ADVERTISEMENT

ಭಕ್ತಾದಿಗಳಿಗೆ ಇಂದಿನಿಂದ ಶಬರಿಮಲೆ ಪ್ರವೇಶ; 7 ತಿಂಗಳ ಬಳಿಕ ಅಯ್ಯಪ್ಪಸ್ವಾಮಿ ದರ್ಶನ

ಏಜೆನ್ಸೀಸ್
Published 16 ಅಕ್ಟೋಬರ್ 2020, 7:24 IST
Last Updated 16 ಅಕ್ಟೋಬರ್ 2020, 7:24 IST
ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲ-ಸಂಗ್ರಹ ಚಿತ್ರ
ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲ-ಸಂಗ್ರಹ ಚಿತ್ರ   

ತಿರುವನಂತಪುರಂ: ಏಳು ತಿಂಗಳ ಬಳಿಕ ಕೇರಳದಲ್ಲಿರುವ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲವನ್ನು ಶುಕ್ರವಾರ ತೆರೆಯಲಾಗಿದ್ದು, ಐದು ದಿನಗಳ ಮಾಸಿಕ ಪೂಜೆ ನಡೆಯಲಿದೆ ಹಾಗೂ ಭಕ್ತಾದಿಗಳಿಗೂ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.

ಆನ್‌ಲೈನ್‌ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡವರಿಗೆ ಮಾತ್ರವೇ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ ಹಾಗೂ ನಿತ್ಯ ಗರಿಷ್ಠ 250 ಮಂದಿ ಭಕ್ತಾದಿಗಳಿಗೆ ಪ್ರವೇಶ ಸಿಗಲಿದೆ. ಪಂಪ ಸ್ಥಾನವನ್ನು ತಲುಪುವುದಕ್ಕೆ ಗರಿಷ್ಠ 48 ಗಂಟೆಗಳೊಳಗೆ ಪರೀಕ್ಷೆಗೆ ಒಳಗಾಗಿ ಪಡೆದಿರುವ ಕೋವಿಡ್‌–19 ಸರ್ಟಿಫಿಕೆಟ್‌ನ್ನು ಭಕ್ತಾದಿಗಳು ತಂದಿರಬೇಕು ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಹೇಳಿದೆ.

ಕೊರೊನಾ ವೈರಸ್‌ ಸೋಂಕು ಇಲ್ಲದ ಹಾಗೂ ಫಿಟ್ನೆಸ್‌ ಸರ್ಟಿಫಿಕೆಟ್‌ ಹೊಂದಿರುವ ಭಕ್ತಾದಿಗಳಿಗೆ ಪಂಪಾ ಶಿಬಿರದಿಂದ ಗಿರಿಯಲ್ಲಿರುವ ದೇವಾಲಯಕ್ಕೆ ನಡೆದು ಸಾಗಲು ಮಧ್ಯಾಹ್ನ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದೆ.

ADVERTISEMENT

ಎತ್ತರದ ಬೆಟ್ಟ ಏರುತ್ತ ಸಾಗುವ ಭಕ್ತಾದಿಗಳಿಗೆ ಮಾಸ್ಕ್‌ ಕಡ್ಡಾಯಗೊಳಿಸಿಲ್ಲ. ಎತ್ತರದ ಸ್ಥಳಗಳಿಗೆ ನಡೆದು ಹೋಗುವವರಿಗೆ ಮಾಸ್ಕ್‌ನಿಂದ ಉಸಿರಾಟದ ಸಮಸ್ಯೆ ಎದುರಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ. 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಹಾಗೂ 60 ವರ್ಷ ಮೇಲ್ಪಟ್ಟವರಿಗೆ ಗಿರಿಯನ್ನು ಏರಲು ಈಗಲೂ ಅವಕಾಶ ನೀಡಿಲ್ಲ, ಕೋವಿಡ್‌–19 ಪರಿಸ್ಥಿತಿ ಸುಧಾರಿಸಲು ಕಾಯಬೇಕಿದೆ ಎಂದಿದೆ. ಕೋವಿಡ್‌ ಪರೀಕ್ಷೆಯಲ್ಲಿ ಪಾಸಿಟಿವ್‌ ಪತ್ತೆಯಾದರೆ, ಚಿಕಿತ್ಸೆಗಾಗಿ ಆಸ್ಪತ್ರೆ ಸಜ್ಜುಗೊಳಿಸಲಾಗಿದೆ.

ಪಂಪಾ ನದಿಯಲ್ಲಿ ಸ್ನಾನ ಮಾಡಲು ಅನುಮತಿ ಇಲ್ಲ. ಅದರ ಬದಲು ಸ್ನಾನಕ್ಕೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಎರುಮೇಲಿ ಮತ್ತು ವಡಶ್ಶೇರಿಕ್ಕರ ಮಾರ್ಗಗಳಲ್ಲಿ ಮಾತ್ರ ಸಾಗಲು ಭಕ್ತಾದಿಗಳಿಗೆ ಅವಕಾಶವಿದ್ದು, ಕಾಡಿನ ಉಳಿದ ಎಲ್ಲ ಮಾರ್ಗಗಳನ್ನೂ ನಿರ್ಬಂಧಿಸಿರುವುದಾಗಿ ಟಿಡಿಬಿ ಮುಖ್ಯಸ್ಥ ಎನ್‌.ವಾಸು ಹೇಳಿರುವುದಾಗಿ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ. ಭಕ್ತಾದಿಗಳಿಗೆ ದೇಗುಲದಲ್ಲಿ ಗುಂಪುಗೂಡಲು ಹಾಗೂ ಅಲ್ಲಿಯೇ ಇರಲು ಅವಕಾಶ ನೀಡುವುದಿಲ್ಲ. ಅಕ್ಟೋಬರ್‌ 21ರಂದು ದೇಗುಲ ಮತ್ತೆ ಮುಚ್ಚಲಾಗುತ್ತದೆ.

ದೇಶದಾದ್ಯಂತ ಮೊದಲ ಲಾಕ್‌ಡೌನ್‌ ಜಾರಿಯಾಗುವ ಮೊದಲೇ ಮಾರ್ಚ್‌ 18ರಂದು ದೇಗುಲ ಮುಚ್ಚಲಾಗಿತ್ತು. ಅಂದಿನಿಂದ ಭಕ್ತಾದಿಗಳ ಪ್ರವೇಶಕ್ಕೆ ಅವಕಾಶವಿರಲಿಲ್ಲ. ಕಳೆದ ವರ್ಷ ಅಕ್ಟೋಬರ್‌ನಿಂದ ಜನವರಿ 2020ರ ವರೆಗೂ ದೇಗುಲಕ್ಕೆ ₹263.57 ಕೋಟಿ ಆದಾಯ ಸೇರಿತ್ತು. ಅಕ್ಟೋಬರ್‌ನಿಂದ ಜನವರಿ ವರೆಗೂ ಹಬ್ಬದ ಸಮಯದಲ್ಲಿ ನಿತ್ಯ 5 ಲಕ್ಷದಿಂದ 8 ಲಕ್ಷ ಭಕ್ತಾದಿಗಳು ಭೇಟಿ ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.