ಯದ ಒಂದೇ ಭಾಷೆ ಮಾತನಾಡುವ ಇಬ್ಬರು ಹೆಚ್ಚು ಆತ್ಮೀಯರಾಗಿರುವುದು ಹೊಸತೇನಲ್ಲ. ಹೀಗಿದ್ದರೂ ಧರ್ಮ ಮತ್ತು ಭಾಷೆಯ ನಡುವಿನ ಕೊಂಡಿಯನ್ನು ಕಳಚುವುದು ಸುಲಭವಲ್ಲ. ಧಾರ್ಮಿಕ ಗ್ರಂಥಗಳು ಅನ್ಯ ಭಾಷೆಗೆ ಅನುವಾದಗೊಂಡಾಗ ಅದನ್ನು ಮೂಲ ಭಾಷೆಯಲ್ಲಿ ಓದಿದವರಿಗೆ ಏನೋ ಕಸಿವಿಸಿ, ಅಷ್ಟೇ ಅಲ್ಲದೆ ಪ್ರತಿಯೊಂದು ಭಾಷೆಗೂ ಅನನ್ಯ ಎನಿಸುವಂತಹ ಭಾವವಿದೆ. ದೇವರು, ಧರ್ಮದ ಕಲ್ಪನೆಗಳೂ ಕೂಡ ಕೆಲವೊಮ್ಮೆ ಭಾಷೆಯನ್ನು ಅನುಸರಿಸಿ ಬದಲಾಗುವುದೂ ಇದೆ. ವೇದಮಂತ್ರಗಳನ್ನು ಕೇಳಿದಾಗ ದೇವರು ಎಂದರೆ ವಿಶ್ವವನ್ನು ವ್ಯಾಪಿಸಿ ನಿಂತಿರುವ ಅಖಂಡ ಶಕ್ತಿ ಎನಿಸಿದರೆ, ಮಸೀದಿಯಿಂದ ಹೊಮ್ಮುವ ಪ್ರಾರ್ಥನೆಯ ಧ್ವನಿಯು ದೇವರನ್ನು ಮೊರೆಯಿಟ್ಟು ಕರೆಯುತ್ತಿರುವಂತೆ ಕೇಳಿಸುತ್ತದೆ, ಚರ್ಚಿನ ಪ್ರಾರ್ಥನೆಯಲ್ಲಿ ಪಾಲ್ಗೊಂಡಾಗ ದೇವರು ಪ್ರೀತಿ, ಶಾಂತಿ, ಕ್ಷಮಾ ಗುಣಗಳ ಆಗರ ಎನಿಸುತ್ತದೆ. ಅಷ್ಟೇ ಏಕೆ, ಸಂಸ್ಕೃತದ ಮಂತ್ರಗಳಿಗಿಲ್ಲದಿರುವ ಆಪ್ತತೆ ಕನ್ನಡದ ದಾಸರ ಹಾಡುಗಳಿಗೆ ಇದೆಯೆಂದು ಅನೇಕರ ಅಭಿಪ್ರಾಯ. ದೇವತೆಗಳೂ ಭಾಷೆಗೆ ಅಧೀನರು ಹಾಗಾಗಿಯೇ ಮಂತ್ರಗಳ ಮೂಲಕ ಅವರನ್ನು ಆವಾಹಿಸಿ ಇಷ್ಟಾರ್ಥಗಳನ್ನು ಪಡೆಯಬಹುದು ಎಂದು ನಂಬಲಾಗಿದೆಯೇನೋ? ಭಾಷೆ ಯಾವುದೇ ಇರಲಿ, ಧರ್ಮ ಯಾವುದೇ ಇರಲಿ ಆದರೆ ಭಾಷೆಗೂ, ಧರ್ಮಕ್ಕೂ ಇರುವ ಸಂಬಂಧವಂತೂ ಮುಖ್ಯವಾದದ್ದು.
