ADVERTISEMENT

ಮೋಕ್ಷಕ್ಕೂಬಂಧನಕ್ಕೂ ಮನಸ್ಸೇ ಮೂಲ

ಓದಿನ ಸುಖ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2019, 20:00 IST
Last Updated 13 ಡಿಸೆಂಬರ್ 2019, 20:00 IST
   

ಆತ್ಮವಸ್ತುವಿಗೂ ಜೀವಕ್ಕೂ ಮನಸ್ಸೇ ಸೇತುವೆ. ಜೀವಕ್ಕೂ ಜಗತ್ತಿಗೂ ಮನಸ್ಸೇ ಸೇತುವೆ. ಅದರಿಂದಲೇ ಹೇಳಿರುವುದು:

ಮನ ಏವ ಮನುಷ್ಯಾಣಾಂ ಕಾರಣಂ ಬಂಧಮೋಕ್ಷಯೋಃ

ಮೋಕ್ಷವಾಗಬೇಕಾಗಿದ್ದರೂ ಮನಸ್ಸೇ; ಬಂಧನವಾಗಬೇಕಿದ್ದರೂ ಮನಸ್ಸೇ. ಸೇತುವೆಯ ಮೇಲೆ ಎತ್ತಕಡೆಗೆ ಬೇಕಾದರೂ ಹೋಗಬಹುದು. ಇತ್ತಕಡೆಯಿಂದ ಅತ್ತಕಡೆಗೆ ಹೋದರೆ ಮೋಕ್ಷ; ಅತ್ತಕಡೆಯಿಂದ ಇತ್ತಕಡೆಗೆ ಬಂದರೆ ಬಂಧನ. ಸೇತುವೆ ಒಂದೇ: ಅದು ಮನಸ್ಸು. ಆ ಮನಸ್ಸನ್ನು ಪಕ್ವಮಾಡಿಕೊಳ್ಳಬೇಕು. ಅದು ನಾನಾ ವಿಧವಾದ ಕರ್ಮದ ಮೂಲಕ ಸಾಧ್ಯ. ಜೀವಶೋಧನೆಗೋಸ್ಕರ ಕರ್ಮ.

ADVERTISEMENT

ಮನವ ಶೋಧಿಸಬೇಕು ನಿಷ್ಷ /

ದಿನದಿನವು ಮಾಡುವ ಪಾಪಪುಣ್ಯದ ವೆಚ್ಚ //

– ಎಂದು ಹಾಡಿದ್ದಾರೆ ಪುರಂದರದಾಸರು.

ಸಮಾನ್ಯವಾಗಿ ನಮಗೆ ತೋರುವುದು ಪುರುಷಾರ್ಥಸಿದ್ಧಿಗೋಸ್ಕರ ಕರ್ಮ ಎಂದು. ಕರ್ಮ ಏಕೆ ಮಾಡಬೇಕು? ಜೀವಿಕೆ ಸಂಪಾದಿಸಿಕೊಳ್ಳುವುದಕ್ಕೆ. ಮತ್ತೂ ಏಕೆ ಮಾಡಬೇಕು? ಸಂಪಾದಿಸಿಕೊಂಡದ್ದು ಸಾಲದೆಹೋದರೆ ಭಗವಂತನು ಇನ್ನೂ ಸ್ವಲ್ಪ ಅನುಗ್ರಹಿಸಿಯಾನೆಂಬ ನಿರೀಕ್ಷೆಯಿಂದ. ಹೀಗೆ ಅನೇಕ ಕಾರಣಗಳಿಂದ ಕರ್ಮ ಮಾಡುತ್ತೇವೆ. ಕೇವಲ ಈಶ್ವರಾಧನೆಯೆಂದು ಸ್ವಕರ್ಮಮಾಡಿರೆಂದು ಭಗವಂತನ ಉಪದೇಶ. ಅಂಥ ಕರ್ಮಾಚರಣೇಯೇ ಆತ್ಮಜ್ಞಾನಕ್ಕೆ ದಾರಿ.

ಜೀವಪರಿಪಾಕವು ಶೂನ್ಯಸ್ಥಳದಲ್ಲಿ (Vacuum) ಆಗುವುದಿಲ್ಲ. ಕರ್ಮವು ನಡೆಯುವುದು ಲೋಕರಂಗದಲ್ಲಿ. ನಿರ್ಜನಪ್ರದೇಶದಲ್ಲಿ ಕರ್ಮವೆಂಬುದಿಲ್ಲ. ಕರ್ಮಪ್ರೇರಣೆ ಉಂಟಾಗುವುದು ಲೋಕಸಂದರ್ಭದಲ್ಲಿ. ಆದದ್ದರಿಂದ ಲೋಕಸಂಸರ್ಗದಲ್ಲಿ ಜೀವನವನ್ನು ತೇಯಬೇಕು. ಶ್ರೀಗಂಧದ ಕೊರಡನ್ನು ಸಾಣೆಯಕಲ್ಲಿನ ಮೇಲೆ ನೀರು ಹಾಕಿಕೊಂಡು ತೇದರೆ ಅದು ಸವೆದು ಅದರಿಂದ ಸುಗಂಧವುಂಟಾಗುತ್ತದೆ. ಆ ಸುಗಂಧದದಿಂದ ಮರದ ಜನ್ಮ ಸಾರ್ಥಕವಾಗುತ್ತದೆ. ಹಾಗೆಯೇ ಜೀವವು ಜಗಚ್ಛಿಲೆಯ ಮೇಲೆ ತನ್ನ ಶಕ್ತಿಗಳನ್ನು ತೇಯಬೇಕು. ಅದಕ್ಕೆ ಭಗವದ್ಭಕ್ತಿಯ ತೀರ್ಥ ಬೀಳಬೇಕು. ಹಾಗೆ ತೇಯುವುದರಿಂದ ಜೀವದ ಕಲ್ಮಶಗಳು ಹೋಗಿ ಪರಮಾತ್ಮದರ್ಶನ ಯೋಗ್ಯತೆ ಉಂಟಾಗುತ್ತದೆ.

– ಡಿವಿಜಿ ಅವರ ‘ಜೀವನಧರ್ಮಯೋಗ’ದಿಂದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.