ಶ್ರಾವಣಮಾಸ ವ್ರತಗಳ ಮಾಸ. ವರ್ಷಧಾರೆಯ ಶ್ರಾವಣಮಾಸದಲ್ಲಿ ಪ್ರತಿದಿನವೂ ಹೊಸ ಒಸಗೆಯ ಸಂಭ್ರಮ ತುಂಬಿರುತ್ತದೆ. ಅತಿ ಮಳೆಯಾಗುವ ಕಾರಣ ಗೃಹಸ್ಥರು ಸುಮ್ಮನೆ ಕೂರುವ ಬದಲು ದೇವರ ವ್ರತಗಳನ್ನು ಮಾಡುತ್ತಾ, ಮನಸ್ಸನ್ನು ನಿರ್ಮಲಗೊಳಿಸಿಕೊಳ್ಳಲೆಂದು ನಮ್ಮ ಹಿರಿಯರು ಶ್ರಾವಣಮಾಸವನ್ನು ವ್ರತಗಳ ಮಾಸವನ್ನಾಗಿಸಿದ್ದಾರೆ. ಯತಿಗಳೂ ಸಹ ಮಳೆಯಿಂದಾಗಿ ದೇಶಪರ್ಯಟನೆ ಮಾಡದೆ, ಒಂದೆಡೆ ಕುಳಿತು ಚಾತುರ್ಮಾಸ್ಯವನ್ನು ಆಚರಿಸುವ ಪದ್ಧತಿಯನ್ನು ರೂಪಿಸಿದ್ದಾರೆ.
ಹಿಂದೂಧರ್ಮ ಈ ನೆಲದ ಧರ್ಮವಾಗಿರುವುದರಿಂದ ಇಲ್ಲಿಯ ಪರಿಸರಕ್ಕೆ ತಕ್ಕಂತೆ ಹಬ್ಬಗಳನ್ನು ರೂಪಿಸಲಾಗಿದೆ. ಮನುಷ್ಯರ ಬದುಕಿಗೆ ಪೂರಕವಾದ ವ್ರತ–ನಿಯಮಗಳನ್ನೂ ಮಾಡಲಾಗಿದೆ. ಇದು ಯಾರೋ ಒಬ್ಬರು ಸ್ವಕಲ್ಪಿತವಾಗಿ ಯೋಚಿಸಿ ಮಾಡಿದ್ದಲ್ಲ. ಸಾವಿರಾರು ವರ್ಷಗಳ, ನೂರಾರು ಋಷಿಗಳು ಚಿಂತಿಸಿ-ಮಂಥಿಸಿದ ನಂತರ ನೀತಿ-ನಿಯಮಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಹೇಗೆ ನೋಡಿದರೂ, ನಮ್ಮ ಹಬ್ಬಗಳು ಸುಖಾಸುಮ್ಮನೆ ಮಾಡಿಕೊಂಡ ಸಂಭ್ರಮಾಚರಣೆಗಳಲ್ಲ. ಧಾರ್ಮಿಕವಾಗಿ, ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ, ವೈಜ್ಞಾನಿಕವಾಗಿ ಎಲ್ಲಾ ಸ್ತರಗಳಲ್ಲೂ ಯೋಚಿಸಿ, ಯೋಜಿಸಿ ಮಾಡಿದ ಕ್ರಮಗಳು. ದೇವರ ನಂಬಿ ಕೆಟ್ಟವರಿಲ್ಲ, ವ್ರತಗಳ ಮಾಡಿ ಯಾರೂ ಹಾಳಾದವರಿಲ್ಲ. ಶಾಸ್ತ್ರ-ಸಂಪ್ರದಾಯಗಳಿಂದ ನಮ್ಮ ಬದುಕು ಪಾವನವಾಗಿದೆ, ನಮ್ಮ ಭವಿಷ್ಯ ಉಜ್ವಲವಾಗುತ್ತಲೇ ಸಾಗಿದೆ. ಇದಕ್ಕೆ ಸಹಸ್ರಾರು ವರ್ಷಗಳಿಂದ ರೋಗಬಾಧೆ, ಶತ್ರುಬಾಧೆಗಳನ್ನು ನಿವಾರಿಸಿಕೊಂಡು ನಾವು ಉತ್ತಮವಾಗಿ ಬದುಕನ್ನು ರೂಪಿಸಿಕೊಂಡಿರುವುದೇ ಸಾಕ್ಷಿ.