ವಿಶಾಲಾರ್ಥದಲ್ಲಿ ಭಾಷೆಯೇ ನಮ್ಮೆಲ್ಲ ಅನುಭವಗಳನ್ನು ರೂಪಿಸುವುದು. ಎಳೆ ಮಕ್ಕಳ ಸೀಮಿತ ಅನುಭವ ಲೋಕವು ಪ್ರೌಢರಾಗುತ್ತಿದ್ದಂತೆ ವಿಸ್ತೃತಗೊಳ್ಳುವುದರ ಹಿಂದೆ ಭಾಷೆಯ ಕೈವಾಡವಿದೆ. ಭಾಷೆ ಮನುಷ್ಯನ ಅಸ್ತಿತ್ವದ ವಿಶಾಲಾಕಾಶವನ್ನು ಬೆಳಗುವ ಸೂರ್ಯ ಎಂದರೆ ಅತಿಶಯೋಕ್ತಿಯಾಗಲಾರದು. ದೇವರು, ಧರ್ಮ ಭಾಷೆಯ ಮಧ್ಯಸ್ಥಿಕೆ ಇಲ್ಲದೆ ನಮ್ಮ ಅನುಭವಕ್ಕೆ ಒದಗಬಲ್ಲದೇ? ಧರ್ಮಾಚರಣೆಗಳು ಭಾಷೆಯ ಹಂಗಿಲ್ಲದೆ ಅನುಗಾಲವೂ ಉಳಿಯಬಲ್ಲದೆ? ಹಾಗೆ ನೋಡಿದರೆ ಧರ್ಮ ಭಾಷೆಯನ್ನು ಮೀರುವ, ಉಲ್ಲಂಘಿಸುವ ಪ್ರಯತ್ನವನ್ನು ಸದಾ ಮಾಡುತ್ತಲೇ ಇರುತ್ತದೆ. ದೇವರು, ಧಾರ್ಮಿಕತೆ ಭಾಷೆಗೆ ಮಾತಿಗೆ ಅತೀತವಾದದ್ದೆಂದು ಹೇಳುವುದು ಒಂದು ರೀತಿಯಾದರೆ, ಕಾವ್ಯಾತ್ಮಕವಾದ, ರೂಪಕಾತ್ಮಕವಾದ ಭಾಷೆಯನ್ನು ಧರ್ಮ ಅನುಸರಿಸುವುದು ಇನ್ನೊಂದು ರೀತಿ. ಅದಕ್ಕೂ ಮಿಗಿಲಾಗಿ ಧರ್ಮ ತನ್ನ ವಿಸ್ತರಣೆಗೆ, ಉಳಿವಿಗೆ ಭಾಷೆಗಿಂತಲೂ ಹೆಚ್ಚಾಗಿ ಆಶ್ರಯಿಸುವುದು ಸಂಗೀತ, ನೃತ್ಯ, ಶಿಲ್ಪಕಲೆ, ದೃಶ್ಯಕಲೆ ಮತ್ತು ಸಾಂಪ್ರದಾಯಿಕ ಆಚರಣೆಗಳನ್ನು. ಆದರೆ ಮತ್ತೆ ಮತ್ತೆ ಹುಟ್ಟುವ ಪ್ರಶ್ನೆ ಒಂದೇ; ದೇವರು/ಧರ್ಮ ಭಾಷೆಯ ಸರಹದ್ದಿನಿಂದ ಹೊರಗುಳಿದಿದ್ದು ಭಾಷೆಯ ಈ ಸಂಕೀರ್ಣ ಬಂಧನವನ್ನು ನೀಗಿಕೊಳ್ಳುವುದರಿಂದ ಅರಿವಿಗೆ ಬರುವಂಥದ್ದೋ ಅಥವಾ ದೇವರು/ಧರ್ಮವೇ ಭಾಷೆಯ ದುರ್ಗಮ ಕಾಡಿನಲ್ಲಿ ಕಳೆದುಹೋಗಿದ್ದು, ಆ ಕಾಡಿನ ರಹಸ್ಯವನ್ನು ಬೇಧಿಸುವುದರಿಂದ ಅನುಭವಕ್ಕೆ ದೊರಕುವಂಥದ್ದೋ? ದೇವರೆನ್ನುವುದೇ ಒಂದು ಭಾಷೆ, ಧರ್ಮವೇ ಒಂದು ಭಾಷೆ ಎನ್ನುವುದು ನಮ್ಮ ಅನುಭವದ ಒಂದು ಮುಖವಾದರೆ, ಭಾಷೆಯೇ ಒಂದು ದೇವರು, ಭಾಷೆಯೇ ಒಂದು ಧರ್ಮ ಎನ್ನುವುದು ದೇವರು, ಧರ್ಮ, ಭಾಷೆಗಳ ಕುರಿತಾಗಿ ನಮ್ಮ ಅನುಭವದ ಇನ್ನೊಂದು ಮುಖವನ್ನು ಅನಾವರಣಗೊಳಿಸುತ್ತದೆ.
ಒಟ್ಟಿನಲ್ಲಿ ಧರ್ಮದ ಭಾಷೆ ಅರ್ಥವನ್ನು ಮೀರಿದ ಶ್ರದ್ಧೆಯ ಭಾಷೆ, ಮುಳ್ಳನ್ನು ಮುಳ್ಳಿನಿಂದ ತೆಗೆಯುವಂತೆ ಭಾಷೆಯ ಮೂಲಕವೇ ಭಾಷೆ ಎಂಬ ಕಂದರವನ್ನು ದಾಟುವ ವಿಸ್ಮಯಕಾರಿ ಪ್ರಯತ್ನ. ಧರ್ಮದ ನಿಜವಾದ ಭಾಷೆ ಪುರಾಣವೇ; ಪುರಾಣದ ಭಾಷೆಯನ್ನು ಅರಿಯದ ವಿಚಾರವಾದದ ಭಾಷೆ ಮಾತನಾಡುವವರು ಸಾವಿರ ಬೇರೆ ಭಾಷೆಗಳನ್ನು ಕಲಿತರೂ ಧರ್ಮದ ನುಡಿಯನ್ನು ಅರಿಯಲಾರರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.