ಹಬ್ಬಗಳು ಮನಸ್ಸನ್ನು ಉಲ್ಲಾಸಗೊಳಿಸಿದರೆ, ವ್ರತಗಳು ಮನಸ್ಸಿನ ಕೊಳೆಯನ್ನು ತೊಳೆಯುತ್ತವೆ. ಇದಕ್ಕಾಗಿ ಶ್ರಾವಣಮಾಸದ ಎರಡನೇ ಶುಕ್ರವಾರವನ್ನು ‘ವರಮಹಾಲಕ್ಷ್ಮಿವ್ರತ’ವಾಗಿ, ಶ್ರಾವಣ ಹುಣ್ಣಿಮೆಯನ್ನು ‘ರಕ್ಷಾಬಂಧನ’ವಾಗಿ ಆಚರಿಸುತ್ತೇವೆ. ಲಕ್ಷ್ಮಿ ಅಂದರೆ ಕೇವಲ ಐಶ್ವರ್ಯ ಕೊಡುವ ಧಾತೆಯಲ್ಲ; ಅಷ್ಟೈಶ್ವರ್ಯವನ್ನು ಕರುಣಿಸುವ ಮಹಾದೇವಿ. ಆದಿಲಕ್ಷ್ಮಿ, ಧನಲಕ್ಷ್ಮಿ, ಧಾನ್ಯಲಕ್ಷ್ಮಿ, ಗಜಲಕ್ಷ್ಮಿ, ಸಂತಾನಲಕ್ಷ್ಮಿ, ಧೈರ್ಯಲಕ್ಷ್ಮಿ, ವಿಜಯಲಕ್ಷ್ಮಿ, ವಿದ್ಯಾಲಕ್ಷ್ಮಿಯಾಗಿ ನಮ್ಮನ್ನೆಲ್ಲ ಪೊರೆವ ಮಹಾತಾಯಿ. ನಮ್ಮ ಸುತ್ತಲ ಸಮಾಜ ದಾರಿದ್ರ್ಯ ಮುಕ್ತವಾಗಿ, ರೋಗಮುಕ್ತವಾಗಿ, ನಮ್ಮ ಮನೆ-ಮನಗಳಲ್ಲಿ ಸುಖ-ಶಾಂತಿ-ನೆಮ್ಮದಿ ನೆಲೆಸುವಂತೆ ಮಾಡುವ ಜಗನ್ಮಾತೆ. ಸ್ವತಃ ಮಹಾಶಿವನೇ ಸುಖ-ಸಮೃದ್ದಿಗಾಗಿ ವರಮಹಾಲಕ್ಷ್ಮಿವ್ರತವನ್ನು ಮಾಡುವಂತೆ ಪಾರ್ವತಿಗೆ ಸೂಚಿಸಿದ ಪುರಾಣೈತಿಹ್ಯವಿದೆ. ಹಾಗೆಯೆ, ಮಗಧ ರಾಜ್ಯದ ಕೌಂಡಿನ್ಯಪುರದ ಚಾರುಮತಿ ವರಮಹಾಲಕ್ಷ್ಮಿವ್ರತವನ್ನು ಮಾಡಿ ತನ್ನ ಮನೆಯನ್ನಲ್ಲದೆ, ಇಡೀ ಊರನ್ನೇ ಶ್ರೀಮಂತಗೊಳಿಸಿದ
ಐತಿಹ್ಯ ಸಹ ಇದೆ.
ನಾವು ಹೆಣ್ಣನ್ನು ದೇವರೆಂದು ಪೂಜಿಸುತ್ತೇವೆ. ಹೆಣ್ಣನ್ನು ಪೂಜಿಸುವ ಮತ್ತು ಗೌರವಿಸುವ ಸ್ಥಳದಲ್ಲಿ ದೇವರು ನೆಲೆಸುತ್ತಾನೆ ಎಂದು ನಂಬಿದ್ದೇವೆ. ಹೆಣ್ಣಿಗೆ ಸಿಗುವ ಗೌರವಾದಾರಗಳಿಂದ ಸಮಾಜ ಬೆಳಗುತ್ತದೆ, ಹೆಣ್ಣು ನೊಂದರೆ ಸಮಾಜ ನಂದುತ್ತದೆ ಅಂತ ಭಾವಿಸಿದ್ದೇವೆ. ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ, ಬಂಧುವಾಗಿ ನಮ್ಮ ಬದುಕು ಮುನ್ನಡೆಸುವ ಅಬಲೆಗೆ ದುಷ್ಟರಿಂದ ಯಾವ ಅಪಾಯವೂ ಬಾರದಿರಲೆಂದು ‘ರಕ್ಷಾಬಂಧನ’ ಕಟ್ಟಿ ಅಭಯವನ್ನು ನೀಡುತ್ತೇವೆ. ದ್ರೌಪದಿಗೆ ರಕ್ಷಾಬಂಧನವನ್ನು ಕಟ್ಟಿದ ಶ್ರೀಕೃಷ್ಣ, ಆಕೆಯ ಕುಟುಂಬಕ್ಕೆ ಕಾವಲಾಗಿದ್ದಂತೆ, ಪ್ರತಿಯೊಬ್ಬ ಪುರುಷನೂ ಪರಸ್ತ್ರೀಯರನ್ನು ಸೋದರಿಯಂತೆ ಭಾವಿಸಿ, ರಕ್ಷಣೆಗೆ ಧಾವಿಸಿ ಬರಲು ರಕ್ಷಾಬಂಧನಸೂತ್ರವನ್ನು ರೂಪಿಸಲಾಗಿದೆ. ಅಣ್ಣ-ತಂಗಿಯರ ಬಾಂಧವ್ಯ ಬೆಸೆಯುವ ರಕ್ಷಾಬಂಧನ ಪ್ರಸ್ತುತ ಕಾಲಘಟ್ಟದಲ್ಲಿ ಅಗತ್ಯವಾಗಿದೆ.
ಸಮಾಜದಲ್ಲಿ ಸ್ತ್ರೀಕುಲದ ರಕ್ಷಣೆಯ ಮಹತ್ವ ಅರಿತು, ನಮ್ಮ ಸಂಸ್ಕೃತಿಯಲ್ಲಿ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಲಾಗಿದೆ. ಸ್ತ್ರೀಯರ ಬಗ್ಗೆ ದುಷ್ಟರ ಮನದಲ್ಲಿ ದುರಾಲೋಚನೆ ಹುಟ್ಟದಂತೆ ವ್ರತ–ನಿಯಮಗಳನ್ನು ಜಾರಿಗೆ ತರಲಾಗಿದೆ. ಸಮಾಜದ ಪುರುಷರೆಲ್ಲ ಸೋದರರಂತಿದ್ದರೆ ಹೆಣ್ಣುಮಕ್ಕಳಲ್ಲಿ ಸುರಕ್ಷತೆಯ ಭಾವ ಹೆಚ್ಚಿ, ಅವರು ನೆಮ್ಮದಿಯಾಗಿ ಗೌರವಯುತವಾಗಿ ಬಾಳಿದಾಗ ‘ಸಚ್ಚಿದಾನಂದ’
ಜಗತ್ತು ಪ್ರಕಾಶಿಸುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.